Advertisement

ಡರ್ಬನ್‌ ಮೂಲಕ ಏಕದಿನ ಧಮಾಕ

06:05 AM Feb 01, 2018 | Team Udayavani |

ಡರ್ಬನ್‌: ದಕ್ಷಿಣ ಆಫ್ರಿಕಾ ಪ್ರವಾಸ ಏಷ್ಯಾದ ತಂಡಗಳಿಗೆ ಯಾವತ್ತೂ ಕಬ್ಬಿಣದ ಕಡಲೆ ಎಂಬ ನಂಬಿಕೆಯನ್ನು ಟೀಮ್‌ ಇಂಡಿಯಾ ಈ ಬಾರಿ ಸ್ವಲ್ಪ ಮಟ್ಟಿಗೆ ಹುಸಿ ಮಾಡಿದೆ. 

Advertisement

3 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕಳೆದುಕೊಂಡರೂ ಜೊಹಾನ್ಸ್‌ಬರ್ಗ್‌ನಲ್ಲಿ ಗೆಲುವಿನ ಬಾವುಟ ಹಾರಿಸಿ “ವಾಂಡರರ್’ನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿದೆ. ಇದರ ಬೆನ್ನಲ್ಲೇ 6 ಪಂದ್ಯಗಳ ಸುದೀರ್ಘ‌ ಸರಣಿ ಗುರುವಾರದಿಂದ ಡರ್ಬನ್‌ನ “ಕಿಂಗ್ಸ್‌ಮೀಡ್‌’ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. 

ಹರಿಣಗಳ ನಾಡಿನಲ್ಲಿ ಈವರೆಗೆ ಏಕದಿನ ಸರಣಿ ಗೆಲ್ಲದ ಟೀಮ್‌ ಇಂಡಿಯಾದಿಂದ ಇತಿಹಾಸ ನಿರ್ಮಿಸಲು ಸಾಧ್ಯವೇ ಎಂಬ ಕುತೂಹಲ ಎಲ್ಲರದು!

ಆಫ್ರಿಕಾದ ವೇಗದ ಟ್ರ್ಯಾಕ್‌ಗಳಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಪರದಾಡಿದರೂ ಬೌಲರ್‌ಗಳ ಪರಾಕ್ರಮ ಅಮೋಘ ಮಟ್ಟದಲ್ಲಿತ್ತು. ಮೂರೂ ಟೆಸ್ಟ್‌ಗಳಲ್ಲಿ ಎದುರಾಳಿಯನ್ನು 2 ಸಲ ಆಲೌಟ್‌ ಮಾಡಿದ್ದು ಟೀಮ್‌ ಇಂಡಿಯಾ ಬೌಲರ್‌ಗಳ ಸಾಹಸಕ್ಕೆ ಸಾಕ್ಷಿ. ಬೌಲರ್‌ಗಳ ಈ ಪರಾಕ್ರಮ ಏಕದಿನ ಸರಣಿಯಲ್ಲೂ ಮುಂದುವರಿಯುವ ಬಗ್ಗೆ ನಂಬಿಕೆ ಇರಿಸಿಕೊಳ್ಳಬಹುದು. ಇವರೊಂದಿಗೆ ಬ್ಯಾಟ್ಸ್‌ಮನ್‌ಗಳೂ ಕ್ರೀಸ್‌ ಆಕ್ರಮಿಸಿಕೊಂಡು ಮುನ್ನುಗ್ಗಿದರೆ ಹರಿಣಗಳನ್ನು ಬೇಟೆಯಾಡುವುದು ಅಸಾಧ್ಯವೇನಲ್ಲ ಎಂಬುದೊಂದು ಲೆಕ್ಕಾಚಾರ.

2019ರ ವಿಶ್ವಕಪ್‌ಕ್ರಿಕೆಟ್‌ ಪಂದ್ಯಾವಳಿಗೆ ಇನ್ನು ಕೇವಲ 14 ತಿಂಗಳಷ್ಟೇ ಉಳಿದಿರುವುದರಿಂದ ಎರಡೂ ತಂಡಗಳ ಸಾಮರ್ಥ್ಯ ಪರೀಕ್ಷೆಗೆ ಈ ಸರಣಿ ವೇದಿಕೆಯೂ ಹೌದು. ಈ ಸರಣಿ ಬಳಿಕ ಭಾರತ, ಮುಂದಿನ ಆಗಸ್ಟ್‌ ತಿಂಗಳ ತನಕವೂ ಬೇರೆ ಬೇರೆ ರಾಷ್ಟ್ರಗಳ ವಿರುದ್ಧ ಏಕದಿನ ಹಾಗೂ ಟಿ20 ಸರಣಿಗಳನ್ನು ಆಡಲಿಕ್ಕಿದೆ. ಜತೆಗೆ ಐಪಿಎಲ್‌ ಕೂಡ ನಡೆಯಲಿದೆ. ಇಲ್ಲಿ ಗಮನಾರ್ಹ ಪ್ರದರ್ಶನ ಕಾಯ್ದುಕೊಂಡರೆ ಟೀಮ್‌ ಇಂಡಿಯಾ ವಿಶ್ವಕಪ್‌ ವೇಳೆ ಒಂದು ಹದಕ್ಕೆ ಬರುವುದು ನಿಶ್ಚಿತ.

