ವಿಶಾಖಪಟ್ಟಣ: ಆ ಐಷಾರಾಮಿ ಹೊಟೇಲೊಂದರಲ್ಲಿ ತಂಗಿದ್ದ ಪ್ರವಾಸಿಗರು ಕಂಗಾಲಾಗಿದ್ದರು. ಕಾರಣ ಕೆಲವು ಆಗಂತುಕರು ಆ ಹೊಟೇಲಿನಲ್ಲಿದ್ದ ಪ್ರವಾಸಿಗರನ್ನು ಒತ್ತೆಯಾಳಾಗಿರಿಸಿದ್ದರು. ಈ ವಿಚಾರ ತಿಳಿದು ಒತ್ತೆ ನಿಗ್ರಹ ಕಾರ್ಯಾಚರಣೆಗೆ ದೌಡಾಯಿಸಿದ್ದು ನಮ್ಮ ಹೆಮ್ಮೆಯ ನೌಕಾದಳದ ವಿಶೇಷ ಕಾರ್ಯಾಚರಣೆ ಪಡೆ ‘ಮಾರ್ಕೋಸ್’. ಮತ್ತು ಈ ಹೊಟೇಲನ್ನು ಪ್ರವೇಶಿಸಲು ಈ ಪಡೆಗಳು ಬಳಸಿದ್ದು ಸೀಕಿಂಗ್ 42ಸಿ ಹೆಲಿಕಾಫ್ಟರ್ ಗಳನ್ನು.
ಸೀಕಿಂಗ್ ಹೆಲಿಕಾಫ್ಟರ್ ಗಳನ್ನು ಬಳಸಿಕೊಂಡು ಆ ಬಹುಮಹಡಿ ಹೊಟೇಲ್ ಕಟ್ಟಡದ ಮೇಲ್ಛಾವಣಿಯಲ್ಲಿ ಇಳಿದು ಹೊಟೇಲನ್ನು ಪ್ರವೆಶಿಸುವ ನಮ್ಮ ಹೆಮ್ಮೆಯ ಮಾರ್ಕೋಸ್ ಕಮಾಂಡೋಗಳು ಅಲ್ಲಿ ಪ್ರವಾಸಿಗರನ್ನು ಒತ್ತೆಯಿರಿಸಿಕೊಂಡಿದ್ದ ಜಾಗಕ್ಕೆ ತೆರಳುತ್ತಾರೆ.
ಬಳಿಕ ಕಾರ್ಯಾಚರಣೆ ನಡೆಸಿ ಎಲ್ಲಾ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುತ್ತಾರೆ. ಕಾರ್ಯಾಚರಣೆಯಲ್ಲಿ ಹತರಾದ ಅಥವಾ ಸೆರೆ ಸಿಕ್ಕಿದ ಉಗ್ರರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಹೆಚ್ಚಿನ ವಿವರಗಳು ಲಭ್ಯವಿಲ್ಲ!
ಗಾಬರಿಯಾಗಬೇಡಿ, ಇದು ಭಾರತೀಯ ನೌಕಾದಳವು ಇತ್ತೀಚೆಗೆ ನಡೆಸಿದ ಅಣಕು ರಕ್ಷಣಾ ಕಾರ್ಯಾಚರಣೆಯ ಒಂದು ಝಲಕ್. ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಲ್ಲಿರುವ ಹೊಟೇಲೊಂದರಲ್ಲಿ ಮಾರ್ಕೋಸ್ ಪಡೆಗಳು ಸೀಕಿಂಗ್ ಹೆಲಿಕಾಫ್ಟರ್ ಗಳ ನೆರವಿನಿಂದ ಈ ಅಣಕು ಕಾರ್ಯಾಚರಣೆಯನ್ನು ನಡೆಸಿತು.
ಈ ಅಣಕು ಕಾರ್ಯಾಚರಣೆಯ ವಿಡಿಯೋ ತುಣುಕೊಂದನ್ನು ನೌಕಾದಳದ ಆಧಿಕೃತ ವಕ್ತಾರರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Related Articles
ವಿವಿಧ ರಕ್ಷಣಾ ಸಾಮಾಗ್ರಿ ತಯಾರಕ ಕಂಪೆನಿ ಪ್ರತಿನಿಧಿಗಳು ಈ ಅಣಕು ಕಾರ್ಯಾಚರಣೆಗೆ ಸಾಕ್ಷಿಯಾಗಿದ್ದರು. ಈ ಹಿಂದೆ ಸಾಗರ ಕಮಾಂಡೋ ಪಡೆ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ‘ಮಾರ್ಕೋಸ್’ ಪಡೆಯನ್ನು ವಿಶೇಷ ಕಾರ್ಯಾಚರಣೆಯ ಉದ್ದೇಶಕ್ಕಾಗಿ ಭಾರತೀಯ ನೌಕಾದಳವು ಬಳಸಿಕೊಳ್ಳುತ್ತಿದೆ.
ಯಾವುದೇ ವ್ಯತಿರಿಕ್ತ ಸನ್ನಿವೇಶದಲ್ಲೂ ಕಾರ್ಯಾಚರಣೆ ಮಾಡಬಲ್ಲ ಸಾಮರ್ಥ್ಯವನ್ನು ಈ ಕಮಾಂಡೋ ಪಡೆ ಹೊಂದಿದ್ದು ದಿನದ 24 ಗಂಟೆಗಳ ಕಾಲವೂ ಸನ್ನದ್ಧ ಸ್ಥಿತಿಯಲ್ಲಿರುವ ಈ ಪಡೆ ಕಾಶ್ಮೀರದಲ್ಲೂ, ಗೋವಾದಲ್ಲೂ ಅಥವಾ ಸೊಮಾಲಿಯಾದ ಕಡಲ ಮಧ್ಯದಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.
ಆಳ ಸಮುದ್ರದಲ್ಲಿ ವೈರಿ ಹಡಗುಗಳ ಮೆಲೆ ಗುಪ್ತ ಕಾರ್ಯಾಚರಣೆಯನ್ನು ನಡೆಸುವುದು, ತೀರ ಕಾರ್ಯಾಚರಣೆ, ಉಗ್ರ ನಿಗ್ರಹ ಕಾರ್ಯಾಚರಣೆ ಸೇರಿದಂತೆ ಸಾಗರದಲ್ಲಿರಲಿ ಅಥವಾ ಸಾಗರ ತೀರದಲ್ಲಿರಲಿ ಯಾವುದೇ ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸಲು ಮಾರ್ಕೋಸ್ ಕಮಾಂಡೋಗಳು ಸದಾ ಸಿದ್ಧರಾಗಿರುತ್ತಾರೆ.
ಮಾರ್ಕೋಸ್ ಕಮಾಂಡೋಗಳ ಚಾಕಚಕ್ಯತೆಗೆ ಬಲ ತುಂಬುವುದೇ ಈ ರೀತಿಯ ಅಣಕು ಕಾರ್ಯಾಚರಣೆಗಳು.