Advertisement

ಸೌದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ನರ್ಸ್ ಗೆ ಕೊರೊನಾ ಸೋಂಕು

10:00 AM Jan 24, 2020 | Hari Prasad |

ನವದೆಹಲಿ: ಸೌದಿಯಲ್ಲಿ ನರ್ಸ್ ಆಗಿ ಸೇವೆ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮಹಿಳೆಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಚೀನಾ ಸೇರಿದಂತೆ ಏಷ್ಯಾ ರಾಷ್ಟ್ರಗಳನ್ನು ಕಂಗೆಡಿಸುತ್ತಿರುವ ಕೊರೊನಾ ವೈರಸ್ ಭಾರತೀಯ ಮೂಲದ ವ್ಯಕ್ತಿಯಲ್ಲಿ ಕಾಣಿಸಿಕೊಂಡಿರುವ ಪ್ರಥಮ ಪ್ರಕರಣ ಇದಾಗಿದೆ. ವಿದೇಶಾಂಗ ವ್ಯವಹಾರ ಸಚಿವಾಲಯದ ರಾಜ್ಯ ಸಚಿವ ವಿ ಮುರಳೀಧರನ್ ಈ ವಿಚಾರವನ್ನು ಇಂದು ಖಚಿತಪಡಿಸಿದ್ದಾರೆ.

Advertisement

ನೆರೆ ರಾಷ್ಟ್ರ ಚೀನಾದಲ್ಲಿ ಈ ವೈರಸ್ ಮೊದಲಿಗೆ ಪತ್ತೆಯಾಗಿದ್ದು ಆ ರಾಷ್ಟ್ರ ಇದೀಗ ಕೊರೊನಾ ವೈರಸ್ ನಿಗ್ರಹದಲ್ಲಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಚೀನಾದಲ್ಲಿ ಸುಮಾರು 630 ಜನರಲ್ಲಿ ಈ ಮಾರಣಾಂತಿಕ ಸೋಂಕು ಕಾಣಿಸಿಕೊಂಡಿದ್ದು ಈಗಾಗಲೇ 17 ಜನರು ಈ ಮಾರಕ ವೈರಸ್ ಗೆ ಬಲಿಯಾಗಿದ್ದಾರೆ. ಗುರುವಾರದಂದು ಚೀನಾದ ಹುಬೇ ಪ್ರಾಂತ್ಯದಲ್ಲಿರುವ ವುಹಾನ್ ಹಾಗೂ ಹುವಾಗಂಗ್ ನಗರಗಳನ್ನು ಚೀನಾ ಸಂಪೂರ್ಣವಾಗಿ ಬಂದ್ ಮಾಡಿತ್ತು.

ಸೌದಿಯ ಅಲ್-ಹಯಾತ್ ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿರುವ ಸೋಂಕು ಪೀಡಿತ ಭಾರತೀಯ ನರ್ಸ್ ಗೆ ಇದೀಗ ಅಸೀರ್ ನ್ಯಾಷನಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂಬ ಮಾಹಿತಿಯನ್ನು ಮುರಳೀಧರನ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಖಾಮಿಸ್ ಮುಷಾಯಿಟ್ ನಲ್ಲಿರುವ ಅಲ್ ಹಯಾತ್ ಆಸ್ಪತ್ರೆ ಸೌದಿ ರಾಜಧಾನಿ ರಿಯಾದ್ ನಿಂದ ಸುಮಾರು 900 ಕಿಲೋ ಮೀಟರ್ ದೂರದಲ್ಲಿದೆ.

ಜೆದ್ದಾದಲ್ಲಿರುವ ಭಾರತೀಯ ರಾಯಭಾರಿ ಕಛೇರಿಯ ಅಧಿಕಾರಿಗಳು ನರ್ಸ್ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಆಸ್ಪತ್ರೆಯ ಆಡಳಿತ ವರ್ಗದವರೊಂದಿಗೆ ನಿರಂತರ ಸಂಪರ್ಕವನ್ನು ಸಾಧಿಸಿದ್ದು ಭಾರತೀಯ ನರ್ಸ್ ಅವರ ಆರೋಗ್ಯ ಸ್ಥಿತಿಯ ಕುರಿತಾಗಿ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಮತ್ತು ಅವರಿಗೆ ತಮ್ಮ ಕಡೆಯಿಂದ ಅಗತ್ಯವಿರಬಹುದಾದ ಎಲ್ಲಾ ನೆರವನ್ನು ಭಾರತೀಯ ರಾಯಭಾರಿ ಕಛೇರಿಯ ಅಧಿಕಾರಿಗಳು ನೀಡುತ್ತಿದ್ದಾರೆ.


ಅಲ್-ಹಯಾತ್ ಆಸ್ಪತ್ರೆಯಲ್ಲಿ ಕೇರಳ ಮೂಲದವರೆಂದು ತಿಳಿಯಲಾಗಿರುವ ಸುಮಾರು 100 ನರ್ಸ್ ಗಳು ಕೆಲಸಮಾಡುತ್ತಿದ್ದಾರೆ. ಅವರೆಲ್ಲರನ್ನೂ ಕೊರೊನಾ ವೈರಸ್ ಸೋಂಕು ಪತ್ತೆಗೆ ಒಳಪಡಿಸಲಾಗಿದ್ದು ಅವರಲ್ಲಿ ಒಬ್ಬರಿಗೆ ಮಾತ್ರ ಈ ಸೋಂಕು ತಗುಲಿರುವುದು ಇದುವರೆಗೆ ದೃಢಪಟ್ಟಿದೆ.

Advertisement

ಚೀನಾದಿಂದ ಸೌದಿಗೆ ಆಗಮಿಸುತ್ತಿರುವವರನ್ನು ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಸೂಕ್ತ ತಪಾಸಣೆ ನಡೆಸಲಾಗುತ್ತಿದೆ ಎಂದು ಸೌದಿ ಆರೋಗ್ಯ ಸಚಿವಾಲಯ ಜನವರಿ 22ರಂದು ಹೇಳಿಕೊಂಡಿದೆ.

ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸ್ವರೂಪದ ಈ ಕೊರೋನಾ ವೈರಸ್ ಥಾಯ್ಲೆಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲೂ ಕಂಡುಬಂದಿದೆ. ದೂರದ ಅಮೆರಿಕಾದಲ್ಲೂ ಈ ವೈರಸ್ ಪೀಡಿತ ಪ್ರಕರಣ ಪತ್ತೆಯಾಗಿರುವುದು ಆತಂಕಕಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next