Advertisement

ರಾಜ್‌ಕೋಟ್‌: ಟಿ20 ಸರಣಿಗೆ ರಾಜ ಯಾರು? ಅದೃಷ್ಟದ ಪಾತ್ರವೇ ನಿರ್ಣಾಯಕ

11:47 PM Jan 06, 2023 | Team Udayavani |

ರಾಜ್‌ಕೋಟ್‌: ಎರಡು ರೋಮಾಂಚಕಾರಿ ಪಂದ್ಯಗಳಿಗೆ ಸಾಕ್ಷಿಯಾದ ಭಾರತ-ಶ್ರೀಲಂಕಾ ನಡುವಿನ ಟಿ20 ಸಮರ ಕ್ಲೈಮ್ಯಾಕ್ಸ್‌ ಹಂತ ತಲುಪಿದೆ.

Advertisement

ಸರಣಿ 1-1 ಸಮಬಲದಲ್ಲಿ ನೆಲೆಸಿದ್ದು, ಶನಿವಾರ ರಾಜ್‌ಕೋಟ್‌ನಲ್ಲಿ ನಿರ್ಣಾಯಕ ಕದನ ಏರ್ಪಡಲಿದೆ. ಸರಣಿಗೆ ರಾಜ ಯಾರು ಎಂಬುದು ಈ ಪಂದ್ಯದ ಕೌತುಕ.

ಮುಂಬಯಿ ಮತ್ತು ಪುಣೆ ಪಂದ್ಯಗಳೆರಡೂ ಟಿ20 ಕ್ರಿಕೆಟಿನ ನೈಜ ರೋಮಾಂಚನವನ್ನು ತೆರೆದಿರಿಸಿದ್ದವು. ಭಾರತಕ್ಕೆ ತವರಿನ ಲಾಭವಿದ್ದರೆ, ಲಂಕೆಗೆ ಏಷ್ಯಾ ಕಪ್‌ ಚಾಂಪಿಯನ್‌ ಎಂಬ ಒತ್ತಡವಿತ್ತು. ಭಾರತದ್ದು ಯುವ ಪಡೆಯಾದರೆ, ಶ್ರೀಲಂಕಾ ಟಿ20 ಸ್ಪೆಷಲಿಸ್ಟ್‌ಗಳನ್ನೇ ಕಟ್ಟಿಕೊಂಡು ಬಂದಿತ್ತು. ಎರಡೂ ತಂಡಗಳು ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನೇ ನೀಡಿವೆ.

ಮುಂಬಯಿಯ ಮೊದಲ ಪಂದ್ಯದ ಕುರಿತು ಹೇಳುವುದಾದರೆ, ಶ್ರೀಲಂಕಾಕ್ಕೆ ಗೆಲುವಿನ ಅವಕಾಶ ಹೆಚ್ಚಿತ್ತು. ಪುಣೆಯಲ್ಲಿ ಭಾರತಕ್ಕೂ ಚಾನ್ಸ್‌ ಇತ್ತು, ಆದರೆ ಇನ್ನೂರಕ್ಕೂ ಹೆಚ್ಚು ರನ್‌ ಬಿಟ್ಟುಕೊಟ್ಟು ಸೋತಿತು. ಪವರ್‌ ಪ್ಲೇಯಲ್ಲಿ ಮರುಕಳಿಸಿದ ಘೋರ ವೈಫ‌ಲ್ಯ, ಅರ್ಷದೀಪ್‌ ಸಿಂಗ್‌ ಅವರ ಸಾಲು ಸಾಲು ನೋಬಾಲ್‌ಗ‌ಳೆಲ್ಲ ಭಾರತಕ್ಕೆ ಮುಳುವಾದವು.

ಡೆತ್‌ ಓವರ್‌ ಓಕೆ; ಪವರ್‌ ಪ್ಲೇ?
ಆದರೂ ಸೂರ್ಯಕುಮಾರ್‌ ಯಾದವ್‌ ಮತ್ತು ಅಕ್ಷರ್‌ ಪಟೇಲ್‌ ಅವರ ಅಸಾಮಾನ್ಯ ಸಾಹಸವನ್ನು ಕೊಂಡಾಡಲೇ ಬೇಕು. 10 ಓವರ್‌ ಒಳಗೆ 57ಕ್ಕೆ 4 ವಿಕೆಟ್‌ ಉರುಳಿದಾಗ ಇವರಿಬ್ಬರು ಸಿಡಿದು ನಿಂತ ರೀತಿ ಚುಟುಕು ಕ್ರಿಕೆಟಿನ ರಸದೌತಣವನ್ನೇ ಉಣಿಸಿತು. ಸೂರ್ಯಕುಮಾರ್‌ ಇನ್ನೊಂದೇ ಒಂದು ಓವರ್‌ ಕ್ರೀಸ್‌ನಲ್ಲಿದ್ದರೆ ಪಂದ್ಯದ ಚಿತ್ರಣವೇ ಬದಲಾಗುತ್ತಿತ್ತು. ಇದಕ್ಕೂ ಮಿಗಿಲಾದುದು ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಅವರ ಚೊಚ್ಚಲ ಅರ್ಧ ಶತಕದ ಆರ್ಭಟ. ಅಂಥ ಒತ್ತಡದ ಸನ್ನಿವೇಶದಲ್ಲೂ 31 ಎಸೆತಗಳಿಂದ 65 ರನ್‌ ಸಿಡಿಸಿದ್ದು ನಮ್ಮ ಅಗ್ರ ಸರದಿಯ ಬ್ಯಾಟರ್‌ಗಳಿಗೆ ಒಂದು ಪಾಠದಂತಿತ್ತು (3 ಬೌಂಡರಿ, 6 ಸಿಕ್ಸರ್‌).

