Advertisement

ಭಾರತೀಯ ಯುವಕರ ಸಂಶೋಧನೆಗೆ ವಿದೇಶಿಗರ ಸಲಾಂ

03:45 AM Jan 08, 2017 | Team Udayavani |

ಬೆಂಗಳೂರು: ಪ್ರವಾಸಿ ಭಾರತೀಯ ದಿವಸ ಸಮಾವೇಶದಲ್ಲಿ ಭಾರತೀಯ ಯುವ ಸಾಧಕರ ಸಂಶೋಧನೆಗೆ ವಿದೇಶಿಗರ ಸಲಾಂ.

Advertisement

ಮೂರು ದಿನಗಳ ಪ್ರವಾಸಿ ಭಾರತೀಯ ದಿವಸ ಸಮಾವೇಶದಲ್ಲಿ ತೆರೆಯಲಾಗಿರುವ ಮಳಿಗೆಗಳಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆ ನೆರವಿನಿಂದ ಭಾರತೀಯ ಯುವಕರು ಏರ್ಪಡಿಸಿದ್ದ ಜನಸಾಮಾನ್ಯರಿಗೆ ಉಪಯೋಗವಾಗುವ ಸಂಶೋಧನೆಗಳ ಪ್ರದರ್ಶನ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ರಾಷ್ಟ್ರಮಟ್ಟದಲ್ಲಿ ಸಂಶೋಧನೆ ಕುರಿತು ಆಯೋಜಿಸಿದ್ದ ಸ್ಪರ್ಧೆಯಲ್ಲಿ ಆಯ್ಕೆಯಾದ 20 ಯುವಕರ ಸಂಶೋಧನೆಗಳ ಪ್ರಾತ್ಯಕ್ಷಿಕೆಗೆ ಪ್ರಶಂಸೆ ವ್ಯಕ್ತವಾಯಿತು.  ಕೇರಳದ ಯುವಕರು ಜತೆಗೂಡಿ ಸ್ಥಾಪಿಸಿರುವ ನಾವಾಲ್ಟ್ ಸಂಸ್ಥೆಯ ಸೋಲಾರ್‌ ಚಾಲಿತ ಹಡಗು ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆ. ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 75 ಆಸನಗಳ ಹಡಗು ಆದಿತ್ಯ ಕೇರಳ ರಾಜ್ಯ ಸರ್ಕಾರದಿಂದ ಅಂಗೀಕೃತಗೊಂಡು ಬಳಕೆಯಲ್ಲೂ ಇದೆ. ಬೇಸಿಗೆಯಲ್ಲಿ ಸೌರವಿದ್ಯುತ್‌ನಿಂದ ಚಾಲನೆಯಾಗುವ ಹಡಗು, ಮಳೆಗಾಲ ಹಾಗೂ ಚಳಿಗಾಲದಲ್ಲಿ ವಿದ್ಯುತ್‌ ಚಾರ್ಜ್‌ನಿಂದ ಸಂಚರಿಸಲಿದೆ. ವಾರ್ಷಿಕವಾಗಿ ಸುಮಾರು 30 ಲಕ್ಷ ರೂ. ಮೊತ್ತದ ಡೀಸೆಲ್‌ ಇದರಿಂದ ಉಳಿತಾಯವಾಗುತ್ತಿದೆ. 

ಗುಜರಾತ್‌ನ ಸೂರತ್‌ನಿಂದ ಬಂದಿರುವ ಪ್ರಕಾಶ್‌ ವಘಾಸಿಯಾ, ಬಾಳೆಹಣ್ಣು ಸಿಪ್ಪೆಯಿಂದ ಸಾವಯವ ಗೊಬ್ಬರ ತಯಾರಿಸಿ ಕೆ.ಜಿ.ಗೆ 20 ರೂ. ದರದಲ್ಲಿ ಸಿಗುವಂತೆ ಮಾಡಿದ್ದಾರೆ. ಆದರೆ, ಇದು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಗೊಬ್ಬರ ತಯಾರಿಸಿರುವ ಈ ಯುವಕನ ಸಾಧನೆಗೆ ಮೆಚ್ಚಿದ ವಿದೇಶಿಗರು, ಅಗತ್ಯವಾದರೆ ನಾವೂ ಈ ಉದ್ಯಮಕ್ಕೆ ಬಂಡವಾಳ ಹಾಕಲು ಸಿದ್ಧ. ಸರ್ಕಾರ ಅಧಿಕೃತವಾಗಿ ಒಪ್ಪಿಗೆ ನೀಡಿದ ನಂತರ ಮಾಹಿತಿ ನೀಡಿ ಎಂದು ಹೇಳಿ ಹೋಗಿದ್ದಾರೆ.

