Advertisement

ಕನ್ನಡ, ಕನ್ನಡ ನಾಡಿಗೆ ನಾನು ಎಂದಿಗೂ ಋಣಿ: ಉದಯವಾಣಿ ಸಂದರ್ಶನದಲ್ಲಿ ನಿಹಾಲ್ ತಾವ್ರೋ

07:05 PM Aug 23, 2021 | Team Udayavani |

ನಿಹಾಲ್ ತಾವ್ರೋ ಇಂಡಿಯನ್ ಐಡಲ್ ನ ಕನ್ನಡದ ಧ್ವನಿ. ಕನ್ನಡದ ಹೆಮ್ಮೆ, ಕನ್ನಡದ ಅಭಿಮಾನ. ಭಾರತದ ಕಂಡ ಸಂಗೀತದ ಅಗ್ರ ಪಂಕ್ತಿಯ ರಿಯಾಲಿಟಿ ಶೋ ನ ಟಾಪ್ 5 ಸ‍್ಥಾನಗಳಿಸಿದ ಗಾಯಕ ಮೂಡುಬಿದಿರೆಯ ನಿಹಾಲ್ ತಾವ್ರೋ ಇಂದು(ಸೋಮವಾರ, ಆಗಸ್ಟ್ 23) ಮಣಿಪಾಲದ ಉದಯವಾಣಿ ಪ್ರಧಾನ ಕಚೇರಿಗೆ ಭೇಟಿ  ನೀಡಿದ್ದಾರೆ. ಮಣಿಪಾಲ್ ಮೀಡಿಯಾ ನೇಟ್ ವರ್ಕ್ ಲಿಮಿಟೆಡ್ ನ(ಎಂಎಂಎನ್ ಎಲ್ ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ವಿನೋದ್ ಕುಮಾರ್  ಅವರು ಪುಷ್ಪ ಗುಚ‍್ಛ ನೀಡಿ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಎಂ ಡಿ ಎನ್ ಎಲ್ ನ ಮುಖ್ಯಸ್ಥ ಹರೀಶ್ ಭಟ್ ಹಾಗೂ ಉದಯವಾಣಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advertisement

(ಮಣಿಪಾಲ್ ಮೀಡಿಯಾ ನೇಟ್ ವರ್ಕ್ ಲಿಮಿಟೆಡ್ ನ(ಎಂಎಂಎನ್ ಎಲ್ ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ವಿನೋದ್ ಕುಮಾರ್ ಅವರೊಂದಿಗೆ ನಿಹಾಲ್ ತಾವ್ರೋ)

ನಂತರ ಉದಯವಾಣಿ ಡಾಟ್ ಕಾಮ್ ನಡೆಸಿದ ಫೇಸ್ ಬುಕ್ ವಿಶೇಷ ಸಂದರ್ಶನದಲ್ಲಿ ಸಂಗೀತದೊಂದಿಗಿನ ಪಯಣವನ್ನು ನಿಹಾಲ್ ತಾವ್ರೋ ತೆರೆದಿಟ್ಟಿದ್ದಾರೆ.

ಜ್ಹಿ ಕನ್ನಡದ “ಸರಿಗಮಪ” ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ನಿಹಾಲ್, ಕನ್ನಡದ “ಯಾರಿವಳು”, ಜೊತೆ, ಜೊತೆಯಲಿ, ನನ್ನರಸಿ ರಾಧೆ, ಗಿಣಿರಾಮ ಮುಂತಾದ ಧಾರಾವಾಹಿಗಳ ಶೀರ್ಷಿಕೆ ಗೀತೆ ಹಾಡಿದ್ದರು. ಅಷ್ಟೇ ಅಲ್ಲ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅಭಿನಯದ ‘ಲವ್ ಮಾಕ್ಟೆಲ್’ ಸಿನಿಮಾದ ‘ನೀನೆ ಎಂದಿಗೂ, ‘ಪ್ರೀಮಿಯರ್ ಪದ್ಮಿನಿ’ ಸಿನಿಮಾದ ‘ನಾ ಹುಡುಕುವ ನಾಳೆ’, ಗಿರ್ ಗಿಟ್ ಸಿನಿಮಾಗಳ ಹಾಡಿಗೆ ಧ್ವನಿಯಾಗಿ ಖ‍್ಯಾತಿ ಗಳಿಸಿದ್ದಾರೆ.