Advertisement

ಓಪನಿಂಗ್‌ ಕ್ಲಿಕ್‌ ಆಗಬೇಕು
ಭಾರತದ ಓಪನಿಂಗ್‌ ಕ್ಲಿಕ್‌ ಆದರೆ 50 ಓವರ್‌ಗಳನ್ನು ನಿಭಾಯಿಸುವುದು ಸಮಸ್ಯೆ ಅಗದು. ಅದರೆ ಪೂರ್ತಿ ಇನ್ನಿಂಗ್ಸ್‌ ಆಡಿದರೂ ಇಲ್ಲಿನ ಟ್ರ್ಯಾಕ್‌ ಮೇಲೆ ಬೃಹತ್‌ ಮೊತ್ತ ದಾಖಲಾಗುವ ಬಗ್ಗೆ ನಂಬಿಕೆ ಇಲ್ಲ. ಪಿಚ್‌ಗಳನ್ನು “ಬ್ಯಾಟಿಂಗ್‌ ಸ್ನೇಹಿ’ಯಾಗಿ ರೂಪಿಸಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ರೋಹಿತ್‌-ಧವನ್‌, ಕೊಹ್ಲಿ, ಪಾಂಡೆ, ರಹಾನೆ, ಅಯ್ಯರ್‌, ಜಾಧವ್‌, ಧೋನಿ, ಪಾಂಡ್ಯ, ಕಾರ್ತಿಕ್‌… ಹೀಗೆ ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಲೈನ್‌ಅಪ್‌ ಸಾಗುತ್ತದೆ. ಬೌಲಿಂಗ್‌ನಲ್ಲಿ ಶಮಿ, ಭುವನೇಶ್ವರ್‌, ಬುಮ್ರಾ ಟ್ರಂಪ್‌ಕಾರ್ಡ್‌ ಆಗಬಲ್ಲರು. ಚಾಹಲ್‌, ಕುಲದೀಪ್‌, ಅಕ್ಷರ್‌ ಪಟೇಲ್‌ ಸ್ಪಿನ್‌ ಅಸ್ತ್ರಗಳಾಗಿದ್ದಾರೆ. 6 ಪಂದ್ಯಗಳ ಸರಣಿಯಾದ್ದರಿಂದ ಸ್ಥಿರ ಪ್ರದರ್ಶನ ನೀಡುವ ಒತ್ತಡ ಎಲ್ಲರ ಮೇಲೂ ಇದೆ. ಅಕಸ್ಮಾತ್‌ ಆರಂಭದಲ್ಲೇ ಎಡವಿದರೆ, ಇನ್ನೂ ಸಾಕಷ್ಟು ಪಂದ್ಯಗಳಿವೆಯಲ್ಲ ಎಂಬ ತೀರ್ಮಾನಕ್ಕೆ ಬಂದರೆ ಮಾತ್ರ ಅಪಾಯ ತಪ್ಪಿದ್ದಲ್ಲ.

ಭಾರತದ ಕಳಪೆ ದಾಖಲೆ
ದಕ್ಷಿಣ ಆಫ್ರಿಕಾದಲ್ಲಿ ಭಾರತ 1992ರಲ್ಲಿ ಏಕದಿನ ಪಂದ್ಯಗಳನ್ನು ಆಡತೊಡಗಿದರೂ ದಾಖಲೆ ಮಾತ್ರ ತೀರಾ ಕಳಪೆಯಾಗಿದೆ. ಈ ಅವಧಿಯಲ್ಲಿ 28 ಪಂದ್ಯಗಳನ್ನಾಡಿರುವ ಭಾರತ 21ರಲ್ಲಿ ಸೋತಿದೆ, ಐದನ್ನಷ್ಟೇ ಗೆದ್ದಿದೆ. ಉಳಿದೆರಡು ರದ್ದುಗೊಂಡಿವೆ. ಒಮ್ಮೆಯೂ ಸರಣಿ ಗೆದ್ದಿಲ್ಲ. 2 ತ್ರಿಕೋನ ಸರಣಿಯಲ್ಲಿ ಪಾಲ್ಗೊಂಡರೂ ಪ್ರಶಸ್ತಿ ಎತ್ತುವಲ್ಲಿ ಯಶಸ್ವಿಯಾಗಿಲ್ಲ. ಈ ಬಾರಿ ಫ‌ಲಿತಾಂಶದ ಚಿತ್ರಣವನ್ನು ಬದಲಿಸುವ ಉತ್ತಮ ಅವಕಾಶವೊಂದು ಕೊಹ್ಲಿ ಪಡೆಯ ಮುಂದಿದೆ.

ನಂ.1 ರ್‍ಯಾಂಕಿಂಗ್‌ ಅವಕಾಶ
ಇದು ಸುದೀರ್ಘ‌ ಸರಣಿಯಾದ್ದರಿಂದ, ