ನವೀ ಮುಂಬಯಿ: ಆಸ್ಟ್ರೇಲಿಯ ವಿರುದ್ಧದ ಮೊದಲ ಟಿ20 ಪಂದ್ಯ ದಲ್ಲಿ ದೊಡ್ಡ ಮೊತ್ತ ಪೇರಿಸಿಯೂ ಭಾರತದ ವನಿತೆಯರು 9 ವಿಕೆಟ್‌ಗಳ ಸೋಲನುಭವಿಸಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ 5 ವಿಕೆಟಿಗೆ 172 ರನ್ ಗಳಿಸಿದರೆ, ಆಸ್ಟ್ರೇಲಿಯ 18.1 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 173 ರನ್ ಬಾರಿಸಿತು.ಆರಂಭಿಕ ಆಟಗಾರ್ತಿ ಬೆತ್ ಮೂನಿ 89 ರನ್ ಹಾಗೂ ತಹ್ಲಿಯಾ ಮೆಕ್‌ಗ್ರಾತ್ 40 ರನ್ ಮಾಡಿ ಅಜೇಯರಾಗಿ ಉಳಿದರು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಕಾಂಗರೂ ಬೌಲಿಂಗ್ ದಾಳಿಯನ್ನು ದಿಟ್ಟ ರೀತಿಯಲ್ಲೇ ನಿಭಾಯಿಸಿ ದೊಡ್ಡ ಮೊತ್ತವನ್ನು ಕಲೆಹಾಕಿತು. ಶಫಾಲಿ ವರ್ಮ 10 ಎಸೆತಗಳಿಂದ 21 ರನ್ (2 ಬೌಂಡರಿ, 2 ಸಿಕ್ಸರ್), ಸ್ಮತಿ ಮಂಧನಾ 22 ಎಸೆತಗಳಿಂದ 28 ರನ್ (5 ಬೌಂಡರಿ) ಬಾರಿಸಿ ಅಬ್ಬರಿಸಿದರು. ಜೆಮಿಮಾ ರೋಡ್ರಿಗಸ್ ಮಾತ್ರ ಖಾತೆ ತೆರೆಯಲು ವಿಫಲರಾದರು.
ನಾಯಕಿ ಹರ್ಮನ್‌ಪ್ರೀತ್ ಕೌರ್ ಮಾತ್ರ ತುಸು ನಿಧಾನಿಯಾಗಿದ್ದರು. 21 ರನ್ನಿಗೆ ಅವರು 23 ಎಸೆತ ತೆಗೆದುಕೊಂಡರು (2 ಬೌಂಡರಿ). ದೇವಿಕಾ ವೈದ್ಯ 24 ಎಸೆತಗಳಿಂದ ಅಜೇಯ 25 ರನ್ ಕೊಡುಗೆ ಸಲ್ಲಿಸಿದರು (1 ಬೌಂಡರಿ, 1 ಸಿಕ್ಸರ್).
ಕೊನೆಯಲ್ಲಿ ರಿಚಾ ಘೋಷ್ ಮತ್ತು ದೀಪ್ತಿ ಶರ್ಮ ಅಬ್ಬರಿಸಿದ್ದರಿಂದ ಭಾರತದ ಸ್ಕೋರ್ 170ರ ಗಡಿ ದಾಟಿತು. ಕೀಪರ್ ರಿಚಾ ಘೋಷ್ 20 ಎಸೆತಗಳಿಂದ 36 ರನ್ ಬಾರಿಸಿದರು (5 ಬೌಂಡರಿ, 2 ಸಿಕ್ಸರ್). ಅಂತಿಮ ಓವರ್‌ನಲ್ಲಿ ಸಿಡಿದು ನಿಂತ ದೀಪ್ತಿ ಶರ್ಮ ಸತತ 4 ಬೌಂಡರಿ ಬಾರಿಸಿ ರಂಜಿಸಿದರು. ದೀಪ್ತಿ ಗಳಿಕೆಯೂ ಅಜೇಯ 36 ರನ್ (15 ಎಸೆತ, 8 ಬೌಂಡರಿ).