Advertisement

ಇಂದು ಗುವಾಹಟಿಯಲ್ಲಿ ಟಿ20 ಪೈಪೋಟಿ; ಸರಣಿ ಗೆಲುವಿಗೆ ಭಾರತ ಸ್ಕೆಚ್‌

10:58 PM Oct 01, 2022 | Team Udayavani |

ಗುವಾಹಟಿ: ಏಕಪಕ್ಷೀಯವಾಗಿ ಸಾಗಿದ ದಕ್ಷಿಣ ಆಫ್ರಿಕಾ ಎದುರಿನ ತಿರುವನಂತಪುರ ಟಿ20 ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದ ಭಾರತ ರವಿವಾರ ಗುವಾಹಟಿ ಪೈಪೋಟಿಗೆ ಇಳಿಯಲಿದೆ. ರೋಹಿತ್‌ ಬಳಗ ಸರಣಿ ಗೆಲುವಿಗೆ ಸ್ಕೆಚ್‌ ಹಾಕಿದರೆ, ಹರಿಣಗಳ ಪಡೆ ಸರಣಿಯನ್ನು ಜೀವಂತವಾಗಿ ಇರಿಸುವುದು ಹೇಗೆಂಬ ಯೋಚನೆಯಲ್ಲಿದೆ.

Advertisement

ಆರಂಭದಲ್ಲಿ ಜಸ್‌ಪ್ರೀತ್‌ ಬುಮ್ರಾ ಗೈರು ಟೀಮ್‌ ಇಂಡಿಯಾವನ್ನು ಕಾಡಿದ್ದು ಸುಳ್ಳಲ್ಲ. ಆದರೆ ಹೊಸ ಚೆಂಡನ್ನು ಕೈಗೆತ್ತಿಕೊಂಡ ಅರ್ಷದೀಪ್‌ ಸಿಂಗ್‌ ಮತ್ತು ದೀಪಕ್‌ ಚಹರ್‌ ಸೇರಿಕೊಂಡು ಟೆಂಬ ಬವುಮ ಪಡೆಯನ್ನು ಯಾವ ರೀತಿ ಬೆಂಡೆತ್ತಿದರೆಂದರೆ, ಸರಣಿಗೆ ಮರಳುವುದು ಅಷ್ಟು ಸುಲಭವಲ್ಲ ಎಂದು ಭೀತಿ ಮೂಡಿಸಿಟ್ಟಿದ್ದಾರೆ!

ಎಡಗೈ ಪೇಸ್‌ ಬೌಲರ್‌ ಅರ್ಷದೀಪ್‌ ಒಂದೇ ಓವರ್‌ನಲ್ಲಿ 3 ವಿಕೆಟ್‌ ಕೆಡವಿದ್ದು ಸಾಮಾನ್ಯ ಸಂಗತಿಯಲ್ಲ. ಆ ವಿಕೆಟ್‌ಗಳೂ ಸಾಮಾನ್ಯವಲ್ಲ. ಡಿ ಕಾಕ್‌, ರೋಸ್ಯೂ ಮತ್ತು ಮಿಲ್ಲರ್‌ ಅವರಂಥ ಘಟಾನುಘಟಿಗಳದ್ದಾಗಿತ್ತು. ಅದರಲ್ಲೂ “ಕಿಲ್ಲರ್‌ ಮಿಲ್ಲರ್‌’ ತಮ್ಮ 105 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ 91 ಇನ್ನಿಂಗ್ಸ್‌ಗಳಲ್ಲೇ ಮೊದಲ ಸಲ “ಗೋಲ್ಡನ್‌ ಡಕ್‌’ ಅವಮಾನಕ್ಕೆ ಸಿಲುಕಿದ್ದರು!

