Advertisement

Indian Army: ಪರ್ವತ ಯುದ್ಧಕ್ಕೆ ದೇಸಿ ಟ್ಯಾಂಕರ್‌ ಸಜ್ಜು

12:03 AM Jul 07, 2024 | Team Udayavani |

ಹೊಸದಿಲ್ಲಿ: ಲಡಾಖ್‌ ಬಳಿ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಪದೇ ಪದೆ ಉಪಟಳ ನೀಡುತ್ತಿರುವ ಚೀನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತವು ದೇಶೀಯವಾಗಿ ಜೋರಾವರ್‌ ಯುದ್ಧ ಟ್ಯಾಂಕನ್ನು ಅಭಿವೃದ್ಧಿಪಡಿಸಿದೆ. ಗುಜರಾತ್‌ನ ಹಜೀರಾದಲ್ಲಿ ಈ ಟ್ಯಾಂಕರ್‌ನ ಮೊದಲ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.

Advertisement

ವಿಶೇಷವೆಂದರೆ ಈ ಟ್ಯಾಂಕರ್‌ ಪರ್ವತ, ಗುಡ್ಡಗಾಡು ಪ್ರದೇಶಗಳಲ್ಲಿ ಸರಾಗವಾಗಿ ಸಂಚರಿಸುವ ಕಾರಣ ಪರ್ವತ ಯುದ್ಧದ ಸನ್ನಿವೇಶ ಎದುರಾದಾಗ ದೇಶದ ಸೇನೆಗೆ ದೊಡ್ಡ ಶಕ್ತಿಯಾಗಿ ನೆರವಾಗಲಿದೆ. ಈ ಕುರಿತು ಡಿಆರ್‌ಡಿಒ ಮುಖ್ಯಸ್ಥ ಡಾ| ಸಮೀರ್‌ ಕಾಮತ್‌ ಮಾಹಿತಿ ನೀಡಿದ್ದು, ಪರ್ವತ ಪ್ರದೇಶಗಳಲ್ಲಿ ಈ ಟ್ಯಾಂಕ್‌ ಸರಾಗವಾಗಿ ಸಂಚರಿಸಬಲ್ಲುದು. ನೆಲ ಹಾಗೂ ನದಿಯಲ್ಲೂ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಟಿ-72, ಟಿ-90 ಟ್ಯಾಂಕರ್‌ಗಳಿಗಿಂತ ಹಗುರವಾದ ಈ ಟ್ಯಾಂಕರನ್ನು ವಿಮಾನದಲ್ಲಿ ಸಾಗಿಸಬಹುದು. ಇನ್ನಷ್ಟು ಪರೀಕ್ಷೆಗಳ ಅನಂತರ 2027ರಲ್ಲಿ ಇದು ಸೇನೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಮುಂದಿನ 12ರಿಂದ 18 ತಿಂಗಳುಗಳ ಕಾಲ ಜೊರಾವರ್‌ ಟ್ಯಾಂಕನ್ನು ವಿವಿಧ ಪರೀಕ್ಷೆಗಳಿಗೆ ಒಡ್ಡಲಾಗುತ್ತದೆ.

ಚೀನಕ್ಕೆ ಸೆಡ್ಡು
ಪೂರ್ವ ಲಡಾಖ್‌ನಲ್ಲಿ ಭಾರತೀಯ ಸೇನೆಯ ಅಗತ್ಯಗಳನ್ನು ಪೂರೈಸಲು ಜೋರಾವರ್‌ ಟ್ಯಾಂಕರ್‌ ಸಿದ್ಧವಾಗಿದೆ. ಅಲ್ಲಿನ ಎಲ್‌ಎಸಿಯ ಬಳಿ ಇರುವ ಚೀನದ ಸೇನೆಗೆ ಸೆಡ್ಡು ಹೊಡೆಯುವುದಲ್ಲದೆ, ಯುದ್ಧದ ಸಂದರ್ಭಗಳಲ್ಲಿ ಈ ಟ್ಯಾಂಕರ್‌ ನಿರ್ಣಾಯಕ ಪಾತ್ರ ವಹಿಸಲಿದೆ. ರಷ್ಯಾ-ಉಕ್ರೇನ್‌ ಯುದ್ಧ ಆರಂಭವಾದ ಅನಂತರ ಟ್ಯಾಂಕ್‌ಗಳೊಂದಿಗೆ ಯುಎವಿ (ಅನ್‌ಮ್ಯಾನ್‌x ಏರಿಯಲ್‌ ವೆಹಿಕಲ್‌)ಗಳನ್ನು ಜೋಡಿಸಲಾಗಿದೆ. ಹಾಗಾಗಿ ಮುಂಬರುವ ಯುದ್ಧಗಳಲ್ಲಿ ಟ್ಯಾಂಕ್‌ಗಳು ಪ್ರಮುಖ ಅಸ್ತ್ರವಾಗಲಿವೆ.

2 ವರ್ಷಗಳಲ್ಲಿ ಅಭಿವೃದ್ಧಿ
ಡಿಆರ್‌ಡಿಒ (ಭಾರತೀಯ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಹಾಗೂ ಎಲ್‌ ಆ್ಯಂಡ್‌ ಟಿ ಕಂಪೆನಿ ಜಂಟಿಯಾಗಿ ಕೇವಲ 2 ವರ್ಷಗಳ ದಾಖಲೆಯ ಸಮಯದಲ್ಲಿ ಈ ಟ್ಯಾಂಕರ್‌ ನಿರ್ಮಿಸಿವೆ.

ಸೇನಾ ನಾಯಕನ ಹೆಸರು
ನೂತನ ಟ್ಯಾಂಕರ್‌ಗೆ ಜೋರಾವರ್‌ ಸಿಂಗ್‌ ಅವರ ಹೆಸರನ್ನು ಇಡಲಾಗಿದೆ. ಇವರು 19ನೇ ಶತಮಾನದಲ್ಲಿ ಡೋಗ್ರಾ ರಜಪೂತ್‌ ರಾಜ ಜಮ್ಮುವಿನ ಗುಲಾಬ್‌ ಸಿಂಗ್‌ ಅವರ ಸೇನಾನಾಯಕರಾಗಿದ್ದರು. ತಮ್ಮ ಶೌರ್ಯಕ್ಕೆ ಹೆಸರುವಾಸಿಯಾಗಿದ್ದರು.

Advertisement

ಜೋರಾವರ್‌ ಟ್ಯಾಂಕ್‌ ವೈಶಿಷ್ಟ್ಯಗಳು
– 105 ಮಿ.ಮೀ.- ಸಾಮರ್ಥ್ಯದ ಪ್ರಧಾನ ಗನ್‌
– 25 ಟನ್‌ – ಈ ಲಘು ಯುದ್ಧ ಟ್ಯಾಂಕ್‌ನ ತೂಕ
– 70 ಕಿ.ಮೀ. – ಪ್ರತೀ ತಾಸಿಗೆ ಸಂಚರಿಸುವ ವೇಗ
– 50- ಆರಂಭದಲ್ಲಿ ಸೇನೆಗೆ ಪೂರೈಕೆ
– 295- ಅನಂತರದ ಹಂತಗಳಲ್ಲಿ ಸೇರ್ಪಡೆ

Advertisement

Udayavani is now on Telegram. Click here to join our channel and stay updated with the latest news.

Next