Advertisement

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

04:17 PM Jan 10, 2025 | Team Udayavani |

ಮುಂಬೈ: ಟೀಂ ಇಂಡಿಯಾ ಪರ ಆಡಿದ್ದ, ಐಪಿಎಲ್‌ ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಮಿಂಚಿದ್ದ ವೇಗದ ಬೌಲರ್‌ ವರುಣ್‌ ಆರೋನ್‌ (Varun Aaron) ಅವರು ಕ್ರಿಕೆಟ್‌ ಗೆ ವಿದಾಯ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಬಳಸಿ ವರುಣ್‌ ಆರೋನ್‌ ಅವರು ಶುಕ್ರವಾರ (ಜ.10) ವಿದಾಯ ಘೋಷಣೆ ಮಾಡಿದ್ದಾರೆ.

Advertisement

ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಬೆಂಬಲ ನೀಡಿದ ದೇವರು, ಅವರ ಕುಟುಂಬ, ಸ್ನೇಹಿತರು ಮತ್ತು ತರಬೇತುದಾರರಿಗೆ ಧನ್ಯವಾದ ಹೇಳುವ ಸಂದೇಶವನ್ನು ಒಳಗೊಂಡ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಕಳೆದ ವರ್ಷ ಜಾರ್ಖಂಡ್ ಮತ್ತು ರಾಜಸ್ಥಾನ ನಡುವಿನ ರಣಜಿ ಟ್ರೋಫಿ ಪಂದ್ಯದ ನಂತರ ಆರೋನ್ ಅವರು ರೆಡ್-ಬಾಲ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು.

ವರುಣ್ ಆರೋನ್ 2010-11ರ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ 153 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದರು.

Advertisement

ನಂತರ 2011 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಪದಾರ್ಪಣೆ ಮಾಡಿದ ವರುಣ್ ವೃತ್ತಿಜೀವನದುದ್ದಕ್ಕೂ ಆರು ವಿಭಿನ್ನ ಐಪಿಎಲ್ ತಂಡಗಳ ಭಾಗವಾಗಿದ್ದಾರೆ. ಆರೋನ್ 52 ಐಪಿಎಲ್ ಪಂದ್ಯಗಳಲ್ಲಿ 33.66 ಸರಾಸರಿಯಲ್ಲಿ 44 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಆದರೆ ಪದೇ ಪದೇ ಗಾಯಗಳಿಂದ ಬಳಲುತ್ತಿದ್ದ ಕಾರಣ ವರುಣ್‌ ಆರೋನ್‌ ಅವರ ಅಂತಾರಾಷ್ಟ್ರೀಯ ವೃತ್ತಿಜೀವನವು ಕೇವಲ 18 ಪಂದ್ಯಗಳಿಗೆ ಸೀಮಿತವಾಯಿತು. ಅದರಲ್ಲಿ ಅವರು 29 ವಿಕೆಟ್‌ಗಳನ್ನು ಗಳಿಸಿದ್ದಾರೆ. ಅವರು 9 ಏಕದಿನ ಮತ್ತು 9 ಟೆಸ್ಟ್ ಪಂದ್ಯಗಳಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ. ಕ್ರಮವಾಗಿ 11 ಮತ್ತು 18 ವಿಕೆಟ್‌ಗಳನ್ನು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next