Advertisement

ಭಾರತಕ್ಕೆ ಜಯ, ಸರಣಿ ಜೀವಂತ: ದಕ್ಷಿಣ ಆಫ್ರಿಕಾಕ್ಕೆ ಸೋಲು

10:34 PM Jun 14, 2022 | Team Udayavani |

ವಿಶಾಖಪಟ್ಟಣ: ಪ್ರವಾಸಿ ದ.ಆಫ್ರಿಕಾದೆದುರಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತಿದ್ದ ಭಾರತ, 3ನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಅಲ್ಲಿಗೆ ಸರಣಿ ಜೀವಂತವಾಗುಳಿದಿದೆ. ಒಂದು ವೇಳೆ ಇಲ್ಲಿಯೂ ಸೋತಿದ್ದರೆ, ಬಾಕಿಯೆರಡು ಪಂದ್ಯಗಳು ಕೇವಲ ಔಪಚಾರಿಕವಾಗಿರುತ್ತಿದ್ದವು.

Advertisement

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 179 ರನ್ನು ಗಳಿಸಿತು. ಇದನ್ನು ಬೆನ್ನತ್ತಿದ ದ.ಆಫ್ರಿಕಾ 19.1 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟಾಯಿತು. ಭಾರತಕ್ಕೆ 48 ರನ್‌ ಜಯ ಲಭಿಸಿತು.

ದ.ಆಫ್ರಿಕಾ ಪರ ಯಾರೂ ಅರ್ಧಶತಕ ಬಾರಿಸಲಿಲ್ಲ. ಹೆನ್ರಿಚ್‌ ಕ್ಲಾಸೆನ್‌ (29), ರೀಜಾ ಹೆಂಡ್ರಿಕ್ಸ್‌ (23), ಡ್ವೇನ್‌ ಪ್ರಿಟೋರಿಯಸ್‌ (20) ಪರವಾಗಿಲ್ಲ ಎನ್ನುವಂತೆ ಆಡಿದರು. ಭಾರತದ ಪರ ಯಜುವೇಂದ್ರ ಚಹಲ್‌, ಹರ್ಷಲ್‌ ಪಟೇಲ್‌ ಅದ್ಭುತವಾಗಿ ಬೌಲಿಂಗ್‌ ಮಾಡಿದರು. ಚಹಲ್‌ 20 ರನ್‌ ನೀಡಿ 3, ಪಟೇಲ್‌ 25 ರನ್‌ ನೀಡಿ 4 ವಿಕೆಟ್‌ ಪಡೆದರು.

ಮಿಂಚಿದ ಗಾಯಕ್ವಾಡ್‌, ಕಿಶನ್‌: ಮೊದಲು ಬ್ಯಾಟ್‌ ಮಾಡಿದ ಭಾರತದ ಪರ ಆರಂಭಿಕ ಆಟಗಾರರಾದ ಋತುರಾಜ್‌ ಗಾಯಕ್ವಾಡ್‌ ಮತ್ತು ಇಶಾನ್‌ ಕಿಶನ್‌ ಆಕರ್ಷಕ ಅರ್ಧಶತಕ ಬಾರಿಸಿದರು. ಮೊದಲ ಪಂದ್ಯದಲ್ಲಿ ಮಿಂಚಿದ್ದ ಕಿಶನ್‌ ಮತ್ತೆ ಸಿಡಿದಿದ್ದು ಇಲ್ಲಿ ಮಹತ್ವದ ಸಂಗತಿ. ಋತುರಾಜ್‌ ಗಾಯಕ್ವಾಡ್‌ ಸಾಮರ್ಥ್ಯವನ್ನು ಸಾಬೀತು ಮಾಡಿದ್ದು ಇನ್ನೊಂದು ಮಹತ್ವದ ಸಂಗತಿ. ಮೊದಲೆರಡು ಪಂದ್ಯದಲ್ಲಿ ಗಾಯಕ್ವಾಡ್‌ ನಿರೀಕ್ಷಿತ ಆಟವಾಡಿರಲಿಲ್ಲ.

