ಆಳಂದ: ವಾರದಲ್ಲೇ ಉದ್ಯೋಗ ಖಾತ್ರಿ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಇಸ್ಮಾಯಿಲ್ ಅನಿರ್ದಿಷ್ಟಾವಧಿ ಧರಣಿ ನಿರತರಿಗೆ ಭರವಸೆ ನೀಡಿದರೂ, ಬೇಡಿಕೆ ಕಾರ್ಯಗತವಾಗುವ ವರೆಗೂ ಧರಣಿ ಸ್ಥಗಿತಗೊಳಿಸುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.
ತಾಪಂ ಕಚೇರಿ ಬಳಿ ಅಖೀಲ ಭಾರತ ಕಿಸಾನಸಭಾ ತಾಲೂಕು ಘಟಕ, ಭಾರತೀಯ ಖೇತ್ ಮಜ್ದೂರ್ ಯೂನಿಯನ್ ಆಶ್ರಯದಲ್ಲಿ ಹಲವು ರೈತರು, ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಇತ್ತಾಯಿಸಿ ಆರಂಭಿಸಿದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಇದಕ್ಕೆ ಪ್ರತಿಯಾಗಿ ಧರಣಿ ನಿರತ ಮುಖಂಡರು ಎಲ್ಲ ಪಂಚಾಯಿತಿಗಳಲ್ಲಿ ವಾರದಲ್ಲೇ ಕುರಿದೊಡ್ಡಿ, “ನಮ್ಮ ಹೊಲ-ನಮ್ಮ ರಸ್ತೆಯಂತ’ ಉದ್ಯೋಗ ಖಾತ್ರಿ ಕಾಮಗಾರಿ ಪ್ರಾರಂಭಿಸಿದರೆ ನಾವಾಗಿಯೇ ಧರಣಿ ಬಿಟ್ಟು ಹೋಗುತ್ತೇವೆ. ಕಾಮಗಾರಿ ಆರಂಭಿಸುವ ವರೆಗೆ ಧರಣಿ ಹಿಂದಕ್ಕೆ ಪಡೆಯಲಾಗದು ಎಂದು ಮುಖಂಡರು ಹೇಳಿದರು.
ಕಿಸಾನಸಭಾ ಜಿಲ್ಲಾಧ್ಯಕ್ಷ ಮೌಲಾ ಮುಲ್ಲಾ ಮಾತನಾಡಿ, ಪ್ರತಿ ಪಂಚಾಯಿತಿ ಎದುರು ಮೂರುಬಾರಿ ಧರಣಿ ಪ್ರತಿಭಟನೆ ಕೈಗೊಂಡು ಮನವಿ ಸಲ್ಲಿಸಿದರೂ ಉತ್ತರವೇ ಸಿಕ್ಕಿಲ್ಲ. ತಪ್ಪಿತಸ್ಥರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಹೊಟ್ಟೆ ಪಾಡಿಗೆ ಏನಾದರೂ ಮಾಡಿದರೆ ಕಳ್ಳರ ಪಟ್ಟಿಗೆ ಸೇರಿಸುತ್ತಾರೆ. ಸರ್ಕಾರಿ ಹಣ ಲೂಟಿ ಮಾಡಿದರೆ ತನಿಖೆ ಹೆಸರಿನಲ್ಲಿ ಮುಚ್ಚಿಹಾಕುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಡೋಳಾ ಗ್ರಾಪಂನಲ್ಲಿ ಕಳೆದ ಐದು ವರ್ಷದಲ್ಲಿ ಗ್ರಾಪಂ ಅಧ್ಯಕ್ಷರು, ಪಿಡಿಒ ಸೇರಿ ಕೋಟ್ಯಂತರ ರೂ. ಲೂಟಿ ಮಾಡಿದ್ದಾರೆ. ಈ ಕುರಿತು ಎಂಟು ದಿನ ಸತ್ಯಾಗ್ರಹ ಮಾಡಿದಾಗ ಡಿಎಸ್-1ಗೆ ಮನವಿ ಸಲ್ಲಿಸಿದ್ದೆವು. ಆದರೆ ಯಾವುದೇ ಕ್ರಮ ಜರುಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಿಸಾನಸಭಾ ತಾಲೂಕು ಕಾರ್ಯಾಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ, ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ಭೂಸನೂರ ಗ್ರಾಪಂ ಉಪಾಧ್ಯಕ್ಷ ದಸ್ತಗೀರ, ಮಹಾವೀರ ಕಾಂಬಳೆ, ಪಾಂಡುರಂಗ ಸಿಂಧೆ, ರಾಜಶೇಖರ ಬಸ್ಮೆ, ಖಲೀಲ ಉಸ್ತಾದ, ಆಶಾಕ್ ಮುಲ್ಲಾ, ಪುರಸಭೆ ಮಾಜಿ ಸದಸ್ಯ ಸೈಫಾನ್ ಜವಳಿ ಇನ್ನಿತರರು ಇದ್ದರು.
ಎಐವೈಎಫ್ ಜಿಲ್ಲಾಧ್ಯಕ್ಷ ಹಣಮಂತರಾವ್ ಅಟ್ಟೂರ ಧರಣಿಗೆ ಬೆಂಬಲ ಸೂಚಿಸಿದರು. ಧರಣಿ ನಿರತರ ಮಾಹಿತಿ ಕಲೆ ಹಾಕಿದ ಉಪ ಕಾರ್ಯದರ್ಶಿ ಇಸ್ಮಾಯಿಲ್, ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ತಾಪಂ ಪ್ರಭಾರಿ ಇಒ ಡಾ| ಸಂಜಯ ರೆಡ್ಡಿ ಇದ್ದರು. ಭರವಸೆಗೆ ತೃಪ್ತರಾಗದ ಪ್ರತಿಭಟನಾ ನಿರತರು ಧರಣಿ ಮುಂದುವರಿಸಿದ್ದರಿಂದ ಜ.1ಕ್ಕೆ 22ನೇ ದಿನಕ್ಕೆ ಹೋರಾಟ ಮುಂದುವರಿಯಿತು.