Advertisement

ಈ ರೀತಿಯಾಗಿ ಎರಡೂ ಪಂದ್ಯಗಳ ಡೆತ್‌ ಓವರ್‌ಗಳಲ್ಲಿ ಭಾರತದ ಬ್ಯಾಟಿಂಗ್‌ ಚೇತೋಹಾರಿಯಾಗಿಯೇ ಇತ್ತು. ಆದರೆ ಪವರ್‌ ಪ್ಲೇ ಸಮಸ್ಯೆ ಮಾತ್ರ ಪರಿಹಾರ ಕಾಣಲೇ ಇಲ್ಲ. ಪುಣೆಯಲ್ಲಿ ಇದು ಇನ್ನಷ್ಟು ಚಿಂತಾಜನಕವಾಗಿತ್ತು. ಇಲ್ಲಿ 47 ರನ್‌ ಒಟ್ಟುಗೂಡಿತಾದರೂ ಅಗ್ರ ಕ್ರಮಾಂಕದ 4 ವಿಕೆಟ್‌ಗಳು ಉರುಳಿದ್ದು ಭಾರತಕ್ಕೆ ಮುಳುವಾಗಿ ಪರಿಣಮಿಸಿತು. ಇಶಾನ್‌ ಕಿಶನ್‌ (2), ಶುಭಮನ್‌ ಗಿಲ್‌ (5), ಮೊದಲ ಪಂದ್ಯವಾಡಿದ ರಾಹುಲ್‌ ತ್ರಿಪಾಠಿ (5) ಮತ್ತು ನಾಯಕ ಹಾರ್ದಿಕ್‌ ಪಾಂಡ್ಯ (12) ಪೆವಿಲಿಯನ್‌ ಸೇರುವ ಮೂಲಕ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಇನ್ನೂರು ಪ್ಲಸ್‌ ರನ್‌ ಚೇಸಿಂಗ್‌ ಇರುವಾಗ ತಂಡವೊಂದು ಇಂಥ ಘೋರ ಕುಸಿತ ಕಂಡರೆ ಅದಕ್ಕೆ ಉಳಿಗಾಲವಿಲ್ಲ ಎಂದೇ ಅರ್ಥ. ಆದರೂ ಯಾದವ್‌-ಪಟೇಲ್‌ ಜೋಡಿಯ ಸಾಹಸಕ್ಕೆ ಹ್ಯಾಟ್ಸಾಪ್‌ ಹೇಳಲೇಬೇಕು. ಟೀಮ್‌ ಇಂಡಿಯಾ ವೀರೋಚಿತವಾಗಿ ಸೋಲನುಭವಿಸಿತೆಂಬುದು ಸಮಾಧಾನದ ಸಂಗತಿ.

ರಾಜ್‌ಕೋಟ್‌ ದಾಖಲೆ
ಇನ್ನು ರಾಜ್‌ಕೋಟ್‌ ಸಂಗತಿ. ಭಾರತವಿಲ್ಲಿ 2013ರಿಂದ 4 ಪಂದ್ಯವಾಡಿದ್ದು, ಮೂರರಲ್ಲಿ ಗೆದ್ದಿದೆ. ನ್ಯೂಜಿಲ್ಯಾಂಡ್‌ ಎದುರಿನ 2017ರ ಮುಖಾ ಮುಖೀಯಲ್ಲಿ ಸೋಲನುಭವಿಸಿದೆ. ಶ್ರೀಲಂಕಾ ವಿರುದ್ಧ ರಾಜ್‌ಕೋಟ್‌ನಲ್ಲಿ ಇನ್ನೂ ಆಡಿಲ್ಲ. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿ ಕೊನೆಯ ಪಂದ್ಯವನ್ನು ಆಡಲಾಗಿತ್ತು. ಭಾರತ ಇದನ್ನು 82 ರನ್ನುಗಳಿಂದ ಜಯಿಸಿತ್ತು. ಭಾರತದ 169ಕ್ಕೆ ಉತ್ತರವಾಗಿ ಹರಿಣಗಳ ಪಡೆ 87 ರನ್ನಿಗೆ ಉದುರಿತ್ತು. ಅಂದು ರಿಷಭ್‌ ಪಂತ್‌ ಟೀಮ್‌ ಇಂಡಿಯಾವನ್ನು ಮುನ್ನಡೆಸಿದ್ದರು.

