ನವದೆಹಲಿ: ಭಾರತೀಯ ಸೇನಾ ದಿನದ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಗಣ್ಯಾತಿ ಗಣ್ಯರು ಶುಭಕೋರಿದ್ದು, ದೇಶವನ್ನು ರಕ್ಷಿಸುತ್ತಿರುವ ಸೈನಿಕರಿಗೆ ಪ್ರಣಾಮಗಳನ್ನು ಸಲ್ಲಿಸಿದ್ದಾರೆ.
ಈ ದೇಶದ ರಕ್ಷಣೆಗಾಗಿ ಅಸಂಖ್ಯಾತ ಸೈನಿಕರು ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ಅಂಥ ವೀರ ಯೋಧರ ಅಸಂಖ್ಯ ಸಾಹಸಗಾಥೆಗಳನ್ನು ಈ ದಿನ ನೆನೆಯೋಣ. ನಮ್ಮ ಸೈನಿಕರ ಧೈರ್ಯ, ಸಾಹಸಗಳೇ ರಾಷ್ಟ್ರವನ್ನ ರಕ್ಷಿಸುತ್ತಿರುವುದು ವಿಪತ್ತಿನ ಸಮಯದಲ್ಲಿ ರಕ್ಷಕರಾಗಿ ನಮ್ಮನ್ನು ಸಲಹುತ್ತಿರುವ ಭಾರತೀಯ ಸೇನೆಯ ಎಲ್ಲ ಸೈನಿಕರಿಗೆ, ಅವರ ಕುಟುಂಬದವರಿಗೆ ನನ್ನ ವಂದನೆಗಳು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡಿದ್ದು, ದೇಶದ ಎಲ್ಲ ಸೈನಿಕರು, ನಿವೃತ್ತ ಸೇನಾಧಿಕಾರಿಗಳು ಹಾಗೂ ಅವರ ಕುಟುಂಬಸ್ಥರಿಗೆ ಶುಭಕೋರುತ್ತಿದ್ದೇನೆ. ಭಾರತೀಯ ಸೇನೆ ಈ ದೇಶದ ಪ್ರತಿಯೊಬ್ಬ ಪ್ರಜೆಯ ಹೆಮ್ಮೆ ಎಂದಿದ್ದಾರೆ. ಇನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕೂಡ ಟ್ವೀಟ್ ಮಾಡಿ, ದೇಶದ ಸೈನಿಕರ ಅಚಲ ಧೈರ್ಯ, ಸಮರ್ಪಣಾ ಭಾವ ಹಾಗೂ ನಿಸ್ವಾರ್ಥ ಸೇವೆಗೆ ಇಡೀ ದೇಶ ಋಣಿ ಎಂದಿದ್ದಾರೆ.