Advertisement

ಕಾರ್ಪೋರೆಟ್‌ ಜಗದಲ್ಲಿ ಭಾರತದ ಪತಾಕೆ!

12:40 AM Dec 01, 2021 | Team Udayavani |

ಮೈಕ್ರೋಸಾಫ್ಟ್, ಗೂಗಲ್‌ನಂಥ ಕಂಪೆನಿಗಳಲ್ಲಿ ಭಾರತೀಯ ಸಿಇಒಗಳು ಕಾರ್ಯಭಾರ ಆರಂಭಿಸಿ ಆಗಲೇ ವರ್ಷಗಳೇ ಕಳೆದಿವೆ. ಇದರ ಜತೆಗೆ ಇನ್ನೂ ಹಲವಾರು ಕಂಪೆನಿಗಳನ್ನು ಭಾರತೀಯ ದಿಗ್ಗಜರೇ ಮುನ್ನಡೆಸುತ್ತಿದ್ದಾರೆ. ಈಗ ಹೊಸದಾಗಿ ಟ್ವಿಟರ್‌ ಸಂಸ್ಥೆಗೂ ಸಿಇಒ ಆಗಿ ಪರಾಗ್‌ ಅಗರ್ವಾಲ್‌ ಅವರ ನೇಮಕವಾಗಿದೆ. ಈ ಮೂಲಕ ಮತ್ತೂಂದು ಕಂಪೆನಿಯ ಹೊಣೆ ಭಾರತೀಯರ ಮಡಿಲಿಗೆ ಬಿದ್ದಿದೆ. ಹಾಗಾದರೆ ಯಾವ್ಯಾವ ಕಂಪೆನಿಗಳನ್ನು ಭಾರತೀಯರು ಮುನ್ನಡೆಸುತ್ತಿದ್ದಾರೆ ಎಂಬುದರ ಮೇಲೊಂದು ನೋಟ ಇಲ್ಲಿದೆ.

Advertisement

ಸುಂದರ್‌ ಪಿಚೈ
ತಮಿಳುನಾಡಿನ ಚೆನ್ನೈಯಲ್ಲಿ ಜನಿಸಿದ್ದ ಸುಂದರ್‌ ಪಿಚೈ ಐಐಟಿ ಖರಗ್‌ಪುರದಲ್ಲಿ ಬಿಟೆಕ್‌ ಮಾಡಿದ್ದರು. 2004ರಲ್ಲಿ ಗೂಗಲ್‌ ಸಂಸ್ಥೆಗೆ ಸೇರಿದ್ದ ಅವರು, ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಈಗ ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ನ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಅಂದರೆ ಗೂಗಲ್‌ಗೆ 2015ರಲ್ಲೇ ಸಿಇಒ ಆಗಿದ್ದ ಇವರು, ಈಗ ಒಟ್ಟಾರೆಯಾಗಿ ಇಡೀ ಗೂಗಲ್‌ ಒಳಗೊಂಡ ಎಲ್ಲ ಸಂಸ್ಥೆಗಳನ್ನು ಸೇರಿ ಆಲ್ಫಾಬೆಟ್‌ ಎಂಬ ಹೆಸರಿನಲ್ಲಿ ಕಂಪೆನಿಮಾಡಿಕೊಂಡಿದ್ದು, 2019ರಲ್ಲಿ ಇದಕ್ಕೆ ಸಿಇಒ ಆದರು.

ಸತ್ಯ ನಾದೆಲ್ಲಾ
ಮೂಲತಃ ಆಂಧ್ರದವರಾದ ಸತ್ಯ ನಾದೆಲ್ಲಾ, ಕರ್ನಾಟಕದಲ್ಲಿರುವ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಬಿಇ ಮುಗಿಸಿದ್ದರು. ಹಾಗೆಯೇ ಎಂಎಸ್‌ ಅನ್ನು ಸ್ಟಾನ್‌ಫೋರ್ಡ್‌ ಮತ್ತು ಎಂಬಿಎ ಅನ್ನು ವಾರ್ಟನ್‌ನಲ್ಲಿ ಮುಗಿಸಿದ್ದಾರೆ. 2014ರಲ್ಲಿ ಸ್ಟೀವ್‌ ಬಾಲ್ಮರ್‌ ಅವರಿಂದ ಸಿಇಒ ಹುದ್ದೆ ಸ್ವೀಕರಿಸಿದ ಇವರು, ಈಗಲೂ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

