Advertisement
ರಾಜ್ಯ ಸರ್ಕಾರದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಬೆಳಗಾವಿ ಚಲೋ ಹಮ್ಮಿಕೊಂಡಿದ್ದರಿಂದ, ರಾಜ್ಯಾದ್ಯಂತ ವೈದ್ಯರ ಅಭಾವ ಕಂಡು ಬಂದಿತು. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ, ಬಾಗಲಕೋಟೆಯಲ್ಲೇ ಮೂವರು ಮೃತಪಟ್ಟಿದ್ದಾರೆ.
Related Articles
Advertisement
ಖಾಸಗಿ ವೈದ್ಯರೊಂದಿಗಿನ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವೈದ್ಯರಿಗೆ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕಿಲ್ಲ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗಬೇಕು ಎಂಬುದದಷ್ಟೇ ನಮ್ಮ ಉದ್ದೇಶ. ಆದ್ದರಿಂದ ವೈದ್ಯರು ಪ್ರತಿಭಟನೆ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು.
ಅಧಿವೇಶನದಲ್ಲಿ ಸರ್ಕಾರ ಮಂಡಿಸುವ ವಿಧೇಯಕದ ಬಗ್ಗೆ ಯಾವುದೇ ಭಯ ಬೇಡ. ವೈದ್ಯರಿಗೆ ತೊಂದರೆ ಅಥವಾ ಕಿರುಕುಳ ನೀಡಲು ಸರ್ಕಾರ ವಿಧೇಯಕ ರೂಪಿಸಿಲ್ಲ. ಆದರೂ ವಿಧೇಯಕ ಮಂಡನೆಗೂ ಮುಂಚೆ ಆರೋಗ್ಯ ಸಚಿವರು ಮತ್ತು ವೈದ್ಯರ ಸಂಘದ ಪದಾಧಿಕಾರಿಗಳೊಂದಿಗೆ ಮತ್ತೂಂದು ಸುತ್ತಿನ ಸಮಾಲೋಚನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ತೀರ್ಮಾನವಾಗದ ಜೈಲು ಶಿಕ್ಷೆ: ಖಾಸಗಿ ವೈದ್ಯರು ಆಕ್ಷೇಪ ಎತ್ತಿರುವ ವಿಷಯಗಳನ್ನು ಕೈಬಿಡುವ ಕುರಿತಂತೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ತಪ್ಪು ಮಾಡಿದ ವೈದ್ಯರಿಗೆ ಜೈಲು ಶಿಕ್ಷೆ ನೀಡುವ ಕುರಿತಂತೆ ಸ್ಪಷ್ಟ ತೀರ್ಮಾನವಾಗದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೂಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸಭೆ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧೇಯಕ ಮಂಡನೆಗೂ ಮೊದಲು ಮತ್ತೂಂದು ಸಭೆ ನಡೆಸುವುದಾಗಿ ವೈದ್ಯರಿಗೆ ಹೇಳಿದ್ದೇನೆ. ತಕ್ಷಣ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.ವೈದ್ಯರ ಸಂಘದ ಅಧ್ಯಕ್ಷ ಡಾ.ರವೀಂದ್ರ ಮಾತನಾಡಿ, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಕಾರ್ಯಕಾರಿ ಸಮಿತಿಯೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಆಸ್ಪತ್ರೆಗಳು ಖಾಲಿ ಖಾಲಿ
