Advertisement

ಠಾಕೂರ್‌ ಸೂಪರ್‌ ಬೌಲಿಂಗ್‌; ಭಾರತ ತಿರುಗೇಟು

11:12 PM Jan 04, 2022 | Team Udayavani |

ಜೊಹಾನ್ಸ್‌ಬರ್ಗ್‌: ಶಾರ್ದೂಲ್ ಠಾಕೂರ್‌ ಅವರ “ಶಾರ್ಪ್‌ ಆ್ಯಂಡ್‌ ಸೂಪರ್‌’ ಬೌಲಿಂಗ್‌ ಸಾಹಸದಿಂದ ಜೊಹಾನ್ಸ್‌ಬರ್ಗ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ಆತಿಥೇಯ ದಕ್ಷಿಣ ಆಫ್ರಿಕಾಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.

Advertisement

ಮೊದಲ ಸರದಿಯಲ್ಲಿ ಕೇವಲ 27 ರನ್‌ ಹಿನ್ನಡೆಗೆ ಸಿಲುಕಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 85 ರನ್‌ ಮಾಡಿರುವ ರಾಹುಲ್‌ ಪಡೆ 58 ರನ್‌ ಲೀಡ್‌ ಹೊಂದಿದೆ. ಶತಪ್ರಯತ್ನ ನಡೆಸಿ ಈ ಮುನ್ನಡೆಯನ್ನು 250ರ ಗಡಿ ದಾಟಿಸಿದರೆ ಹರಿಣಗಳ ನಾಡಿನಲ್ಲಿ ಭಾರತ ಟೆಸ್ಟ್‌ ಇತಿಹಾಸ ನಿರ್ಮಿಸುವುದರಲ್ಲಿ ಅನುಮಾನವಿಲ್ಲ.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ನಾಯಕ ಕೆ.ಎಲ್‌. ರಾಹುಲ್‌ (8) ಬೇಗನೇ ಕಳೆದುಕೊಂಡಿತು. 23 ರನ್‌ ಮಾಡಿದ ಮಾಯಾಂಕ್‌ ಅಗರ್ವಾಲ್‌ ಕಾಲನ್ನು ಮುಂದಿಟ್ಟು ತಾವಾಗಿ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. ತೂಗುಗತ್ತಿಯ ಭೀತಿಯಲ್ಲಿರುವ ಚೇತೇಶ್ವರ್‌ ಪೂಜಾರ 35 ಮತ್ತು ಅಜಿಂಕ್ಯ ರಹಾನೆ 11 ರನ್‌ ಮಾಡಿ ಆಟವಾಡುತ್ತಿದ್ದಾರೆ.

ಠಾಕೂರ್‌ ಸೂಪರ್‌
ಮೊದಲ ಅವಧಿಯ ಆಟದಲ್ಲಿ ಭಾರತ 3 ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾಯಿತು. ಈ ಮೂರೂ ವಿಕೆಟ್‌ ಶಾರ್ದೂಲ್ ಠಾಕೂರ್‌ ಪಾಲಾಯಿತು. ಡೀನ್‌ ಎಲ್ಗರ್‌, ಕೀಗನ್‌ ಪೀಟರ್‌ಸನ್‌ ಮತ್ತು ರಸ್ಸಿ ವಾನ್‌ ಡರ್‌ ಡುಸೆನ್‌ ಅವರನ್ನು ಠಾಕೂರ್‌ ಪೆವಿಲಿಯನ್ನಿಗೆ ಅಟ್ಟಿದರು.

