Advertisement

ಕೊಹ್ಲಿ ವಿರಾಟ ದ್ವಿಶತಕಾಭಿಷೇಕ; 601 ರನ್‌ ಪೇರಿಸಿದ ಭಾರತ; ಇಕ್ಕಟ್ಟಿನಲ್ಲಿ ಆಫ್ರಿಕಾ

10:40 AM Oct 12, 2019 | Sriram |

ಪುಣೆ: ನಾಯಕ ವಿರಾಟ್‌ ಕೊಹ್ಲಿ ಅಜೇಯ ದ್ವಿಶತಕ ಸಾಹಸದಿಂದ ಪುಣೆ ಟೆಸ್ಟ್‌ ಪಂದ್ಯದಲ್ಲಿ ಭಾರತ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಸವಾರಿ ಮಾಡಿದೆ. ದ್ವಿತೀಯ ದಿನದಾಟದಲ್ಲಿ 5 ವಿಕೆಟಿಗೆ 601 ರನ್‌ ಪೇರಿಸಿ ಇನಿಂಗ್ಸ್‌ ಬಿಟ್ಟುಕೊಟ್ಟಿದೆ. ಇದರಲ್ಲಿ ಕೊಹ್ಲಿ ಪಾಲು ಅಜೇಯ 254 ರನ್‌.

Advertisement

ಜವಾಬಿತ್ತ ಹರಿಣಗಳ ಪಡೆ 2ನೇ ದಿನದ ಆಟದ ಅಂತ್ಯಕ್ಕೆ 3 ವಿಕೆಟಿಗೆ 36 ರನ್‌ ಗಳಿಸಿ ಸಂಕಟಕ್ಕೆ ಸಿಲುಕಿದೆ. ಇನ್ನೂ 565 ರನ್ನುಗಳ ಹಿನ್ನಡೆಯಲ್ಲಿದೆ. ಡಿ ಬ್ರುಯಿನ್‌ ನಿಲ್ಲುವ ಸೂಚನೆ ನೀಡಿದ್ದಾರೆ. ಡು ಪ್ಲೆಸಿಸ್‌ ಮತ್ತು ಡಿ ಕಾಕ್‌ ಕ್ರೀಸ್‌ಗೆ ಇಳಿಯಬೇಕಿದೆ. ಇತ್ತ ಟ್ರಂಪ್‌ಕಾರ್ಡ್‌ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಇನ್ನೂ ದಾಳಿಗೆ ಇಳಿದಿಲ್ಲ.

3ಕ್ಕೆ 273 ರನ್‌ ಮಾಡಿದಲ್ಲಿಂದ ದ್ವಿತೀಯ ದಿನದಾಟ ಮುಂದುವರಿಸಿದ ಭಾರತ, ಪ್ರವಾಸಿ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸುತ್ತ ಸಾಗಿತು. ಕೊಹ್ಲಿ ಅವರಂತೂ ಪ್ರಚಂಡ ಬ್ಯಾಟಿಂಗ್‌ ನಡೆಸಿ ಸರಾಗವಾಗಿ ರನ್‌ ಪೇರಿಸತೊಡಗಿದರು. ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತ ಮುನ್ನುಗ್ಗಿದರು. ಶತಕ, ದ್ವಿಶತಕ, 250ರ ಗಡಿಯನ್ನು ಸುಲಭದಲ್ಲಿ ದಾಟಿದಾಗ ತ್ರಿಶತಕದ ನಿರೀಕ್ಷೆಯೂ ಗರಿಗೆದರಿತ್ತು. ಆದರೆ ಅವರಿಗೆ ಅಮೋಘ ಬೆಂಬಲವಿತ್ತ ರವೀಂದ್ರ ಜಡೇಜ ಔಟಾದ ಕೂಡಲೇ ಇನಿಂಗ್ಸ್‌ ಡಿಕ್ಲೇರ್‌ ಮಾಡಿದರು.

63 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಕೊಹ್ಲಿ ಒಂದೊಂದೇ ದಾಖಲೆಗಳ ಮೆಟ್ಟಿಲನ್ನೇರುತ್ತ ಇನ್ನೂರೈವತ್ತರ ಗಡಿ ದಾಟಿ ಮೆರೆದರು. 18 ರನ್‌ ಮಾಡಿದ್ದ ಅಜಿಂಕ್ಯ ರಹಾನೆ 59 ರನ್‌ ಹೊಡೆದರು. ಆಲ್‌ರೌಂಡರ್‌ ರವೀಂದ್ರ ಜಡೇಜ ಗಳಿಕೆ 91 ರನ್‌. ಇವರಿಗೆ ಶತಕ ತಪ್ಪಿಸಿದ್ದಷ್ಟೇ ಆಫ್ರಿಕಾ ಬೌಲರ್‌ಗಳಿಗೆ ದೊರೆತ ಸಮಾಧಾನ.

225 ರನ್‌ ಜತೆಯಾಟ
ವಿರಾಟ್‌ ಕೊಹ್ಲಿ-ರವೀಂದ್ರ ಜಡೇಜ 5ನೇ ವಿಕೆಟಿಗೆ 225 ರನ್‌ ಜತೆಯಾಟ ದಾಖಲಿಸುವ ಮೂಲಕ ಭಾರತದ ಮೊತ್ತವನ್ನು ಬಿರುಸಿನ ಗತಿಯಲ್ಲಿ ಏರಿಸಿದರು.

