Advertisement

Bollywood Movies:2025ರಲ್ಲಿ ತೆರೆಕಾಣಲಿರುವ ಬಹು ನಿರೀಕ್ಷಿತ ಬಾಲಿವುಡ್‌ ಸಿನಿಮಾಗಳ ಪಟ್ಟಿ

11:45 AM Dec 09, 2024 | Team Udayavani |

2024ರಲ್ಲಿ ಬಾಲಿವುಡ್‌ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳು ರಿಲೀಸ್‌ ಆಗಿವೆ. ಕೆಲವೊಂದು ನೇರವಾಗಿ ಥಿಯೇಟರ್‌ನಲ್ಲಿ ರಿಲೀಸ್‌ ಆದರೆ ಇನ್ನು ಕೆಲ ಸಿನಿಮಾಗಳು ಓಟಿಟಿಯಲ್ಲಿ ತೆರೆಕಂಡು ಮಿಂಚಿದೆ.

Advertisement

ಕಳೆದ ಕೆಲ ವರ್ಷಗಳ ಹಿಂದಿನ ಬಾಲಿವುಡ್‌ ಚಿತ್ರರಂಗಕ್ಕೆ ಹೋಲಿಸಿದರೆ ಈ ವರ್ಷ ಹಾಗೂ ಇದರ ಹಿಂದಿನ ವರ್ಷ ಬಾಲಿವುಡ್‌ನಲ್ಲಿ ಗಮನ ಸೆಳೆಯುವ ಸಿನಿಮಾಗಳು ತೆರೆಕಂಡಿದೆ. 100 ಕೋಟಿಗಿಂತ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳಲ್ಲಿ ಬಾಲಿವುಡ್‌ ಚಿತ್ರರಂಗದ ಕೊಡುಗೆಯೂ ಇದೆ.

2024 ಮುಕ್ತಾಯ ಕಾಣುತ್ತಿದೆ. ವರ್ಷದ ಕೊನೆಯಲ್ಲಿ ಬಾಲಿವುಡ್‌ನಿಂದ ಅಂಥದ್ದೇನು ದೊಡ್ಡ ಸಿನಿಮಾಗಳು ಬರುತ್ತಿಲ್ಲ. ಆದರೆ 2025ರಲ್ಲಿ ಒಂದಕ್ಕಿಂತ ಒಂದು ನಿರೀಕ್ಷೆಗಳನ್ನಿಟ್ಟು ಬಾಲಿವುಡ್‌ ಬಣ್ಣದ ಲೋಕದಲ್ಲಿ ಹಲವು ಸಿನಿಮಾಗಳು ರಿಲೀಸ್‌ ಆಗಲಿವೆ. ಯಾವೆಲ್ಲ ಚಿತ್ರಗಳು ಮುಂದಿನ ವರ್ಷ ತೆರೆ ಕಾಣಲಿದೆ ಎನ್ನುವುದರ ಕುರಿತ ಪಟ್ಟಿ ಇಲ್ಲಿದೆ..

ಜನವರಿ 2025:  

ʼಎಮರ್ಜೆನ್ಸಿʼ: ಹತ್ತಾರು ವಿಳಂಬದ ಬಳಿಕ ಬಹು ನಿರೀಕ್ಷಿತ  ʼಎಮರ್ಜೆನ್ಸಿʼ(Emergency  Movie) ಕೊನೆಗೂ 2025ರ ಆರಂಭದಲ್ಲೇ ಬರುವುದಾಗಿ ಇತ್ತೀಚೆಗೆ ಅನೌನ್ಸ್‌ ಮಾಡಿದೆ.

Advertisement

ಭಾರತದ ತುರ್ತು ಪರಿಸ್ಥಿತಿಯ ಕಥೆಯನ್ನೊಳಗೊಂಡಿರುವ ʼಎಮರ್ಜೆನ್ಸಿʼ ಸಿನಿಮಾದಲ್ಲಿ ನಟಿ ಕಂಗನಾ (Kangana ranaut)  ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ(Indira Gandhi) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಪ್ರಧಾನ ಪಾತ್ರದ ಜತೆ ನಿರ್ದೇಶನದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.

2025ರ ಜನವರಿ 17 ರಂದು ʼಎಮರ್ಜೆನ್ಸಿʼ ರಿಲೀಸ್‌ ಆಗಲಿದೆ. ಚಿತ್ರದಲ್ಲಿ ಕಂಗನಾ ಜತೆ ಅನುಪಮ್‌ ಖೇರ್‌, ಶ್ರೇಯಸ್‌ ತಲ್ಪಾಡೆ, ಮಿಲಿಂದ್ ಸೋಮನ್, ಮಹಿಮಾ ಚೌಧರಿ ಮುಂತಾದವರು ನಟಿಸಿದ್ದಾರೆ.