ಒಂದಕ್ಕೆ 35 ರನ್‌ ಗಳಿಸಿ ಮೊದಲ ದಿನದಾಟ ಮುಗಿಸಿದ್ದ ದಕ್ಷಿಣ ಆಫ್ರಿಕಾ, 88ರ ತನಕ ಬೆಳೆಯಿತು. ನಾಯಕ ಎಲ್ಗರ್‌ ಮತ್ತು ಪೀಟರ್‌ಸನ್‌ ತೀವ್ರ ಎಚ್ಚರಿಕೆಯಿಂದ ಭಾರತದ ಬೌಲಿಂಗ್‌ ದಾಳಿಯನ್ನು ನಿಭಾಯಿಸಿ ಇನ್ನಿಂಗ್ಸ್‌ ಬೆಳೆಸತೊಡಗಿದರು. ದ್ವಿತೀಯ ವಿಕೆಟಿಗೆ 74 ರನ್‌ ಒಟ್ಟುಗೂಡಿತು. ಆಗ ಠಾಕೂರ್‌ ಮೊದಲ ಬ್ರೇಕ್‌ ಒದಗಿಸಿದರು. ವಿಪರೀತ ಡಿಫೆನ್ಸ್‌ ಆಡುತ್ತಿದ್ದ ಎಲ್ಗರ್‌ (120 ಎಸೆತಗಳಿಂದ 28 ರನ್‌) ಕೀಪರ್‌ ಪಂತ್‌ಗೆ ಕ್ಯಾಚಿತ್ತು ವಾಪಸಾದರು.
ಇನ್ನೊಂದೆಡೆ ಪೀಟರ್‌ಸನ್‌ ಮೊದಲ ಟೆಸ್ಟ್‌ ಫಿಫ್ಟಿ ಬಾರಿಸಿದ ಸಂಭ್ರಮದಲ್ಲಿದ್ದರು. ಸ್ಕೋರ್‌ ನೂರರ ಗಡಿ ದಾಟಿದೊಡನೆ ಅವರೂ ಠಾಕೂರ್‌ ಮೋಡಿಗೆ ಸಿಲುಕಿದರು. 118 ಎಸೆತ ಎದುರಿಸಿದ ಪೀಟರ್‌ಸನ್‌ 9 ಬೌಂಡರಿ ನೆರವಿನಿಂದ 62 ರನ್‌ ಹೊಡೆದರು. ಇದಕ್ಕಿಂತ ಮೊದಲು 19 ರನ್ನೇ ಅವರ ಸರ್ವಾಧಿಕ ಗಳಿಕೆ ಆಗಿತ್ತು. ಡುಸೆನ್‌ (1) ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಲಂಚ್‌ ವೇಳೆ ದಕ್ಷಿಣ ಆಫ್ರಿಕಾ 4ಕ್ಕೆ 102 ರನ್‌ ಮಾಡಿತ್ತು.

Advertisement

ಬವುಮ ಅರ್ಧ ಶತಕ
ದ್ವಿತೀಯ ಅವಧಿಯಲ್ಲೂ ಭಾರತ 3 ವಿಕೆಟ್‌ ಹಾರಿಸುವಲ್ಲಿ ಯಶಸ್ವಿಯಾಯಿತು. ಠಾಕೂರ್‌ ಮತ್ತೆ ಘಾತಕವಾಗಿ ಪರಿಣಮಿಸಿದರು. ಕೀಪರ್‌ ವೆರೇಯ್ನ (21) ಮತ್ತು ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಟೆಂಬ ಬವುಮ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಬವುಮ ಆಕ್ರಮಣಕಾರಿ ಆಟವಾಡಿ ಅರ್ಧ ಶತಕ ಪೂರೈಸಿದರು. ಅವರ ಗಳಿಕೆ 60 ಎಸೆತಗಳಿಂದ 51 ರನ್‌ (6 ಬೌಂಡರಿ, 1 ಸಿಕ್ಸರ್‌). ರಬಾಡ ಖಾತೆ ತೆರೆಯದೆ ಶಮಿಗೆ ಟೀ ವೇಳೆ ಆತಿಥೇಯರು 7ಕ್ಕೆ 197 ರನ್‌ ಮಾಡಿ ಭಾರತದ ಮೊತ್ತವನ್ನು ಸಮೀಪಿಸಿದ್ದರು.ಉಳಿದ 3 ವಿಕೆಟ್‌ಗಳನ್ನು ಭಾರತ ಅಂತಿಮ ಅವಧಿಯಲ್ಲಿ ಹಾರಿಸಿತು. ಜಾನ್ಸೆನ್‌ ಮತ್ತು ಮಹಾರಾಜ್‌ ತಲಾ 21 ರನ್‌ ಮಾಡಿ ದರು.

