ಹೊಸದಿಲ್ಲಿ : 43 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದಿರುವ ಜಮ್ಮು ಕಾಶ್ಮೀರದ ಆವಂತಿಪೋರಾ ಉಗ್ರ ದಾಳಿಯ ಫಲಶ್ರುತಿ ಎಂಬಂತೆ ಭಾರತ ತಾನು ಪಾಕಿಸ್ಥಾನಕ್ಕೆ ಈ ಹಿಂದೆ ನೀಡಿದ್ದ ವಿಶೇಷ ಒಲುಮೆಯ ಸ್ಥಾನಮಾನವನ್ನು(Most Favoured Nation status) ಹಿಂದೆಗೆದುಕೊಂಡಿದೆ.
ಪಾಕ್ ಮೂಲದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿರುವ ಈ ಅತ್ಯಂತ ಘೋರ ಹಾಗೂ ವಿನಾಶಕಾರಿ ದಾಳಿಗಾಗಿ ಪಾಕಿಸ್ಥಾನಕ್ಕೆ ತಕ್ಕುದಾದ ಪಾಠವನ್ನು ಕಲಿಸಲು ಭಾರತ ನಿರ್ಧರಿಸಿದೆ.
ಆವಂತಿಪೋರಾ ಉಗ್ರ ದಾಳಿಯಲ್ಲಿ ಪಾಕಿಸ್ಥಾನದ ಐಎಸ್‌ಐ ಗುಪ್ತಚರ ಸಂಸ್ಥೆಯ ಕೈವಾಡ ಇರುವುದನ್ನು ಅಮೆರಿಕ ಕೂಡ ಶಂಕಿಸಿದೆ.
ಪ್ರಧಾನಿ ನರೇಂದ್ರ ಅವರ ಅಧ್ಯಕ್ಷತೆಯಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆದಿದೆ. ಈ ಸಭೆಯಲ್ಲಿ ಭಾರತದ ರಣತಂತ್ರ ಹೇಗಿರಬೇಕು ಎಂಬುದನ್ನು ಚರ್ಚಿಸಲಾಗಿದೆ. ಸಭೆಯಲ್ಲಿ ರಕ್ಷಣಾ ಸಚಿವರು, ಗೃಹ ವ್ಯವಹಾರಗಳ ಸಚಿವರು, ವಿದೇಶ ವ್ಯವಹಾರ ಸಚಿವರು, ಹಣ ಕಾಸು ಸಚಿವರು ಮತ್ತು ಸದಸ್ಯರು ಪಾಲ್ಗೊಂಡಿದ್ದಾರೆ.
ನಿನ್ನೆ ಗುರುವಾರ ಮಧ್ಯಾಹ್ನ 3.15ರ ಸುಮಾರಿಗೆ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ಜೈಶ್ ಉಗ್ರ ಸ್ಫೋಟಕ ತುಂಬಿದ್ದ ವಾಹನವನ್ನು ಸಿಆರ್‌ಪಿಎಫ್ ಯೋಧರ ವಾಹನದ ಮೇಲೆ ನುಗ್ಗಿಸಿ ಭೀಕರ ಆತ್ಮಾಹುತಿ ದಾಳಿ ನಡೆಸಿ 43 ಯೋಧರನ್ನು ಬಲಿಪಡೆದಿದ್ದ.
ಕಳೆದ ವರ್ಷ ವಷ್ಟೇ ಜೈಶ್ ಉಗ್ರ ಸಂಘಟನೆಯನ್ನು ಸೇರಿಕೊಂಡಿದ್ದ ಎನ್ನಲಾದ ಪುಲ್ವಾಮಾ ನಿವಾಸಿ ಆದಿಲ್ ಅಹ್ಮದ್ ಈ ದಾಳಿ ನಡೆಸಿದ್ದ. ಇದನ್ನು ಅನುಸರಿಸಿ ಆತನ ಆತ್ಮಾಹುತಿ ದಾಳಿಯ ವಿಡಿಯೋ ಬಿಡುಗಡೆಗೊಂಡಿದ್ದು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಇದಕ್ಕೆ ಹೊಣೆ ಹೊತ್ತಿತ್ತು.