ಗೇಮ್‌ ಚೇಂಜರ್:‌ ಶಂಕರ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ʼಗೇಮ್‌ ಚೇಂಜರ್‌ʼ (Game Changer) ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ರಾಮ್‌ ಚರಣ್‌ (Ram Charan) ಸಿನಿಮಾದಲ್ಲಿ  ತ್ರಿಬಲ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್‌ ನಟಿ ಕಿಯಾರ ಅಡ್ವಾಣಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಜನವರಿ 10 ಅಂದರೆ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

ಸ್ಕೈ ಪೋರ್ಸ್:‌ ಸತತ ಸೋಲಿನಿಂದ ಅಷ್ಟಾಗಿ ಕಮಾಲ್‌ ಮಾಡದಿರುವ ಅಕ್ಷಯ್‌ ಕುಮಾರ್‌ (Akshay Kumar) ಮುಂದಿನ ವರ್ಷದ ಆರಂಭದಲ್ಲಿ ʼಸ್ಕೈ ಫೋರ್ಸ್ʼ (Sky Force) ಸಿನಿಮಾದ ಮೂಲಕ ಬಿಗ್‌ ಸ್ಕ್ರೀನ್‌ನಲ್ಲಿ ಮೋಡಿ ಮಾಡಲು ಬರಲಿದ್ದಾರೆ. ʼಸ್ಕೈ ಫೋರ್ಸ್‌ʼ  ಭಾರತದ ಮೊದಲ ಮತ್ತು ಮಾರಣಾಂತಿಕ ವೈಮಾನಿಕ ದಾಳಿಯ ನೈಜ ಕಥೆಯಾಗಿದೆ.

ಸಂದೀಪ್ ಕೆಲ್ವಾನಿ ಮತ್ತು ಅಭಿಷೇಕ್ ಅನಿಲ್ ಕಪೂರ್ ನಿರ್ದೇಶನದ ಈ ಸಿನಿಮಾದಲ್ಲಿ ಅಕ್ಷಯ್‌ ಕುಮಾರ್‌ ಜತೆ ನಿಮ್ರತ್ ಕೌರ್, ಸಾರಾ ಅಲಿ ಖಾನ್ ಮತ್ತು ಹೊಸಬರಾದ ವೀರ್ ಪಹಾರಿಯಾ ಕಾಣಿಸಿಕೊಳ್ಳಲಿದ್ದಾರೆ. 2025ರ ಜನವರಿ 24 ರಂದು ಚಿತ್ರ ರಿಲೀಸ್‌ ಆಗಲಿದೆ.

ದೇವ: ಶಾಹಿದ್‌ ಕಪೂರ್‌ – ಪೂಜಾ ಹೆಗ್ಡೆ ಪ್ರಧಾನ ಪಾತ್ರದಲ್ಲಿ ನಟಿಸಿರುವ ಆ್ಯಕ್ಷನ್ ಥ್ರಿಲ್ಲರ್‌ ʼದೇವʼ (Deva Movie) ಸಿನಿಮಾದ ಬಗ್ಗೆ ಬಾಲಿವುಡ್‌ನಲ್ಲಿ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಜನವರಿ 31 ರಂದು ಸಿನಿಮಾ ರಿಲೀಸ್‌ ಆಗಲಿದೆ ಎನ್ನಲಾಗಿದೆ. ರೋಶನ್ ಆಂಡ್ರ್ಯೂಸ್ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ಫೆಬ್ರವರಿ 2025:

ಛಾವಾ:  ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿರುವ ಐತಿಹಾಸಿಕ ಕಥೆವುಳ್ಳ ʼಛಾವಾʼ (Chhaava) ಈಗಾಗಲೇ ಬಾಲಿವುಡ್‌ ಅಂಗಳದಲ್ಲಿ ದೊಡ್ಡದಾಗಿ ಸದ್ದು ಮಾಡಿದೆ.  ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲೇ ಅಂದರೆ ಡಿಸೆಂಬರ್‌ನಲ್ಲೇ ಸಿನಿಮಾ ರಿಲೀಸ್‌ ಆಗಬೇಕಿತ್ತು. ʼಪುಷ್ಪ-2ʼ ಜತೆಗಿನ ಪೈಪೋಟಿ ತಪ್ಪಿಸಿ ʼಛಾವಾʼ 2025 ರ ಫೆಬ್ರವರಿ 14 ರಂದು ರಿಲೀಸ್‌ ಆಗಲಿದೆ.