ಇದನ್ನೂ ಓದಿ:ಪ್ರೊ ಕಬಡ್ಡಿ: ಯು ಮುಂಬಾ ಟೈ; ತಮಿಳ್‌ ತಲೈವಾಸ್‌ ಜೈ

ಶಾರ್ದೂಲ್ ಬೌಲಿಂಗ್‌ ಸಾಹಸ
ಬಲಗೈ ಮಧ್ಯಮ ವೇಗಿ ಶಾರ್ದೂಲ್ ಠಾಕೂರ್‌ 61ಕ್ಕೆ 7 ವಿಕೆಟ್‌ ಉರುಳಿಸಿ ಭಾರತದ ಬೌಲಿಂಗ್‌ ಹೀರೋ ಎನಿಸಿದರು. ಇದು ದಕ್ಷಿಣ ಆಫ್ರಿಕಾದಲ್ಲಿ ಭಾರತದ ಸರ್ವಶ್ರೇಷ್ಠ ಬೌಲಿಂಗ್‌ ಪ್ರದರ್ಶನವಾಗಿದೆ. 2010-11ರ ಕೇಪ್‌ಟೌನ್‌ ಟೆಸ್ಟ್‌ ಪಂದ್ಯದಲ್ಲಿ ಹರ್ಭಜನ್‌ ಸಿಂಗ್‌ 120ಕ್ಕೆ 7 ವಿಕೆಟ್‌ ಕೆಡವಿದ್ದು ಹಿಂದಿನ ದಾಖಲೆ.

ಒಟ್ಟಾರೆಯಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯುತ್ತಮ ಬೌಲಿಂಗ್‌ ಸಾಧನೆಗೈದ ಭಾರತದ ಬೌಲರ್‌ ಎಂಬ ಹಿರಿಮೆಗೂ ಠಾಕೂರ್‌ ಪಾತ್ರರಾದರು. 2015-16ರ ನಾಗ್ಪುರ ಟೆಸ್ಟ್‌ನಲ್ಲಿ ಆರ್‌. ಅಶ್ವಿ‌ನ್‌ 66ಕ್ಕೆ 7 ವಿಕೆಟ್‌ ಕಿತ್ತ ದಾಖಲೆ ಪತನಗೊಂಡಿತು.

6ನೇ ಟೆಸ್ಟ್‌ ಆಡುತ್ತಿರುವ ಠಾಕೂರ್‌ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಉರುಳಿಸಿದ ಮೊದಲ ನಿದರ್ಶನ ಇದಾಗಿದೆ. ಹಾಗೆಯೇ ವಾಂಡರರ್ ಟೆಸ್ಟ್‌ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್‌ ಪ್ರದರ್ಶಿಸಿದ ಭಾರತದ ಬೌಲರ್‌ ಆಗಿಯೂ ಮೂಡಿಬಂದರು.

ಶಾರ್ದೂಲ್ ಠಾಕೂರ್‌ ವಾಂಡರರ್ ಇನ್ನಿಂಗ್ಸ್‌ ನಲ್ಲಿ 5 ಹಾಗೂ ಹೆಚ್ಚಿನ ವಿಕೆಟ್‌ ಉರುಳಿಸಿದ ಭಾರತದ 6ನೇ ಸಾಧಕ. ಉಳಿದವರೆಂದರೆ ಅನಿಲ್‌ ಕುಂಬ್ಳೆ (53ಕ್ಕೆ 6, 1992-93), ಜೆ. ಶ್ರೀನಾಥ್‌ (104ಕ್ಕೆ 5, 1996-97), ಎಸ್‌. ಶ್ರೀಶಾಂತ್‌ (40ಕ್ಕೆ 5, 2006-07), ಜಸ್‌ಪ್ರೀತ್‌ ಬುಮ್ರಾ (54ಕ್ಕೆ 5, 2017-18) ಮತ್ತು ಮೊಹಮ್ಮದ್‌ ಶಮಿ (29ಕ್ಕೆ 5, 2017-18). ದಕ್ಷಿಣ ಆಫ್ರಿಕಾ 1992ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪುನರ್‌ ಪ್ರವೇಶ ಪಡೆದ ಬಳಿಕ ಜೊಹಾನ್ಸ್‌ಬರ್ಗ್‌ನಲ್ಲಿ ದಾಖಲಾದ ಅತ್ಯುತ್ತಮ ಬೌಲಿಂಗ್‌ ಸಾಧನೆಯೂ ಇದಾಗಿದೆ. 2004-05ರ ಟೆಸ್ಟ್‌ನಲ್ಲಿ ಇಂಗ್ಲೆಂಡಿನ ಮ್ಯಾಥ್ಯೂ ಹೋಗಾರ್ಡ್‌ ಕೂಡ 61ಕ್ಕೆ 7 ವಿಕೆಟ್‌ ಕೆಡವಿದ್ದರು.

