Advertisement

ಸ್ವಪಕ್ಷೀಯರಿಂದಲೇ ಬಿದ್ದ ಸರಕಾರಗಳು…

01:11 PM Jun 29, 2022 | Team Udayavani |

ರಾಜಕೀಯ ಅಸ್ಥಿರತೆಗೆ ಎಂದಿಗೂ ಕರ್ನಾಟಕವೇ ಜೀವಂತ ಸಾಕ್ಷಿ. ಇತ್ತೀಚಿನ ಕೆಲವು ವಿಧಾನಸಭೆ ಚುನಾವಣೆಗಳಲ್ಲಿ ಇದನ್ನು ನೋಡುತ್ತಾ ಬಂದಿದ್ದೇವೆ. ಅದೇ ರೀತಿ ಅತ್ತ ಮಧ್ಯಪ್ರದೇಶದಲ್ಲೂ ರಾಜಕೀಯ ಅಸ್ಥಿರತೆ ಉಂಟಾಗಿ, ಕಾಂಗ್ರೆಸ್‌ ಸರಕಾರ ಪತನವಾಗಿ, ಬಿಜೆಪಿ ಸರಕಾರ ಬಂತು. ಈಗ ಮಹಾರಾಷ್ಟ್ರದಲ್ಲೂ ಇಂಥದ್ದೇ ವಿದ್ಯಮಾನ ನಡೆಯುತ್ತಿದೆ. ದೇಶದಲ್ಲಿ ಸ್ವಪಕ್ಷೀಯರಿಂದಲೇ ಪತನಗೊಂಡ ಸರಕಾರಗಳ ಮಾಹಿತಿ ಇಲ್ಲಿದೆ.

Advertisement

ಮಹಾರಾಷ್ಟ್ರದ ರಾಜಕೀಯ ವಿದ್ಯಮಾನ ಇಡೀ ದೇಶದಲ್ಲಿ ಬಹುಚರ್ಚಿತ ವಿಷಯ. ಕರ್ನಾಟಕವೂ ಈ ರೀತಿಯ “ಬಂಡಾಯ ಸ್ಫೋಟ’ಕ್ಕೆ ಸಾಕ್ಷಿಯಾಗಿತ್ತು. ಇಂದು ಮಹಾ ರಾಷ್ಟ್ರದಲ್ಲಿ ನಡೆಯುತ್ತಿರುವ ವಿದ್ಯಮಾನ, ಶಾಸಕರ ರೆಸಾರ್ಟ್‌ ವಾಸ್ತವ್ಯ, ರಾತೋರಾತ್ರಿ ಒಂದು ಕಡೆಯಿಂದ ಮತ್ತೂಂದು ಕಡೆಗೆ “ಶಿಫ್ಟ್’, ಅನರ್ಹತೆ ಕೋರಿ ಮನವಿ, ನ್ಯಾಯಾಲಯ ಮಧ್ಯ ಪ್ರವೇಶ, ಪಕ್ಷದಿಂದ ಉಚ್ಛಾಟನೆ ಇಂತಹ ಎಲ್ಲ “ಸರ್ಕಸ್‌’ಗಳು ಕರ್ನಾಟಕದಲ್ಲಿಯೂ ನಡೆದಿದ್ದವು. ಬಹುಮತ ಸಾಬೀತು ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಬಟ್ಟೆ ಹರಿದುಕೊಂಡ, ಸ್ಪೀಕರ್‌ ಪೀಠಕ್ಕೆ ಅಗೌರವ ತೋರಿದ ಘಟನೆಗಳೂ ನಡೆದಿವೆ.