ವಿಕ್ಕಿ ಕೌಶಲ್‌ (Vicky Kaushal) ಶಿವಾಜಿ ಮಹಾರಾಜ್‌ ಪುತ್ರ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರಶ್ಮಿಕಾ ಮಂದಣ್ಣ(Rashmika Mandanna) ಅವರು ಸಂಭಾಜಿಯ ಪತ್ನಿ ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಾರ್ಚ್‌ 2025:

ಸಿ ಶಂಕರನ್ ನಾಯರ್ ಬಯೋಪಿಕ್:  ಕರಣ್ ಸಿಂಗ್ ತ್ಯಾಗಿ ನಿರ್ದೇಶನದ ಈ ಸಿನಿಮಾ ಭಾರತೀಯ ವಕೀಲ ಮತ್ತು ರಾಜಕಾರಣಿಯಾದ್ದ ಸಿ ಶಂಕರನ್‌ ಅವರ ಜೀವನ ಕಥೆಯನ್ನೊಳಗೊಂಡಿದೆ. ಅಕ್ಷಯ್ ಕುಮಾರ್ ಮತ್ತು ಆರ್. ಮಾಧವನ್ ಜತೆಯಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಇನ್ನೂ ಹೆಸರಿಡದ ಈ ಚಿತ್ರಕ್ಕೆ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಬಂಡವಾಳ ಹಾಕೋದಾಗಿ ಹೇಳಿದೆ.

2025ರ ಮಾರ್ಚ್‌ನಲ್ಲಿ ಚಿತ್ರ ತೆರೆ ಕಾಣಲಿದೆ ಎನ್ನಲಾಗಿದೆ.

ಸಿಕಂದರ್:‌ ಎ.ಆರ್. ಮುರುಗದಾಸ್ ನಿರ್ದೇಶನದ ʼಸಿಕಂದರ್‌ʼ (Sikandar)  ಚಿತ್ರದ ಚಿತ್ರೀಕರಣ ಸಾಗುತ್ತಿದೆ. ಸಲ್ಮಾನ್‌ ಖಾನ್‌ ( Salman Khan) – ರಶ್ಮಿಕಾ ಮಂದಣ್ಣ ಮೊದಲ ಬಾರಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ 2025ರ ರಂಜಾನ್‌ ಹಬ್ಬದ ಸಂದರ್ಭದಲ್ಲಿ ರಿಲೀಸ್‌ ಆಗಲಿದೆ.

ಚಿತ್ರೀಕರಣದ ಹಂತದಲ್ಲೇ ʼಸಿಕಂದರ್‌ʼ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಲ್ಮಾನ್‌ ಖಾನ್‌ ಅವರಿಗೆ ಈ ಸಿನಿಮಾ ಕಂಬ್ಯಾಕ್‌ ಮಾಡಿಕೊಡುತ್ತದೆ ಎನ್ನುವ ಮಾತು ಕೂಡ ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.

ಏಪ್ರಿಲ್‌ 2025:  

ಚಂದ್ ಮೇರಾ ದಿಲ್:  ರೊಮ್ಯಾಂಟಿಕ್‌ ಕಥೆವುಳ್ಳ ʼಚಂದ್‌ ಮೇರಾ ದಿಲ್‌ʼ ಸಿನಿಮಾವನ್ನು ವಿವೇಕ್ ಸೋನಿ ನಿರ್ದೇಶನ ಮಾಡಲಿದ್ದಾರೆ. ಅನನ್ಯಾ ಪಾಂಡೆ ಮತ್ತು ಲಕ್ಷ್ಯ ಜೋಡಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಏಪ್ರಿಲ್‌ ತಿಂಗಳಿನಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ಹೇಳಲಾಗಿದೆ.

ಧಡಕ್ 2: 2018ರಲ್ಲಿ ಬಂದಿದ್ದ ʼದಢಕ್‌ʼ ಚಿತ್ರದ ಬಾಲಿವುಡ್‌ನ ರೊಮ್ಯಾಂಟಿಕ್‌ ಮಂದಿಗೆ ಇಷ್ಟವಾಗಿತ್ತು. ಲವ್‌ ಕಂ ಫ್ಯಾಮಿಲಿ ಡ್ರಾಮಾ ಈ ಚಿತ್ರದಲ್ಲಿ ಇಶಾನ್‌ ಹಾಗೂ ಜಾಹ್ನವಿ ಕಾಣಿಸಿಕೊಂಡಿದ್ದರು. ಶಾಜಿಯಾ ಇಕ್ಬಾಲ್ ನಿರ್ದೇಶನದ ʼಧಡಕ್‌ -2ʼ (Dhadak 2) ನಲ್ಲಿ ತೃಪ್ತಿ ದಿಮ್ರಿ ಮತ್ತು ಸಿದ್ಧಾಂತ್ ಚತುರ್ವೇದಿ ಕಾಣಿಸಿಕೊಳ್ಳಲಿದ್ದಾರೆ. ಇದು ತಮಿಳಿನ ʼಪರಿಯೆರುಂ ಪೆರುಮಾಳ್ʼ ಚಿತ್ರದ ರಿಮೇಕ್‌ ಸಿನಿಮಾ. ಏಪ್ರಿಲ್‌ ತಿಂಗಳಿನಲ್ಲಿ ಸಿನಿಮಾ ರಿಲೀಸ್‌ ಆಗಲಿದೆ ಎನ್ನಲಾಗಿದೆ.

