Advertisement

ಸಿಡ್ನಿ: ಭಾರತದ ಪಿಎಚ್‌ಡಿ ವಿದ್ಯಾರ್ಥಿಗೆ 11 ಬಾರಿ ಚಾಕು ಇರಿತ ; ಸ್ಥಿತಿ ಗಂಭೀರ

06:07 PM Oct 14, 2022 | Team Udayavani |

ಲಕ್ನೋ /ಸಿಡ್ನಿ : ಕಳೆದ ವಾರ ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನ ಮೇಲೆ 11 ಬಾರಿ ಚಾಕುವಿನಿಂದ ಇರಿಯಲಾಗಿದ್ದು,ಆತ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿಯ ಕುಟುಂಬ ಇದೊಂದು ದ್ವೇಷದ ದಾಳಿ ಎಂದು ಆರೋಪಿಸಿದೆ.

Advertisement

ಸಿಡ್ನಿಯ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ ಐಐಟಿ ಪದವೀಧರ ಶುಭಂ ಗರ್ಗ್ (28) ಅವರ ಮೇಲೆ ಅಕ್ಟೋಬರ್ 6 ರಂದು ದಾಳಿ ನಡೆದಿತ್ತು.ದಾಳಿ ನಡೆದ ಒಂದು ವಾರದ ನಂತರ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಅವರ ಕುಟುಂಬಕ್ಕೆ ಇಂದು ವೀಸಾ ನೀಡಲಾಗಿದೆ. ಶುಭಂ ಸಹೋದರನಿಗೆ ಆಸ್ಟ್ರೇಲಿಯಾಕ್ಕೆ ತೆರಳಲು ವೀಸಾ ಸೌಲಭ್ಯ ಕಲ್ಪಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದರು.

ಐಐಟಿ-ಮದ್ರಾಸ್‌ನಲ್ಲಿ ಪದವಿ ಪಡೆದ ನಂತರ ಶುಭಂ ಸೆಪ್ಟೆಂಬರ್ 1 ರಂದು ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಅಕ್ಟೋಬರ್ 6ರಂದು ರಾತ್ರಿ 10.30ರ ಸುಮಾರಿಗೆ ಎಟಿಎಂನಿಂದ ಹಣದೊಂದಿಗೆ ವಾಪಸಾಗುತ್ತಿದ್ದಾಗ ವ್ಯಕ್ತಿಯೊಬ್ಬ ಹಣಕ್ಕೆ ಬೇಡಿಕೆಯಿಟ್ಟು ಚಾಕು ತೋರಿಸಿ ಬೆದರಿಸಿದ್ದು, ಹಣ ನೀಡಲು ನಿರಾಕರಿಸಿದಾಗ ದಾಳಿಕೋರ ಪದೇ ಪದೇ ಇರಿದು ಓಡಿಹೋಗಿದ್ದಾನೆ.

ಭಾರತೀಯ ಹೈಕಮಿಷನ್ ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. “ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದನ್ನು ನಾವು ನಿರೀಕ್ಷಿಸುತ್ತೇವೆ” ಎಂದು ಹೇಳಿದ್ದಾರೆ.

ಶುಭಂ ಅವರ ಮುಖ, ಎದೆ ಮತ್ತು ಹೊಟ್ಟೆಗೆ ಹಲವು ಗಂಭೀರ ಗಾಯಗಳಾಗಿವೆ. ಆ ಸ್ಥಿತಿಯಲ್ಲಿ, ಅವರು ಹತ್ತಿರದ ಮನೆಗೆ ಹೋಗಲು ಯಶಸ್ವಿಯಾಗಿದ್ದು, ಆ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದು ಬಂದಿದೆ.

Advertisement

ನನ್ನ ಕರೆಗೆ ಉತ್ತರಿಸದಿದ್ದಾಗ ನಾವು ಅಕ್ಟೋಬರ್ 8 ರಂದು ವಿಷಯ ತಿಳಿದಿದೆ. ನಾವು ಅವರ ಸ್ನೇಹಿತರಿಗೆ ಕರೆ ಮಾಡಿ ದಾಳಿ ನಡೆದಿರುವ ಕುರಿತು ತಿಳಿದುಕೊಂಡಿದ್ದೇವೆ. 11 ಗಂಟೆಗಳ ಶಸ್ತ್ರಚಿಕಿತ್ಸೆಯಾಗಿದೆ. ನನ್ನ ಮಗನ ಚಿಕಿತ್ಸೆ ಮತ್ತು ನನ್ನ ಕಿರಿಯ ಮಗನಿಗೆ ವೀಸಾಕ್ಕೆ ಸಹಾಯ ಮಾಡಲು ನಾನು ಸರಕಾರವನ್ನು ಕೋರುತ್ತೇನೆ” ಎಂದು ಶುಭಂ ಅವರ ತಂದೆ ರಾಮ್ನಿವಾಸ್ ಗರ್ಗ್ ಹೇಳಿದರು.

ಕೃತ್ಯಕ್ಕೆ ಸಂಬಂಧಿಸಿ 27 ವರ್ಷದ ಯುವಕನನ್ನು ಬಂಧಿಸಲಾಗಿದ್ದು, ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ವರದಿಗಳ ಪ್ರಕಾರ ದಾಳಿಕೋರ ಶುಭಂ ಅವರಿಗೆ ತಿಳಿದಿರಲಿಲ್ಲ. ಇದು ಜನಾಂಗೀಯ ದಾಳಿ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಲಾಗಿದೆ.

ಶುಭಂ ಅವರಿಗೆ ಹಲವು ಶಸ್ತ್ರಚಿಕಿತ್ಸೆಗಳ ಅಗತ್ಯವಿದೆ ಎಂದು ಅವರ ಸಹೋದರಿ ಕಾವ್ಯಾ ಗರ್ಗ್ ಟ್ವೀಟ್‌ಗಳಲ್ಲಿ ತುರ್ತು ವೀಸಾಗಳನ್ನು ನೀಡಿ ಕುಟುಂಬಕ್ಕೆ ಸಹಾಯ ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದ್ದರು.

ಸರಕಾರ ಶುಭಂ ಅವರ ಕಿರಿಯ ಸಹೋದರನಿಗೆ ತುರ್ತು ವೀಸಾ ನೀಡಿದ ಬೆನ್ನಲ್ಲೇ ,”ಎಲ್ಲರಿಗೂ ಧನ್ಯವಾದಗಳು. ನನ್ನ ಸಹೋದರನ ವೀಸಾವನ್ನು ಇಂದು ಅನುಮೋದಿಸಲಾಗಿದೆ ಮತ್ತು ಅವರು ಮುಂದಿನ 2-3 ದಿನಗಳಲ್ಲಿ ಆಸ್ಟ್ರೇಲಿಯಾಕ್ಕೆ ಹೋಗುತ್ತಾರೆ ಧನ್ಯವಾದಗಳು ಡಾ.ಎಸ್. ಜೈಶಂಕರ್(ವಿದೇಶಾಂಗ ಸಚಿವ) ಮತ್ತು ಈ ಕಷ್ಟದ ಹಂತದಲ್ಲಿ ನಮ್ಮಸಹಾಯಕ್ಕೆ ಬಂದ ಇತರ ಜನರಿಗೆ. ದಯವಿಟ್ಟು ಅವನು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿ, ಅವನನ್ನು ಆಶೀರ್ವದಿಸಿ” ಎಂದು ಕಾವ್ಯಾ ಗರ್ಗ್ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next