ದೇಶದಲ್ಲಿ ಕಳೆದ ನಾಲ್ಕು ತಿಂಗಳುಗಳ ಅವಧಿಯಲ್ಲಿ ರೈಲುಗಳನ್ನು ಹಳಿ ತಪ್ಪಿಸಲು ದುಷ್ಕರ್ಮಿಗಳು 21 ಬಾರಿ ಪ್ರಯತ್ನ ನಡೆಸಿರುವ ಘಟನೆಗಳು ನಡೆದಿವೆ. ಈ ಕೃತ್ಯಗಳಲ್ಲಿ ಉಗ್ರಗಾಮಿ ಸಂಘಟನೆ ಶಾಮೀಲಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಬೆನ್ನಲ್ಲೇ ಇದನ್ನು ಪುಷ್ಟೀಕರಿಸಲೋ ಎಂಬಂತೆ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಉಗ್ರರೊಂದಿಗೆ ನಂಟು ಹೊಂದಿರುವ ಆರೋಪಿಗಳನ್ನು ತನಿಖಾ ಸಂಸ್ಥೆಗಳು ಬಂಧಿಸಿದ್ದವು. ಆದರೆ ಮಂಗಳವಾರ ಇವೆಲ್ಲವುಗಳಿಗೆ ವ್ಯತಿರಿಕ್ತವಾದ ಬೆಳವಣಿಗೆಯೊಂದು ನಡೆದಿದೆ.
ಕೆಲವು ದಿನಗಳ ಹಿಂದೆಯಷ್ಟೇ ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ರೈಲನ್ನು ಹಳಿ ತಪ್ಪಿಸಲು ನಡೆಸಿದ ಪ್ರಯತ್ನ ಮತ್ತು ಗುಜರಾತ್‌ನಲ್ಲಿ ರೈಲು ಹಳಿಯ 40ಕ್ಕೂ ಅಧಿಕ ನಟ್ ಬೋಲ್ಟ್ ಗಳನ್ನು ಸಡಿಲಗೊಳಿಸಿದ್ದು ರೈಲ್ವೇ ಸಿಬಂದಿಯೇ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ರೈಲ್ವೇಯ ನಾಲ್ವರು ಸಿಬಂದಿಯನ್ನು ಬಂಧಿಸಲಾಗಿದೆ.
ರೈಲು ಹಳಿ ತಪ್ಪಿಸುವ ದುಷ್ಕೃತ್ಯದಲ್ಲಿ ಉಗ್ರಗಾಮಿ ಸಂಘಟನೆಗಳು ವಹಿಸಿರುವ ಪಾತ್ರದ ಬಗೆಗೆ ಗಮನವನ್ನು ಕೇಂದ್ರೀಕರಿಸಿ ತನಿಖಾ ಸಂಸ್ಥೆಗಳು ತನಿಖೆಯನ್ನು ಚುರುಕುಗೊಳಿಸಿದ್ದವು. ಆದರೆ ರೈಲ್ವೇ ಇಲಾಖೆಯ ಸಿಬಂದಿಯೇ ಇಂತಹ ದುಷ್ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪ ಈಗ ಕೇಳಿ ಬಂದಿ ರುವುದರಿಂದಾಗಿ ಇದು ಇಡೀ ತನಿಖಾ ಪ್ರಕ್ರಿಯೆಯ ಹಾದಿ ತಪ್ಪಿಸುವ ಷಡ್ಯಂತ್ರವೇ ಎಂಬ ಅನುಮಾನ ದೇಶವಾಸಿಗಳನ್ನು ಸಹಜವಾಗಿಯೇ ಕಾಡ ತೊಡಗಿದೆ.
ಉಗ್ರಗಾಮಿ ಸಂಘಟನೆಗಳು ದೇಶದ ವಿವಿಧೆಡೆ ರೈಲುಗಳನ್ನು ಹಳಿ ತಪ್ಪಿಸುವ ಬೆದರಿಕೆ ಒಡ್ಡಿದ ಬಳಿಕ ಇಂತಹ ಘಟನಾವಳಿಗಳು ದೇಶದ ವಿವಿಧೆಡೆಗಳಿಂದ ವರದಿಯಾಗತೊಡಗಿತ್ತು. ಆಯಾಯ ರಾಜ್ಯಗಳ ಪೊಲೀಸರು, ರೈಲ್ವೇ ಸುರಕ್ಷ ಸಂಸ್ಥೆಗಳು, ರೈಲ್ವೇ ಪೊಲೀಸರೊಂದಿಗೆ ಎನ್‌ಐಎ ಅಧಿಕಾರಿಗಳು ಕೂಡ ತನಿಖೆಯಲ್ಲಿ ಭಾಗಿಯಾಗಿದ್ದರು. ಇದರ ಹೊರತಾಗಿಯೂ ದೇಶದ ಅಲ್ಲಲ್ಲಿ ಪದೇಪದೆ ಇಂತಹ ಪ್ರಯತ್ನಗಳು ನಡೆಯುತ್ತಲೇ ಬಂದಿದ್ದವಲ್ಲದೆ ರೈಲು ಚಾಲಕರು, ರೈಲ್ವೇ ಇಲಾಖೆಯ ನಿರ್ವಹಣ ವಿಭಾಗದ ಸಿಬಂದಿಯ ಸಮಯಪ್ರಜ್ಞೆಯಿಂದಾಗಿ ರೈಲುಗಳು ಹಳಿ ತಪ್ಪಿ ದುರಂತ ಸಂಭವಿಸುವುದು ತಪ್ಪುತ್ತಿತ್ತು.
