ಹೊಸದಿಲ್ಲಿ : ಅತ್ಯಂತ ಆಘಾತಕಾರಿ ಪ್ರಕರಣವೊಂದರಲ್ಲಿ ಭಾರತೀಯ ಸಹೋದರ – ಸಹೋದರಿ ಆಸ್ಟ್ರೇಲಿಯ ವೀಸಾ ಪಡೆಯುವುದಕ್ಕಾಗಿ ಪರಸ್ಪರ ಮದುವೆಯಾಗಿರುವುದು ಇದೀಗ ಬಯಲಾಗಿದೆ.
ಎಸ್‌ಬಿಎಸ್ ಡಾಟ್ ಕಾಮ್ ಡಾಟ್ ಎಯು ವರದಿ ಮಾಡಿರುವ ಪ್ರಕಾರ ಹೀಗೆ ಮದುವೆ ಮಾಡಿಕೊಂಡಿರುವ ಸಹೋದರ – ಸಹೋದರಿ ಪಂಜಾಬ್ ಮೂಲದವರೆಂದು ಗೊತ್ತಾಗಿದೆ. ಈ ಸಹೋದರ – ಸಹೋದರಿ ಎಸಗಿರುವ ಫೋರ್ಜರಿ ಕೃತ್ಯದ ಬಗ್ಗೆ ಅವರ ಸೋದರ ಸಂಬಂಧಿಯೋರ್ವರು ಪೊಲೀಸರಿಗೆ ದೂರು ನೀಡಿದ್ದು ಆ ಪ್ರಕಾರ ಈಗ ತನಿಖೆ ನಡೆಯುತ್ತಿದೆ.
ಆಸ್ಟ್ರೇಲಿಯ ವೀಸಾ ಪಡೆಯುವುದಾRಗಿ ಈ ಸೋದರ – ಸೋದರಿ ಬ್ಯಾಂಕ್ ಖಾತೆ, ಪಾಸ್ ಪೋರ್ಟ್ ಮತ್ತು ಗುರುತು ಪತ್ರಗಳನ್ನು ತಮ್ಮ ಸೋದರ ಸಂಬಂಧಿಗಳ ಹೆಸರನ್ನು ದುರುಪಯೋಗಿಸಿಕೊಂಡು ಫೋರ್ಜರಿ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ. ಆಸ್ಟ್ರೇಲಿಯನ್-ಸಂಗಾತಿ-ವೀಸಾ ಪಡಯುವುದಕ್ಕೆ ಇವರು ಈ ರೀತಿಯ ಫೋರ್ಜರಿ ನಡೆಸಿದ್ದಾರೆ ಎಂದು ದೂರಲಾಗಿದೆ.
ಪಂಜಾಬಿನ ಭಟಿಂಡಾದ ಪೊಲೀಸ್ ಇನ್ಸಪೆಕ್ಟರ್ ಈ ಕೇಸಿನ ವಿಚಾರಣೆ ನಡೆಸುತ್ತಿದ್ದು ಎಸ್‌ಬಿಎಸ್ ಪೋರ್ಟಲ್‌ಗೆ ಇದರ ಮಾಹಿತಿ ನೀಡಿದ್ದಾರೆ. ಈ ಫೋರ್ಜರಿ ಪ್ರಕರಣ 2012ರಷ್ಟು ಹಿಂದೆಯೇ ನಡೆದಿದ್ದು ಆರು ವರ್ಷಗಳ ಬಳಿಕ ಇದೀಗ ಬಹಿರಂಗವಾಗಿದೆ.
ಪೊಲೀಸರಿಗೆ ನೀಡಲಾಗಿರುವ ದೂರಿನಲ್ಲಿ ಸೋದರ-ಸೋದರಿ ಮಾತ್ರವಲ್ಲದೆ ಅವರ ಹೆತ್ತವರು, ಅಜ್ಜಿ (ತಾಯಿಯ ತಾಯಿ) ಮತ್ತು ಇನ್ನೋರ್ವ ಸಹೋದರನ ಹೆಸರನ್ನೂ ವಂಚನೆಗೈದಿರುವವರ ಪಟ್ಟಿಯಲ್ಲಿ ನಮೂದಿಸಲಾಗಿದದ್ದು ಇವರೆಲ್ಲರೂ ಈಗ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.