ಪರಮಾರಿಬೊ: ದಕ್ಷಿಣ ಅಮೆರಿಕ ಖಂಡದ ದೇಶ ಸುರಿನಾಮ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಜನರಾಗಿದ್ದಾರೆ. ಉಭಯ ದೇಶಗಳ ನಡುವೆ ಆಳವಾಗಿ ಬೇರೂರಿರುವ ದ್ವಿಪಕ್ಷೀಯ ಸಂಬಂಧದ ದ್ಯೋತಕವಾಗಿ ಅವರಿಗೆ ಸುರಿನಾಮ್ ರಾಷ್ಟ್ರಪತಿ ಚಂದ್ರಿಕಾ ಪ್ರಸಾದ್ ಸಂತೋಖೀ “ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಎಲ್ಲೊ ಸ್ಟಾರ್” ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಮೂರು ದಿನ ಗಳ ಪ್ರವಾಸಕ್ಕಾಗಿ ದ್ರೌಪದಿ ಮುರ್ಮು ಅವರು ರವಿವಾರ ಸುರಿನಾಮ್‌ಗೆ ಆಗ ಮಿಸಿದ್ದಾರೆ.
ರಾಷ್ಟ್ರಪತಿ ಹುದ್ದೆ ಆಲಂಕರಿಸಿದ ಅನಂತರ ಮುರ್ಮು ಅವರ ಮೊದಲ ವಿದೇಶ ಪ್ರವಾಸ ಇದಾಗಿದೆ. ಈ ಪ್ರಶಸ್ತಿಗಾಗಿ ಚಂದ್ರಿಕಾಪ್ರಸಾದ್ ಸಂತೋಖೀ ಮತ್ತು ಸುರಿನಾಮ್ ಸರಕಾರಕ್ಕೆ ಮುರ್ಮು ಅವರು ಧನ್ಯವಾದ ತಿಳಿಸಿದ್ದಾರೆ. “ಸುರಿನಾಮ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯು ನನಗೆ ಮಾತ್ರವಲ್ಲದೇ 140 ಕೋಟಿ ಭಾರತೀಯರಿಗೆ ಮಹತ್ತರ ಗೌರವವಾಗಿದೆ. ಈ ಪ್ರಶಸ್ತಿಯು ಭಾರತೀಯ-ಸುರಿನಾಮ್ ಸಮುದಾಯಕ್ಕೆ ಅರ್ಪಣೆ” ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ. “ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಎಲ್ಲೊ ಸ್ಟಾರ್” ಪ್ರಶಸ್ತಿ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.