ಭಾರತದ ಆರಂಭ ಭರ್ಜರಿಯಾಗಿತ್ತು.ಆರಂಭಿಕರ ಆಟವನ್ನು ಗಮನಿಸಿದಾಗ ತಂಡ ಗೆಲ್ಲಲೇಬೇಕಾದ ಈ ಪಂದ್ಯದಲ್ಲಿ 200 ಪ್ಲಸ್‌ ರನ್‌ ಪೇರಿಸಬಹುದೆಂದು ಭಾವಿಸಲಾಗಿತ್ತು. ಆದರೆ ಆರಂಭಿಕ ಜೋಡಿ ಪತನದ ಬಳಿಕ ಭಾರತ ಕುಸಿಯಿತು. ಆ ಬಳಿಕ ಶ್ರೇಯಸ್‌ ಐಯ್ಯರ್‌, ನಾಯಕ ರಿಷಭ್‌ ಪಂತ್‌, ದಿನೇಶ್‌ ಕಾರ್ತಿಕ್‌ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದರು. ಐಪಿಎಲ್‌ ಹೀರೋ ಹಾರ್ದಿಕ್‌ ಪಾಂಡ್ಯ 31 ರನ್‌ ಗಳಿಸಿ ಅಜೇಯರಾಗಿ ಉಳಿದರು.

Advertisement

ಸರಣಿಯನ್ನು ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಅನಿವಾರ್ಯತೆ ಹೊಂದಿದ್ದ ಭಾರತ, ಅದಕ್ಕೆ ಪೂರಕವಾಗಿ ಆಟ ಆರಂಭಿಸಿತು. ಮೊದಲ ವಿಕೆಟ್‌ಗೆ ಗಾಯಕ್ವಾಡ್‌ ಮತ್ತು ಕಿಶನ್‌ 10 ಓವರ್‌ಗಳಲ್ಲಿ 97 ರನ್‌ ಕೂಡಿಸಿದರು. ದಕ್ಷಿಣ ಆಫ್ರಿಕಾ ದಾಳಿಯನ್ನು ಮೆಟ್ಟಿ ನಿಂತ ಇವರಿಬ್ಬರು ಬೌಂಡರಿ ಸಿಕ್ಸರ್‌ ಬಾರಿಸಿ ರಂಜಿಸಿದರು.

ಆರಂಭಿಕ ಜೋಡಿಯನ್ನು ಕೇಶವ ಮಹಾರಾಜ್‌ ಮುರಿಯಲು ಯಶಸ್ವಿಯಾದರು. 35 ಎಸೆತ ಎದುರಿಸಿದ ಋತುರಾಜ್‌ 7 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 57 ರನ್‌ ಗಳಿಸಿದರು. ಕಿಶನ್‌ ಮೂರನೆಯವಾಗಿ ಔಟಾಗುವಾಗ 54 ರನ್‌ ಗಳಿಸಿದ್ದರು. ಅವರೂ ಕೂಡ 35 ಎಸೆತ ಎದುರಿಸಿ, 5 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದ್ದರು.
ದ.ಆಫ್ರಿಕಾ ಬೌಲರ್‌ಗಳು ಸಂಘಟಿತ ಯಶಸ್ಸು ಸಾಧಿಸಿದರು. ಡ್ವೇನ್‌ ಪ್ರಿಟೋರಿಯಸ್‌ 29 ರನ್‌ ನೀಡಿ 2 ವಿಕೆಟ್‌ ಗಳಿಸಿದರು. ಕ್ಯಾಗಿಸೊ ರಬಾಡ, ತಬ್ರೇಜ್‌ , ಕೇಶವ ಮಹಾರಾಜ್‌ ತಲಾ 1 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರು: ಭಾರತ 20 ಓವರ್‌, 179/5 (ಋತುರಾಜ್‌ ಗಾಯಕ್ವಾಡ್‌ 57, ಇಶಾನ್‌ ಕಿಶನ್‌ 54, ಡ್ವೇನ್‌ ಪ್ರಿಟೋರಿಯಸ್‌ 29ಕ್ಕೆ 2). ದ.ಆಫ್ರಿಕಾ 19.1 ಓವರ್‌ 131 (ಹೆನ್ರಿಚ್‌ ಕ್ಲಾಸೆನ್‌ 29, ಹರ್ಷಲ್‌ ಪಟೇಲ್‌ 25ಕ್ಕೆ 4, ಚಹಲ್‌ 20ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next