ಸ್ಕೋರ್‌ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌ 202
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್‌
ಡೀನ್‌ ಎಲ್ಗರ್‌ ಸಿ ಪಂತ್‌ ಬಿ ಶಾರ್ದೂಲ್ 28
ಐಡನ್‌ ಮಾರ್ಕ್‌ರಮ್‌ ಎಲ್‌ಬಿಡಬ್ಲ್ಯು ಶಮಿ7
ಪೀಟರ್‌ಸನ್‌ ಸಿ ಅಗರ್ವಾಲ್‌ ಬಿ ಶಾರ್ದೂಲ್ 62
ಡುಸೆನ್‌ ಸಿ ಪಂತ್‌ ಬಿ ಶಾರ್ದೂಲ್ 1
ಟೆಂಬ ಬವುಮ ಸಿ ಪಂತ್‌ ಬಿ ಶಾರ್ದೂಲ್ 51
ಕೈಲ್‌ ವೆರೇಯ್ನ ಎಲ್‌ಬಿಡಬ್ಲ್ಯು ಶಾರ್ದೂಲ್21
ಮಾರ್ಕೊ ಜಾನ್ಸೆನ್‌ ಸಿ ಅಶ್ವಿ‌ನ್‌ ಬಿ ಶಾರ್ದೂಲ್ 21
ಕಾಗಿಸೊ ರಬಾಡ ಸಿ ಸಿರಾಜ್‌ ಬಿ ಶಮಿ 0
ಮಹಾರಾಜ್‌ ಬಿ ಬುಮ್ರಾ 21
ಡ್ನೂನ್‌ ಒಲಿವರ್‌ ಔಟಾಗದೆ 1
ಲುಂಗಿ ಎನ್‌ಗಿಡಿ ಸಿ ಪಂತ್‌ ಬಿ ಶಾರ್ದೂಲ್ 0
ಇತರ 16
ಒಟ್ಟು(ಆಲೌಟ್‌) 229
ವಿಕೆಟ್‌ ಪತನ:1-14, 2-88, 3-101, 4-102, 5-162, 6-177, 7-179, 8-217, 9-228.
ಬೌಲಿಂಗ್‌;
ಜಸ್‌ಪ್ರೀತ್‌ ಬುಮ್ರಾ 21-5-49-1
ಮೊಹಮ್ಮದ್‌ ಶಮಿ 21-5-52-2
ಮೊಹಮ್ಮದ್‌ ಸಿರಾಜ್‌ 9.5-2-24-0
ಶಾರ್ದೂಲ್ ಠಾಕೂರ್‌ 17.5-3-61-7
ಆರ್‌.ಅಶ್ವಿ‌ನ್‌ 10-1-35-0

ಭಾರತ ದ್ವಿತೀಯ ಇನ್ನಿಂಗ್ಸ್‌
ಕೆ.ಎಲ್‌. ರಾಹುಲ್‌ ಸಿ ಮಾರ್ಕ್‌ರಮ್‌ ಬಿ ಜಾನ್ಸೆನ್‌ 8
ಅಗರ್ವಾಲ್‌ ಎಲ್‌ಬಿಡಬ್ಲ್ಯು ಒಲಿವರ್‌ 23
ಪೂಜಾರ ಬ್ಯಾಟಿಂಗ್‌ 35
ಅಜಿಂಕ್ಯ ರಹಾನೆ ಬ್ಯಾಟಿಂಗ್‌ 11
ಇತರ 8
ಒಟ್ಟು (ಎರಡು ವಿಕೆಟಿಗೆ) 85
ವಿಕೆಟ್‌ ಪತನ: 1-24, 2 -44.
ಬೌಲಿಂಗ್‌;
ಕಾಗಿಸೊ ರಬಾಡ 6-1-26-0
ಡ್ನೂನ್‌ ಒಲಿವರ್‌ 4-0-22-1
ಲುಂಗಿ ಎನ್‌ಗಿಡಿ 3-1-5-0
ಮಾರ್ಕೊ ಜಾನ್ಸೆನ್‌ 6-2-18-1
ಕೆಶವ್‌ ಮಹರಾಜ್‌ 1-0-8-0

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next