1978-83
1980ರಲ್ಲಿ ಕಾಂಗ್ರೆಸ್‌ ಸರಕಾರದಲ್ಲಿ ದೇವರಾಜ ಅರಸು 2ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಕ್ರಮೇಣ ದೇವರಾಜ ಅರಸು ಹಾಗೂ ಇಂದಿರಾಗಾಂಧಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಅದು ತೀವ್ರ ಮಟ್ಟಕ್ಕೆ ಹೋಯಿತು. ಈ ಸಂದರ್ಭದಲ್ಲಿ ಗುಂಡೂರಾವ್‌ ಸೇರಿ ಹಲವರು ಇಂದಿರಾ ಅವರಿಗೆ ನಿಷ್ಠೆ ತೋರಿ ವಿಧಾನಸಭೆಯಲ್ಲಿ ಪ್ರತ್ಯೇಕ ಗುಂಪು ರಚಿಸಿಕೊಂಡರು. ದೇವರಾಜ ಅರಸು ಮುಖ್ಯಮಂತ್ರಿಯಾಗಿ  ದ್ದಾಗಲೇ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಆಗ ದೇವ ರಾಜ ಅರಸು ಅವರು ಅರಸು ಕಾಂಗ್ರೆಸ್‌ ಪಕ್ಷ ಸ್ಥಾಪಿಸಿ ಜನತಾಪಕ್ಷ ಬೆಂಬಲದೊಂದಿಗೆ ಮುಖ್ಯಮಂತ್ರಿ ಯಾಗಿ ಮುಂದುವರಿದಿದ್ದರು.

ಈ ನಡುವೆ ಕೇಂದ್ರದಲ್ಲಿ ನಡೆದ ವಿದ್ಯಮಾನಗಳಲ್ಲಿ 1980ರಲ್ಲಿ ಲೋಕಸಭೆಗೆ ಮಧ್ಯಾಂತರ ಚುನಾವಣೆ ಎದುರಾಯಿತು. ಇಂದಿರಾಗಾಂಧಿ ಅವರಿಗೆ ಸಡ್ಡು ಹೊಡೆದು ಅರಸು ಕಾಂಗ್ರೆಸ್‌ ವತಿಯಿಂದ 28 ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಲಾಯಿತು. ಆದರೆ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್‌ 27 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅರಸು ಕಾಂಗ್ರೆಸ್‌ನ ಅಭ್ಯರ್ಥಿಗಳು ಎಲ್ಲೆಡೆ ಸೋಲು ಆನುಭವಿಸಿದರು. ಆ ಸಂದರ್ಭದಲ್ಲಿ ಅರಸು ಅವರಿಗೆ ಆಪ್ತರಾಗಿದ್ದವರು ಸೇರಿ 80 ಶಾಸಕರು ಅರಸು ಅವರಿಗೆ ಕೈ ಕೊಟ್ಟು ಇಂದಿರಾಗಾಂಧಿ ಪಾಳಯ ಸೇರಿಕೊಂಡರು. ಆಗ ದೇವರಾಜ ಅರಸು ಜತೆ ಇದ್ದವರು ಡಿ.ಬಿ.ಚಂದ್ರೇಗೌಡ, ಕೆ.ಎಚ್‌.ಶ್ರೀನಿವಾಸ್‌, ಸುಬ್ಬಯ್ಯಶೆಟ್ಟಿ, ಮೊಯಿದೀನ್‌ ಮಾತ್ರ. ಬಹುತೇಕ ಶಾಸಕರು ಕಾಂಗ್ರೆಸ್‌ಗೆ ವಾಪಸ್‌ ಆಗಿದ್ದರಿಂದ ಗುಂಡೂರಾವ್‌ ಮುಖ್ಯಮಂತ್ರಿಯಾದರು. ಆಗಲೂ ಮುಖ್ಯಮಂತ್ರಿ ರೇಸ್‌ನಲ್ಲಿದ್ದವರು ಎಚ್‌.ಸಿ. ಶ್ರೀಕಂಠಯ್ಯ. ಆದರೆ ಇಂದಿರಾ ಗಾಂಧಿ ಹಾಗೂ ಸಂಜಯ್‌ ಗಾಂಧಿ ಅವರ ಒಲವು ಗುಂಡೂರಾವ್‌ ಅವರ ಪರ ಇದ್ದ ಕಾರಣ ಗುಂಡೂರಾವ್‌ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿಯಿತು.

