ಕೋಲ್ಕತ್ತಾ: ಅಗರ್ತಲಾದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಬಸ್ ಮೇಲೆ ಬಾಂಗ್ಲಾದೇಶದಲ್ಲಿ ದಾಳಿ ನಡೆದಿದೆ ಎಂದು ತ್ರಿಪುರ ಸಾರಿಗೆ ಸಚಿವ ಸುಶಾಂತ ಚೌಧರಿ ಹೇಳಿದ್ದಾರೆ. ಸಚಿವರ ಹೇಳಿಕೆ ಪ್ರಕಾರ, ಬಾಂಗ್ಲಾದೇಶದ ಬ್ರಹ್ಮನ್‌ಬಾರಿಯಾ ಜಿಲ್ಲೆಯ ಬಿಶ್ವಾ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಈ ವಿಷಯದ ಬಗ್ಗೆ ಮಾಹಿತಿ ಕೇಳಿದ್ದು, ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಶಾಂತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಹೇಗೆ ದಬ್ಬಾಳಿಕೆ ಎದುರಿಸುತ್ತಿದ್ದಾರೆ ಎಂಬುದನ್ನು ಇಡೀ ಜಗತ್ತು ನೋಡುತ್ತಿದೆ ಎಂದು ಹೇಳಿದರು.
“ನಮ್ಮ ರಾಜ್ಯವು ಮೂರು ಕಡೆ ಬಾಂಗ್ಲಾದೇಶದಿಂದ ಸುತ್ತುವರಿದಿರುವುದರಿಂದ, ಅಂತಾರಾಷ್ಟ್ರೀಯ ಗಡಿಯಲ್ಲಿ ಕಟ್ಟುನಿಟ್ಟಾದ ಜಾಗರೂಕತೆಯನ್ನು ಕಾಪಾಡಿಕೊಳ್ಳಲು ನಾನು ಬಿಎಸ್ಎಫ್ ಮತ್ತು ಪೊಲೀಸರನ್ನು ಕೇಳಿದ್ದೇನೆ” ಎಂದು ಸಹಾ ಸೇರಿಸಿದ್ದಾರೆ.
“ತ್ರಿಪುರಾದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಸಹ್ಯಮೊಲಿ ಪರಿಬಾಹನ್ ಬಸ್ ಮೇಲೆ ಬಾಂಗ್ಲಾದೇಶದ ಬ್ರಾಹ್ಮಣಬಾರಿಯಾ ಬಿಶ್ವಾ ರಸ್ತೆಯಲ್ಲಿ ದಾಳಿ ನಡೆಸಲಾಯಿತು. ಈ ಘಟನೆಯು ಬಸ್ ನಲ್ಲಿದ್ದ ಭಾರತೀಯ ಪ್ರಯಾಣಿಕರನ್ನು ಭಯಭೀತಗೊಳಿಸಿದೆ. ಬಸ್ ತನ್ನ ಮಾರ್ಗದಲ್ಲೇ ಸಾಗುತ್ತಿತ್ತು, ಆದರೆ ಟ್ರಕ್ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದಿದೆ. ಈ ಸಮಯದಲ್ಲಿ ಆಟೋ ರಿಕ್ಷಾವೊಂದು ಬಸ್ಸಿನ ಮುಂಭಾಗ ಬಂದ ಕಾರಣ ಬಸ್ ಮತ್ತು ಆಟೋ-ರಿಕ್ಷಾ ಡಿಕ್ಕಿ ಹೊಡೆದವು,” ಎಂದು ಚೌಧರಿ ಫೇಸ್‌ಬುಕ್ ಪೋಸ್ಟ್ ನಲ್ಲಿ ಬಸ್‌ನ ಫೋಟೋಗಳನ್ನು ಹಂಚಿಕೊಂಡು ವಿವರಿಸಿದ್ದಾರೆ.
ಘಟನೆಯ ನಂತರ, ಸ್ಥಳೀಯರು ಬಸ್‌ನಲ್ಲಿದ್ದ ಭಾರತೀಯ ಪ್ರಯಾಣಿಕರಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು ಎಂದು ಚೌಧರಿ ಹೇಳಿದ್ದಾರೆ. ಅವರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು, ನಿಂದನೀಯ ಪದಗಳನ್ನು ಬಳಸಿದರು ಮತ್ತು ಪ್ರಯಾಣಿಕರಿಗೆ ಜೀವ ಬೆದರಿಕೆ ಹಾಕಿದರು. ಈ ಕೃತ್ಯವನ್ನು ಖಂಡಿಸಿದ ಚೌಧರಿ ಭಾರತೀಯ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಾಂಗ್ಲಾದೇಶದ ಅಧಿಕಾರಿಗಳನ್ನು ಒತ್ತಾಯಿಸಿದರು.