Advertisement

(ಎಂ ಡಿ ಎನ್ ಎಲ್ ನ ಮುಖ್ಯಸ್ಥ ಹರೀಶ್ ಭಟ್ ಅವರೊಂದಿಗೆ ನಿಹಾಲ್ ತಾವ್ರೋ)

ಬಾಲಿವುಡ್  ನ ಇಂಡಿಯನ್ ಐಡಲ್ 12ನೇ ಸೀಸನ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಗ್ರ್ಯಾಂಡ್ ಫಿನಾಲೆಯಲ್ಲಿ 5ನೇ ಸ್ಥಾನ ಪಡೆದಿರುವ ಕನ್ನಡಿಗ, ಯುವ ಗಾಯಕ ನಿಹಾಲ್ ತಾವ್ರೋ, ಕನ್ನಡ ಹಾಗೂ ಭಾರತದ ಭರವಸೆಯ ಹಾಡು ಹಕ್ಕಿ ಮಾತನಾಡಿದ ಪ್ರಮುಖ ಸಾರಗಳು ಇಲ್ಲಿವೆ…

ಕರಾವಳಿ ಕರ್ನಾಟಕದ ‘ಹಾಡು ವೇದಿಕೆಗಳೇ’ ನನಗೆ ಪ್ರೇರಣೆ :

ಬಾಲ್ಯದಿಂದಲೂ ಸಂಗೀತದೊಂದಿಗೆ ನನಗೆ ನಂಟಿದೆ. ತಂದೆ ಕೂಡ  ಸಂಗೀತ ಸಂಯೋಜನೆ ಹಾಗೂ ಸಾಹಿತ್ಯ ಬರೆಯುವುದರಲ್ಲಿ ತೊಡಗಿದ್ದರಿಂದ ಸಂಗೀತದ ಸ್ಪರ್ಶ ನನಗೆ ಎಳವೆಯಿಂದಲೇ ಇದ್ದಿತ್ತು. ಸಂಗೀತದಲ್ಲಿ ಮಹತ್ತರವಾದದ್ದನ್ನು ಸಾಧಿಸಬೇಕೆಂಬ ಹಠ, ಗುರಿ ನನಗೆ ಮೂರನೇ ವಯಸ್ಸಿನಿಂದಲೇ ಇದ್ದಿತ್ತು. ಮನೆಯಲ್ಲಿ ನನ್ನ ಎಲ್ಲಾ ಆಸಕ್ತಿಗಳಿಗೆ ಪೂರಕವಾದ ವಾತಾವರಣಗಳು ಇರುವುದರಿಂದ ಸಂಗೀತದಲ್ಲಿ ಈ ಮಟ್ಟಿಗೆ ಬೆಳೆಯುವುದಕ್ಕೆ ಕಾರಣ. ನನ್ನ ಸಂಗೀತದ ಅಂಬೆಗಾಲಿಗೆ ಪ್ರೇರಣೆ ನೀಡಿದ ಕರಾವಳಿ ಕರ್ನಾಟಕದ ಹಾಡು ವೇದಿಕೆಗಳೇ ನನ್ನ ಹಿಂದಿನ ಶಕ್ತಿ ಎನ್ನುವುದು ಗಾಯಕ ನಿಹಾಲ್ ತಾವ್ರೋ ಮಾತು.