2004-2008
2004ರ ವಿಧಾನಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್‌-65, ಜೆಡಿಎಸ್‌-58, ಬಿಜೆಪಿ-79, ಜೆಡಿಯು-5, ಪಕ್ಷೇತರರು-13, ವಾಟಾಳ್‌ ಪಕ್ಷ, ಕನ್ನಡ ನಾಡು, ಆರ್‌ಪಿಐ,, ಸಿಪಿಎಂ ತಲಾ ಒಂದೊಂದು ಸ್ಥಾನ ಗಳಿಸಿತ್ತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜತೆಗೂಡಿ ಸಮ್ಮಿಶ್ರ ಸರಕಾರ ರಚನೆಯಾಗಿ ಕಾಂಗ್ರೆಸ್‌ನ ಧರ್ಮಸಿಂಗ್‌ ಮುಖ್ಯಮಂತ್ರಿ, ಜೆಡಿಎಸ್‌ನ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು. ಈ ಮಧ್ಯೆ 2006ರ ವೇಳೆಗೆ ಸಿದ್ದರಾಮಯ್ಯ ಅಹಿಂದ ಸಮಾವೇಶ ಮೂಲಕ “ಬಂಡಾಯ’ ಸಾರಿ ಅವರನ್ನು ಪಕ್ಷದಿಂದ ಹೊರ ಹಾಕಲಾಯಿತು. ಇದರ ನಡುವೆ 37 ಜೆಡಿಎಸ್‌ ಶಾಸಕರು ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸಿಡಿದು ತಮ್ಮದೇ ನಿಜವಾದ ಜನತಾದಳ ಎಂದು ರಾಜ್ಯಾಧ್ಯಕ್ಷರಾಗಿ ತಿಪ್ಪಣ್ಣ ಅವರ ಬೆಂಬಲದೊಂದಿಗೆ ಬಿಜೆಪಿ ಜತೆ ಸೇರಿದರು. ಆಗ ಕಾಂಗ್ರೆಸ್‌ ಸರಕಾರ ಪತನಗೊಂಡು ಸಮ್ಮಿಶ್ರ ಸರಕಾರ ರಚನೆ ಯಾಯಿತು. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾ ದರು. ಇದಕ್ಕೆ ಟ್ವೆಂಟಿ -ಟ್ವೆಂಟಿ ಸರಕಾರ ಎಂದೇ ನಾಮ ಕರಣ ವಾಯಿತು. ಮೊದಲ 20 ತಿಂಗಳು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ. ಅನಂತರ 20 ತಿಂಗಳು ಬಿ.ಎಸ್‌.ಯಡಿ ಯೂರಪ್ಪ ಮುಖ್ಯಮಂತ್ರಿ ಎಂಬ ಒಪ್ಪಂದವಾಗಿತ್ತು. ಆದರೆ 20 ತಿಂಗಳ ಅನಂತರ ರಾಜಕೀಯ ಡ್ರಾಮಾ ನಡೆದು ಅಧಿಕಾರ ಹಸ್ತಾಂತರ ಆಗಲಿಲ್ಲ. ಸರಕಾರ ಪತನವಾಗಿ ಚುನಾವಣೆ ಎದುರಾಯಿತು.

