Advertisement

ಸೇನೆಯಲ್ಲಿದ್ದು ಅಗಲಿದ ಪತಿಗೆ ಪತ್ನಿಯ ಗೌರವ

08:00 AM Jul 24, 2022 | Team Udayavani |

ಸೇನೆಯಲ್ಲಿದ್ದ ಯೋಧನೊಬ್ಬ ಆಕಸ್ಮಿಕವಾಗಿ ವೀರಮರಣ ವನ್ನಪ್ಪಿದರೆ, ಮನೆ ಮಂದಿ ತತ್ತರಿಸಿ ಹೋಗು ತ್ತಾರೆ. ಮಗ ಹೋಗಿಬಿಟ್ಟ ಎಂಬ ಕೊರಗಿನಲ್ಲಿ ಹೆತ್ತವರು, ಗಂಡನಿಲ್ಲ ಎಂಬ ದುಃಖದಲ್ಲಿ ಹೆಂಡತಿ, ಅಪ್ಪನಿಲ್ಲ ಎಂಬ ಸಂಕಟದಲ್ಲಿ ಮಕ್ಕಳು ಕಂಬನಿ ಸುರಿಸುತ್ತಾರೆ. ಅಗಲಿದ ಯೋಧನ ಹೆಸರನ್ನು ಮನೆಗೆ, ಬೀದಿಗೆ, ವೃತ್ತಕ್ಕೆ ಇಟ್ಟು ಅಭಿಮಾನ ಮೆರೆಯುತ್ತಾರೆ. ಆದರೆ, ಸೇನೆಯಲ್ಲಿದ್ದು ಅಗಲಿದ ಪತಿಗೆ ಗೌರವ ಸಲ್ಲಿಸಲು ಪತ್ನಿಯೂ ಸೇನೆ ಸೇರಿದ ಪ್ರಸಂಗಗಳು ವಿರಳ. ಅಂಥದೊಂದು ಪ್ರಸಂಗದ ನಾಯಕಿ- ಗೌರಿ ಮಹಾಧಿಕ್‌. ಲೆಫ್ಟಿನೆಂಟ್‌ ಹುದ್ದೆಯಲ್ಲಿರುವ ಆ ದಿಟ್ಟೆಯ ಮಾತುಗಳು ಇಲ್ಲಿ ಅಕ್ಷರದ ರೂಪದಲ್ಲಿ ಅರಳಿವೆ.
****
“ಅವರ ಪೂರ್ತಿ ಹೆಸರು ಪ್ರಸಾದ್‌ ಗಣೇಶ್‌ ಮಹಾಧಿಕ್‌. ಮುಂಬಯಿ ಯಲ್ಲಿದ್ದರು. ನಾನೂ ಅಲ್ಲಿಯವಳೇ. ನಾವು ಪರಿಚಯವಾಗಿದ್ದು ಮ್ಯಾಟ್ರಿಮೋನಿಯಲ್‌ ಸೈಟ್‌ನಲ್ಲಿ 2014ರಲ್ಲಿ. ಆಗ ಪರಸ್ಪರ ರಿಕ್ವೆಸ್ಟ್ ಕಳಿಸಿಕೊಂಡ್ವಿ. ಅನಂತರ ಚಾಟ್‌ ಮಾಡಿದ್ವಿ. ಆ ಮೇಲೆ ರಜೆ ದಿನಗಳನ್ನು ನೋಡಿ ಮುಖಾಮುಖೀ ಭೇಟಿಯಾಗಲು ನಿರ್ಧರಿಸಿದ್ವಿ. ಮೊದಲ ಭೇಟಿಯಲ್ಲಿ ಏನೋ ಸಂತೋಷ, ಏನೋ ಉಲ್ಲಾಸ. ಮರುದಿನ ಮತ್ತೆ ಭೇಟಿ ಆದ್ವಿ. ಅವತ್ತು, ಮೊದಲ ದಿನಕ್ಕಿಂತ ಹೆಚ್ಚು ಸಡಗರದಿಂದ ಮಾತಾಡಿ, ಫೀಲಿಂಗ್ಸ್ ಶೇರ್‌ ಮಾಡಿಕೊಂಡ್ವಿ. ಮೂರನೇ ದಿನ ಭೇಟಿಯಾದಾಗ ಪ್ರಸಾದ್‌ ಕೇಳಿದರು: “ನನ್ನನ್ನ ಮದುವೆ ಆಗ್ತಿಯಾ?’