ಕಲಿಯುವ ಆಸಕ್ತಿಯೇ ನನ್ನನ್ನು ಬೆಳೆಸುತ್ತಿದೆ :

ಹೊಸದನ್ನು ಕಲಿಯಬೇಕು ಎನ್ನುವ ತುಡಿತ ನನಗೆ ಬಾಲ್ಯದಿಂದಲೂ ಇತ್ತು. ಸಂಗೀತದೊಂದಿಗೆ ನಾನು ಬೆರೆತಾಗಿನಿಂದ ಹಾಗೂ ಸಂಗೀತ ನನ್ನೊಂದಿಗೆ ಸೇರಿದಾಗಿನಿಂದ ಪ್ರತಿ ಕ್ಷಣ ನನ್ನನ್ನು ಸಂಗೀತದಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳುವುದಕ್ಕೆ ಸ್ಫೂರ್ತಿ ನೀಡಿದೆ. ಕಲಿಯುವ ಆಸಕ್ತಿಯೇ  ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ನನಗೆ ಯಾವಾಗಲೂ ಅನ್ನಿಸುತ್ತದೆ. ನಾನು ಎಷ್ಟು ಎತ್ತರಕ್ಕೆ ಹೋದರೂ ಕಲಿಯುವುದನ್ನು ಬಿಡಬಾರದು ಎಂದು ಎಂದಿಗೂ ನಾನು ನನ್ನ ಮನಸ್ಸಿಗೆ ಎಚ್ಚರಿಸುತ್ತಿರುತ್ತೇನೆ ಎಂಬುದು ನಿಹಾಲ್ ಮಾತು.

ಹಾಡನ್ನು ಅರ್ಥೈಸಿಕೊಂಡಾಗ ಹಾಡಿನ ಪ್ರಸ್ತುತಿ ಚೆನ್ನಾಗಿರುತ್ತದೆ :

ನಾನು ಯಾವುದೇ ಹಾಡನ್ನು ಹಾಡುವುದಕ್ಕೆ ಮುನ್ನ, ಆ ಹಾಡಿನ ಹಿನ್ನೆಲೆ ಸಂಗೀತವನ್ನು ಚೆನ್ನಾಗಿ ಅರ್ಥೈಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತೇನೆ. ನಂತರ ಹಿನ್ನೆಲೆ ಸಂಗೀತದ ಭಾವ ಮತ್ತು ಅನುಭಾವದೊಂದಿಗೆ ಬೆರೆಯುವುದಕ್ಕೆ ಯತ್ನಿಸುತ್ತೇನೆ. ಆಮೇಲೆ ಸಾಹಿತ್ಯ ಏನು ಧ್ವನಿಸುತ್ತದೆ ಎಂದು ತಿಳಿದುಕೊಂಡು ಹಾಡುವುದಕ್ಕೆ ಪ್ರಯತ್ನ ಪಡುತ್ತೇನೆ. ಅದಕ್ಕಾಗಿಯೇ ಬಹುಶಃ ನನಗೆ ಎಲ್ಲರೂ “ಚೆನ್ನಾಗಿ ಹಾಡುತ್ತೀರಿ ನಿಹಾಲ್” ಎಂದು ಆಶೀರ್ವದಿಸುವುದು. ರಾಗ ಸಂಯೋಜನೆ, ಹಿನ್ನಲೆ ಸಂಗೀತ ಹಾಗೂ ಸಾಹಿತ್ಯವನ್ನು ಅರ್ಥೈಸಿಕೊಳ್ಳುವುದು ಒಬ್ಬ ಗಾಯಕ ತನ್ನಲ್ಲಿ ತಾನು ತೊಡಗಿಸಿಕೊಳ್ಳಬೇಕಾದ ಪ್ರಮುಖ ಅಂಶ ಎಂದು ಮೃದು ಮನಸ್ಸು ತೆರೆದು ಹೇಳುತ್ತಾರೆ ಇಂಡಿಯನ್ ಐಡಲ್ ಖ್ಯಾತಿಯ ಕನ್ನಡಿಗ ನಿಹಾಲ್.