ರಾಜೀವ್‌ ಸೂರಿ
ನೋಕಿಯಾ ಸಂಸ್ಥೆಯ ಸಿಇಒ ಆಗಿದ್ದ ರಾಜೀವ್‌ ಸೂರಿ ಮೂಲತಃ ಹೊಸದಿಲ್ಲಿಯವರು. ಇವರೂ ಸಹ ಕರ್ನಾಟಕದಲ್ಲಿರುವ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಬಿಇ ಮಾಡಿದ್ದಾರೆ. 1995ರಲ್ಲಿ ನೋಕಿಯಾ ಸೇರಿದ್ದ ಇವರು 2014ರಲ್ಲಿ ನೋಕಿಯಾ ಸಂಸ್ಥೆಯ ಸಿಇಒ ಹುದ್ದೆ ಅಲಂಕರಿಸಿದ್ದರು. ಕಳೆದ ವರ್ಷವಷ್ಟೇ ಈ ಹುದ್ದೆ ತೊರೆದು, ಈಗ ಬ್ರಿಟನ್‌ನ ಸ್ಯಾಟ್‌ಲೈಟ್‌ ಕಮ್ಯೂನಿಕೇಶನ್‌ ಕಂಪೆನಿ ಇನ್ಮಾರ್ಸಾಟ್‌ನ ಸಿಇಒ ಆಗಿದ್ದಾರೆ.

ಶಂತನು ನಾರಾಯಣ್‌
2007ರಿಂದಲೂ ಆಡೋಬ್‌ ಕಂಪೆನಿಯ ಸಿಇಒ ಆಗಿರುವ ಶಂತನು ನಾರಾಯಣ್‌, ಅಮೆರಿಕದ ಮತ್ತೂಂದು ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಭಾರತೀಯರು. 1998ರಲ್ಲಿ ಈ ಕಂಪೆನಿಸೇರಿದ್ದ ಶಾಂತನು, 2001ರಲ್ಲಿ ಹಿರಿಯ ಉಪಾಧ್ಯಕ್ಷ ಹುದ್ದೆ ಸ್ವೀಕರಿಸಿದ್ದರು. ಮೂಲತಃ ಹೈದರಾಬಾದ್‌ನವರಾದ ಇವರು ಇಲ್ಲೇ ಎಂಜಿನಿಯರಿಂಗ್‌ ಶಿಕ್ಷಣ ಮುಗಿಸಿ ಬಳಿಕ ಅಮೆರಿಕಕ್ಕೆ ಹೋಗಿದ್ದರು.

Advertisement

ಅರವಿಂದ್‌ ಕೃಷ್ಣ
ದಕ್ಷಿಣ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೂಲದವರಾದ ಅರವಿಂದ ಕೃಷ್ಣ, ತಮಿಳುನಾಡಿನ ಕೂನೂರಿನಲ್ಲಿ ಪ್ರೌಢಶಿಕ್ಷಣ, ಐಐಟಿ ಕಾನ್ಪುರದಲ್ಲಿ ಬಿಟೆಕ್‌ ಮಾಡಿದ್ದರು. ಪಿಎಚ್‌ಡಿ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. 1990ರಿಂದಲೂ ಐಬಿಎಂನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿರುವ ಕೃಷ್ಣ, 2020ರಲ್ಲಿ ಐಬಿಎಂನ ಸಿಇಒ ಆಗಿದ್ದಾರೆ.

ರಘು ರಘುರಾಮನ್‌
ಭಾರತದಲ್ಲಿ ಹುಟ್ಟಿ, ಐಐಟಿ ಬಾಂಬೆಯಲ್ಲಿ ಬಿಟೆಕ್‌ ಅಧ್ಯಯನ ಮಾಡಿರುವ ರಘು ರಘುರಾಮನ್‌ ಅವರು, ಸದ್ಯ ವಿಎಂವೇರ್‌ ಕಂಪೆನಿಯ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. 2021ರ ಮೇಯಲ್ಲಿ ಈ ಕಂಪೆನಿಯ ಸಿಇಒ ಆದ ಇವರು, 2003ರಲ್ಲೇ ಈ ಕಂಪೆನಿ ಸೇರಿದ್ದರು.

ನಿಕೇಶ್‌ ಅರೋರಾ
ಪಾಲೋ ಅಲ್ಟೋ ನೆಟ್‌ವರ್ಕ್ಸ್ ನ ನಿಕೇಶ್‌ ಅರೋರಾ, 2018ರಿಂದ ಈ ಕಂಪೆನಿಯಲ್ಲಿ ಸಿಇಒ ಆಗಿದ್ದಾರೆ. ಈ ಕಂಪೆನಿ ಸೇರುವ ಮುನ್ನ ಇವರು ಗೂಗಲ್‌ ಮತ್ತು ಸಾಫ್ಟ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ವಾರಾಣಸಿಯಲ್ಲಿರುವ ಐಐಟಿಯಲ್ಲಿ ಬಿಇ ಮುಗಿಸಿ, ಅಮೆರಿಕದಲ್ಲಿ ಎಂಬಿಎ ಮಾಡಿದ್ದಾರೆ.