Advertisement

ಈ ವೇಳೆಗೆ ನಾನು ಮುಂಬಯಿಯಲ್ಲಿ, ಒಂದು ಖಾಸಗಿ ಕಂಪೆನಿಯಲ್ಲಿ ಲಾಯರ್‌ ಮತ್ತು ಕಂಪೆನಿ ಸೆಕ್ರೆಟರಿ ಯಾಗಿ ಕೆಲಸ ಮಾಡ್ತಿದ್ದೆ. ಬಾಲ್ಯದಲ್ಲಿ ವಾಯುದಳದ ಸಿಬಂದಿಯ ಆ ಗತ್ತು, ನಿಲುವು, ಅವರ ಡ್ರೆಸ್‌ ನನ್ನನ್ನು ವಿಪರೀತ ಸೆಳೆದಿತ್ತು. ವಾಯುದಳದಲ್ಲಿ ಆಫೀಸರ್‌ ಆಗಬೇಕು ಅಂತ ಆಸೆಯಿತ್ತು. ಡಿಗ್ರಿ ಮುಗಿಸುವ ಹೊತ್ತಿಗೆ ನನ್ನ ಆಯ್ಕೆ ಬೇರೆಯಾಗಿತ್ತು. ಪ್ರಸಾದ್‌ ಪ್ರೊಪೋಸ್‌ ಮಾಡಿದಾಗ ಇದೆಲ್ಲ ನೆನಪಾಗಿ- “ಆರ್ಮಿ ಆಫೀಸರ್‌ ಆಗ ಬೇಕಿದ್ದವಳು, ಆರ್ಮಿ ಆಫೀಸರ್‌ನ ಹೆಂಡತಿ ಆಗ್ತಾ ಇದ್ದೇನೆ’ ಎಂದು ಸಮಾಧಾನ ಮಾಡಿಕೊಂಡೆ.

ನಾವಿಬ್ಬರೂ ಪರಸ್ಪರ ಇಷ್ಟಪಟ್ಟಿ ದ್ದೇವೆ, ಮದುವೆ ಆಗ್ತೀವೆ ಎಂದು ತಿಳಿದಾಗ, ಪ್ರಸಾದ್‌ ಅವರ ತಂದೆ ನನ್ನನ್ನು ಕರೆದು ಹೇಳಿದರು: “ನನ್ನ ಮಗ ಸೇನೆಯಲ್ಲಿ ಇದ್ದಾನೆ. ಅವನಿಗೆ ಯಾವಾಗ ಏನಾಗ್ತದೋ ಹೇಳ್ಳೋಕಾಗಲ್ಲ. ಮದುವೆಗೆ ಒಪ್ಪುವ ಮುನ್ನ ಇದನ್ನು ಅರ್ಥ ಮಾಡಿಕೋ’ ಅಂದರು. ಅನಂತರದ ಕೆಲವೇ ದಿನಗಳಲ್ಲಿ(2015) ನಮ್ಮ ಮದುವೆಯಾಯಿತು.
ಬಿಹಾರ್‌ ರೆಜಿಮೆಂಟ್‌ನ 7ನೇ ಬೆಟಾಲಿಯನ್‌ನಲ್ಲಿ ಮೇಜರ್‌ ಆಗಿದ್ದ ಪ್ರಸಾದ್‌, ಅರುಣಾಚಲ ಪ್ರದೇಶದ ತವಾಂಗ್‌ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ನಮ್ಮಿಬ್ಬರ ಸ್ವಭಾವದಲ್ಲಿ ಭಿನ್ನತೆಯಿತ್ತು. ನಾನೋ ಮಾತಿನ ಮಲ್ಲಿ. ಅವರು ಮಹಾ ಮೌನಿ. ಪ್ರತಿಕ್ಷಣವನ್ನೂ ಎಂಜಾಯ್‌ ಮಾಡಬೇಕು ಅಂತ ನಾನು ಬಯಸ್ತಿದ್ದೆ. ಹಾಗಾಗಿಯೇ ಬರೀ ಎರಡು ವರ್ಷದ ಅವಧಿ ಯಲ್ಲಿ ಪ್ರಸಾದ್‌ ಅವರ 32 ಸಾವಿರಕ್ಕೂ ಹೆಚ್ಚು ಫೋಟೋ ತೆಗೆದಿದ್ದೆ. ಅವರ ವಿವಿಧ ಮೂಡ್‌ನ‌ ಚಿತ್ರಗಳ ವೀಡಿಯೋ ಮಾಡಿಕೊಂಡಿದ್ದೆ. ಅಷ್ಟೇ ಅಲ್ಲ, ಅವರೊಂದಿಗಿನ ಫೋನ್‌ ಸಂಭಾಷಣೆಯನ್ನೆಲ್ಲ ರೆಕಾರ್ಡ್‌ ಮಾಡಿಕೊಂಡಿದ್ದೆ.