ಜೀ ಕನ್ನಡದ “ಸರಿಗಮಪ” ನನ್ನ ಬೆನ್ನೆಲುಬು :

‘ಸರಿಗಮಪ’ದೊಂದಿಗಿನ ಅನುಭವವೇ ಇಂಡಿಯನ್ ಐಡಲ್ ನಲ್ಲಿ ಸ್ಥಾನ ಪಡೆಯುವುದಕ್ಕೆ ಸಾ‍ಧ್ಯವಾಯಿತು. ‘ಸರಿಗಮಪ’ ನನಗೆ ಒಂದು ರೀತಿಯಲ್ಲಿ ಸಂಗೀತದ ಮೊದಲ ಪಾಠ ಶಾಲೆ. ‘ಸರಿಗಮಪ’ ದಿಂದ ನನಗೆ ಕನ್ನಡದಲ್ಲಿ ಸಾಕಷ್ಟು ಅವಕಾಶಗಳು ದೊರೆಯಿತು. ತೀರ್ಪುಗಾರರಾಗಿದ್ದ ಕನ್ನಡದ ಶ್ರೇಷ್ಠ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಅಲ್ಲಿ ನನ್ನ ಬೆಳವಣಿಗೆಯೊಂದಿಗೆ ಜೊತೆಯಾಗಿದ್ದವರಿಗೆಲ್ಲರಿಗೂ ನಾನೆಂದಿಗೂ ಚಿರಋಣಿಯಾಗಿರುತ್ತೇನೆ ಎನ್ನುವುದು ನಿಹಾಲ್ ಪ್ರೀತಿಯ ಮಾತು.

ಕನ್ನಡ, ತುಳು, ಕೊಂಕಣಿ, & ‘ನಮ್ಮವರು’ ಎನ್ನವುದೇ ಒಂದು ಅದ್ಭುತ :

ಕನ್ನಡ, ಕನ್ನಡ ನಾಡಿಗೆ ನಾನು ಎಂದಿಗೂ ಋಣಿ. ಸಂಗೀತದಿಂದ ಕನ್ನಡಿಗರ, ತುಳುವವರ, ಕೊಂಕಿಣಿ ಮಾತಾಡುವವರ ಹಾಗೂ ‘ನಮ್ಮವರ’ ಪ್ರೀತಿ ನನಗೆ ಸಿಕ್ಕಿದೆ. ಈ ಮಣ್ಣಿನ ಪ್ರೀತಿ ಹಾಗೂ ಜನರು ನೀಡಿರುವ ಪ್ರಿತಿಗೆ, ಅಭಿಮಾನಕ್ಕೆ ಋಣಿಯಾಗಿರುವುದನ್ನು ಹೊರತಾಗಿ ಮತ್ತೇನನ್ನು ಮಾಡಲಿ ಎಂದು ತಲೆ ಬಾಗುತ್ತಾರೆ ಹಾಡು ಕೋಗಿಲೆ ನಿಹಾಲ್.

‘ಇಂಡಿಯನ್ ಐಡಲ್’ ಎನ್ನುವುದೇ ಡೊಡ್ಡ ಪ್ರಶಸ್ತಿ

ನಾನೆಂದಿಗೂ ‘ಇಂಡಿಯನ್ ಐಡಲ್’ ವೇದಿಕೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸುವ ಕನಸು ಇಷ್ಟು ಬೇಗ ಈಡೆರುತ್ತದೆ ಎನ್ನುವ ನಂಬಿಕೆ ಇರಲಿಲ್ಲ. ಸಂಗೀತ ಕ್ಷೇತ್ರದ ಮಹಾನ್ ಸಾಧಕರಾದ ಹಿಮೇಶ್ ರೇಶ್ಮಯ್ಯ ಸರ್, ನೇಹಾ ಕಕ್ಕರ್ ಮೇಡಂ, ವಿಶಾಲ್ ಸರ್  ಅವರ ಎದುರು ನಿಂತು ಹಾಡುವುದು ಪುಣ್ಯ. ನನ್ನ ಸಂಗೀತದ ಪಯಣ ಒಂದು ರೀತಿಯಲ್ಲಿ ಎಂದಿಗೂ ಆಶ್ಚರ್ಯವಾಗಿಯೇ ನನಗೆ ಕಾಣಿಸುತ್ತದೆ. ‘ಇಂಡಿಯನ್ ಐಡಲ್’ ನಲ್ಲಿ ಭಾಗವಹಿಸಿದ್ದೇನೆ ಎನ್ನುವುದ ಹಾಗೂ ಜನರು ತೋರಿಸಿದ ಅಭಿಮಾನ, ಪ್ರೀತಿ ನನಗೆ ದೊಡ್ಡ ಪ್ರಶಸ್ತಿ.