Advertisement

2018-2023
2018ರಲ್ಲಿ ಬಿಜೆಪಿ 104, ಕಾಂಗ್ರೆಸ್‌- 78, ಜೆಡಿಎಸ್‌-37, ಬಿಎಸ್‌ಪಿ-1, ಪಕ್ಷೇತರರು 2 ಗೆದ್ದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜತೆಗೂಡಿ ಸಮ್ಮಿಶ್ರ ಸರಕಾರ ರಚನೆಯಾಯಿತು. ಎಚ್‌. ಡಿ. ಕುಮಾರಸ್ವಾಮಿ ಮುಖ್ಯ ಮಂತ್ರಿ ಯಾದರು. ಆದರೆ 2019 ರಲ್ಲಿ ಜೆಡಿಎಸ್‌ನ ಮೂವರು ಹಾಗೂ ಕಾಂಗ್ರೆಸ್‌ನ 13 ಮಂದಿ ಸರಕಾರದ ವಿರುದ್ಧ ತಿರುಗಿಬಿದ್ದರು. ಸಮ್ಮಿಶ್ರ ಸರಕಾರ ಪತನಗೊಂಡು ಬಿಜೆಪಿ ಸರಕಾರ ರಚನೆಯಾಯಿತು. ಇದರ ನಡುವೆ 2008 ರಲ್ಲಿ ಬಿಜೆಪಿ 110 ಸ್ಥಾನ ಗಳಿಸಿ 6 ಮಂದಿ ಪಕ್ಷೇತರರ ಸಹಾಯ ದಿಂದ ಬಹುಮತ ಪಡೆದು ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾದರೂ ಸ್ವಂತ ಬಹುಮತಕ್ಕಾಗಿ ಆಪರೇಷನ್‌ ಕಮಲ ಕಾರ್ಯಾಚರಣೆ ನಡೆಸಿ 18 ಶಾಸಕರ ರಾಜೀನಾಮೆ ಕೊಡಿಸಿ ಉಪ ಚುನಾವಣೆ ಎದುರಾಗಿ ಬಹುಮತ ಮಾಡಿಕೊಂಡ ಉದಾಹರಣೆ ಇದೆ. ಆದರೆ ಇಷ್ಟೆಲ್ಲ ಆದರೂ ಯಡಿಯೂರಪ್ಪ 5 ವರ್ಷ ಅಧಿಕಾರ ನಡೆಸಲಿಲ್ಲ. ಡಿ.ವಿ. ಸದಾನಂದಗೌಡ, ಜಗದೀಶ್‌ ಶೆಟ್ಟರ್‌ ಸೇರಿ ಮೂವರು ಸಿಎಂ ಬದಲಾದರು. 2019 ರಲ್ಲಿಯೂ ಆಪರೇಷನ್‌ ಕಮಲ ಮೂಲಕ ಬಿಜೆಪಿ ಸರಕಾರ ಬಂದು ಯಡಿಯೂರಪ್ಪ ಸಿಎಂ ಆದರೂ 2 ವರ್ಷ ಮುಗಿಯುತ್ತಿದ್ದಂತೆ ರಾಜೀನಾಮೆ ಕೊಡಬೇಕಾಯಿತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು.

ರಾಜ್ಯ ರಾಜಕಾರಣದಲ್ಲಿ ರಾಜಕೀಯ ಧ್ರುವೀಕರಣಗಳು ಸಾಕಷ್ಟು ನಡೆದಿವೆ. ಕಾಂಗ್ರೆಸ್‌, ಜನತಾದಳ, ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರಂತಿದ್ದವರು ಒಮ್ಮೆಲೆ ಸ್ವಪಕ್ಷದವರಿಂದಲೇ ಬಂಡಾಯ ಎದುರಿಸಿ ಪ್ರತ್ಯೇಕ ಪಕ್ಷ ಸ್ಥಾಪನೆ ಮಾಡಿದ್ದೂ ಇದೆ.

ದೇವರಾಜ ಅರಸರು ಅರಸು ಕಾಂಗ್ರೆಸ್‌, ಬಂಗಾರಪ್ಪ ಅವರು ಕ್ರಾಂತಿರಂಗ, ಕರ್ನಾಟಕ ಕಾಂಗ್ರೆಸ್‌ ಪಕ್ಷ ಹಾಗೂ ಕರ್ನಾಟಕ ವಿಕಾಸ ಪಕ್ಷ, ಎಚ್‌.ಡಿ. ದೇವೇಗೌಡರು ಸಮಾಜವಾದಿ ಜನತಾಪಕ್ಷ, ರಾಮಕೃಷ್ಣ ಹೆಗಡೆ ಆವರು ಲೋಕಶಕ್ತಿ, ಬಿ.ಎಸ್‌.ಯಡಿಯೂರಪ್ಪ ಅವರು ಕರ್ನಾಟಕ ಜನತಾಪಕ್ಷ ಎಂಬ ಪ್ರತ್ಯೇಕ ಪಕ್ಷ ಸ್ಥಾಪಿಸಿದ್ದರು. ಸಿದ್ದ ರಾಮಯ್ಯ ಅವರು ಸಹ ಜೆಡಿಎಸ್‌ನಿಂದ ಹೊರ ಬಂದ ಅನಂತರ ಕಾಂಗ್ರೆಸ್‌ ಸೇರುವವರೆಗೆ ಕೆಲಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್‌.ಆರ್‌. ಬೊಮ್ಮಾಯಿ ಅವರು ಸ್ಥಾಪಿಸಿದ್ದ ಅಖೀಲ ಭಾರತ ಪ್ರಗತಿಪರ ಜನತಾದಳ ಪಕ್ಷದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.