ಈ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಮತ್ತು ಸಾರ್ವಜನಿಕ ವಲಯದಿಂದ ರೈಲ್ವೇ ಸಿಬಂದಿಯ ಸಮಯ ಮತ್ತು ಕರ್ತವ್ಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಈ ಶ್ಲಾಘನೆ, ಸಮ್ಮಾನದ ಗೀಳಿನಿಂದ ಮತ್ತು ಇಂತಹ ಸಿಬಂದಿಯನ್ನು ಸಾಧ್ಯವಾದಷ್ಟು ರಾತ್ರಿ ಪಾಳಿಯಲ್ಲಿ ನೇಮಿಸಿಕೊಳ್ಳಲು ಇಲಾಖೆ ಆಸಕ್ತಿ ತೋರಿದ್ದ ಪರಿಣಾಮ ಹಗಲಿನಲ್ಲಿ ರಜೆ ಲಭಿಸುತ್ತದೆ ಎಂಬ ಕಾರಣದಿಂದ ಇಂತಹ ಕೃತ್ಯ ಎಸಗಿದ್ದಾಗಿ ಮಂಗಳವಾರ ಬಂಧಿತರಾದ ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಮೇಲ್ನೋಟಕ್ಕೆ ಇದೊಂದು ಕುಚೋದ್ಯದ ಮತ್ತು ಕಿಡಿಗೇಡಿ ಕೃತ್ಯ ಎಂದೆನಿಸಿದರೂ ಇಂತಹ ಅನಾಹುತಕಾರಿ ಕೃತ್ಯಕ್ಕೆ ರೈಲ್ವೇ ಸಿಬಂದಿ ಮುಂದಾಗಿದ್ದಾರೆ ಎಂದರೆ ಅದರ ಹಿಂದೆ ಬಲುದೊಡ್ಡ ಹುನ್ನಾರವಿದ್ದಂತೆ ತೋರುತ್ತದೆ.
ಹೀಗಾಗಿ ತನಿಖಾ ಸಂಸ್ಥೆಗಳು ಆರೋಪಿಗಳು ನೀಡಿದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಅವರ ಹಿಂದೆ ಯಾರಿದ್ದಾರೆ ಎಂಬ ಬಗೆಗೆ ಕೂಲಂಕಷ ತನಿಖೆ ನಡೆಸಬೇಕು. ತಮಗೆ ಅನ್ನ ನೀಡುತ್ತಿರುವ ವೃತ್ತಿಗೇ ದ್ರೋಹ ಬಗೆಯುವ ನಿರ್ಧಾರವನ್ನು ರೈಲ್ವೇ ಸಿಬಂದಿ ಕೈಗೊಂಡಿದ್ದಾರೆ ಎಂದಾದರೆ ಅವರು ಯಾವುದಾದರೂ ಬಾಹ್ಯಶಕ್ತಿಗಳ ಆಮಿಷ, ಒತ್ತಡಕ್ಕೆ ಬಲಿಯಾಗಿದ್ದಾರೆಯೇ ಎಂಬ ಬಗೆಗೆ ತನಿಖಾ ಸಂಸ್ಥೆಗಳು ಆಮೂಲಾಗ್ರ ತನಿಖೆ ನಡೆಸಬೇಕು. ಇಂತಹ ಘಟನಾವಳಿಗಳು ಮತ್ತು ಬೆಳವಣಿಗೆಗಳು ಭಾರತೀಯ ರೈಲ್ವೇ ಮಸಿ ಬಳಿಯುವಂಥವುಗಳಾಗಿರುವುದರಿಂದ ಇದರ ಹಿಂದಿರುವ ಎಲ್ಲ ಕುತಂತ್ರವನ್ನು ಬಯಲಿಗೆಳೆಯ ಬೇಕು. ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಿ ಭಾರತೀಯ ರೈಲ್ವೇ ಮೇಲಣ ಜನತೆಯ ವಿಶ್ವಾಸಾರ್ಹತೆಯನ್ನು ಉಳಿಸುವ ಹೊಣೆಗಾರಿಕೆ ತನಿಖಾ ಸಂಸ್ಥೆಗಳು ಮತ್ತು ರೈಲ್ವೇ ಇಲಾಖೆಯದ್ದಾಗಿದೆ.