Advertisement

ಟಿ20 ವಿಶ್ವಕಪ್‌: ಇಂದು ಭಾರತಕ್ಕೆ ದಕ್ಷಿಣ ಆಫ್ರಿಕಾ ಎದುರಾಳಿ

11:13 PM Oct 29, 2022 | Team Udayavani |

ಪರ್ತ್‌: ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನ ಮತ್ತು ನೆದರ್ಲೆಂಡ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್‌ ಅಭಿಯಾನವನ್ನು ಆರಂಭಿಸಿರುವ ಭಾರತವು ರವಿವಾರ ಪರ್ತ್‌ ಕ್ರೀಡಾಂಗಣದಲ್ಲಿ ನಡೆಯುವ ಸೂಪರ್‌ 12ರ ಹೋರಾಟದಲ್ಲಿ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ.

Advertisement

ನೆದರ್ಲೆಂಡ್‌ ವಿರುದ್ಧ ಅರ್ಧಶತಕ ದಾಖಲಿಸಿರುವ ರೋಹಿತ್‌ ಶರ್ಮ ಮತ್ತು ಸೂರ್ಯಕುಮಾರ್‌ ಯಾದವ್‌ ಮತ್ತೆ ಫಾರ್ಮ್ ಗೆ ಮರಳಿರುವುದನ್ನು ದೃಡಪಡಿಸಿದ್ದಾರೆ. ಅವರಿಬ್ಬರ ಜತೆ ವಿರಾಟ್‌ ಕೊಹ್ಲಿ ಶ್ರೇಷ್ಠ ಫಾರ್ಮ್ ನಲ್ಲಿರುವುದು ತಂಡದ ಬ್ಯಾಟಿಂಗ್‌ ಬಲವನ್ನು ಹೆಚ್ಚಿಸಿದೆ. ಅವರು ಮೊದಲ ಎರಡು ಪಂದ್ಯಗಳಲ್ಲಿ ಅಜೇಯ ಅರ್ಧಶತಕ ಹೊಡೆದಿರುವುದು ಸಮಾ ಧಾನ ತಂದಿದೆ.

ಸೆಮಿಫೈನಲ್‌ ಭರವಸೆಯನ್ನು ಬಲಗೊಳಿಸಲು ಭಾರತಕ್ಕೆ ಈ ಪಂದ್ಯ ಅತ್ಯಂತ ಪ್ರಮುಖವಾಗಿದೆ. ಹೀಗಾಗಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಭಾರತ ನಿರ್ಧರಿಸಿದೆ. ಕೊಹ್ಲಿ ಅವರ ಮೇಲೆ ತಂಡ ಮತ್ತೆ ನಂಬಿಕೆ ಇಟ್ಟಿದ್ದು ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಬೌಲಿಂಗ್‌ನಲ್ಲಿ ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌ ಮತ್ತು ಅರ್ಷದೀಪ್‌ ಸಿಂಗ್‌ ಪರ್ತ್‌ ಪಿಚ್‌ನ ಪರಿಪೂರ್ಣ ಲಾಭ ಎತ್ತುವ ನಿರೀಕ್ಷೆಯಿದೆ.
ಪರ್ತ್‌ ಪಿಚ್‌ ವೇಗದ ದಾಳಿಗೆ ಬಹ ಳಷ್ಟು ನೆರವು ನೀಡುವುದರಿಂದ ಭಾರತ ಎಚ್ಚರಿಕೆಯಿಂದ ಆಡಬೇಕಾಗಿದೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ವಿಶ್ವದ ಅತೀ ವೇಗದ ಬೌಲರ್‌ ಖ್ಯಾತಿಯ ಕಾಗಿಸೊ ರಬಾಡ, ಆ್ಯನ್ರಿಚ್‌ ನೋರ್ಜೆ ಸಹಿತ ಇತರರು ವೇಗದ ದಾಳಿ ಎಸೆಯುವಲ್ಲಿ ಪರಿಣತಿ ಹೊಂದಿದ್ದಾರೆ. ಅವರ ದಾಳಿಯನ್ನು ಭಾರತೀಯ ಆಟಗಾರರು ಯಾವ ರೀತಿ ಎದುರಿಸುತ್ತಾರೆ ಎಂಬುದರ ಮೇಲೆ ಈ ಪಂದ್ಯದ ಫ‌ಲಿತಾಂಶ ನಿರ್ಧಾರವಾಗಲಿದೆ. ಒಂದು ವೇಳೆ ಭಾರತದ ಅಗ್ರ ಆಟಗಾರರು ದಕ್ಷಿಣ ಆಫ್ರಿಕಾದ ದಾಳಿಯನ್ನು ಮೆಟ್ಟಿ ನಿಂತರೆ ಭಾರತ ಗೆಲ್ಲುವ ಸಾಧ್ಯತೆಯಿದೆ.
ಭಾರತ ಈ ಪಂದ್ಯದಲ್ಲಿ ಗೆದ್ದರೆ ಸೆಮಿಫೈನಲ್‌ಗೇರುವುದು ಖಚಿತ. ಲೀಗ್‌ ಹಂತದಲ್ಲಿ ಭಾರತ ಮತ್ತೆ ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ವಿರುದ್ಧ ಆಡಲಿದೆ.