ಅರುಣಾಚಲ ಪ್ರದೇಶ (2014-16)
ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಕ್ಕಿಂತ ಮುನ್ನವೇ ತನ್ನದೇ ಶಾಸಕರು ಬಂಡೆದ್ದ ಪರಿಣಾಮ ಸರಕಾರವೊಂದು ಬಿದ್ದಿದ್ದು ಅರುಣಾಚಲ ಪ್ರದೇಶದಲ್ಲಿ. 2014ರ ಲೋಕಸಭೆ ಚುನಾವಣೆ ನಡೆದ ಹೊತ್ತಿನಲ್ಲೇ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲೂ ವಿಧಾನಸಭೆ ಚುನಾವಣೆ ನಡೆದು, ಇಲ್ಲಿ ಕಾಂಗ್ರೆಸ್‌ನ 44 ಮಂದಿ ಗೆದ್ದಿದ್ದರು. ಇದು 60 ಶಾಸಕರ ಬಲದ ವಿಧಾನಸಭೆಯಾಗಿದ್ದು, ಸರಕಾರ ರಚನೆಗೆ ಈ ಬಲ ಸಾಕಿತ್ತು. ಅದೇ ರೀತಿಯಲ್ಲಿ ಕಾಂಗ್ರೆಸ್‌ ಸರಕಾರವೂ ರಚನೆಯಾಗಿತ್ತು. ಆದರೆ 2014ರಿಂದ 2016ರವರೆಗೆ ಇಲ್ಲಿ ಹಲವಾರು ರೀತಿಯ ರಾಜಕೀಯ ಹೈಡ್ರಾಮಾಗಳನ್ನು ನೋಡಬೇಕಾಯಿತು. ಕಾಂಗ್ರೆಸ್‌ ಶಾಸಕ ಮತ್ತು ಮಾಜಿ ಮುಖ್ಯಮಂತ್ರಿ ದೋರ್ಜೀ ಖಂಡು ಅವರ ಪುತ್ರ ಪೆಮಾ ಖಂಡು ಕಾಂಗ್ರೆಸ್‌ ವಿರುದ್ಧವೇ ಬಂಡೆದ್ದರು. ಮೊದಲಿಗೆ ಕೆಲವು ಬಂಡಾಯ ಶಾಸಕರೊಂದಿಗೆ ಕಾಂಗ್ರೆಸ್‌ ಬಿಟ್ಟು ತಮ್ಮದೇ ಆದ ಪೀಪಲ್ಸ್‌ ಪಾರ್ಟಿ ಆಫ್ ಅರುಣಾಚಲ ಪ್ರದೇಶ ಎಂಬ ಪಕ್ಷ ಕಟ್ಟಿದರು. ಬಳಿಕ ಬಿಜೆಪಿ ನೇತೃತ್ವದ ಈಶಾನ್ಯ ಭಾರತ ಡೆಮಾಕ್ರೆಟಿಕ್‌ ಅಲಯನ್ಸ್‌ ಸೇರಿದ್ದರು.

