Advertisement

ಪರ್ಲ್ ಹಾರ್ಬರ್ ಗುಂಡಿನ ದಾಳಿ: ಭಾರತೀಯ ವಾಯುಪಡೆ ಮುಖ್ಯಸ್ಥ ಭದೌರಿಯಾ ಸೇಫ್

10:01 AM Dec 06, 2019 | Hari Prasad |

ಹೊನಲುಲು: ಹವಾಯಿ ದ್ವೀಪದಲ್ಲಿರುವ ಅಮೆರಿಕಾದ ಸೇನಾ ನೆಲೆ ಪರ್ಲ್ ಹಾರ್ಬರ್ ನಲ್ಲಿ ಅಮೆರಿಕಾ ನೌಕಾ ದಳದ ನಾವಿಕನೊಬ್ಬ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟು ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಸೇನಾ ಯೋಧರಿದ್ದ ಮೂರು ಕಡೆಗಳಲ್ಲಿ ಆರೋಪಿಯು ದಾಳಿ ಗುಂಡಿನ ದಾಳಿ ನಡೆಸಿದ ಬಳಿಕ ಆತ ತನ್ನನ್ನು ತಾನು ಶೂಟ್ ಮಾಡಿಕೊಂಡಿರುವುದಾಗಿ ಯುಎಸ್ ಮಿಲಿಟರಿ ಅಧಿಕಾರಿಗಳು ದೃಢಪಡಿಸಿದ್ದಾರೆ.

Advertisement

ಈ ಘಟನೆಯಲ್ಲಿ ಭಾರತೀಯ ವಾಯುಪಡೆಯ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಸುರಕ್ಷಿತವಾಗಿರುವುದಾಗಿ ಭಾರತೀಯ ವಾಯುಪಡೆಯ ಮೂಲಗಳು ಖಚಿತಪಡಿಸಿವೆ. ಅಮೆರಿಕಾದ ಪೆಸಿಫಿಕ್ ಸಮುದ್ರ ರಾಜ್ಯವಾಗಿರುವ ಹವಾಯಿಯಲ್ಲಿರುವ ಐತಿಹಾಸಿಕ ಪರ್ಲ್ ಹಾರ್ಬರ್ – ಹಿಕ್ಯಾಮ್ ಜಂಟಿ ಸೇನಾ ನೆಲೆಯಲ್ಲಿ ಪೆಸಿಫಿಕ್ ಸಮುದ್ರ ತೀರದ 20 ರಾಷ್ಟ್ರಗಳ ವಾಯು ಸೇನಾ ಮುಖ್ಯಸ್ಥರ ಸಮಾವೇಶವೊಂದರಲ್ಲಿ ಭಾಗವಹಿಸುವ ಉದ್ದೇಶದಿಂದ ಭದೌರಿಯಾ ಅವರು ತೆರಳಿದ್ದಾರೆ.

ಈ ಗುಂಡಿನ ದಾಳಿ ಘಟನೆಯ ಬಳಿಕ ಭದೌರಿಯಾ ಮತ್ತು ಅವರ ತಂಡದವರು ಸುರಕ್ಷಿತವಾಗಿದ್ದಾರೆ ಎಂದು ಭಾರತೀಯ ವಾಯುಪಡೆಯ ವಕ್ತಾರ ಗ್ರೂಪ್ ಕ್ಯಾಪ್ಟನ್ ಅನುಪಮ್ ಬ್ಯಾನರ್ಜಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ಭದೌರಿಯಾ ಮತ್ತು ಅವರ ತಂಡವು ಪರ್ಲ್ ಹಾರ್ಬರ್ ನಲ್ಲಿರುವ ಯು.ಎಸ್. ವಾಯುನೆಲೆಯಲ್ಲಿದ್ದಾರೆ ಮತ್ತು ಈ ಗುಂಡಿನ ದಾಳಿ ಘಟನೆಯು ಜಂಟಿ ವಾಯುನೆಲೆಯ ನೌಕಾನೆಲೆ ಪ್ರದೇಶದಲ್ಲಿ ನಡೆದಿದೆ ಮತ್ತು ಈ ಎರಡೂ ಪ್ರದೇಶಗಳು ದೂರದಲ್ಲಿವೆ ಎಂಬ ಮಾಹಿತಿಯೂ ಇದೀಗ ಲಭಿಸಿದೆ.

ನೌಕಾ ನೆಲೆಯಲ್ಲಿ ಗುಂಡಿನ ದಾಳಿ ನಡೆದ ಬಳಿಕ ಸುಮಾರು ಎರಡು ಗಂಟೆಗಳವರೆಗೆ ಈ ವಾಯುನೆಲೆಯನ್ನು ಮುಚ್ಚಲಾಗಿತ್ತು ಮತ್ತು ಮುನ್ನೆಚ್ಚರಿಕಾ ಕ್ರಮವಾಗಿ ವಾಯುನೆಲೆಯ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.

Advertisement

ಈ ಜಂಟಿ ಸೇನಾ ನೆಲೆ ಹವಾಯಿ ದ್ವೀಪದ ರಾಜಧಾನಿ ಹೊನಲುಲುವಿನಿಂದ ಹದಿಮೂರು ಕಿಲೋಮೀಟರ್ ಗಳಷ್ಟು ದೂರದಲ್ಲಿದೆ. ಪರ್ಲ್ ಹಾರ್ಬರ್ ನೌಕಾ ನೆಲೆ ಮತ್ತು ಹಿಕ್ಯಾಮ್ ವಾಯುನೆಲೆಯನ್ನು 2010ರಲ್ಲಿ ಜಂಟಿ ಸೇನಾ ನೆಲೆಗಳನ್ನಾಗಿ ವಿಲೀನಗೊಳಿಸಿ ಪರ್ಲ್ ಹಾರ್ಬರ್ – ಹಿಕ್ಯಾಮ್ ಸೇನಾ ನೆಲೆಗಳನ್ನಾಗಿ ರಚಿಸಲಾಗಿತ್ತು.

1941ರಲ್ಲಿ ಜಪಾನ್ ಯುದ್ಧ ವಿಮಾನಗಳು ವಾಯುದಾಳಿ ನಡೆಸಿ ಪರ್ಲ್ ಹಾರ್ಬರ್ ನಲ್ಲಿದ್ದ ಯುಎಸ್ ಬಾಂಬರ್ ಗಳನ್ನು ನಾಶಪಡಿಸಿದ್ದವು. ಇದರಿಂದ ಕೆರಳಿದ ಅಮೆರಿಕಾ ಜಪಾನ್ ಮೇಲೆ ಯುದ್ಧ ಸಾರುವ ಮೂಲಕ ದ್ವಿತೀಯ ವಿಶ್ವಯುದ್ಧಕ್ಕೆ ಅಧಿಕೃತವಾಗಿ ಪ್ರವೇಶಿಸಿತ್ತು. ಜಪಾನ್ ಆಕ್ರಮಣದ 78ನೇ ವರ್ಷಾಚರಣೆಯ ಒಂದು ದಿನ ಮುಂಚಿತವಾಗಿ ಈ ಜಂಟಿ ಸೇನಾ ನೆಲೆಯಲ್ಲಿ ಈ ಗುಂಡಿನ ದಾಳಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next