ಬೆಂಗಳೂರಿನ ಮಲ್ಯ, ಮಲ್ಲಿಗೆ, ಕಿಮ್ಸ್, ಅಪೋಲೋ, ಫೋರ್ಟಿಸ್, ವಿಕ್ರಂ ಸೇರಿ ಬಹುತೇಕ ಖಾಸಗಿ ಆಸ್ಪತ್ರೆಯ ಹೊರ ರೋಗಿ ವಿಭಾಗ(ಒಪಿಡಿ) ಸೇವೆ ಇರಲಿಲ್ಲ. ಜ್ವರ, ಕೆಮ್ಮು, ಶೀತ, ತಲೆನೋವು, ದಿಢೀರ್ ಅಸ್ವಸ್ಥಕ್ಕೆ ಖಾಸಗಿ ಆಸ್ಪತ್ರೆಗೆ ಹೋದ ರೋಗಿಗಳು ಒಡಿಪಿ ಸೇವೆ ಇಲ್ಲದೇ ಪರದಾಡಿದರು. ಮೈಸೂರು, ಮಂಗಳೂರು, ಉಡುಪಿ, ಶಿವಮೊಗ್ಗ, ಬೆಳಗಾವಿ, ಧಾರವಾಡ, ದಾವಣಗೆರೆ, ಬಾಗಲಕೋಟೆ, ಬೀದರ್ ಹೀಗೆ ರಾಜ್ಯದ ವಿವಿಧ ಜಿಲ್ಲೆಯ ಸುಮಾರು 8 ಸಾವಿರ ಕ್ಲಿನಿಕ್‌ಗಳಲ್ಲಿ ಸೇವೆ ಇರಲಿಲ್ಲ. ಖಾಸಗಿ ಆಸ್ಪತ್ರೆಯ ಹೊರರೋಗಿಗಳ ವಿಭಾಗ ಮುಚ್ಚಿದ್ದರಿಂದ ನಗರದ ಕೆ.ಸಿ.ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್, ಜಯನಗರ ಸಾರ್ವಜನಿಕ ಆಸ್ಪತ್ರೆ, ವಿವಿಧ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಹೊರರೋಗಿಗಳ ಸಂಖ್ಯೆ ಏರಿಕೆಯಾಗಿದೆ. ಖಾಸಗಿ ವೈದ್ಯರು ಬೆಳಗಾವಿ ಚಲೋ ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲದೇ ಅನೇಕರು ಖಾಸಗಿ ಆಸ್ಪತ್ರೆಯ ಮೆಟ್ಟಿಲಲ್ಲೇ ಕುಳಿತು ವೈದ್ಯರಿಗಾಗಿ ಕಾದು ವಾಪಾಸ್ ಮನೆ ಸೇರಿದರು. ನ.3ರಂದು ನಡೆದ ಖಾಸಗಿ ವೈದ್ಯರ ಸಂಘದ ಮುಷ್ಕರಕ್ಕೆ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿ ವರ್ಗ ಉತ್ತಮ ಸ್ಪಂದನ ವ್ಯಕ್ತಪಡಿಸಿ, ರಾಜ್ಯದ 40 ಸಾವಿರ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್ಸ್‌ಗಳ ಒಪಿಡಿ, ಕ್ಲಿನಿಕ್‌ಗಳು ಮುಚ್ಚಿತ್ತು. ಸೋಮವಾರ ಕೂಡ ಬಹುತೇಕ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಬಿಕೋ ಎನ್ನುತಿತ್ತು. ಇಂದೂ ವೈದ್ಯರಿರಲ್ಲ:
ಖಾಸಗಿ ವೈದ್ಯರ ಸಂಘದ ಸದಸ್ಯರೊಂದಿಗೆ ಮುಖ್ಯಮಂತ್ರಿಗಳು ನಡೆಸಿದ ಮಾತುಕತೆ ವಿಫಲವಾಗಿದ್ದರಿಂದ, ಪ್ರತಿಭಟನೆ ಮಂಗಳವಾರವೂ ಮುಂದುವರಿಯಲಿದೆ. ಹೀಗಾಗಿ ಮಂಗಳವಾರ ಬಹುತೇಕ ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗದಲ್ಲಿ ವೈದ್ಯರು ಇರುವುದಿಲ್ಲ. ಪಾಳಿ ವೈದ್ಯರು ಒಳರೋಗಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ. ಹೀಗಾಗಿ ಮಂಗಳವಾರ ಖಾಸಗಿ ಆಸ್ಪತ್ರೆಗೆ ಹೋಗುವ ರೋಗಿಗಳು ಮುನ್ನೆಚ್ಚರಿಕೆ ವಹಿಸುವುದು ಉತ್ತಮ.