ಅದೇ ರೀತಿ, ದೆಹಲಿಯ ಯುವಕ ರಾಜೇಶ್‌ ತ್ರಿಚಕ್ರ ರಿಕ್ಷಾ ಚಾಲಕರ ಸುಗಮ ಚಾಲನೆಗೆ ಹ್ಯಾಂಡ್‌ ಬ್ರೇಕ್‌ ಸಂಶೋಧನೆ ಮಾಡಿದ್ದಾರೆ. ತ್ರಿಚಕ್ರ ರಿಕ್ಷಾ ತುಳಿಯುವಾಗ ಒಮ್ಮೆಲೆ ಬ್ರೇಕ್‌ ಹಾಕಿ ಮತ್ತೆ ಮುಂದುವರಿಯಬೇಕಾದರೆ ಸೈಕಲ್‌ ತುಳಿಯುವವರು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಆದರೆ, ಈ ಯುವಕ ಸಂಶೋಧನೆ ಮಾಡಿರುವ ಹ್ಯಾಂಡ್‌ ಬ್ರೇಕ್‌, ದ್ವಿಚಕ್ರ ವಾಹನದಂತೆ ತಕ್ಷಣಕ್ಕೆ ಬ್ರೇಕ್‌ ಹಾಕಿ ಮತ್ತೆ ಆ ಕ್ಷಣವೇ ಹಿಂದಿನ ವೇಗದಲ್ಲಿ ಮತ್ತೆ ಚಾಲನೆ ಮಾಡಲು ಸಾಧ್ಯವಾಗಲಿದೆ. ಇದರ ವೆಚ್ಚ 2500 ರೂ. ಮಾತ್ರ. ಸರ್ಕಾರ ದೊಡ್ಡ ಪ್ರಮಾಣದಲ್ಲಿ ತಯಾರಿಸಿದರೆ 1500 ರೂ.ಗೆ ದೊರೆಯಲಿದೆ ಎಂದು ಹೇಳುತ್ತಾರೆ. 

Advertisement

ಹೈವೇ ಡಿಲೈಟ್‌ ಆ್ಯಪ್‌
ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ಮಳಿಗೆಯಲ್ಲಿ ಹೈವೇ ಡಿಲೈಟ್‌ ಆ್ಯಪ್‌ ಪರಿಚಯಿಸಲಾಗಿದ್ದು, ರಾಜ್ಯದ ಮೂರು ಸಾವಿರ ಕಿ.ಮೀ. ಮಾರ್ಗದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವ ಕಡೆ ಪೆಟ್ರೋಲ್‌ ಬಂಕ್‌, ಆಸ್ಪತ್ರೆ, ಹೋಟೆಲ್‌, ರೈಲು, ಬಸ್‌ ಸೇರಿದಂತೆ ಪರ್ಯಾಯ ಸಂಚಾರ ವ್ಯವಸ್ಥೆ ಇದೆ ಎಂಬುದರ ಮಾಹಿತಿ ನೀಡುತ್ತದೆ.

ಪ್ರವಾಸಿಗರಿಗೆ ಅನುಕೂಲವಾಗುವ ಇದು ಉಚಿತ ಆ್ಯಪ್‌. ಯಾವುದೇ ಶುಲ್ಕ ಇಲ್ಲದೆ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ರಾಜೇಶ್‌ ಜಿ. ಎಂಬುವರು ಈ ಆ್ಯಪ್‌ ಪರಿಚಯಿಸಿದ್ದು, ಬೆಂಗಳೂರು-ಬೆಳಗಾವಿ, ಬೆಂಗಳೂರು-ಮಂಗಳೂರು, ಬೆಂಗಳೂರು-ಹೈದರಾಬಾದ್‌, ಬೆಂಗಳೂರು-ಹಂಪಿ, ಬೆಂಗಳೂರು-ಕೊಡಗು ಮಾರ್ಗದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಿಗುವ ಸೌಲಭ್ಯಗಳ ಸಂಪೂರ್ಣ ವಿವರ ಒಳಗೊಂಡಿದೆ.

ರಾಜ್ಯದಲ್ಲಿ ಒಟ್ಟು 10 ಸಾವಿರ ಕಿ.ಮೀ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಮಾರ್ಗವಿದ್ದು, ಆ ಪೈಕಿ ಮೊದಲ ಹಂತದಲ್ಲಿ 6 ಸಾವಿರ ಕಿ.ಮೀ. ಮಾರ್ಗದಲ್ಲಿರುವ ಸೇವೆಗಳ ಬಗ್ಗೆ ಆ್ಯಪ್‌ನಲ್ಲಿ ಮಾಹಿತಿ ನೀಡುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. 3 ಸಾವಿರ ಕಿ.ಮೀ. ಮಾರ್ಗದ ಮಾಹಿತಿ ಪೂರ್ಣಗೊಳಿಸಲಾಗಿದೆ ಎಮದು ರಾಜೇಶ್‌ ವಿವರಿಸುತ್ತಾರೆ. ಈ ಆ್ಯಪ್‌ ಬಗ್ಗೆಯೂ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next