ಬಹಳ ಸಮಯದ ಬಳಿಕ ಟೀಮ್‌ ಇಂಡಿಯಾಕ್ಕೆ ಮರಳಿದ ದೀಪಕ್‌ ಚಹರ್‌ ಮೊದಲ ಓವರ್‌ನಲ್ಲೇ ನಾಯಕ ಟೆಂಬ ಬವುಮ ವಿಕೆಟ್‌ ಕಿತ್ತು ಹರಿಣಗಳ ಕುಸಿತಕ್ಕೆ ಚಾಲನೆ ನೀಡಿದರು. ಭುವನೇಶ್ವರ್‌ಗಿಂತ ಚಹರ್‌ ಬೌಲಿಂಗ್‌ ಅದೆಷ್ಟೋ ಉನ್ನತ ಮಟ್ಟ ದಲ್ಲಿತ್ತು. ಹರ್ಷಲ್‌ ಪಟೇಲ್‌ ಕೂಡ ಕ್ಲಿಕ್‌ ಆಗಿದ್ದರು. ಹೀಗಾಗಿ ಬುಮ್ರಾ ಬದಲು ಅವಕಾಶ ಪಡೆದ ಮೊಹಮ್ಮದ್‌ ಸಿರಾಜ್‌ಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕೀತೇ ಎಂಬುದೊಂದು ಪ್ರಶ್ನೆ.

ಸ್ಪಿನ್‌ ವಿಭಾಗದಲ್ಲಿ ಅಕ್ಷರ್‌ ಪಟೇಲ್‌ ಮ್ಯಾಜಿಕ್‌ ಮುಂದುವರಿದಿದೆ. ಆರ್‌. ಅಶ್ವಿ‌ನ್‌ ವಿಕೆಟ್‌ ಕೀಳದಿದ್ದರೂ ರನ್‌ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸೂರ್ಯ ಹೆಚ್ಚು ಪ್ರಖರ
ಸೂರ್ಯಕುಮಾರ್‌ ಯಾದವ್‌ ಅವರ ಬ್ಯಾಟಿಂಗ್‌ ಅಬ್ಬರ ಈಗ ಮನೆಮಾತು. ಇವರ ಸ್ಫೋಟಕ ಆಟಕ್ಕೆ ದಕ್ಷಿಣ ಆಫ್ರಿಕಾ ಬೌಲರ್ ಬಳಲಿ ಬೆಂಡಾದರು. ಸೂರ್ಯಕುಮಾರ್‌ 360 ಡಿಗ್ರಿಯಲ್ಲಿ ಬ್ಯಾಟಿಂಗ್‌ ನಡೆಸುವಾಗ ಬೌಲರ್‌ಗಳು ನಿಯಂತ್ರಣ ಸಾಧಿಸುವುದು ಕಷ್ಟ ಎಂದು ಪ್ರವಾಸಿ ತಂಡದ ವೇನ್‌ ಪಾರ್ನೆಲ್‌ ಹೇಳಿರುವುದು ಉಲ್ಲೇಖನೀಯ. ತಂಡ ಆರಂಭಿಕ ಕುಸಿತಕ್ಕೆ ಸಿಲುಕಿದರೂ ನಿರ್ಭೀತಿಯಿಂದ ಬ್ಯಾಟ್‌ ಬೀಸುವ ಸೂರ್ಯ ಎದುರಾಳಿಗಳನ್ನು ಪ್ರಖರವಾಗಿ ಕಾಡುತ್ತಿದ್ದಾರೆ.

