ಬೆಂಗಳೂರು: ಕೋಲ್ಕತ್ತಾದಲ್ಲಿ ಇತ್ತೀಚೆಗೆ ನಡೆದ ವೈದ್ಯ ಪರಿಭಾ ಮುಖರ್ಜಿ ಅವರ ಮೇಲಿನ ಹಲ್ಲೆ ಖಂಡಿಸಿ “ಭಾರತೀಯ ವೈದ್ಯಕೀಯ ಸಂಘ'(ಐಎಂಎ) ಸೋಮವಾರ (ಜೂ.17)ದೇಶಾದ್ಯಂತ ಮುಷ್ಕರಕ್ಕೆ ಕರೆಕೊಟ್ಟಿದ್ದು, ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ಘಟಕ (ಒಪಿಡಿ)ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಮುಷ್ಕರದ ಭಾಗವಾಗಿ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮಂಗಳವಾರ ಬೆಳಗ್ಗೆ 6 ಗಂಟೆವರೆಗೂ ಖಾಸಗಿ ಆಸ್ಪತ್ರೆಯ ಒಪಿಡಿ ಸೇವೆ ಬಂದ್ ಮಾಡಲು ಐಎಂಎ ನಿರ್ಧರಿಸಿದ್ದು, ತುರ್ತು ಆರೋಗ್ಯ ಸೇವೆ ಲಭ್ಯವಿರಲಿದೆ. ಜತೆಗೆ ಎಂದಿನಂತೆ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಸೇವೆ ಇರಲಿದೆ. ಮುಷ್ಕರದಲ್ಲಿ ರಾಜ್ಯದ 75 ಸಾವಿರ ವೈದ್ಯರು ಭಾಗವಹಿಸುತ್ತಿದ್ದು, ಜಿಲ್ಲಾ ಘಟಕಗಳಲ್ಲಿ ಆಸ್ಪತ್ರೆ ಖಾಸಗಿ ಆಸ್ಪತ್ರೆ ಒಪಿಡಿ ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ.
ಬೆಂಗಳೂರಿನಲ್ಲಿರುವ ಐಎಂಎ ರಾಜ್ಯ ಘಟಕವು ಬೆಳಗ್ಗೆ 10 ಗಂಟೆಗೆ ಚಾಮರಾಜಪೇಟೆಯ ಐಎಂಎ ಕಚೇರಿಯಿಂದ ಟೌನ್‌ಹಾಲ್‌ವರೆಗೂ ಜಾಥಾ ನಡೆಸಿ ಪ್ರತಿಭಟನೆ ನಡೆಸಲಿದೆ. ಈ ಬಗ್ಗೆ ಮಾಹಿತಿ ನೀಡಿದ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಘಟಕದ ಕಾರ್ಯದರ್ಶಿ ಡಾ.ಎಸ್.ಶ್ರೀನಿವಾಸ, ದೇಶಾದ್ಯಂತ ಬಂದ್ ನಡೆಸುತ್ತಿದ್ದು, ಖಾಸಗಿ ಆಸ್ಪತ್ರೆ ಹೊರರೋಗಿಗಳ ಘಟಕ ಸೇವೆ ಒಂದು ದಿನ ಸಂಪೂರ್ಣ ಬಂದ್ ಮಾಡಲಾಗುತ್ತಿದೆ.
ಬೆಂಗಳೂರಿನ ಕಿಮ್ಸ್, ಎಂ.ಎಸ್. ರಾಮಯ್ಯ, ಸೆಂಟ್ ಜಾನ್ಸ್ ಸೇರಿ ಬಹುತೇಕ ಎಲ್ಲಾ ಆಸ್ಪತ್ರೆಗಳು ವೈದ್ಯರ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಅಲ್ಲಿನ ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಇನ್ನು ನಮ್ಮ ಜತೆ ಪ್ರತಿಭಟನೆಯಲ್ಲಿ ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು, ಆಯುಷ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಎಂದಿನಂತೆ ಸರ್ಕಾರಿ ಆಸ್ಪತ್ರೆ ಸೇವೆ ಲಭ್ಯ: ಭಾರತೀಯ ವೈದ್ಯಕೀಯ ಸಂಘ ಸೋಮವಾರ ಕರೆ ಕೊಟ್ಟಿರುವ ದೇಶವ್ಯಾಪ್ತಿ ಮುಷ್ಕರದಿಂದ ಸರ್ಕಾರಿ ಆರೋಗ್ಯ ಕೇಂದ್ರಗಳ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ. ಯಾವುದೇ ವೈದ್ಯರಿಗೆ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ರಜೆ ನೀಡದಂತೆ ಕಡ್ಡಾಯವಾಗಿ ಸೇವೆಯಲ್ಲಿ ಹಾಜರಿರುವಂತೆ ತಿಳಿಸಲಾಗಿದೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಆರೋಗ್ಯ ಸಚಿವರ ಮನವಿ: ವೈದ್ಯರ ಮೇಲಿನ ಹಲ್ಲೆ ಖಂಡನೀಯ, ಈ ಕುರಿತು ಭಾರತೀಯ ವೈದ್ಯಕೀಯ ಸಂಘವು ಸೋಮವಾರ ಕರೆಕೊಟ್ಟಿರುವ ಮುಷ್ಕರದಲ್ಲಿ ಸಾಂಕೇತಿಕವಾಗಿ ಭಾಗವಹಿಸಬೇಕು. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್.ಪಾಟೀಲ ಮನವಿ ಮಾಡಿದ್ದಾರೆ.