ನವದೆಹಲಿ: ಅಧ್ಯಯನ ಪ್ರವಾಸದ ಭಾಗವಾಗಿ ಕೇರಳದಿಂದ ಇಸ್ರೇಲ್‌ಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಕೃಷಿಕರೊಬ್ಬರು ಭಾರತಕ್ಕೆ ವಾಪಾಸಾಗಿದ್ದಾರೆ. ಸರ್ಕಾರಿ ಪ್ರಾಯೋಜಿತ ಪ್ರವಾಸದ ಭಾಗವಾಗಿ ಇಸ್ರೇಲ್‌ಗೆ ತೆರಳಿದ್ದ ತಂಡದ ಪೈಕಿ ರೈತ ಬಿಜು ಕುರಿಯನ್ ನಾಪತ್ತೆಯಾಗಿದ್ದರು.
ಹೊಸ ಕೃಷಿ ತಂತ್ರಗಳ ಕುರಿತು ಅಧ್ಯಯನಕ್ಕೆಂದು ಭಾರತದ ತಂಡ ಇಸ್ರೇಲ್‌ಗೆ ತೆರಳಿತ್ತು. ಈ ಭೇಟಿ ಪೂರ್ಣಗೊಳಿಸಿ ಫೆ.17 ಭಾರತಕ್ಕೆ ಹಿಂದಿರುಗಬೇಕಿತ್ತು. ಆದರೆ ಈ ಮಧ್ಯೆ ಬಿಜು ಕುರಿಯನ್ ನಾಪತ್ತೆಯಾಗಿದ್ದರು. ಇದೀಗ ಸ್ಥಳೀಯರ ನೆರವಿನಿಂದ ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗಿದ್ದಾರೆ.
ಭಾರತಕ್ಕೆ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻಕೇರಳ ಸರ್ಕಾರ, ರಾಜ್ಯ ಕೃಷಿ ಸಚಿವ ಪಿ. ಪ್ರಸಾದ್ ಹಾಗೂ 27ಸದಸ್ಯರ ನಿಯೋಗ, ಅಧಿಕಾರಿಗಳಿಗೆ ಕ್ಷಮೆ ಯಾಚಿಸುತ್ತೇನೆʼ ಎಂದು ಭಾವುಕರಾದರು.
ಜೆರುಸಲೇಮ್ ಮತ್ತು ಬೆತ್ಲಹೇಮ್ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವ ಉದ್ದೇಶದಿಂದ ತೆರಳಿದ್ದ ಅವರು ಈ ಮಧ್ಯೆ ನಾಪತ್ತೆಯಾಗಿದ್ದರು. ಅವರ ನಾಪತ್ತೆಯಾದ ಬಳಿಕ ಮುಂದೇನು ಮಾಡಬೇಕೆಂದು ತಿಳಿಯದೇ ಅಧಿಕಾರಿಗಳು ಕಂಗಾಲಾಗಿದ್ದರು. ಅವರ ಫೋನ್‌ನಲ್ಲಿ ಇಂಟರ್‌ನೆಟ್ ಮತ್ತು ಅಂತಾರಾಷ್ಟ್ರೀಯ ಕರೆ ಸೌಲಭ್ಯ ಇಲ್ಲದ ಕಾರಣ ಅವರನ್ನು ಪತ್ತೆ ಹಚ್ಚುವುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದರೆ ಸ್ಥಳೀಯರ ಸಹಕಾರದಿಂದ ಕುಟುಂಬಕ್ಕೆ ತಾವು ಸುರಕ್ಷಿತವಾಗಿರುವ ಮಾಹಿತಿ ನೀಡಿದ್ದರು.
ಇದೀಗ ಅವರ ಸಹೋದರನ ಸಹಾಯದಿಂದ ಅವರು ಭಾರತಕ್ಕೆ ಮರಳಿದ್ದಾರೆ. ಮೇ 8 ರವರೆಗೆ ಅವರ ವೀಸಾ ಅವಧಿ ಇದ್ದದ್ದರಿಂದ ಹೆಚ್ಚಿನ ಸಮಸ್ಯೆಯೇನೂ ಆಗಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
ಅಗ್ನಿಪಥ್ ಯೋಜನೆಯ ಸಿಂಧುತ್ವ ಎತ್ತಿಹಿಡಿದ ದೆಹಲಿ ಹೈಕೋರ್ಟ್