Advertisement

ಏಷ್ಯಾ ಕಪ್‌ ಕ್ರಿಕೆಟ್‌; ಲಂಕಾ ಪ್ರಚಂಡ ಆಟಕ್ಕೆ ಭಾರತ ಶರಣು

11:35 PM Sep 06, 2022 | Team Udayavani |

ದುಬಾೖ: ಆರಂಭಿಕ ಆಟಗಾರರಾದ ಪಥುಮ್‌ ನಿಸ್ಸಾಂಕ ಮತ್ತು ಕುಸಲ್‌ ಮೆಂಡಿಸ್‌ ಅವರ ಅರ್ಧತತಕ ಹಾಗೂ ಕೊನೆ ಹಂತದಲ್ಲಿ ಭಾನುಕ ರಾಜಪಕ್ಷ ಮತ್ತು ದಾಸುನ್‌ ಶನಕ ಅವರ ಬಿರುಸಿನ ಆಟದಿಂದಾಗಿ ಶ್ರೀಲಂಕಾ ತಂಡವು ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ಸೂಪರ್‌ ಫೋರ್‌ ಹಂತದ ಪಂದ್ಯದಲ್ಲಿ ಮಂಗಳವಾರ ಭಾರತ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ರೋಹಿತ್‌ ಅವರ 72 ರನ್‌ ನೆರವಿನಿಂದ 8 ವಿಕೆಟಿಗೆ 173 ರನ್‌ ಗಳಿಸಿದ್ದರೆ ಶ್ರೀಲಂಕಾ ತಂಡವು 19.5 ಓವರ್‌ಗಳಲ್ಲಿ 4 ವಿಕೆಟಿಗೆ 174 ರನ್‌ ಗಳಿಸಿ ಜಯ ಸಾಧಿಸಿತು.

ಸೂಪರ್‌ ಫೋರ್‌ ಹಂತದಲ್ಲಿ ಇದು ಭಾರತದ ಸತತ ಎರಡನೇ ಸೋಲು ಆಗಿದೆ. ಇದರಿಂದ ಭಾರತ ಫೈನಲಿಗೇರುವ ಆಸೆ ಇನ್ನಷ್ಟು ಕಠಿನವಾಗಿದೆ. ಒಂದು ವೇಳೆ ಕಣದಲ್ಲಿರುವ ಇನ್ನುಳಿದ ತಂಡಗಳು ಅನಿರೀಕ್ಷಿತ ಫ‌ಲಿತಾಂಶಕ್ಕೆ ಕಾರಣವಾದರೆ ಭಾರತಕ್ಕೆ ಫೈನಲಿಗೇರುವ ಅವಕಾಶ ಇರಬಹುದು.

ಬುಧವಾರ ನಡೆಯುವ ಸೂಪರ್‌ ಫೋರ್‌ ಹಂತದ ಪಂದ್ಯದಲ್ಲಿ ಪಾಕಿಸ್ಥಾನವು ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಪಾಕಿಸ್ಥಾನ ಮೊದಲ ಪಂದ್ಯದಲ್ಲಿ ಭಾರತವನ್ನು ಸೋಲಿಸಿತ್ತು. ಬುಧವಾರದ ಪಂದ್ಯದಲ್ಲಿ ಗೆದ್ದರೆ ಫೈನಲಿಗೇರಲಿದೆ. ಒಂದು ವೇಳೆ ಸೋತರೆ ಭಾರತಕ್ಕೆ ಸ್ವಲ್ಪಮಟ್ಟಿಗೆ ಅನುಕೂಲವಾಗಲಿದೆ.

ಗೆಲ್ಲಲೇಬೇಕಾದ ಪಂದ್ಯದಲ್ಲಿ ಶ್ರೀಲಂಕಾ ಭರ್ಜರಿ ಆರಂಭ ಪಡೆದಿದೆ. ಬಿರುಸಿನ ಆಟವಾಡಿದ ಪಥುಮ್‌ ನಿಸ್ಸಾಂಕ ಮತ್ತು ಕುಸಲ್‌ ಮೆಂಡಿಸ್‌ ಮೊದಲ ವಿಕೆಟಿಗೆ 97 ರನ್‌ ಪೇರಿಸಿ ಬೇರ್ಪಟ್ಟರು. ನಿಸ್ಸಾಂಕ 52 ಹಾಗೂ ಮೆಂಡಿಸ್‌ 57 ರನ್‌ ಹೊಡೆದರು. ಈ ಜೋಡಿ ಮುರಿದ ಬಳಿಕ ಭಾರತ ಮೇಲುಗೈ ಸಾಧಿಸಿತು. ಲಂಕಾದ ಮೊತ್ತ 110 ತಲುಪಿದಾಗ ನಾಲ್ಕು ವಿಕೆಟ್‌ ಉರುಳಿತ್ತು. ಆದರೆ ಭಾನುಕ ರಾಜಪಕ್ಷ ಮತ್ತು ದಾಸುನ್‌ ಶನಕ ಕೊನೆ ಹಂತದಲ್ಲಿ ಉತ್ತಮವಾಗಿ ಆಡಿದ್ದರಿಂದ ತಂಡ ಜಯಭೇರಿ ಬಾರಿಸಿತು. ಅವರಿಬ್ಬರು ಮುರಿಯದ ಐದನೇ ವಿಕೆಟಿಗೆ 64 ರನ್‌ ಪೇರಿಸಿದರು.

