ಹೊಸದಿಲ್ಲಿ: ಪುಲ್ವಾಮಾ ಭೀಕರ ಉಗ್ರ ದಾಳಿಯ ಬಳಿಕ ಪರಮಾಪ್ತ ರಾಷ್ಟ್ರದ ಸ್ಥಾನಮಾನ ತೆಗೆದು ಹಾಕಿದ್ದು, ಆಮದು ಸುಂಕವನ್ನು 200 ಶೇಕಡಾ ಹೆಚ್ಚಿಸಿ ಭರ್ಜರಿ ಶಾಕ್ ನೀಡಿದ ಬೆನ್ನಲ್ಲೆ ಕೇಂದ್ರ ಸರ್ಕಾರ ಪಾಕಿಸ್ಥಾನಕ್ಕೆ ಇನ್ನೊಂದು ಶಾಕ್ ನೀಡಿದ್ದು , ನದಿ ನೀರನ್ನು ನಿಲ್ಲಿಸುವುದಾಗಿ ಹೇಳಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರ ಈ ಬಗ್ಗೆ ತಿಳಿಸಿದ್ದು, ಭಾರತದಿಂದ ಪಾಕ್‌ಗೆ ಹರಿಯುವ ನದಿ ನೀರಿನ್ನು ತಡೆಯುವುದಾಗಿ ಟ್ವೀಟ್ ಮಾಡಿದ್ದಾರೆ.
ಪೂರ್ವ ಭಾಗದಲ್ಲಿ ತಡೆಯುವ ನೀರನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ಗೆ ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ರಾವಿ ನದಿಗೆ ಈಗಾಗಲೇ ಶಾಹಾಪುರ್ -ಕಾಂಡಿಯಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದ್ದು, ಪಾಕ್‌ಗೆ ಹರಿಯುವ ನೀರನ್ನು ಇಲ್ಲಿ ತಡೆ ಹಿಡಿಯಬಹುದು ಎಂದು ಗಡ್ಕರಿ ಟ್ವೀಟ್ ಮಾಡಿದ್ದಾರೆ.
ಇಂಡಸ್ ಜಲ ಒಪ್ಪಂದದ ಪ್ರಕಾರ, ಭಾರತವು ರಾವಿ, ಬಯಾಸ್ ಮತ್ತು ಸಟ್ಲೆಜ್ ನದಿಗಳ ನೀರನ್ನು ಪಾಕಿಸ್ತಾನಕ್ಕೆ ಹರಿಯ ಬಿಡುತ್ತಿದೆ. 2016 ರಲ್ಲಿ ಉರಿ ದಾಳಿ ಬಳಿಕ ಪಾಕಿಸ್ಥಾನದ ಗಡಿಯುದ್ದಕ್ಕೂ ನದಿಯ ಹರಿವನ್ನು ತಡೆಗಟ್ಟುವ ಉದ್ದೇಶದಿಂದ ಈ ಪ್ರದೇಶದಲ್ಲಿ ನೀರಿನ ಯೋಜನೆಗಳನ್ನು ತ್ವರಿತವಾಗಿ ನಡೆಸಲು ಭಾರತ ಸರ್ಕಾರ ನಿರ್ಧರಿಸಿದೆ . ಅಂತಹ ಯೋಜನೆಗಳ ಗತಿಯನ್ನು ಹೆಚ್ಚಿಸಲು ಗಡ್ಕರಿ ಅವರ ನಿರ್ಧಾರ ಪ್ರಮುಖವಾಗಿದ್ದು, ದೀರ್ಘಾವಧಿಯಲ್ಲಿ ಪಾಕಿಸ್ತಾನವನ್ನು ಬಹಳಷ್ಟು ಸಂಕಷ್ಟಕ್ಕೆ ಸಿಲುಕಿಸಲಿದೆ ಎನ್ನಲಾಗಿದೆ.