ನಿವೃತ್ತಿಯ ಅನಂತರ ಹುಟ್ಟೂರಿನಲ್ಲಿ ಮಿಲಿಟರಿ ಅಕಾಡೆಮಿ ಆರಂಭಿಸ ಬೇಕು. ಸೇನೆ ಸೇರುವವರಿಗೆ ಅಲ್ಲಿ ತರಬೇತಿ ನೀಡಬೇಕು, ಆ ಮೂಲಕವೂ ದೇಶ ಸೇವೆ ಮಾಡಬೇಕು ಎಂಬ ಆಸೆ ಅವರಿಗಿತ್ತು. ರಜೆಗೆಂದು ಬಂದಾಗ, ಕರ್ತವ್ಯದ ಮಧ್ಯೆ ಬಿಡುವು ಮಾಡಿಕೊಂಡು ಫೋನ್‌ ಮಾಡಿದಾಗ ತಮ್ಮ ಕನಸು ಹೇಳಿಕೊಳ್ಳುತ್ತಿದ್ದರು. ಅವರ ಮಾತುಗಳನ್ನೆಲ್ಲ ನೋಟ್ಸ್‌, ರೆಕಾರ್ಡ್‌ ಮಾಡಿ ಇಟ್ಟುಕೊಂಡು, ಭವಿಷ್ಯದಲ್ಲಿ ನಾವು ಏನೇನೆಲ್ಲ ಮಾಡಬೇಕು, ಹೇಗೆಲ್ಲ ಬದುಕಬೇಕು ಎಂದೆಲ್ಲ ಅಂದಾಜು ಮಾಡಿಕೊಂಡು ಸಂಭ್ರಮಿಸುತ್ತಿ ¨ªಾಗಲೇ 2017ರ ಡಿಸೆಂಬರ್‌ 30ರಂದು, ಎದೆಯೊಡೆದು ಹೋಗು ವಂಥ ಸುದ್ದಿ ಬಂತು. ನನ್ನ ಸರ್ವಸ್ವವೂ ಆಗಿದ್ದ ಪ್ರಸಾದ್‌, ಕರ್ತವ್ಯ ನಿರ್ವ ಹಣೆಯ ಪ್ರದೇಶದಲ್ಲಿ ಅಗ್ನಿ ಆಕಸ್ಮಿಕದಲ್ಲಿ ನಿಧನರಾಗಿದ್ದರು!
ಈ ವೇಳೆಗೆ ನಮ್ಮ ಮದುವೆಯಾಗಿ ಕೇವಲ 2 ವರ್ಷ 10 ತಿಂಗಳು 15 ದಿನಗಳು ಕಳೆದಿದ್ದವು! ಅದರಲ್ಲಿ ನಾನು- ಪ್ರಸಾದ್‌ ಜತೆಗಿದ್ದುದು ಬರೀ ಒಂದು ವರ್ಷ.

Advertisement

ಪ್ರಸಾದ್‌ ನನ್ನ ಜತೆಗಿಲ್ಲ ಅಂದುಕೊಂಡಾಗ ಅದುವರೆಗೂ ನಾನು ತೆಗೆದಿದ್ದ ಫೋಟೋ, ವೀಡಿಯೋ, ಆಡಿಯೋ ರೆಕಾರ್ಡ್‌ಗಳು ಪದೇ ಪದೆ ನೆನಪಿಗೆ ಬರ ತೊಡಗಿದವು. ಪ್ರಸಾದ್‌ ಹೆಚ್ಚು ದಿನ ನನ್ನ ಜತೆಗಿರುವುದಿಲ್ಲ ಎಂದು ನನ್ನ ಮನಸ್ಸಿಗೆ ಮೊದಲೇ ಗೊತ್ತಿತ್ತಾ? ಆ ಕಾರಣದಿಂದಲೇ ಅವರ ಜತೆಗಿನ ಪ್ರತಿಕ್ಷಣವನ್ನೂ ಹಲವು ಬಗೆಯಲ್ಲಿ ಸೆರೆಹಿಡಿಯಲು ಮನಸ್ಸು ಮುಂದಾಯಿತಾ ಎಂದೂ ಅನ್ನಿಸಿತು.

