Advertisement

ಭಾರತ-ದಕ್ಷಿಣ ಆಫ್ರಿಕಾ ನಡುವಿನ 5ನೇ ಪಂದ್ಯ ರದ್ದು, ಸರಣಿ ಸಮಬಲ

10:14 PM Jun 19, 2022 | Team Udayavani |

ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾ 5ನೇ ಮತ್ತು ಸರಣಿ ನಿರ್ಣಾಯಕ ಟಿ20 ಪಂದ್ಯ ರದ್ದಾಗಿದೆ. ಸರಣಿ 2-2ರಿಂದ ಸಮಬಲಗೊಂಡ ಕಾರಣ ಜಂಟಿ ವಿಜೇತರೆಂದು ಘೋಷಿಸಲಾಗಿದೆ.

Advertisement

ಕೊರೊನಾ ನಂತರ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಮೊದಲ ಸೀಮಿತ ಓವರ್‌ಗಳ ಪಂದ್ಯವಿದು. ಐಪಿಎಲ್‌ ಪಂದ್ಯಗಳೂ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರು ಮುಗಿಬಿದ್ದು ಟಿಕೆಟ್‌ ಖರೀದಿಸಿದ್ದರು. ಪಂದ್ಯ ರದ್ದಾಗಿದ್ದರಿಂದ ನಿರಾಶೆಯಿಂದ ಮನೆಗೆ ಮರಳಿದರು.

ರಾತ್ರಿ 7 ಗಂಟೆಯಿಂದ ಶುರುವಾಗಬೇಕಿದ್ದ ಪಂದ್ಯ ಜೋರು ಮಳೆಯ ಕಾರಣ 7.47ಕ್ಕೆ ಆರಂಭವಾಯಿತು. ಆಗ ಓವರ್‌ಗಳನ್ನು ತಲಾ 19 ಎಂದು ನಿಗದಿಪಡಿಸಲಾಗಿತ್ತು. ಟಾಸ್‌ ಸೋತ ಭಾರತೀಯರು ಬ್ಯಾಟಿಂಗ್‌ ಆರಂಭಿಸಿದರು. ಇಶಾನ್‌ ಕಿಶನ್‌-ಋತುರಾಜ್‌ ಗಾಯಕ್ವಾಡ್‌ ಬ್ಯಾಟ್‌ ಹಿಡಿದು ಮೈದಾನಕ್ಕಿಳಿದರು. ಇಬ್ಬರ ಆಟ ಅಬ್ಬರದಿಂದಲೇ ಕೂಡಿತ್ತು. ಕಿಶನ್‌ ಕೇವಲ 7 ಎಸೆತಗಳಲ್ಲಿ 2 ಸಿಕ್ಸರ್‌ ಸಮೇತ 15 ರನ್‌ ಗಳಿಸಿದ್ದರು. ಗಾಯಕ್ವಾಡ್‌ 12 ಎಸೆತಗಳಿಂದ 10 ರನ್‌ ಗಳಿಸಿದ್ದರು. ತಂಡ 3.3 ಓವರ್‌ಗಳಲ್ಲಿ 28 ರನ್‌ ಗಳಿಸಿದ್ದಾಗ ಮತ್ತೆ ಮಳೆ ಆರಂಭವಾಯಿತು.ರಾತ್ರಿ 9.30 ಆದರೂ ಮಳೆ ನಿಲ್ಲಲಿಲ್ಲ.

ನಂತರ ತುಸು ಕಡಿಮೆಯಾಗಿದ್ದರಿಂದ 10.2ರಿಂದ ತಲಾ 5 ಓವರ್‌ಗಳ ಪಂದ್ಯವಾಡಿಸಲು ಯೋಚಿಸಲಾಗಿತ್ತು. ಕಡೆಗೆ ಅದೂ ಸಾಧ್ಯವಾಗುವ ಲಕ್ಷಣ ಕಾಣದ್ದರಿಂದ ಪಂದ್ಯ ರದ್ದು ಪಡಿಸಲು ಅಂಪೈರ್‌ಗಳು ನಿರ್ಧರಿಸಿದರು. ಆಟಗಾರರು ಡ್ರೆಸ್ಸಿಂಗ್‌ ಕೊಠಡಿಯಲ್ಲೇ ಪರಸ್ಪರ ಕೈಕುಲುಕಿಕೊಂಡರು. ವೇಗಿ ಭುವನೇಶ್ವರ್‌ ಕುಮಾರ್‌ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಅವರು ಒಟ್ಟು 6 ವಿಕೆಟ್‌ ಪಡೆದಿದ್ದಾರೆ.

Advertisement

ಇನ್ನೀಗ ಭಾರತ, ಐರ್ಲೆಂಡ್‌ ಸರಣಿಗೆ ತೆರಳಬೇಕಿದೆ. ಇಲ್ಲಿ ಹಾರ್ದಿಕ್‌ ಪಾಂಡ್ಯ ನಾಯಕ, ಭುವನೇಶ್ವರ್‌ ಕುಮಾರ್‌ ಉಪನಾಯಕರಾಗಿರುತ್ತಾರೆ. ರಿಷಭ್‌ ಪಂತ್‌ಗೆ ವಿಶ್ರಾಂತಿ ನೀಡಲಾಗುತ್ತದೆ. ಐರ್ಲೆಂಡ್‌ ಸರಣಿ ಮುಗಿದ ಕೂಡಲೇ ಭಾರತೀಯರು ಇಂಗ್ಲೆಂಡ್‌ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ. ನಂತರ ಟಿ20, ಏಕದಿನ ಸರಣಿಯೂ ನಡೆಯಲಿದೆ. ಐರ್ಲೆಂಡ್‌ ಸರಣಿ ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಇಲ್ಲಿನ ಪ್ರದರ್ಶನ ಕೆಲ ಯುವ ಆಟಗಾರರ ಭವಿಷ್ಯ ನಿರ್ಧರಿಸುತ್ತದೆ.

ಅಭಿಮಾನಿಗಳಿಂದ ತುಂಬಿದ್ದ ಮೈದಾನ
ಚಿನ್ನಸ್ವಾಮಿ ಕ್ರೀಡಾಂಗಣ ಭಾನುವಾರ ಪ್ರೇಕ್ಷಕರಿಂದ ಭರ್ತಿಯಾಗಿತ್ತು. ರಾಜ್ಯದ ಮೂಲೆಮೂಲೆಗಳಿಂದ ಅಭಿಮಾನಿಗಳು ಆಗಮಿಸಿದ್ದರು. ಅವರ ವಾಹನ ನಿಲುಗಡೆಗೆ ಕೆಎಸ್‌ಸಿಎ ವ್ಯವಸ್ಥೆಯನ್ನೂ ಮಾಡಿತ್ತು. ಮೆಟ್ರೋವನ್ನೂ ರಾತ್ರಿ 1.30ರವರೆಗೆ ಓಡಿಸುವ ನಿರ್ಧಾರ ಮಾಡಲಾಗಿತ್ತು. ಆದರೆ ಮಳೆ ಬಂದಿದ್ದರಿಂದ ಎಲ್ಲ ಯೋಜನೆಗಳು ತಲೆ ಕೆಳಗಾದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next