ಗ್ಯಾಂಗ್‌ಟಕ್: ಸಿಕ್ಕಿಂನ ಉತ್ತರ ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ಸಿಕ್ಕಿಹಾಕಿಕೊಂಡಿದ್ದ 54 ಮಕ್ಕಳೂ ಸೇರಿದಂತೆ 500 ಮಂದಿ ಪ್ರವಾಸಿಗರನ್ನು ಭೂಸೇನೆ ಯಶಸ್ವಿಯಾಗಿ ಪಾರು ಮಾಡಿದೆ.
ಪ್ರವಾಹ, ಭೂಕುಸಿತದಿಂದಾಗಿ ಲಾಚೆನ್, ಲಾಚುಂಗ್ ಚುಂಗ್‌ತಾನ್ ಎಂಬಲ್ಲಿ ಸಮಸ್ಯೆ ಉಂಟಾಗಿತ್ತು. ಸಿಕ್ಕಿಹಾಕಿಕೊಂಡಿದ್ದ ಪ್ರವಾಸಿಗರು ಲಾಚುಂಗ್ ಮತ್ತು ಲಾಚೆನ್ ಕಣಿವೆ ಪ್ರದೇಶಗಳಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿಯೇ ಮಳೆಯಾದ್ದರಿಂದ ಅವರೆಲ್ಲ ಚುಂಗ್‌ತಾನ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಅವರನ್ನು ಪಾರು ಮಾಡಲು ಜಿಲ್ಲಾಡಳಿತ ಸೇನೆಗೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ತ್ರಿಶಕ್ತಿ ಕಾಪ್ಸ್ìನ ಯೋಧರು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ, 500 ಮಂದಿಯನ್ನು ಪಾರು ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿದ ರಕ್ಷಣಾ ಇಲಾಖೆ ವಕ್ತಾರರು, 216 ಮಂದಿ ಪುರುಷರು, 113 ಮಂದಿ ಮಹಿಳೆಯರು, 54 ಮಂದಿ ಮಕ್ಕಳನ್ನು ಪಾರು ಮಾಡಲಾಗಿದೆ. ಅವರನ್ನೆಲ್ಲ ಸೇನೆಯ ಮೂರು ಶಿಬಿರಗಳಿಗೆ ಕರೆದೊಯ್ದು ಬಿಸಿಯಾದ ಆಹಾರ, ಬೆಚ್ಚಗೆ ಇರಲು ವಸ್ತ್ರಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಉತ್ತರ ಸಿಕ್ಕಿಂನ ಜಿಲ್ಲಾಧಿಕಾರಿ ಹೇಮ್ ಚೆಟ್ರಿ ಮಾತನಾಡಿ ಹೆಚ್ಚಿನ ಎಲ್ಲಾ ಪ್ರವಾಸಿಗರು ಪಶ್ಚಿಮ ಬಂಗಾಳಕ್ಕೆ ಸೇರಿದವರು. ಸದ್ಯ ಸ್ಥಳದಲ್ಲಿ ಉಂಟಾಗಿದ್ದ ಭೂಕುಸಿತವನ್ನೂ ತೆರವು ಮಾಡಲಾಗಿದೆ ಎಂದರು.