ಸನ್ನಿ ಸಂಕ್ಸಾರಿ ಕಿ ತುಳಸಿ ಕುಮಾರಿ: ರೊಮ್ಯಾಂಟಿಕ್‌ ಕಾಮಿಡಿ ಕಥೆವುಳ್ಳ ಈ ಚಿತ್ರದಲ್ಲಿ ಜಾಹ್ನವಿ ಹಾಗೂ ವರುಣ್‌ ಧವನ್‌ ಜೋಡಿ ಕಾಣಿಸಿಕೊಳ್ಳಲಿದ್ದಾರೆ. ಶಶಾಂಕ್ ಖೈತಾನ್ ನಿರ್ದೇಶನದ ಈ ಚಿತ್ರ ಏ. 18ಕ್ಕೆ ತೆರೆ ಕಾಣಲಿದೆ.

ಮೇ 2025:  

ದೇ ದೇ ಪ್ಯಾರ್ ದೇ 2:

ಅಜಯ್‌ ದೇವಗನ್‌ , ರಕುಲ್‌ ಪ್ರೀತ್‌, ಆರ್‌. ಮಾಧವನ್ ಪ್ರಧಾನ ಪಾತ್ರದ ರೊಮ್ಯಾಂಟಿಕ್‌ ಕಾಮಿಡಿ‌ ʼದೇ ದೇ ಪ್ಯಾರ್ ದೇ 2ʼ ಮೇ.2 ರಂದು ರಿಲೀಸ್‌ ಆಗಲಿದೆ.

ಜೂನ್‌ 2025:  

ಹೌಸ್‌ಫುಲ್‌ -5: 2025ರ ಬಹು ನಿರೀಕ್ಷಿತ ಬಾಲಿವುಡ್‌ ಸಿನಿಮಾಗಳಲ್ಲಿ ʼಹೌಸ್‌ ಫುಲ್-5‌ʼ (Housefull 5) ಕೂಡ ಒಂದು. ʼಹೌಸ್‌ ಫುಲ್‌ʼ ಸರಣಿಗೆ ಪ್ರತ್ಯೇಕ ವೀಕ್ಷಕರಿದ್ದಾರೆ. ಆ ನಿಟ್ಟಿನಲ್ಲಿ ಸಿನಿಮಾದ 5ನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಿದೆ. ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಇತರ ಪ್ರಮುಖರು ಕಾಣಿಸಿಕೊಳ್ಳಲಿದ್ದು ಅಂಶುಲ್ ಶರ್ಮಾ ನಿರ್ದೇಶನ ಮಾಡಲಿದ್ದಾರೆ.

ಜೂ.6 ರಂದು ಚಿತ್ರ ತೆರೆ ಕಾಣಲಿದೆ.

ಆಗಸ್ಟ್‌ 2025:

ʼವಾರ್‌ -2ʼ: ಬಾಲಿವುಡ್‌ನಲ್ಲಿ ಹೃತಿಕ್‌ ರೋಷನ್‌ – ಟೈಗರ್‌ ಶ್ರಾಫ್‌ ಅವರ ʼವಾರ್‌ʼ ಸಿನಿಮಾ ಹಿಟ್‌ ಆಗಿ ಭರ್ಜರಿ ಗಳಿಕೆ ಕಂಡಿತ್ತು. ಇದೀಗ ʼವಾರ್‌ -2ʼ ನಲ್ಲಿ ಹೃತಿಕ್‌ ಜತೆ ಜೂ. ಎನ್‌ಟಿಆರ್‌ ಫೈಟ್‌ ಮಾಡಲಿದ್ದಾರೆ. ಜಬರ್‌ ದಸ್ತ್‌ ಸ್ಟಂಟ್ಸ್‌ ಗಳಿರುವ ʼವಾರ್-2‌ʼ ಗೆ ಅಯಾನ್‌ ಮುಖರ್ಜಿ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ.