Advertisement

ಎಡವಿದ ಭಾರತ
ಗೆಲ್ಲಲೇಬೇಕಾದ ಈ ಪಂದ್ಯದಲ್ಲಿ ಭಾರತ ಆರಂಭದಲ್ಲಿ ಎಡವಿತು. ಪ್ರಮುಖ ಆಟಗಾರರಾದ ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಬೇಗನೇ ಔಟಾದ ಕಾರಣ ತಂಡ ಒತ್ತಡದಲ್ಲಿ ಸಿಲಕಿತು. ಆದರೆ ನಾಯಕನ ಜವಾಬ್ದಾರಿ ಅರಿತು ಆಡಿದ ರೋಹಿತ್‌ ಭರ್ಜರಿ ಹೊಡೆತಗಳಿಂದ ರಂಜಿಸಿದರು. ಸೂರ್ಯಕುಮಾರ್‌ ಯಾದವ್‌ ಜತೆಗೂಡಿ ಮೂರನೇ ವಿಕೆಟಿಗೆ ಅಮೂಲ್ಯ 97 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಇವರಿಬ್ಬರು ಕ್ರೀಸ್‌ನಲ್ಲಿರುವಾಗ ಭಾರತ ಸುಸ್ಥಿತಿಯಲ್ಲಿತ್ತು.

13ನೇ ಓವರಿನಲ್ಲಿ ದಾಳಿಗೆ ಇಳಿದ ಕರುಣರತ್ನೆ ಉತ್ತಮವಾಗಿ ಆಡುತ್ತಿದ್ದ ರೋಹಿತ್‌ ಅವರನ್ನು ಔಟ್‌ ಮಾಡಿಸಿದರು. ಕೇವಲ 41 ಎಸೆತ ಎದುರಿಸಿದ ಅವರು 72 ರನ್‌ ಹೊಡೆದರು. 5 ಬೌಂಡರಿ ಬಾರಿಸಿದ ಅವರು ನಾಲ್ಕು ಸಿಕ್ಸರ್‌ ಸಿಡಿಸಿ ತನ್ನ ಉದ್ದೇಶ ತಿಳಿಸಿದರು. ರೋಹಿತ್‌ಗೆ ಉತ್ತಮ ಬೆಂಬಲ ನೀಡಿದ ಸೂರ್ಯಕುಮಾರ್‌ ಯಾದವ್‌ 29 ಎಸೆತಗಳಿಂದ 34 ರನ್‌ ಹೊಡೆದರು.

ರೋಹಿತ್‌ ಮತ್ತು ಸೂರ್ಯಕುಮಾರ್‌ ಔಟಾದ ಬಳಿಕ ತಂಡ ಕುಸಿಯತೊಡಗಿತಲ್ಲದೇ ರನ್‌ ವೇಗಕ್ಕೂ ಕಡಿವಾಣ ಬಿತ್ತು. ಬಿರುಸಿನ ಆಟಗಾರರಾದ ಹಾರ್ದಿಕ್‌ ಪಾಂಡ್ಯ, ರಿಷಬ್‌ ಪಂತ್‌, ದೀಪಕ್‌ ಹೂಡಾ ಭರ್ಜರಿ ಆಟ ಪ್ರದರ್ಶಿಸಲು ವಿಫ‌ಲರಾದರು. ಬಿಗು ದಾಳಿ ಸಂಘಟಿಸಿದ ಶ್ರೀಲಂಕಾ ಮೇಲುಗೈ ಸಾಧಿಸಲು ಯಶಸ್ವಿಯಾಯಿತು.

ಮೊದಲ 14 ಓವರ್‌ ಮುಗಿದಾಗ ಭಾರತ 119 ರನ್‌ ಗಳಿಸಿತ್ತು. ಆಬಳಿಕ ಆಗಾಗ್ಗೆ ವಿಕೆಟ್‌ ಕಳೆದುಕೊಂಡ ಕಾರಣ ಭಾರತ ರನ್‌ ಗಳಿಸಲು ಒದ್ದಾಡಿತು. ಅಂತಿಮ 34 ಎಸೆತಗಳಲ್ಲಿ ಭಾರತ ಗಳಿಸಿದ್ದು ಕೇವಲ 54 ರನ್‌ ಮಾತ್ರ. ಈ ವೇಳೆ ತಂಡ ಐವರು ಆಟಗಾರರನ್ನು ಕಳೆದುಕೊಂಡಿತ್ತು. ಅಂತಿಮ ಓವರಿನಲ್ಲಿ ಅಶ್ವಿ‌ನ್‌ ಸಿಕ್ಸರ್‌ ಬಾರಿಸಿದ್ದರಿಂದ ತಂಡದ ಮೊತ್ತ 170 ಗಡಿ ದಾಟುವಂತಾಯಿತು.