Advertisement

ವಿರಾಟ್‌ ಕೊಹ್ಲಿ ಅವರ 26ನೇ ಟೆಸ್ಟ್‌ ಶತಕ 173 ಎಸೆತಗಳಿಂದ ದಾಖಲಾಯಿತು. ದ್ವಿಶತಕಕ್ಕೆ 295 ಎಸೆತ ಸಾಕಾಯಿತು. 254 ರನ್‌ 336 ಎಸೆತಗಳಿಂದ ಒಟ್ಟುಗೂಡಿತು. ಸಿಡಿಸಿದ್ದು 33 ಬೌಂಡರಿ ಹಾಗೂ 2 ಸಿಕ್ಸರ್‌.

ರವೀಂದ್ರ ಜಡೇಜ ತಮ್ಮ ಬ್ಯಾಟಿಂಗ್‌ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಆದರೆ ದ್ವಿತೀಯ ಟೆಸ್ಟ್‌ ಶತಕ ಕೇವಲ 9 ರನ್ನಿನಿಂದ ಕೈತಪ್ಪಿತು. ಅವರ 91 ರನ್‌ 104 ಎಸೆತಗಳಿಂದ ಬಂತು. ಇದರಲ್ಲಿ 8 ಬೌಂಡರಿ, 2 ಸಿಕ್ಸರ್‌ ಒಳಗೊಂಡಿತ್ತು.

ಅಜಿಂಕ್ಯ ರಹಾನೆ ಗಳಿಕೆ 59 ರನ್‌. ಇದಕ್ಕಾಗಿ 168 ಎಸೆತ ನಿಭಾಯಿಸಿದರು (8 ಬೌಂಡರಿ). 2ನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸಿಕ್ಕಿದ್ದು 2 ಯಶಸ್ಸು ಮಾತ್ರ. ಮೊದಲ ದಿನದ ಮೂರೂ ವಿಕೆಟ್‌ ಹಾರಿಸಿದ ರಬಾಡ ಸದ್ದು ಮಾಡಲಿಲ್ಲ. ಸ್ಪಿನ್ನರ್‌ಗಳಾದ ಮಹಾರಾಜ್‌ ಮತ್ತು ಮುತ್ತುಸ್ವಾಮಿ 100 ಪ್ಲಸ್‌ ರನ್‌ ಬಿಟ್ಟುಕೊಟ್ಟು ದುಬಾರಿಯಾದರು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌
ಮಾಯಾಂಕ್‌ ಅಗರ್ವಾಲ್‌ ಸಿ ಡು ಪ್ಲೆಸಿಸ್‌ ಬಿ ರಬಾಡ 108
ರೋಹಿತ್‌ ಶರ್ಮ ಸಿ ಡಿ ಕಾಕ್‌ ಬಿ ರಬಾಡ 14
ಚೇತೇಶ್ವರ್‌ ಪೂಜಾರ ಸಿ ಡು ಪ್ಲೆಸಿಸ್‌ ಬಿ ರಬಾಡ 58
ವಿರಾಟ್‌ ಕೊಹ್ಲಿ ಔಟಾಗದೆ 254
ಅಜಿಂಕ್ಯ ರಹಾನೆ ಸಿ ಡಿ ಕಾಕ್‌ ಬಿ ಮಹಾರಾಜ್‌ 59
ರವೀಂದ್ರ ಜಡೇಜ ಸಿ ಬ್ರುಯಿನ್‌ ಬಿ ಮುತ್ತುಸ್ವಾಮಿ 91
ಇತರ 17
ಒಟ್ಟು (5 ವಿಕೆಟಿಗೆ ಡಿಕ್ಲೇರ್‌) 601
ವಿಕೆಟ್‌ ಪತನ: 1-25, 2-163, 3-198, 4-376, 5-601.
ಬೌಲಿಂಗ್‌:
ವೆರ್ನನ್‌ ಫಿಲಾಂಡರ್‌ 26-6-66-0
ಕಾಗಿಸೊ ರಬಾಡ 30-3-93-3
ಅನ್ರಿಚ್‌ ನೋರ್ಜೆ 25-5-100-0
ಕೇಶವ್‌ ಮಹಾರಾಜ್‌ 50-10-196-1
ಸೇನುರಣ್‌ ಮುತ್ತುಸ್ವಾಮಿ 19.3-1-97-1
ಡೀನ್‌ ಎಲ್ಗರ್‌ 4-0-26-0
ಐಡನ್‌ ಮಾರ್ಕ್‌ರಮ್‌ 2-0-17-0

ದಕ್ಷಿಣ ಆಫ್ರಿಕಾ
ಡೀನ್‌ ಎಲ್ಗರ್‌ ಬಿ ಯಾದವ್‌ 6
ಐಡನ್‌ ಮಾರ್ಕ್‌ರಮ್‌ ಎಲ್‌ಬಿಡಬ್ಲ್ಯು ಯಾದವ್‌ 0
ಥಿಯುನಿಸ್‌ ಡಿ ಬ್ರುಯಿನ್‌ ಬ್ಯಾಟಿಂಗ್‌ 20
ಟೆಂಬ ಬವುಮ ಸಿ ಶಾ ಬಿ ಶಮಿ 8
ಅನ್ರಿಚ್‌ ನೋರ್ಜೆ ಬ್ಯಾಟಿಂಗ್‌ 2
ಇತರ 0
ಒಟ್ಟು (3 ವಿಕೆಟಿಗೆ) 36
ವಿಕೆಟ್‌ ಪತನ: 1-2, 2-13, 3-33.
ಬೌಲಿಂಗ್‌:
ಇಶಾಂತ್‌ ಶರ್ಮ 4-0-17-0
ಉಮೇಶ್‌ ಯಾದವ್‌ 4-1-16-2
ರವೀಂದ್ರ ಜಡೇಜ 4-4-0-0
ಮೊಹಮ್ಮದ್‌ ಶಮಿ 3-1-3-1

Advertisement

Udayavani is now on Telegram. Click here to join our channel and stay updated with the latest news.

Next