ಆಗಸ್ಟ್‌ 14 ರಂದು ಚಿತ್ರ ರಿಲೀಸ್‌ ಆಗಲಿದೆ.

ದೆಹಲಿ ಫೈಲ್ಸ್: ʼಕಾಶ್ಮೀರ್‌ ಫೈಲ್ಸ್‌ʼ ಮೂಲಕ  ಗಮನ ಸೆಳೆದ ವಿವೇಕ್‌ ಅಗ್ನಿಹೋತ್ರಿ ʼದೆಹಲಿ ಫೈಲ್ಸ್‌ʼ ಎನ್ನುವ ಮತ್ತೊಂದು ನೈಜ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಅನುಪಮ್ ಖೇರ್ ಮತ್ತು ಮಿಥುನ್ ಚಕ್ರವರ್ತಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು ಸ್ವಾತಂತ್ರ್ಯ ದಿನದಂದು ಚಿತ್ರ ರಿಲೀಸ್‌ ಆಗಲಿದೆ ಎಂದು ಹೇಳಲಾಗುತ್ತಿದೆ.

ಸೆಪ್ಟೆಂಬರ್ 2025:

ಬಾಘಿ 4: ಸ್ಯಾಂಡಲ್‌ ವುಡ್‌ ನ ಎ. ಹರ್ಷ ನಿರ್ದೇಶನ ಮಾಡುತ್ತಿರುವ ʼಬಾಘಿ-4ʼ ಚಿತ್ರದ ಫಸ್ಟ್‌ ಲುಕ್‌ ಇತ್ತೀಚೆಗೆ ರಿಲೀಸ್‌ ಆಗಿತ್ತು. ಹರ್ಷ ಅವರ ಸಿನಿಮಾ ಅಂದ ಮೇಲೆ ಅಲ್ಲಿ ಸಖತ್‌ ಮಾಸ್‌ ಸೀನ್‌ಗಳು ಇರಲೇಬೇಕು. ಟೈಗರ್‌ ಶ್ರಾಫ್‌ ʼಬಾಘಿʼ ಸರಣಿಯ 4ನೇ ಭಾಗಕ್ಕೆ ಹರ್ಷ ನಿರ್ದೇಶನ ಮಾಡಲಿದ್ದಾರೆ. 2025 ರ ಸೆಪ್ಟೆಂಬರ್‌ನಲ್ಲಿ ʼಭಾಘಿ-4ʼ ರಿಲೀಸ್‌ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಅಕ್ಟೋಬರ್‌ 2025:  

ಹೈ ಜವಾನಿ ತೋ ಇಷ್ಕ್ ಹೋನಾ ಹೈ: ಪುತ್ರ ವರುಣ್‌ ಧವನ್‌ಗೆ ಡೇವಿಡ್‌ ಧವನ್‌ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದ್ದು, ರೊಮ್ಯಾಂಟಿಕ್‌ ಕಾಮಿಡಿ ಚಿತ್ರ ಅಕ್ಟೋಬರ್‌ 2 ರಂದು ರಿಲೀಸ್‌ ಆಗಲಿದೆ ಎನ್ನಲಾಗಿದೆ.

ಥಾಮ:  ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಹಾರರ್‌ ಕಾಮಿಡಿ ʼಥಾಮಾʼ 2025ರ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಆದಿತ್ಯ ಸರ್ಪೋತದಾರ್ ನಿರ್ದೇಶನದ ಈ ಚಿತ್ರ  ದೀಪಾವಳಿ ಹಬ್ಬದ ಸಂದರ್ಭದಲ್ಲಿ ತೆರೆ ಕಾಣಲಿದೆ ಎನ್ನಲಾಗಿದೆ.

ಡಿಸೆಂಬರ್ 2025:

ಆಲ್ಫಾ: ಯಶ್‌ರಾಜ್‌ ಫಿಲ್ಮ್ಸ್‌ ಅವರ ಮಹಿಳಾ ಸ್ಪೈ ಥ್ರಿಲ್ಲರ್‌ ʼಆಲ್ಫಾʼ ಈಗಿನಿಂದಲೇ ಸಖತ್‌ ಕುತೂಹಲ ಹುಟ್ಟಿಸಿದೆ. ಶಿವ ರಾವೈಲ್ ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ಶರ್ವರಿ ವಾಘ್ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷದ ಕ್ರಿಸ್ಮಸ್‌ ಹಬ್ಬದ ಸಂದರ್ಭದಲ್ಲಿ ಚಿತ್ರ ರಿಲೀಸ್‌ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next