ದುಬೈ: ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಬಾರಿಗೆ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ಮೂಲಕ ಭಾರತ ತನ್ನ ನಂ.1 ಪಟ್ಟವನ್ನು ಗಟ್ಟಿ ಮಾಡಿಕೊಂಡಿದೆ. ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಅಂತಿಮ ಪಂದ್ಯದ ಫಲಿತಾಂಶದಿಂದ ಈ ಶ್ರೇಯಾಂಕದಲ್ಲಿ ಯಾವುದೇ ವ್ಯತ್ಯಾಸವಾಗದು.
ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದ್ದರೆ (121 ಅಂಕ), ಭಾರತ ದ್ವಿತೀಯ ಸ್ಥಾನದಲ್ಲಿತ್ತು (119 ಅಂಕ). ಈಗ ಸ್ಥಾನ ಅದಲು ಬದಲಾಗಿದೆ. 4-2 ಅಂತರದಿಂದ ಸರಣಿ ವಶಪಡಿಸಿಕೊಳ್ಳಲಿರುವ ತಂಡ ಐಸಿಸಿ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಅಲಂಕರಿಸುತ್ತಿತ್ತು. ಈ ಅದೃಷ್ಟ ಭಾರತ ತಂಡದ್ದಾಗಿದೆ.
ಸದ್ಯ ಭಾರತ 122 ಅಂಕ ಹಾಗೂ ದಕ್ಷಿಣ ಆಫ್ರಿಕಾ 118 ಅಂಕ ಹೊಂದಿವೆ. 6 ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಉಳಿದಿರುವಂತೆಯೇ ಭಾರತ ಅಗ್ರಸ್ಥಾನವನ್ನು ಗಟ್ಟಿಗೊಳಿಸಿದೆ. ಶುಕ್ರವಾರದ ಸೆಂಚುರಿಯನ್ ಪಂದ್ಯವನ್ನು ಕೊಹ್ಲಿ ಪಡೆ ಸೋತರೂ ಶ್ರೇಯಾಂಕದಲ್ಲೇನೂ ವ್ಯತ್ಯಾಸವಾಗದು. ಆಗ ಭಾರತದ ಅಂಕ 121ಕ್ಕೆ ಇಳಿಯುತ್ತದೆ, ದಕ್ಷಿಣ ಆಫ್ರಿಕಾ ಅಂಕ 119ಕ್ಕೆ ಏರುತ್ತದೆ.
ಭಾರತ 5-1ರಿಂದ ಸರಣಿ ಗೆದ್ದರೆ ಆಗ ಅಂಕ 123ಕ್ಕೆ ಏರುತ್ತದೆ. ದಕ್ಷಿಣ ಆಫ್ರಿಕಾದ ಅಂಕ 117ಕ್ಕೆ ಇಳಿಯುತ್ತದೆ. ಆಗ ತೃತೀಯ ಸ್ಥಾನಿ ಇಂಗ್ಲೆಂಡ್ (116) ಮತ್ತು ದಕ್ಷಿಣ ಆಫ್ರಿಕಾ ನಡುವೆ ಕೇವಲ ಒಂದಂಕದ ವ್ಯತ್ಯಾಸವಷ್ಟೇ ಉಳಿಯುತ್ತದೆ. ಭಾರತದ ವಿಶ್ವದ ಅಗ್ರಮಾನ್ಯ ಏಕದಿನ ತಂಡವಾಗಿ ಹೊರಹೊಮ್ಮುತ್ತಿರುವುದು ಇದು 5ನೇ ಸಲ. 2013ರಲ್ಲಿ ಮೊದಲ ಬಾರಿಗೆ ಭಾರತ ತಂಡ ಈ ಎತ್ತರ ತಲುಪಿತ್ತು.
ಭಾರತದ ನಂ.1 ಪಟ್ಟ ಗಟ್ಟಿ
ಐಸಿಸಿ ಏಕದಿನ ಟೀಮ್ ರ್‍ಯಾಂಕಿಂಗ್
1. ಭಾರತ 122
2. ದಕ್ಷಿಣ ಆಫ್ರಿಕಾ 118
3. ಇಂಗ್ಲೆಂಡ್ 116
4. ನ್ಯೂಜಿಲ್ಯಾಂಡ್ 115
5. ಆಸ್ಟ್ರೇಲಿಯ 112
6. ಪಾಕಿಸ್ಥಾನ 96
7. ಬಾಂಗ್ಲಾದೇಶ 90
8. ಶ್ರೀಲಂಕಾ 84
9. ವೆಸ್ಟ್ ಇಂಡೀಸ್ 76
10. ಅಫ್ಘಾನಿಸ್ಥಾನ 53
11. ಜಿಂಬಾಬ್ವೆ 52
12. ಅಯರ್‌ಲ್ಯಾಂಡ್ 44