ದಿನ ಕಳೆದಂತೆ ಮುಂದಿನ ದಾರಿ ಯಾವುದು?ಎಂದು ಸ್ವಗತದಲ್ಲಿ ಕೇಳಿಕೊಂಡಾಗ, ಪ್ರಸಾದ್‌ಗೆ ಖುಷಿಯಾಗುವಂಥ ಕೆಲಸ ಮಾಡಬೇಕು ಎಂದು ಒಳಮನಸ್ಸು ಪಿಸುಗುಟ್ಟಿತು. “ನಾನೂ ಸೇನೆ ಸೇರಬಾರದೇಕೆ? ದೇಶ ಸೇವೆಯ ಮೂಲಕವೇ ಪ್ರಸಾದ್‌ಗೆ ಗೌರವ ಸಲ್ಲಿಸಬಾರದೇಕೆ?’ ಅನ್ನಿಸಿತು. ನಾನು ತಡಮಾಡಲಿಲ್ಲ. ವಿಧವೆಯರು ಸೇನೆಗೆ ಸೇರಲು ಏನೇನು ಅರ್ಹತೆ ಹೊಂದಿರಬೇಕು ಎಂದು ತಿಳಿದುಕೊಂಡೆ. ಈಗಿರುವ ಕೆಲಸ ಬಿಟ್ಟು ಶ್ರದ್ಧೆಯಿಂದ ಓದಲು, ಸತತ ವ್ಯಾಯಾಮದಿಂದ ಫಿಟ್ನೆಸ್ ಕಾಪಾಡಿಕೊಳ್ಳಲು ಮಾನಸಿಕವಾಗಿ ಸಿದ್ಧಳಾದೆ. ಅನಂತರ ಎರಡೂ ಕುಟುಂಬದವರಿಗೆ ವಿಷಯ ತಿಳಿಸಿದೆ.

ನನ್ನ ನಿರ್ಧಾರಕ್ಕೆ ಅಪ್ಪ-ಮಾವ, ಎರಡೂ ಕಡೆಯ ಬಂಧು ಗಳಿಂದ ಒಪ್ಪಿಗೆ ಸಿಕ್ಕಿತು. ಆದರೆ, ಅಮ್ಮ ಮತ್ತು ಅತ್ತೆಯಿಂದ ಭಾರೀ ವಿರೋಧ ಬಂತು. ಅನಂತರ ಅವರನ್ನೂ ಒಪ್ಪಿಸಿದೆ.
ಭೋಪಾಲ್‌ನಲ್ಲಿ ಪರೀಕ್ಷೆ ಬರೆಯಲು ಹೋದಾಗ ಒಂದು ಸ್ವಾರಸ್ಯ ಜರಗಿತು. ಸೇನೆ ಸೇರಲು ಪರೀಕ್ಷೆ ಬರೆಯುವವರಿಗೆ ಒಂದು ನಂಬರ್‌ ಕೊಡಲಾಗುತ್ತದೆ. ನನಗೆ ಸಿಕ್ಕಿದ ನಂಬರ್‌-28. ನಂಬರ್‌ ನೋಡುತ್ತಿದ್ದಂತೆ- ಸಂತೋಷ-ಸಂಕಟ ಒಟ್ಟಿಗೇ ಆಯಿತು. ಕಾರಣ, ಸೇನೆಗೆ ಸೇರುವಾಗ ಪ್ರಸಾದ್‌ಗೆ ಸಿಕ್ಕಿದ್ದ ನಂಬರ್‌ ಕೂಡ 28 ಆಗಿತ್ತು. ಅದನ್ನೆಲ್ಲ ಅವರು ಹೇಳಿದ್ದರು. ಪ್ರಸಾದ್‌ ನನ್ನ ಜತೆಗೇ ಇದ್ದಾರೆ ಎಂಬ ಸಂಭ್ರಮದಲ್ಲೇ ಪರೀಕ್ಷೆ ಬರೆದೆ. ಖಾಲಿಯಿದ್ದುದು ಒಂದೇ ಹುದ್ದೆ. ಅದಕ್ಕೆ ಮೆರಿಟ್‌ನಲ್ಲಿ ಆಯ್ಕೆಯಾದೆ.