ಇಂಡಿಯನ್ ಐಡಲ್ 13 ನೇ ಸೀಸನ್ ನಲ್ಲಿ ಕನ್ನಡಿಗನೊಬ್ಬ ಇರಬೇಕು :

ಕನ್ನಡ ಎಲ್ಲೆಲ್ಲೂ ಇರಬೇಕು. ಕನ್ನಡದ ಹೆಸರು ವಿಶ್ವ ಮಟ್ಟದಲ್ಲಿ ಬೆಳೆಯಬೇಕು. ಕನ್ನಡದ ಗಾಯಕರಿಗೆ ದೊಡ್ಡ ದೊಡ್ಡ ವೇದಿಕೆಗಳು ಸಿಗಬೇಕು ಎನ್ನವುದು ನನ್ನ ಆಶಯ.  ಇಂಡಿಯನ್ ಐಡಲ್ 13 ನೇ ಸೀಸನ್ ನಲ್ಲಿ ನಾನು ಮತ್ತೊಬ್ಬ ಕನ್ನಡಿಗ ಗಾಯಕನೊಂದಿಗೆ ಹಾಡು ಹಾಡಬೇಕು ಎನ್ನುವುದೇ ನನ್ನ ಮಹದಾಸೆ ಎಂದು ಕನ್ನಡದ ಬಗ್ಗೆ ಅಭಿಮಾನದ ಮಾತುಗಳನ್ನಾಡುತ್ತಾರೆ ಗಾಯಕ ನಿಹಾಲ್.

ಮುಂದೆ ಒಂದೊಂದಾಗಿಯೇ ಹಾಡಿಗೆ ಧ್ವನಿಯಾಗುತ್ತಿದ್ದೇನೆ :

ಕನ್ನಡದಲ್ಲಿ, ಹಿಂದಿಯಲ್ಲಿ ಸದ್ಯದಲ್ಲೇ 3-4 ಹಾಡುಗಳಿಗೆ ಬರುತ್ತಿವೆ ಎನ್ನುವುದಕ್ಕೆ ಖುಷಿಯಿದೆ. ಆ ಹಾಡುಗಳು ಕೂಡ ಕೇಳುಗರಿಗೆ ಇಷ್ಟವಾಗುತ್ತದೆ ಎನ್ನುವ ನಂಬಿಕೆ ಇದೆ. ಪ್ರತಿ ಹಾಡಿನಲ್ಲೂ ಹೊಸದನ್ನು ಕಲಿಯುತ್ತಿದ್ದೇನೆ ಎನ್ನುವುದು ಗಾಯಕ ನಿಹಾಲ್ ಮನದಾಳದಿಂದ ಹೇಳುತ್ತಾರೆ.

ಒಟ್ಟಿನಲ್ಲಿ. ಉದಯವಾಣಿ ಡಾಟ್ ಕಾಮ್ ನಡೆಸಿದ ಫೇಸ್ ಬುಕ್ ಲೈವ್ ಸಂದರ್ಶನದಲ್ಲಿ ಸಂಗೀತದ ಪಯಣದ ಬಗ್ಗೆ ಮನತುಂಬಿ, ಎದೆತುಂಬಿ ನಿಹಾಲ್ ಮಾತನಾಡಿದ್ದಲ್ಲದೇ, ಅವರಿಷ್ಟದ ಎರಡು ಮೂರು ಹಾಡುಗಳನ್ನು ಹಾಡಿ ವೀಕ್ಷಕರಿಗೆ ಖುಷಿ ಉಣಿಬಡಿಸಿದ್ದಾರೆ.

(ಇಂಡಿಯನ್ ಐಡಲ್ ಖ್ಯಾತಿಯ ನಿಹಾಲ್ ತಾವ್ರೋ )

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next