ದುಬಾೖ: ಏಷ್ಯಾಕಪ್ ಟೂರ್ನಮೆಂಟ್ ನ ಮಹತ್ವದ ಪಂದ್ಯದಲ್ಲಿ ಭಾರತ ಶ್ರೀಲಂಕಾಕ್ಕೆ ಶರಣಾಗಿ, ಫೈನಲ್ ಹಾದಿಯನ್ನು ಇನ್ನಷ್ಟು ಕಠಿಣ ಮಾಡಿಕೊಂಡಿದೆ.ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆರಂಭದಲ್ಲೇ ಕೆ.ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅವರ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಓಪನರ್ ಆಟಗಾರನಾಗಿ ಕಪ್ತಾನ ರೋಹಿತ್ ಶರ್ಮಾ 72 ರನ್ ಗಳಿಸಿ ಆಸರೆದಾಯಕ ಆಟವನ್ನಾಡಿದರು.
5 ಬೌಂಡರಿ, 4 ಸಿಕ್ಸರ್ ಸಹಿತ ಸ್ಪೋಟಕ ಆಟವನ್ನಾಡಿದ ರೋಹಿತ್ ಶರ್ಮಾ ಅವರಿಗೆ, 34 ರನ್ ಗಳಿಸಿದ ಸೂರ್ಯಕುಮಾರ್ ಯಾದವ್ ಜತೆಯಾಟ ನೀಡಿದರು.
ಟೀಮ್ ಇಂಡಿಯಾದ ಕಪ್ತಾನ ಇತ್ತೀಚಿಗೆ ಅಂತಾರಾಷ್ಟ್ರೀಯ ಟಿ-20ಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈಗ ಏಷ್ಯಾಕಪ್ ನಲ್ಲಿ ಮತ್ತೊಂದು ಮೈಲುಗಲ್ಲನ್ನು ಸಾಧಿಸಿದ್ದಾರೆ.
ಏಷ್ಯಾಕಪ್ ನಲ್ಲಿ ಭಾರತದ ಪರವಾಗಿ ಸಚಿನ್ ತೆಂಡೂಲ್ಕರ್ ಅತೀ ಹೆಚ್ಚು ರನ್ ಗಳಿಸಿದ್ದಾರೆ. ಅವರು 23 ಪಂದ್ಯಗಳನ್ನಾಡಿ 971 ರನ್ ಗಳಿಸಿದ್ದಾರೆ. ಏಷ್ಯಾಕಪ್ ಮೊದಲು ಏಕದಿನ ಮಾದರಿಯಲ್ಲಿತ್ತು. ಆ ಮಾದರಿಯಲ್ಲಿ ಸಚಿನ್ ಈ ಸಾಧನೆ ಮಾಡಿದ್ದರು. ಈ ದಾಖಲೆಯನ್ನು ಟೀಮ್ ಇಂಡಿಯಾದ ಕ್ಯಾಪ್ಟನ್ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮುರಿದಿದ್ದಾರೆ. ರೋಹಿತ್ ಏಷ್ಯಾಕಪ್ ನ ಏಕದಿನ ಹಾಗೂ ಟಿ-20 ಸೇರಿ ಒಟ್ಟು 31 ಪಂದ್ಯದಲ್ಲಿ 1016 ರನ್ ಗಳಿಸಿದ ಭಾರತದ ಏಕೈಕ ಆಟಗರಾನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಸಾಲಿನಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ 24 ಏಷ್ಯಾಕಪ್ ಪಂದ್ಯವನ್ನಾಡಿ 1220 ರನ್ ಗಳಿಸಿದ್ದಾರೆ. ಎರಡನೇಯದಾಗಿ ಶ್ರೀಲಂಕಾದ ಕುಮಾರ್ ಸಂಗಕ್ಕರ 24 ಏಪ್ಯಾಕಪ್ ಪಂದ್ಯದಲ್ಲಿ 1075 ರನ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ. ಸಚಿನ್ 4ನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ, 20 ಪಂದ್ಯಗಳಲ್ಲಿ 923 ರನ್ ಗಳಿಸಿ 5 ನೇ ಸ್ಥಾನದಲ್ಲಿದ್ದಾರೆ.
ಭಾರತದ ಈ ಬಾರಿಯ ಏಷ್ಯಾಕಪ್ ಭವಿಷ್ಯ ನಿರ್ಗಮನದ ಬಾಗಿಲಲ್ಲಿ ನಿಂತಿದೆ. ಒಂದು ವೇಳೆ ಇಂದು (ಬುಧವಾರ, ಸೆ.7 ರಂದು) ನಡೆಯುವ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪಾಕಿಸ್ಥಾನವನ್ನು ಅಫ್ಘಾನಿಸ್ತಾನ ತಂಡವನ್ನು ಸೋಲಿಸಿದರೆ, ಮುಂದಿನ ಲೆಕ್ಕಾಚಾರ ಸಿಗುತ್ತದೆ. ಒಂದು ವೇಳೆ ಪಾಕ್ ಗೆದ್ದರೆ ಭಾರತ ಟೂರ್ನಿನಿಂದ ನಿರ್ಗಮಿಸುವುದು ಖಚಿತ.