Advertisement

ಸೇನಾ ಪಡೆಗಳ ಆಮೂಲಾಗ್ರ ಸುಧಾರಣೆಗೆ ಮುನ್ನುಡಿ

10:08 PM Sep 15, 2021 | Team Udayavani |

ಭಾರತೀಯ ಸೇನಾಪಡೆಗಳ ಆಡಳಿತ ಸುಧಾರಣೆ ಮತ್ತು ಇಂದಿನ ಆಧುನಿಕ ಸವಾಲುಗಳಿಗೆ ತಕ್ಕಂತೆ ಸೇನಾ ಕಾರ್ಯತಂತ್ರಗಳ ಮರುರೂಪಣೆ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುಂದಡಿ ಇಟ್ಟಿರುವುದು ಶ್ಲಾಘನೀಯ. ಭಾರತೀಯ ಸೇನಾ ಪಡೆಗಳನ್ನು ಸ್ವಾವಲಂಬಿಯನ್ನಾಗಿಸಲು ಸರಕಾರ ಕಳೆದ ಕೆಲವೊಂದು ವರ್ಷಗಳಿಂದೀಚೆಗೆ ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದೆ. ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ನಿರಂತರ ಆವಿಷ್ಕಾರಗಳಿಂದಾಗಿ ಶತ್ರು ರಾಷ್ಟ್ರಗಳು ಆಧುನಿಕ ಸಮರ ತಂತ್ರವನ್ನು ಅನುಸರಿಸತೊಡಗಿರುವುದರಿಂದ ಇದಕ್ಕೆ ಸಮರ್ಥ ಮತ್ತು ದಿಟ್ಟ ಪ್ರತ್ಯುತ್ತರವನ್ನು ನೀಡಲು ಭಾರತೀಯ ಸೇನೆ ಸರ್ವಸನ್ನದ್ಧವಾಗಬೇಕಿರುವುದು ಇಂದಿನ ಅನಿವಾರ್ಯತೆ ಕೂಡ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ನಲ್ಲಿ ನಡೆದಿದ್ದ ಸೇನಾ ಪಡೆಗಳ ಕಂಬೈನ್ಡ್ ಕಮಾಂಡರ್ ಕಾನ್ಫರೆನ್ಸ್‌ನಲ್ಲಿ ಈ ಬಗೆಗೆ ಪ್ರಸ್ತಾವಿಸಿದ್ದರಲ್ಲದೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದ್ದರು. ಪ್ರಧಾನಿಯವರ ಆಶಯ ಮತ್ತು ಸಲಹೆಗಳನ್ನು ಅನುಷ್ಠಾನಗೊಳಿಸಲು ದೇಶದ ರಕ್ಷಣ ಪಡೆಗಳ ಮುಖ್ಯಸ್ಥ ಜ|ಬಿಪಿನ್‌ ರಾವತ್‌ ಅವರು ಕಾರ್ಯೋನ್ಮುಖರಾಗಿದ್ದು ಕಾರ್ಯ ಪಡೆಯೊಂದನ್ನು ರಚಿಸಿ ಚರ್ಚೆ ನಡೆಸಿದ್ದರು. ಸೇನಾ ಪಡೆಗಳ ಸುಧಾರಣೆಗಾಗಿ ಕಾರ್ಯಪಡೆ ವರದಿಯನ್ನು ಸಿದ್ಧಪಡಿಸಿದ್ದು ಈ ವರದಿಯ ಕುರಿತಂತೆ ಸದ್ಯದಲ್ಲಿಯೇ ಇನ್ನೊಂದು ಸುತ್ತಿನ ಮಹತ್ವದ ಮಾತುಕತೆ ನಡೆಯಲಿದೆ. ಇದಾದ ಬಳಿಕ ಈ ಕಾರ್ಯಯೋಜನೆಯನ್ನು ಅನುಷ್ಠಾನಗೊಳಿಸಲು ಚಿಂತಿಸಲಾಗಿದೆ.