ಸ್ಕೋರ್‌ ಪಟ್ಟಿ
ಭಾರತ
ಕೆಎಲ್‌ ರಾಹುಲ್‌ ಎಲ್‌ಬಿಡಬ್ಲ್ಯು ಬಿ ತೀಕ್ಷಣ 6
ರೋಹಿತ್‌ ಶರ್ಮ ಸಿ ನಿಸ್ಸಾಂಕ ಬಿ ಕರುಣರತ್ನೆ 72
ವಿರಾಟ್‌ ಕೊಹ್ಲಿ ಬಿ ಮದುಶಂಕ 0
ಸೂರ್ಯಕುಮಾರ್‌ ಸಿ ತೀಕ್ಷಣ ಬಿ ಶನಕ 34
ಹಾರ್ದಿಕ್‌ ಪಾಂಡ್ಯ ಸಿ ನಿಸ್ಸಾಂಕ ಬಿ ಶನಕ 17
ರಿಷಬ್‌ ಪಂತ್‌ ಸಿ ನಿಸ್ಸಾಂಕ ಬಿ ಮದುಶಂಕ 17
ದೀಪಕ್‌ ಹೂಡಾ ಬಿ ಮದುಶಂಕ 3
ಆರ್‌. ಅಶ್ವಿ‌ನ್‌ ಔಟಾಗದೆ 15
ಭುವನೇಶ್ವರ್‌ ಕೆ. ಬಿ ಕರುಣರತ್ನೆ 0
ಅರ್ಷದೀಪ್‌ ಸಿಂಗ್‌ ಔಟಾಗದೆ 1
ಇತರ: 8
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 173
ವಿಕೆಟ್‌ ಪತನ: 1-11, 2-13, 3-110, 4-119, 5-149, 6-157, 7-158, 8-164
ಬೌಲಿಂಗ್‌: ದಿಲ್ಶನ್‌ ಮದುಶಂಕ 4-0-24-3
ಮಹೀಶ್‌ ತೀಕ್ಷಣ 4-0-29-1
ಚಮಿಕ ಕರುಣರತ್ನೆ 4-0-27-2
ಆಸಿತಾ ಫೆರ್ನಾಂಡೊ 2-0-28-0
ವನಿಂದು ಹಸರಂಗ ಡಿಸಿಲ್ವ 4-0-39-0
ದಾಸುನ್‌ ಶನಕ 2-0-26-2
ಶ್ರೀಲಂಕಾ
ಪಥುಮ್‌ ನಿಸ್ಸಾಂಕ ಸಿ ಶರ್ಮ ಬಿ ಚಹಲ್‌ 52
ಕುಸಲ್‌ ಮೆಂಡಿಸ್‌ ಎಲ್‌ಬಿಡಬ್ಲ್ಯು ಬಿ ಚಹಲ್‌ 57
ಚರಿತ್‌ ಅಸಲಂಕ ಸಿ ಯಾದವ್‌ ಬಿ ಚಹಲ್‌ 0
ದನುಷ್ಕ ಗುಣತಿಲಕ ಸಿ ರಾಹುಲ್‌ ಬಿ ಅಶ್ವಿ‌ನ್‌ 1
ಭಾನುಕ ರಾಜಪಕ್ಷ ಔಟಾಗದೆ 25
ದಾಸುನ್‌ ಶನಕ ಔಟಾಗದೆ 33
ಇತರ: 6
ಒಟ್ಟು (19.5 ಓವರ್‌ಗಳಲ್ಲಿ 4 ವಿಕೆಟಿಗೆ) 174
ವಿಕೆಟ್‌ ಪತನ: 1-97, 2-97, 3-110, 4-110
ಬೌಲಿಂಗ್‌: ಭುವನೇಶ್ವರ ಕುಮಾರ್‌ 4-0-30-0 ಅರ್ಷದೀಪ್‌ ಸಿಂಗ್‌ 3.5-0-40-0
ಹಾರ್ದಿಕ್‌ ಪಾಂಡ್ಯ 4-0-35-0
ಯಜುವೇಂದ್ರ ಚಹಲ್‌ 4-0-34-3
ಆರ್‌. ಅಶ್ವಿ‌ನ್‌ 4-0-32-1

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next