ಸಂಜಯ್‌ ಮೆಹ್ರೋತ್ರಾ
ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿದ್ದ ಸಂಜಯ್‌, ಸದ್ಯ ಮಿಕ್ರಾನ್‌ ಟೆಕ್ನಾಲಜಿಯ ಸಿಇಒ ಆಗಿದ್ದಾರೆ. ಅಷ್ಟೇ ಅಲ್ಲ, ಇವರು ಸ್ಯಾನ್‌ಡಿಸ್ಕ್ ಕಂಪೆನಿಯ ಸಹ ಸ್ಥಾಪಕ. 2017ರಿಂದಲೂ ಮಿಕ್ರಾನ್‌ ಟೆಕ್ನಾಲಜಿಯ ಸಿಇಒ ಆಗಿದ್ದಾರೆ. ಸದ್ಯ ವೆಸ್ಟ್ರನ್‌ ಡಿಜಿಟಲ್‌ ಸ್ಯಾನ್‌ಡಿಸ್ಕ್ ಕಂಪೆನಿಯನ್ನು ಖರೀದಿ ಮಾಡಿದೆ.

ಅಂಜಲಿ ಸೂದ್‌
ವಿಮಿಯೋ ಕಂಪನಿಯ ಸಿಇಒ ಆಗಿರುವ ಭಾರತೀಯ ಮೂಲದ ಅಮೆರಿಕನ್ನರ ಪುತ್ರಿ. 2017ರ ಜುಲೈಯಿಂದ ಈ ವಿಮಿಯೋ ವೀಡಿಯೋ ಕಂಪೆನಿಯ ಸಿಇಒ ಆಗಿದ್ದಾರೆ. ಅಂದ ಹಾಗೆ ಇವರು ತಮ್ಮ ಸಂಪೂರ್ಣ ಶಿಕ್ಷಣವನ್ನು ಅಮೆರಿಕದಲ್ಲೇ ಮುಗಿಸಿದ್ದಾರೆ. ಜತೆಗೆ 33ನೇ ವಯಸ್ಸಿಗೇ ಸಿಇಒ ಆಗುವ ಮೂಲಕ ಚಿಕ್ಕವಯಸ್ಸಿನಲ್ಲೇ ಈ ಹುದ್ದೆಗೇರಿದ ಹೆಗ್ಗಳಿಕೆ ಇದೆ.

ಜಾರ್ಜ್‌ ಕುರಿಯನ್‌
ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಜನಿಸಿದ್ದ ಜಾರ್ಜ್‌ ಕುರಿಯನ್‌ ಅವರು, ಐಐಟಿ ಮದ್ರಾಸ್‌ನಲ್ಲಿ ಬಿಟೆಕ್‌ ಮುಗಿಸಿದ್ದಾರೆ. ಸ್ಟಾನ್‌ಫೋರ್ಡ್‌ನಲ್ಲಿ ಎಂಬಿಎ ಮುಗಿಸಿರುವ ಅವರು, ಅಕಮಾಯಿ ಟೆಕ್ನಾಲಜಿಸ್‌ನಲ್ಲಿ ವೈಸ್‌ ಪ್ರಸಿಡೆಂಟ್‌ ಆಗಿದ್ದರು. ಹಾಗೆಯೇ ಸಿಸ್ಕೋ ಸಿಸ್ಟಮ್ಸ್‌ನಲ್ಲಿಯೂ ಜನರಲ್‌ ಮ್ಯಾನೇಜರ್‌ ಮತ್ತು ವೈಸ್‌ ಪ್ರಸಿಡೆಂಟ್‌ ಆಗಿದ್ದರು. ಸದ್ಯ ನೆಟ್‌ಆ್ಯಪ್‌ನ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಸ್ಟೋರೇಜ್‌ ಮತ್ತು ಡೇಟಾ ಕಂಪನಿ.

ರೇವತಿ ಅದ್ವೈತಿ
ಪಿಲಾನಿಯಲ್ಲಿರುವ ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಆ್ಯಂಡ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿರುವ ರೇವತಿ ಅವರು ಸದ್ಯ ಫ್ಲೆಕ್ಸ್‌ ಕಂಪೆನಿಯ ಸಿಇಒ ಆಗಿದ್ದಾರೆ. ಈ ಹಿಂದೆ ಉಬರ್‌ ಕ್ಯಾಟಲಿಸ್ಟ್‌. ಆರ್ಗ್‌ನಲ್ಲಿಯೂ ಕೆಲಸ ಮಾಡಿದ್ದಾರೆ. ಮೂಲತಃ ಬಿಹಾರದವರಾದ ರೇವತಿ ಅವರ ಹೆತ್ತವ‌ರು ಸದ್ಯ ತಮಿಳುನಾಡಿನ ಚೆನ್ನೈಯಲ್ಲಿ ನೆಲೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next