ಆದರೆ 2016ರ ಜುಲೈನಲ್ಲಿ ಪುನಃ ಕಾಂಗ್ರೆಸ್‌ಗೆ ವಾಪಸ್‌ ಬಂದು, ತಮ್ಮ ನೇತೃತ್ವದÇÉೇ ಸರಕಾರ ರಚಿಸಿಕೊಂಡರು. ಅಂದರೆ 2016ರಲ್ಲಿ ನಬಮ್‌ ತುಕಿ ಅವರ ಬದಲಿಗೆ ಇವರು ಸಿಎಂ ಆದರು. ಅದೇ ವರ್ಷದ ಸೆಪ್ಟಂಬರ್‌ನಲ್ಲಿ ಕಾಂಗ್ರೆಸ್‌ನ ಒಟ್ಟು 44 ಶಾಸಕರಲ್ಲಿ 43 ಮಂದಿಯನ್ನು ತಮ್ಮ ಜತೆಗೆ ಕರೆದುಕೊಂಡು ಹೋಗಿ ಪಿಪಿಎಗೆ ಸೇರಿದರು. ಒಂದು ತಿಂಗಳ ಅನಂತರ 33 ಶಾಸಕರೊಂದಿಗೆ ಬಿಜೆಪಿಗೆ ಸೇರಿದರು. ವಿಚಿತ್ರವೆಂದರೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಖಂಡು ಅವರ ನೇತೃತ್ವದÇÉೇ ಬಿಜೆಪಿ ಗೆದ್ದಿತು. 60ರಲ್ಲಿ 41 ಸ್ಥಾನಗಳು ಲಭಿಸಿದವು. ಕಾಂಗ್ರೆಸ್‌ ಕೇವಲ 4 ಸ್ಥಾನಗಳಲ್ಲಷ್ಟೇ ಗೆದ್ದಿತು.

ಮಧ್ಯ ಪ್ರದೇಶ (2018-20)
2018ರಲ್ಲಿ ನಡೆದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 114, ಬಿಜೆಪಿ 107, ಇತರರು 7 ಸ್ಥಾನದಲ್ಲಿ ಗೆದ್ದಿದ್ದರು. ಕಾಂಗ್ರೆಸ್‌ ಬಹುಮತಕ್ಕೆ ಇನ್ನು ಒಂದು ಸ್ಥಾನ ಮಾತ್ರ ಬೇಕಾಗಿತ್ತು. ಆದರೆ ಇತರರು ಬೆಂಬಲ ಕೊಟ್ಟ ಪರಿಣಾಮ, ಕಮಲ್‌ನಾಥ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಸರಕಾರ ರಚನೆ ಮಾಡಿತ್ತು.

ವಿಶೇಷವೆಂದರೆ ಆರಂಭದಿಂದಲೂ ಕಾಂಗ್ರೆಸ್‌ನ ಕಮಲ್‌ನಾಥ್‌ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ನಡುವೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಇದು ಮುಂದಿನ 2 ವರ್ಷಗಳವರೆಗೂ ಮುಂದುವರಿಯುತ್ತಲೇ ಇತ್ತು. ಆದರೆ 2020ರ ಮಾರ್ಚ್‌ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಕಾಂಗ್ರೆಸ್‌ನಿಂದ ಹೊರಬಂದು, ಬಿಜೆಪಿ ಸೇರಲು ನಿರ್ಧರಿಸಿದರು. ಅಂದರೆ ಮಾ.11ರಂದು ಸಿಂಧಿಯಾ ಬಿಜೆಪಿಗೆ ಸೇರ್ಪಡೆಯಾದರು. ಇವರ ಬೆಂಬಲಿಗರಾದ 22 ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರಿಂದ ಸರಕಾರ ಅಲ್ಪಮತಕ್ಕೆ ಕುಸಿದು ಬಿತ್ತು. ಹಾಗೆಯೇ ಇವರೆಲ್ಲರೂ ಬಿಜೆಪಿಗೆ ಸೇರ್ಪಡೆಯಾದರು. ಅದೇ ತಿಂಗಳ 20ರಂದು ಕಮಲ್‌ನಾಥ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. 23ರಂದು ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಬಿಜೆಪಿ ಸರಕಾರ ರಚಿಸಿದರು. ಈ ಸಂದರ್ಭ ದಲ್ಲೂ ಶಾಸಕರ ರೆಸಾರ್ಟ್‌ ಪಾಲಿಟಿಕ್ಸ್‌ ಜೋರಾಗಿಯೇ ನಡೆದಿತ್ತು.

 – ಎಸ್. ಲಕ್ಷ್ಮೀ ನಾರಾಯಣ 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next