ಶತ್ರು ರಾಷ್ಟ್ರಗಳು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ದೇಶದ ವಿರುದ್ಧ ಕಾರ್ಯತಂತ್ರ ರೂಪಿಸಿ ದಾಳಿಗೆ ಸಂಚು ನಡೆಸುತ್ತಿರುವುದು ಕಳೆದ ಕೆಲವು ತಿಂಗಳುಗಳಿಂದೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಬೆಳವಣಿಗೆಗಳು ದೃಢೀಕರಿಸಿವೆ. ಅಷ್ಟು ಮಾತ್ರವಲ್ಲದೆ ಈ ಅತ್ಯಾಧುನಿಕ ಮಾದರಿಗಳನ್ನು ಭಯೋತ್ಪಾದಕರು ಅನುಸರಿಸತೊಡಗಿರುವ ಹಿನ್ನೆಲೆಯಲ್ಲಿ ಸಂಪರ್ಕ ರಹಿತ ಯುದ್ಧತಂತ್ರಗಳ ಸವಾಲುಗಳನ್ನು ಎದುರಿಸಲು ಸಿದ್ಧ ಮಾದರಿಯನ್ನು ರೂಪಿಸಲು ಸೇನೆ ಮುಂದಾಗಿದೆ. ದೇಶದ ಗಡಿಯಲ್ಲಿ ನಿರಂತರವಾಗಿ ಮೊಂಡಾಟ ಪ್ರದರ್ಶಿಸುತ್ತಲೇ ಬಂದಿರುವ ನೆರೆಯ ಪಾಕಿಸ್ಥಾನ ಮತ್ತು ಚೀನ ಇಂತಹ ಛಾಯಾ ಸಮರಗಳಿಗೆ ಶರಣಾಗಿರುವುದು ಮತ್ತು ಡ್ರೋನ್‌ ಮತ್ತಿತರ ಅತ್ಯಾಧುನಿಕ ಯುದ್ಧ ತಂತ್ರಗಳನ್ನು ಉಗ್ರರೂ ಅನುಸರಿಸ ತೊಡಗಿ ರುವುದರಿಂದ ಈ ಎಲ್ಲ ಕುತಂತ್ರಗಳಿಗೆ ದಿಟ್ಟ ಪ್ರತ್ಯುತ್ತರ ನೀಡಲು ಸೇನಾ ಪಡೆ ಗಳನ್ನು ಸಜ್ಜುಗೊಳಿಸಲು ಕೆಲವೊಂದು ಮಹತ್ತರವಾದ ಕಾರ್ಯ ತಂತ್ರಗಳನ್ನು ಈ ಯೋಜನೆ ಒಳಗೊಂಡಿದೆ.

ಇದರ ಜತೆಯಲ್ಲಿ ಸೈನಿಕರು ಮತ್ತು ಅಧಿಕಾರಿಗಳ ನಡುವಣ ಸಂವಹನ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಮತ್ತು ಸೇನೆಯಲ್ಲಿ ಸ್ಥಳೀಯ ಭಾಷೆ ಗಳಲ್ಲಿ ಸಂವಹನ ನಡೆಸಲು ಅವಕಾಶ ಕಲ್ಪಿಸಿಕೊಡಲು ಗಂಭೀರ ಚಿಂತನೆ ನಡೆದಿದೆ. ಸೈಬರ್‌ ಕಳ್ಳತನ, ರಕ್ಷಣೆ, ರಾಜತಾಂತ್ರಿಕ ಸಹಿತ ಗೌಪ್ಯ ಮತ್ತು ಕೆಲ ವೊಂದು ಪ್ರಮುಖ ಮಾಹಿತಿಗಳ ಸೋರಿಕೆಯಂಥ ಅಪರಾಧ ಕ್ಷೇತ್ರದಲ್ಲಿನ ಆಧುನಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಯೋಧರು ಮತ್ತು ರಕ್ಷಣ  ಸಿಬಂದಿಗೆ ಅಗತ್ಯ ತರಬೇತಿ ಮತ್ತು ಕೌಶಲಗಳನ್ನು ಒದಗಿಸ ಲಾಗುವುದು. ಇಂದಿನ ಮೊಬೈಲ್‌ ಯುಗದಲ್ಲಿ ಜಗತ್ತೇ ನಮ್ಮ ಅಂಗೈ ಯಲ್ಲಿ ರುವಾಗ ಇಂಥ ಸಾಧ್ಯತೆಗಳು ಅಧಿಕವಾಗಿರುವುದರಿಂದ ರಕ್ಷಣ ಇಲಾಖೆ ಸೈಬರ್‌ ಸುರಕ್ಷೆಯತ್ತ ವಿಶೇಷ ಆಸ್ಥೆ ವಹಿಸಿದೆ. ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಈ ಕ್ಷೇತ್ರಕ್ಕೆ ಇನ್ನಷ್ಟು ಹೆಚ್ಚಿನ ಉತ್ತೇಜನ ನೀಡುವ ಆಶಯವನ್ನೂ ಈ ಯೋಜನೆ ಒಳಗೊಂಡಿದೆ.

ಹೀಗೆ ಸೇನೆಯ ಒಟ್ಟಾರೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆಗಳನ್ನು ತರಲು ರಕ್ಷಣ ಇಲಾಖೆ ಮುಂದಾಗಿದೆ. ವರ್ತಮಾನದ ಪರಿಸ್ಥಿತಿಯಲ್ಲಿ ಇದು ದೇಶದ ಭದ್ರತೆ, ಸಾರ್ವಭೌಮತೆಯ ರಕ್ಷಣೆಯ ದೃಷ್ಟಿಯಿಂದ ದಿಟ್ಟ ಮತ್ತು ಪರಿಣಾಮಕಾರಿ ನಡೆ ಎಂಬುದು ನಿಸ್ಸಂದೇಹ.

Advertisement
Advertisement

Udayavani is now on Telegram. Click here to join our channel and stay updated with the latest news.

Next