ಯುವಕರ ಮೇಲಿದೆ ಜವಾಬ್ದಾರಿ
ಪವರ್‌ ಪ್ಲೇಯಲ್ಲಿ ಸುಧಾರಣೆ ಕಾಣದ ಹೊರತು ಭಾರತಕ್ಕೆ ಮೇಲುಗೈ ಅಸಾಧ್ಯ ಎಂಬುದು ಸದ್ಯದ ಸ್ಥಿತಿ. ಇಲ್ಲಿ ರನ್‌ ಪೇರಿಸುವ ಜತೆಗೆ ವಿಕೆಟ್‌ ಉಳಿಸಿಕೊಳ್ಳುವ ನಿಟ್ಟಿನಲ್ಲೂ ನಮ್ಮವರ ಪ್ರಯತ್ನ ಸಾಗಬೇಕಿದೆ. ಮುಂಬರುವ ಟಿ20 ವಿಶ್ವಕಪ್‌ಗೆ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಮೊದಲಾದ ಸೀನಿಯರ್‌ಗಳನ್ನು ಬದಿಗಿರಿಸಿ ಇಶಾನ್‌ ಕಿಶನ್‌, ಗಿಲ್‌, ತ್ರಿಪಾಠಿ ಮೊದಲಾದವರನ್ನು ಒಳಗೊಂಡ ಯುವ ಆಟಗಾರರನ್ನು ಸಿದ್ಧಗೊಳಿಸುವುದು ಟೀಮ್‌ ಇಂಡಿಯಾದ ಯೋಜನೆಯಾದ್ದರಿಂದ ಲಭಿಸಿದ ಅವಕಾಶವನ್ನು ಇವರು ಚೆನ್ನಾಗಿ ಬಳಸಿಕೊಳ್ಳಬೇಕಿದೆ. ಹೀಗಾಗಿ ನಿರ್ಣಾಯಕ ಪಂದ್ಯಕ್ಕಾಗಿ ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಯಾವುದೇ ಬದಲಾವಣೆ ಮಾಡಬೇಕಾದ ಅಗತ್ಯವಿಲ್ಲ. ಅಲ್ಲದೇ ರಾಜ್‌ಕೋಟ್‌ ಪಿಚ್‌ ಫ್ಲ್ಯಾಟ್‌ ಆಗಿರುವ ಕಾರಣ ಇಲ್ಲಿ ಬ್ಯಾಟರ್‌ಗಳು ಮಿಂಚಬಲ್ಲರೆಂಬ ವಿಶ್ವಾಸವಿದೆ.

ಬೌಲಿಂಗ್‌ ವಿಭಾಗದಲ್ಲಿ ಅರ್ಷದೀಪ್‌ ಅವರ ನೋಬಾಲ್ಸ್‌ ತಂಡದ ಪಾಲಿಗೆ ದೊಡ್ಡ ಚಿಂತೆಯಾಗಿ ಕಾಡಿದೆ. ಶಿವಂ ಮಾವಿ ಮುಂಬಯಿಯಲ್ಲಿ ಸ್ಮರಣೀಯ ಪದಾರ್ಪಣೆ ಮಾಡಿದರೂ ಪುಣೆಯಲ್ಲಿ 53 ರನ್‌ ನೀಡಿ ದುಬಾರಿಯಾದರು. ಅಲ್ಲಿ 4 ವಿಕೆಟ್‌ ಕಿತ್ತರೆ, ಇಲ್ಲಿ ವಿಕೆಟ್‌ಲೆಸ್‌ ಎನಿಸಿದರು. ಇಂಥ ಅಸ್ಥಿರ ಪ್ರದರ್ಶನಕ್ಕೆ ಕಡಿವಾಣ ಅಗತ್ಯವಿದೆ. ಮುಕೇಶ್‌ ಕುಮಾರ್‌ ಅಥವಾ ವಾಷಿಂಗ್ಟನ್‌ ಸುಂದರ್‌ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ.

ಜೋಶ್‌ ತೋರಿದ ಲಂಕಾ
ಮೊದಲ ಪಂದ್ಯವನ್ನು ಸ್ವಲ್ಪದರಲ್ಲೇ ಕಳೆದುಕೊಂಡ ಶ್ರೀಲಂಕಾ, ಪುಣೆಯಲ್ಲಿ ತನ್ನ ನೈಜ ರೂಪವನ್ನು ಪ್ರದರ್ಶಿಸಿದೆ. ಮೆಂಡಿಸ್‌, ನಿಸ್ಸಂಕ, ಶಣಕ, ರಜಿತ, ಮದುಶಂಕ ಅವರೆಲ್ಲ ಭಾರೀ ಜೋಶ್‌ ತೋರಿದ್ದಾರೆ. ಭಾರತಕ್ಕೆ ಇದು ಎಚ್ಚರಿಕೆಯ ಗಂಟೆ. ಸ್ವಲ್ಪ ಜಾರಿದರೂ ಸರಣಿ ಕೂಡ ಜಾರಲಿದೆ!

ಸ್ಥಳ: ರಾಜ್‌ಕೋಟ್‌
ಆರಂಭ: ರಾತ್ರಿ 7.00
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next