ಒಂದೇ ವರ್ಷದಲ್ಲಿ ಎಂಟು ರಾಷ್ಟ್ರೀಯ ಅಂತರಾಷ್ಟ್ರೀಯ ಸೌಂದರ್ಯ ಪ್ರಶಸ್ತಿಗಳನ್ನು ಗೆದ್ದುಕೊಂಡ ಚೆಲುವೆ ಪೂಜಾ ಚೋಪ್ರಾ. ಆದರೇನು ಪ್ರಯೋಜನ, ಚಿತ್ರರಂಗದಲ್ಲಿ ಈ ಪ್ರಶಸ್ತಿಗಳಿಗೆ ಕವಡೆ ಕಾಸಿನ ಬೆಲೆಯೂ ಸಿಗಲಿಲ್ಲ. 2009ರಲ್ಲಿ ಫೆಮಿನಾ ಮಿಸ್ ಇಂಡಿಯಾ ಕಿರೀಟ ತೊಟ್ಟುಕೊಂಡ ಪೂಜಾ ಅನಂತರ ಸಾಲುಸಾಲಾಗಿ ಪ್ರಶಸ್ತಿಗಳನ್ನು ಗೆಲ್ಲುತ್ತ ಹೋದಳು.
ಅದೇ ವರ್ಷ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮಿಸ್ ವರ್ಲ್ಡ್ನಲ್ಲಿ ಭಾರತವನ್ನು ಪ್ರತಿನಿಧಿಸಿ ಬ್ಯೂಟಿ ವಿದ್ ಪರ್ಪರ್ ಎಂಬ ಪ್ರಶಸ್ತಿಗೂ ಪಾತ್ರಳಾದಳು. ಸೌಂದರ್ಯ ಸ್ಪರ್ಧೆಯ ಗೆಲುವೇ ಮಾನದಂಡವಾಗಿದ್ದರೆ ಪೂಜಾ ಚಿತ್ರರಂಗದಲ್ಲಿಂದು ಬಹಳ ಮೇಲೇರಬೇಕಿತ್ತು. ಆದರೆ ಐಶ್ವರ್ಯಾ ರೈ ಮತ್ತು ಪ್ರಿಯಾಂಕಾ ಚೋಪ್ರಾ ಬಳಿಕ ಸಿನೆಮಾ ರಂಗಕ್ಕೆ ಸೌಂದರ್ಯ ರಾಣಿಯರ ಬಗ್ಗೆ ವಿಶೇಷ ಕ್ರೇಜ್ ಇಲ್ಲ. ಹೀಗಾಗಿ, ಅನಂತರ ಚಿತ್ರರಂಗಕ್ಕೆ ಬಂದ ಸೌಂದರ್ಯ ರಾಣಿಯರೆಲ್ಲ ಹೇಳ ಹೆಸರಿಲ್ಲದಂತೆ ಮೂಲೆಗೆ ಸರಿದಿದ್ದಾರೆ. ಈ ಸಾಲಿಗೆ ಸೇರಿದ ಪೂಜಾ ಚೋಪ್ರಾ ಇದೀಗ ಅಯ್ನಾರೇ ಚಿತ್ರದ ಮೂಲಕ ಮರು ಎಂಟ್ರಿಗೆ ಪ್ರಯತ್ನಿಸುತ್ತಿದ್ದಾಳೆ.
