ಡಂಬುಲ: ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತೀಯ ವನಿತಾ ಕ್ರಿಕೆಟ್ ತಂಡವೀಗ ಶ್ರೀಲಂಕಾದಲ್ಲಿ ಬೀಡುಬಿಟ್ಟಿದ್ದು, ತಲಾ 3 ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಯನ್ನು ಆಡಲಿದೆ. ಟಿ20 ಸರಣಿ ಡಂಬುಲದಲ್ಲಿ ನಡೆಯಲಿದ್ದು, ಗುರುವಾರ ಮೊದಲ ಮುಖಾಮುಖೀ ಏರ್ಪಡಲಿದೆ.
ಮಿಥಾಲಿ ರಾಜ್ ನಿವೃತ್ತಿ ಬಳಿಕ ಎಲ್ಲ ಮಾದರಿಗಳ ತಂಡವನ್ನು ಮುನ್ನಡೆಸಲಿರುವ ಹರ್ಮನ್ಪ್ರೀತ್ ಕೌರ್ ಪಾಲಿಗೆ ಇದೊಂದು ಸವಾಲಿನ ಸರಣಿ ಆಗುವುದರಲ್ಲಿ ಅನುಮಾನ ವಿಲ್ಲ. ಇದು 2022ರ ವನಿತಾ ವಿಶ್ವಕಪ್ ಬಳಿಕ ಭಾರತ ಆಡುತ್ತಿರುವ ಮೊದಲ ಅಂತಾರಾಷ್ಟ್ರೀಯ ಮುಖಾಮುಖೀ ಆಗಿದ್ದು, ಮುಂಬರುವ ಕಾಮನ್ವೆಲ್ತ್ ಗೇಮ್ಸ್ ಮತ್ತು ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ಗಾಗಿ ಇಲ್ಲಿಂದಲೇ ಸಿದ್ಧತೆ ಮೊದಲ್ಗೊಳ್ಳಬೇಕಿದೆ.
ಭಾರತದ ಯಶಸ್ಸಿನಲ್ಲಿ ಸ್ಮತಿ ಮಂಧನಾ, ಶಫಾಲಿ ವರ್ಮ, ದೀಪ್ತಿ ಶರ್ಮ, ಪೇಸರ್ ಪೂಜಾ ವಸ್ತ್ರಾಕರ್ ಅವರ ಫಾರ್ಮ್ ನಿರ್ಣಾಯಕವಾಗಲಿದೆ. ರ್ಯಾಂಕಿಂಗ್ನಲ್ಲಿ ಶ್ರೀಲಂಕಾಗಿಂತ ಮೇಲಿರುವ ಭಾರತ ಕೂಟದ ನೆಚ್ಚಿನ ತಂಡ ಎಂಬುದರಲ್ಲಿ ಅನುಮಾನವಿಲ್ಲ.
ಲಂಕೆಗೆ ತವರಿನ ಲಾಭ
ಆತಿಥೇಯ ಶ್ರೀಲಂಕಾ ಪಾಲಿಗೂ ಇದು ಮಹತ್ವದ ಸರಣಿ. ಕಳೆದ ಪಾಕಿಸ್ಥಾನ ಪ್ರವಾಸದ ವೇಳೆ 0-3 ವೈಟ್ವಾಶ್ ಅನುಭವಿಸಿದ್ದು, ತಂಡದ ಮನೋಸ್ಥೈರ್ಯಕ್ಕೆ ಬಹಳಷ್ಟು ಧಕ್ಕೆಯಾಗಿದೆ. ಹೀಗಾಗಿ ಚಾಮರಿ ಅತಪಟ್ಟು ಪಡೆ ಭಾರತದ ಮೇಲೆರಗಿ ತವರಿನ ಅಂಗಳದ ಲಾಭವೆತ್ತಲು ಗರಿಷ್ಠ ಪ್ರಯತ್ನ ಮಾಡುವುದರಲ್ಲಿ ಅನುಮಾನವಿಲ್ಲ.
ಸರಣಿಯ ಉಳಿದೆರಡು ಪಂದ್ಯ ಗಳು ಜೂ. 25 ಮತ್ತು 27ರಂದು ನಡೆಯಲಿವೆ. ಜುಲೈ ಒಂದರಂದು ಏಕದಿನ ಸರಣಿ ಮೊದಲ್ಗೊಳ್ಳಲಿದೆ. ಜು. 4 ಮತ್ತು 7ರಂದು ಉಳಿದೆರಡು ಪಂದ್ಯಗಳನ್ನು ಆಡಲಾಗುವುದು. ಏಕದಿನ ಸರಣಿಯ ತಾಣ ಪಲ್ಲೆಕಿಲೆ.
Related Articles
ಭಾರತ ತಂಡ
ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂಧನಾ (ಉಪನಾಯಕಿ), ಸಿಮ್ರನ್ ಬಹಾದೂರ್, ಯಾಸ್ತಿಕಾ ಭಾಟಿಯ, ರಾಜೇಶ್ವರಿ ಗಾಯಕ್ವಾಡ್, ರಿಚಾ ಘೋಷ್, ಎಸ್. ಮೇಘನಾ, ಮೇಘನಾ ಸಿಂಗ್, ಪೂನಂ ಯಾದವ್, ರೇಣುಕಾ ಸಿಂಗ್, ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮ, ದೀಪ್ತಿ ಶರ್ಮ, ಪೂಜಾ ವಸ್ತ್ರಾಕರ್, ರಾಧಾ ಯಾದವ್.
ಶ್ರೀಲಂಕಾ ತಂಡ
ಚಾಮರಿ ಅತಪಟ್ಟು (ನಾಯಕಿ), ನೀಲಾಕ್ಷಿ ಡಿ ಸಿಲ್ವ, ಕವಿಶಾ ದಿಲ್ಹಾರಿ, ವಿಶ್ಮಿ ಗುಣರತ್ನೆ, ಅಮಾ ಕಾಂಚನಾ, ಹಂಸಿಮಾ ಕರುಣಾರತ್ನೆ, ಅಶಿನಿ ಕುಲಸೂರ್ಯ, ಸುಗಂಧಿಕಾ ಕುಮಾರಿ, ಹರ್ಷಿತಾ ಮಾಧವಿ, ಹಸಿನಿ ಪೆರೆರ, ಉದೇಶಿಕಾ ಪ್ರಬೋಧನಿ, ಒಶಾದಿ ರಣಸಿಂಘೆ, ಇನೋಕಾ ರಣವೀರ, ಸತ್ಯ ಸಂದೀಪನಿ, ತಾರಿಕಾ ಸೆವ್ವಂಡಿ.