ನಾಯಕ ರೋಹಿತ್‌ ಶರ್ಮ ಅಸ್ಥಿರ ಪ್ರದರ್ಶನ ನೀಡುತ್ತ ಬಂದಿರುವುದು ಯೋಚಿಸಬೇಕಾದ ಸಂಗತಿ. ಸಿಡಿದು ನಿಂತರೆ ಬೃಹತ್‌ ಮೊತ್ತ, ಇಲ್ಲವಾದರೆ ಸೊನ್ನೆ ಎಂಬಂತಾಗಿದೆ ರೋಹಿತ್‌ ಸ್ಥಿತಿ. ಹಾಗೆಯೇ ವಿರಾಟ್‌ ಕೊಹ್ಲಿ. ಮೊದಲ ಮುಖಾಮುಖಿಯಲ್ಲಿ ಇವರಿಬ್ಬರೂ ಬೇಗನೇ ಔಟಾದಾಗ ತಂಡಕ್ಕೆ ಸಣ್ಣದೊಂದು ಆತಂಕ ಎದುರಾದದ್ದು ಸುಳ್ಳಲ್ಲ. ಆದರೆ ರಾಹುಲ್‌-ಸೂರ್ಯ ಸೇರಿಕೊಂಡು ಇದನ್ನು ಬಹಳ ಜಾಣ್ಮೆಯಿಂದ ನಿವಾರಿಸಿದರು. ಹೀಗಾಗಿ ದಿನೇಶ್‌ ಕಾರ್ತಿಕ್‌, ರಿಷಭ್‌ ಪಂತ್‌ ಅವರಿಗೆ ಬ್ಯಾಟಿಂಗ್‌ ಅವಕಾಶ ಸಿಗಲಿಲ್ಲ. ಅಕಸ್ಮಾತ್‌ ದೊಡ್ಡ ಮೊತ್ತದ ಚೇಸಿಂಗ್‌ ಲಭಿಸಿದರೆ ಭಾರತದ ಬ್ಯಾಟಿಂಗ್‌ ಸಾಮರ್ಥ್ಯದ ಸಂಪೂರ್ಣ ಚಿತ್ರಣ ಸಿಗಲಿದೆ.

ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ಕುಸಿತ ಆಕಸ್ಮಿಕ ಎಂದೇ ಭಾವಿಸಿ ಟೀಮ್‌ ಇಂಡಿಯಾ ಗುವಾಹಟಿ ಹೋರಾಟಕ್ಕೆ ಇಳಿಯಬೇಕಿದೆ. ಏಕೆಂದರೆ ಡಿ ಕಾಕ್‌, ಬವುಮ, ಮಾರ್ಕ್‌ರಮ್‌, ಮಿಲ್ಲರ್‌ ಅವರಂಥ ವಿಶ್ವ ದರ್ಜೆಯ ಬ್ಯಾಟರ್‌ಗಳನ್ನು ಹೊಂದಿರುವ ಹರಿಣಗಳ ಪಡೆ ತಿರುಗಿ ಬೀಳುವ ಸಾಧ್ಯತೆ ಇದ್ದೇ ಇದೆ. ಹಾಗೆಯೇ ರಬಾಡ, ನೋರ್ಜೆ, ಮಹಾರಾಜ್‌ ಅವರೆಲ್ಲ ಘಾತಕ ಬೌಲರ್ ಎಂಬುದನ್ನೂ ಮರೆಯಬಾರದು.

ಗುವಾಹಟಿಯಲ್ಲಿ ಭಾರತವಿನ್ನೂ ಗೆದ್ದಿಲ್ಲ
ಗುವಾಹಟಿಯ “ಬರ್ಸಾಪಾರ ಕ್ರಿಕೆಟ್‌ ಸ್ಟೇಡಿಯಂ’ನಲ್ಲಿ ಭಾರತವಿನ್ನೂ ಗೆಲುವಿನ ಖಾತೆ ತೆರೆದಿಲ್ಲ. ಇಲ್ಲಿ ಈವರೆಗೆ ನಡೆದದ್ದು ಎರಡೇ ಟಿ20 ಪಂದ್ಯ. 2017ರಲ್ಲಿ ಆಸ್ಟ್ರೇಲಿಯ ವಿರುದ್ಧದ ಮುಖಾಮುಖೀಯಲ್ಲಿ ಭಾರತ 8 ವಿಕೆಟ್‌ ಸೋಲನುಭವಿಸಿತ್ತು. ಬಳಿಕ 2020ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಯಿಂದ ರದ್ದುಗೊಂಡಿತು. ರವಿವಾರ ಇಲ್ಲಿ ನಡೆಯುವುದು 3ನೇ ಮುಖಾಮುಖಿ.