ದಕ್ಷಿಣ ಆಫ್ರಿಕಾ ಬಲಿಷ್ಠ
ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಉತ್ತಮ ಫಾರ್ಮ್ನಲ್ಲಿರುವ ಕ್ವಿಂಟನ್‌ ಡಿ ಕಾಕ್‌, ರಿಲೀ ರೋಸ್ಯೊ ಮತ್ತು ಡೇವಿಡ್‌ ಮಿಲ್ಲರ್‌ ಬ್ಯಾಟಿಂಗ್‌ನಲ್ಲಿ ಮಿಂಚುವ ಸಾಧ್ಯತೆಯಿದೆ. ಬೌಲಿಂಗ್‌ ಪಡೆಯೂ ಬಲಿಷ್ಠವಾಗಿದೆ. ಗೆಲ್ಲಲೇಬೇಕಾದ ಒತ್ತಡದಲ್ಲಿರುವ ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ಶ್ರೇಷ್ಠ ನಿರ್ವಹಣೆ ನೀಡುವುದು ಖಂಡಿತ.

23 ಬಾರಿ ಮುಖಾಮುಖಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ಇಷ್ಟ್ರವರೆಗೆ 23 ಬಾರಿ ಮುಖಾಮುಖಿಯಾಗಿದ್ದು 13 ಬಾರಿ ಭಾರತ ಜಯಭೇರಿ ಬಾರಿಸಿದೆ. 9 ಬಾರಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದ್ದರೆ ಒಂದು ಪಂದ್ಯದಲ್ಲಿ ಫ‌ಲಿತಾಂಶ ಬಂದಿರಲಿಲ್ಲ.

Advertisement

ಅಗ್ರಸ್ಥಾನಕ್ಕಾಗಿ ಹೋರಾಟ
ಈ ಪಂದ್ಯದ ಫ‌ಲಿತಾಂಶವು ಬಣ ಎರಡರ ಅಗ್ರಸ್ಥಾನವನ್ನು ಯಾರು ಪಡೆಯುತ್ತಾರೆಂದು ನಿರ್ಧರಿಸುವ ಸಾಧ್ಯತೆಯಿದೆ. ಸದ್ಯ ಎರಡರಲ್ಲಿ ಗೆದ್ದಿರುವ ಭಾರತ ಅಗ್ರಸ್ಥಾನದಲ್ಲಿದ್ದರೆ ದಕ್ಷಿಣ ಆಫ್ರಿಕಾ ಮೂರಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಬಾಂಗ್ಲಾದೇಶ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದ ದಕ್ಷಿಣ ಆಫ್ರಿಕಾ ತಂಡ ಜಿಂಬಾಬ್ವೆ ವಿರುದ್ಧ ದ ಪಂದ್ಯ ಮಳೆಯಿಂದ ರದ್ದುಗೊಂಡ ಹಿನ್ನೆಲೆಯಲ್ಲಿ ಭಾರೀ ನಿರಾಶೆ ಅನುಭವಿಸಿತು. ಇದರಿಂದ ದಕ್ಷಿಣ ಆಫ್ರಿಕಾ ಎರಡಂಕ ಗಳಿಸುವ ಅವಕಾಶದಿಂದ ವಂಚಿತವಾಯಿತು.

ಪರ್ತ್‌ ಪಿಚ್‌ ಸ್ಥಿತಿ
ಪರ್ತ್‌ನ ಪಿಚ್‌ ಆಸ್ಟ್ರೇಲಿಯದ ಅತೀವೇಗದ ಪಿಚ್‌ಗಳಲ್ಲಿ ಒಂದಾಗಿದೆ. ಈ ಪಿಚ್‌ ಬಹಳಷ್ಟು ಬೌನ್ಸ್‌ ಮತ್ತು ವೇಗದ ನಡೆಯನ್ನು ಹೊಂದಿದೆ. ಇಲ್ಲಿ ಬ್ಯಾಟಿಂಗ್‌ ಮಾಡಲು ಬಹಳ ಕಷ್ಟ. ಆದರೆ ಬ್ಯಾಟಿಂಗ್‌ ನಡೆಸಲು ಸಮರ್ಥರಾದರೆ ಉತ್ತಮ ನಿರ್ವಹಣೆ ನೀಡಲು ಸಾಧ್ಯ. ಸಂಜೆಯ ಹೊತ್ತಿಗೆ ಮಂಜು ಬೀಳುವ ಸಾಧ್ಯತೆಯಿದೆ. ಹೀಗಾಗಿ ಟಾಸ್‌ ಗೆದ್ದ ನಾಯಕರು ಮೊದಲು ಬೌಲಿಂಗ್‌ ಆಯ್ಕೆ ಮಾಡುವ ಸಾಧ್ಯತೆಯಿದೆ.

ಇಂದಿನ ಪಂದ್ಯ
ಬಾಂಗ್ಲಾದೇಶ – ಜಿಂಬಾಬ್ವೆ
ಆರಂಭ: ಬೆಳಗ್ಗೆ 8.30
ಸ್ಥಳ: ಬ್ರಿಸ್ಟನ್‌

ನೆದರ್ಲೆಂಡ್‌ – ಪಾಕಿಸ್ಥಾನ
ಆರಂಭ: ಅಪರಾಹ್ನ 12.30
ಸ್ಥಳ: ಪರ್ತ್‌

ಭಾರತ – ದಕ್ಷಿಣ ಆಫ್ರಿಕಾ
ಆರಂಭ: ಸಂಜೆ 4.30
ಸ್ಥಳ: ಪರ್ತ್‌
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

 

Advertisement

Udayavani is now on Telegram. Click here to join our channel and stay updated with the latest news.

Next