Advertisement

ಗಡಿಯ ಮೇಲೆ ಅರ್ಜುನನ ಕಣ್ಣು ! ಪಾಕ್‌ ಡ್ರೋನ್‌ಗಳನ್ನು ಗುರುತಿಸಲು ಗಿಡುಗ ಬಳಕೆ

12:43 AM Nov 30, 2022 | Team Udayavani |

ಔಲಿ(ಉತ್ತರಾಖಂಡ): ಗಡಿಯಲ್ಲಿ ಇನ್ನು ಭಾರತೀಯ ಸೇನೆಯಿಂದ ತರಬೇತಾದ ಗಿಡುಗಗಳು ಶತ್ರುಗಳ ಮೇಲೆ ಕಣ್ಣಿರಿಸಲಿವೆ!

Advertisement

ಹೌದು, ಉತ್ತರಾಖಂಡದ ಔಲಿಯಲ್ಲಿ ಭಾರತ ಮತ್ತು ಅಮೆರಿಕ ಜಂಟಿ ಸಮರಾಭ್ಯಾಸ ನಡೆಸುತ್ತಿದ್ದು, ಇದರಲ್ಲಿ ಗಿಡುಗನ ಸಾಮರ್ಥ್ಯವನ್ನು ಅನಾವರಣ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಡ್ರೋನ್‌ಗಳನ್ನು ಬೇಟೆಯಾಡಲು ಇವುಗಳನ್ನು ಬಳಸಿಕೊಳ್ಳುತ್ತಿರುವುದು ವಿಶೇಷ. ಸದ್ಯ ಸೇನೆಯಿಂದ ತರಬೇತಾದ ಗಿಡುಗಕ್ಕೆ “ಅರ್ಜುನ’ ಎಂಬ ಹೆಸರಿಡಲಾಗಿದೆ.

ಹೇಗೆ ಪತ್ತೆ?
ಈ ಯುದ್ಧಾಭ್ಯಾಸದ ವೇಳೆ ಸೇನೆಯು ಶತ್ರು ಡ್ರೋನ್‌ ಬರುವ ಒಂದು ಅಣಕು ಸನ್ನಿವೇಶ ಸೃಷ್ಟಿಸಿತ್ತು. ಮೊದಲಿಗೆ ತರಬೇತಿ ಪಡೆದಿರುವ ನಾಯಿ ಡ್ರೋನ್‌ ಶಬ್ದ ಕೇಳಿದೊಡನೆ ಎಚ್ಚರಿಕೆ ನೀಡಿತು. ಬಳಿಕ ಗಿಡುಗ ಡ್ರೋನ್‌ ಹಾರುತ್ತಿರುವ ಸ್ಥಳದ ಮಾಹಿತಿ ನೀಡಿತು. ಇಲ್ಲಿ ಗಿಡುಗನ ಅತೀ ಎತ್ತರದಲ್ಲಿ ಹಾರುವ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗುತ್ತಿದೆ. ಜತೆಗೆ ಅದಕ್ಕೆ ಆಗಸದಲ್ಲೇ ಡ್ರೋನ್‌ ನಾಶ ಮಾಡುವ ತರಬೇತಿಯನ್ನೂ ನೀಡಲಾಗಿದೆ.

ಇದೇ ಮೊದಲು
ಇದುವರೆಗೆ ಸೇನೆಯು ಶ್ವಾನಗಳನ್ನು ಮಾತ್ರ ಶತ್ರುಗಳ ಸಂಹಾರ, ಬಾಂಬ್‌ ಪತ್ತೆ, ಉಗ್ರರ ಅಡಗುತಾಣಗಳ ಪತ್ತೆಗಾಗಿ ಬಳಸಿಕೊಳ್ಳುತ್ತಿತ್ತು. ಇದೇ ಮೊದಲ ಬಾರಿಗೆ ಗಿಡುಗನನ್ನು ಶತ್ರು ರಾಷ್ಟ್ರಗಳ ಉಪಟಳ ನಿಯಂತ್ರಣಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಗಿಡುಗಳ ಬಳಕೆಯಿಂದ ಭಾರತೀಯ ಸೇನೆಗೆ ಡ್ರೋನ್‌ ನಿಯಂತ್ರಣದಲ್ಲಿ ದೊಡ್ಡ ಬಲ ಬಂದಂತಾಗಿದೆ. ಪಾಕಿಸ್ಥಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳಾದ ಪಂಜಾಬ್‌, ಜಮ್ಮು -ಕಾಶ್ಮೀರದಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

Advertisement

ಹೆಚ್ಚಿದೆ ಡ್ರೋನ್‌ ಉಪಟಳ
ಇತ್ತೀಚೆಗೆ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಪಾಕ್‌ ಡ್ರೋನ್‌ ಉಪಟಳ ಹೆಚ್ಚಾಗಿದ್ದು, ಗಡಿಯೊಳಗೆ ಶಸ್ತ್ರಾಸ್ತ್ರ, ಡ್ರಗ್ಸ್‌, ಹಣವನ್ನು ಎಸೆದು ಉಗ್ರರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ನ. 24ರಂದು ಜಮ್ಮು -ಕಾಶ್ಮೀರದ ಪೊಲೀಸರು ಸಂಭಾ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರಗಳನ್ನು ತಂದಿದ್ದ ಪಾಕ್‌ ಡ್ರೋನನ್ನು ಹೊಡೆದುಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next