ಆಸ್ಟ್ರೇಲಿಯ ವಿರುದ್ಧ ಭಾರತ ಶೋಚನೀಯ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿತ್ತು. ಮೊದಲು ಆಡಲಿಳಿದು 118ಕ್ಕೆ ಕುಸಿದಿತ್ತು. ಜೇಸನ್‌ ಘಾತಕ ದಾಳಿ ನಡೆಸಿದ್ದರು (21ಕ್ಕೆ 4). ಪಂದ್ಯದ ಮೊದಲ ಓವರ್‌ನಲ್ಲೇ ರೋಹಿತ್‌ ಶರ್ಮ ಮತ್ತು ನಾಯಕ ವಿರಾಟ್‌ ಕೊಹ್ಲಿ ವಿಕೆಟ್‌ ಉಡಾಯಿಸಿದ್ದರು. ಈ ಕುಸಿತದಿಂದ ಭಾರತ ಚೇತರಿಸಿಕೊಳ್ಳಲೇ ಇಲ್ಲ.

ಆಸ್ಟ್ರೇಲಿಯ ಕೂಡ 2 ವಿಕೆಟ್‌ಗಳನ್ನು 13 ರನ್ನಿಗೆ ಕಳೆದುಕೊಂಡಿತು. ಆದರೆ ಮತ್ತೂಂದು ವಿಕೆಟ್‌ ಕೀಳಲು ಭಾರತದಿಂದ ಸಾಧ್ಯವಾಗಲಿಲ್ಲ. ಮೊಸಸ್‌ ಹೆನ್ರಿಕ್ಸ್‌ (ಅಜೇಯ ಅಜೇಯ 62) ಮತ್ತು ಟ್ರ್ಯಾವಿಸ್‌ ಹೆಡ್‌ (ಅಜೇಯ 48) ಸೇರಿಕೊಂಡು ಆಸ್ಟ್ರೇಲಿಯವನ್ನು ಸುಲಭದಲ್ಲಿ ದಡ ಸೇರಿಸಿದರು.

ಟಾಸ್‌ಗೆ ಮಾತ್ರ ಸೀಮಿತ
ಶ್ರೀಲಂಕಾ ವಿರುದ್ಧ 2020ರ ಜ. 5ರಂದು ನಡೆದ ಪಂದ್ಯ ಟಾಸ್‌ಗಷ್ಟೇ ಸೀಮಿತಗೊಂಡಿತು. ಭಾರೀ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಇದು ಸರಣಿಯ ಮೊದಲ ಪಂದ್ಯವಾಗಿತ್ತು.

ಪಂದ್ಯಕ್ಕೆ ಮಳೆ ಭೀತಿ
ಗುವಾಹಟಿ ಟಿ20 ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಈ ಸುದ್ದಿಯಿಂದ ವೀಕ್ಷಕರು ಕಂಗಾಲಾಗಿದ್ದಾರೆ. ಕಳೆದ ಸಲ ಇಲ್ಲಿ ನಡೆಯಬೇಕಿದ್ದ ಭಾರತ-ಶ್ರೀಲಂಕಾ ಪಂದ್ಯ ಕೂಡ ಭಾರೀ ಮಳೆಯಿಂದ ರದ್ದುಗೊಂಡಿತ್ತು. ಇಂಥ ಸ್ಥಿತಿ ಈ ಸಲವೂ ಎದುರಾಗದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. 39 ಸಾವಿರ ವೀಕ್ಷಕರ ಸಾಮರ್ಥ್ಯದ ಈ ಸ್ಟೇಡಿಯಂ “ಹೌಸ್‌ ಫ‌ುಲ್‌’ ಆಗಲಿದೆ.

ಹವಾಮಾನ ಇಲಾಖೆಯ ವರದಿಯಂತೆ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಲಿದೆ. ಅಸ್ಸಾಂ ಕ್ರಿಕೆಟ್‌ ಅಸೋಸಿಯೇಶನ್‌ (ಎಸಿಎ) ಅಮೆರಿಕದಿಂದ ಪಿಚ್‌ ಹೊದಿಕೆಯಿಂದ ಅಂಗಳವನ್ನು ಮುಚ್ಚಿದೆ.

ಆರಂಭ: 7.00
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next