ಸೇನೆಗೆ ಸೇರಿದಾಗ ನನಗೆ 32 ವರ್ಷ. ಆ ವಯಸ್ಸಿನಲ್ಲಿ ಫಿಟೆ°ಸ್‌ ಕಾಪಾಡಿಕೊಳ್ಳುವುದು ಕಷ್ಟ. ಈ ಸವಾಲನ್ನು ಎದುರಿಸುವುದು ಹೇಗೆ ಎಂದು ನಾನು ಯೋಚಿಸುತ್ತಿದ್ದಾಗಲೇ, ಬಿಹಾರ್‌ ರೆಜಿಮೆಂಟ್‌ನ ಹಿರಿಯ ಅಧಿಕಾರಿಗಳು, ಪ್ರಸಾದ್‌ ಅವರ ಸಹೋದ್ಯೋಗಿಗಳು ನನ್ನ ನೆರ ವಿಗೆ ಬಂದರು. ಟ್ರೀಟ್ ಕೊಟ್ಟರು. “ಧೈರ್ಯವಾಗಿ ಮುನ್ನುಗ್ಗಿ, ನಾವೆಲ್ಲರೂ ನಿಮ್ಮ ಜತೆಗಿದ್ದೇವೆ. ಮಿಲಿಟರಿ ಯೂನಿಫಾರ್ಮ್ ರೂಪದಲ್ಲೇ ಪ್ರಸಾದ್‌ ನಿಮ್ಮ ಜತೆಗಿದ್ದಾರೆ…’ ಎಂದೆಲ್ಲ ಹುರಿದುಂಬಿಸಿದರು. ಪರಿ ಣಾಮ; ತರಬೇತಿಯನ್ನು ಯಶಸ್ವಿಯಾಗಿ ಮುಗಿ ಸಿದೆ. ಈಗ ಚೆನ್ನೈಯಲ್ಲಿ ಲೆಫ್ಟಿನೆಂಟ್‌ ಹುದ್ದೆಯಲ್ಲಿ ಇದ್ದೇನೆ.

ನಿಮ್ಮ ಭವಿಷ್ಯದ ಬದುಕಿನ ಬಗ್ಗೆ ಏನೂ ಹೇಳಲಿಲ್ಲವಲ್ಲ ಅಂತ ಯಾರಾದರೂ ಕೇಳಿದರೆ ಅದಕ್ಕೆ ನನ್ನ ಉತ್ತರವಿಷ್ಟೆ: “ಈ ಕ್ಷಣಕ್ಕೆ ನನಗೆ ಮದುವೆ ಬೇಕು ಅನ್ನಿಸಿಲ್ಲ. ಅತ್ತೆ-ಮಾವ ಮತ್ತು ಹೆತ್ತವರೊಂದಿಗೆ ಖುಷಿಯಿಂದ ಇದ್ದೇನೆ. ಮುಂದೊಮ್ಮೆ ಮದುವೆ ಆಗಬೇಕು ಅನ್ನಿಸಿದರೆ, ಅವತ್ತಿನ ಸಂದರ್ಭಕ್ಕೆ ಸೂಕ್ತ ಅನ್ನಿಸುವ ನಿರ್ಧಾರ ತಗೊಳೆ¤àನೆ. ವಿಧವೆ ಕೂಡ ಮರುಮದುವೆ ಯಾಗಿ ಖುಷಿಯಿಂದ ಬದುಕಲಿ ಅಂತಾನೇ ನಾನು ಆಸೆ ಪಡ್ತೇನೆ. ಪ್ರತೀ ಹೆಣ್ಣು ಮಗುವೂ ಆರ್ಥಿಕವಾಗಿ ಸ್ವಾವಲಂಬಿ ಯಾಗ ಬೇಕು. ಸ್ವತಂತ್ರವಾಗಿ ಬದುಕಲು, ಯೋಚಿಸಲು ಕಲಿಯಬೇಕು ಅಂತ ಹೇಳ್ಳೋಕೆ ಇಷ್ಟಪಡ್ತೇನೆ’- ಎನ್ನುವಲ್ಲಿಗೆ ಗೌರಿ ಮಹಾಧಿಕ್‌ ಅವರ ಮಾತು ಮುಗಿಯುತ್ತದೆ. ಗಂಡನ ಆಶಯವನ್ನು ತಾನೂ ಮುಂದು ವರಿಸುತ್ತಿರುವ ಈ ದಿಟ್ಟೆಗೆ ಗೌರವದಿಂದ ಸೆಲ್ಯೂಟ್‌ ಹೊಡೆಯುವುದಷ್ಟೇ ನಮ್ಮ ಕೆಲಸ. ಗೌರಿ ಅವರಿಗೆ ಅಭಿನಂದನೆ ಹೇಳಲು – parx94@yahoo.com

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next