ಹೊಸದಿಲ್ಲಿ: ಐಐಟಿ ದೆಹಲಿಯ ಎಂಜಿನಿಯರ್‌ಗಳು “ರೋಗ ಸೋಂಕು ತಡೆ ವಸ್ತ್ರ’ವೊಂದನ್ನು ಅಭಿವೃದ್ಧಿಪಡಿಸಿದ್ದು, ಆಸ್ಪತ್ರೆಗಳಲ್ಲಿ ಸೋಂಕು ಹರಡುವುದನ್ನು ತಡೆಯುವಲ್ಲಿ ಇದು ಉಪಯೊಗಕಾರಿಯಾಗಲಿದೆ.
ಐಐಟಿ ದೆಹಲಿಯ ಎಂಜಿನಿಯರ್‌ಗಳು ಹುಟ್ಟುಹಾಕಿರುವ ‘ಪ್ಯಾಬ್ರಿಯೋಸಿಸ್ ಇನ್ನೋವೇಶನ್ಸ್’ ಎಂಬ ಸ್ಟಾರ್ಟ್‌ಅಪ್ ಸಂಸ್ಥೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಇದನ್ನು ಅಭಿವೃದ್ಧಿಪಡಿಸಿದೆ. ನೂತನ ಬಟ್ಟೆ ಸಂಸ್ಕರಣಾ ತಂತ್ರಜ್ಞಾನದ ಮೂಲಕ ಮಾಮೂಲಿ ಹತ್ತಿ ಬಟ್ಟೆಯನ್ನೇ ರೋಗ ಸೋಂಕು ತಡೆ ಬಟ್ಟೆಯನ್ನಾಗಿ ಪರಿವರ್ತಿಸಲಾಗುವುದು.
ಈ ರಾಸಾಯನಿಕ ಪ್ರಕ್ರಿಯೆಗೆ ಈಗಾಗಲೇ ಬಟ್ಟೆ ಗಿರಣಿಗಳಲ್ಲಿ ಲಭ್ಯವಿರುವ ಯಂತ್ರೋಪಕರಣಗಳನ್ನೇ ಬಳಸಿಕೊಳ್ಳಲಾಗುವುದು. ಸಂಸ್ಕರಣೆಯ ನಂತರ ಈ ಬಟ್ಟೆ, ‘ಸೂಕ್ಷ್ಮಜೀವಿ ನಿವಾರಕ’ ಬಟ್ಟೆಯಾಗಿ ಪರಿವರ್ತಿತವಾಗಲಿದೆ. ಹಲವು ಬಾರಿ ತೊಳೆದರೂ ಇದರ ಸೂಕ್ಷ್ಮಜೀವಿ ನಿವಾರಕ ಅಂಶ ಕುಂದದು. ಅಲ್ಲದೆ, ಇದು ಕೈಗೆಟಕುವ ದರದಲ್ಲೇ ಲಭ್ಯ ಎಂದು ಐಐಟಿ-ದೆಹಲಿಯ ಟೆಕ್ಸ್‌ಟೈಲ್ ಆ್ಯಂಡ್ ಫೈಬರ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಸಾಮ್ರಾಟ್ ಮುಖ್ಯೋಪಾಧ್ಯಾಯ ತಿಳಿಸಿದ್ದಾರೆ.
ಇದರ ಪ್ರಾಯೋಗಿಕ ಬಳಕೆಗೆ ಸಂಸ್ಥೆ, ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ತಂತ್ರಜ್ಞರ ತಂಡ ಕಳೆದೊಂದು ವರ್ಷದಿಂದ ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಂಡಿದ್ದರೂ, ಇಡೀ ವಿಶ್ವವೇ ಕೋವಿಡ್ 19 ವೈರಸ್ ಸೋಂಕು ಭೀತಿಯಲ್ಲಿ ನಲುಗುತ್ತಿರುವ ಈ ವೇಳೆಯಲ್ಲಿ ಇದನ್ನು ಅಭಿವೃದ್ಧಿಪಡಿಸಿರುವುದು ಮಹತ್ವದ್ದೆನಿಸಿದೆ.
ಕೋವಿಡ್ 19 ವೈರಸ್ ಭೀತಿಯ ಈ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ರೋಗದ ಸೋಂಕು ಹರಡುವ ಸಾಧ್ಯತೆ ಹೆಚ್ಚಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 100 ರೋಗಿಗಳ ಪೈಕಿ 10 ರೋಗಿಗಳು ಆಸ್ಪತ್ರೆಗಳಲ್ಲೇ ಸೋಂಕು ಹೊಂದುವ ಸಾಧ್ಯತೆ ಇರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.