ಹಾಗೆ ನೋಡಿದರೆ ಪೂಜಾಳ ಬದುಕಿನ ಕತೆಯೇ ಒಂದು ಸಿನೆಮಾಕ್ಕಾಗುವಷ್ಟಿದೆ. ಗಂಡು ಮಗು ಹೆರಲಿಲ್ಲ ಎಂಬ ಕಾರಣಕ್ಕೆ ಪೂಜಾಳ ತಾಯಿಯನ್ನು ಗಂಡ ಮನೆಯಿಂದ ಹೊರ ಹಾಕಿದ್ದರು. ಎರಡು ಹೆಣ್ಣು ಮಕ್ಕಳೊಂದಿಗೆ ಬೀದಿಗೆ ಬಿದ್ದ ತಾಯಿ ಹೋರಾಟದಿಂದಲೇ ಬದುಕು ಕಟ್ಟಿಕೊಂಡು ಹೊಟೇಲ್ ಉದ್ಯಮಿಯಾಗಿ ಯಶಸ್ವಿಯಾದವರು. ಬಾಲ್ಯದಲ್ಲಿ ಪೂಜಾ ಕಂಡದ್ದು ತಾಯಿಯ ಹೋರಾಟ ಮತ್ತು ಇಂಗದ ಕಣ್ಣೀರನ್ನು. ಇದೇ ಅವಳಿಗೆ ಸ್ಫೂರ್ತಿಯಾಯಿತೋ ಏನೋ ಶಾಲಾ-ಕಾಲೇಜುಗಳಲ್ಲಿ ಪೂಜಾ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಕೈ ಹಾಕಿದ ಯಾವ ಕೆಲಸದಲ್ಲೂ ಸೋಲೊಪ್ಪಬಾರದು ಎಂಬ ಛಲ ಅವಳಿಗೆ ಬಾಲ್ಯದಿಂದಲೇ ಇತ್ತು. ಸಿನೆಮಾ ರಂಗಕ್ಕೆ ಬರಬೇಕೆಂದು ಇಚ್ಛಿಸಿದಾಗ ತಾಯಿ ಹರಸಿ ಕಳುಹಿಸಿದರು.
ಮಾಡೆಲಿಂಗ್‌ನಲ್ಲಿ ಮಿಂಚಿದ ಬಳಿಕ ಎಲ್ಲರಂತೆ ಚಿತ್ರರಂಗಕ್ಕೆ ಬಂದಳು. ಆದರೆ ಈ ಕ್ಷೇತ್ರ ಮಾತ್ರ ಕೈಹಿಡಿಯಲಿಲ್ಲ. ಹತ್ತು ವರ್ಷಗಳಲ್ಲಿ ಅವಳಿಗೆ ಸಿಕ್ಕಿರುವುದು ಬರೀ 8 ಚಿತ್ರಗಳು. ಇದರಲ್ಲಿ ಒಂದು ಸಾಕ್ಷ್ಯಚಿತ್ರ ಮತ್ತು ಒಂದು ತಮಿಳು ಚಿತ್ರವೂ ಸೇರಿದೆ. 2013ರಲ್ಲಿ ಬಿಡುಗಡೆಯಾದ ಕಮಾಂಡೊ-ಒನ್ ಮ್ಯಾನ್ ಆರ್ಮಿ ತುಸು ಹೆಸರು ತಂದುಕೊಟ್ಟಿರುವುದು ಬಿಟ್ಟರೆ ಉಳಿದೆಲ್ಲವು ಪ್ಲಾಪ್‌ಗ್ಳೇ. ಆದರೂ ಹಠ ಬಿಡದ ಪೂಜಾ ಮತ್ತೆ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದ್ದಾಳೆ. ಇದೀಗ ನೀರಜ್ ಪಾಂಡೆಯ ಅಯ್ನಾರೇ ಸೇನಾಧಿಕಾರಿಯ ಪಾತ್ರದ ಮೇಲೆ ಭರವಸೆ ಇಟ್ಟುಕೊಂಡಿದ್ದಾಳೆ. ಈ ಪಾತ್ರಕ್ಕಾಗಿ ಅವಳು ಬಹಳ ಕಷ್ಟಪಟ್ಟು ತಯಾರಿ ಮಾಡಿಕೊಂಡಿದ್ದಾಳಂತೆ. ಗೆದ್ದೇ ತೀರಬೇಕೆಂಬ ಛಲ ಮಾತ್ರ ಅವಳನ್ನು ಮುನ್ನಡೆಸುತ್ತಿದೆ.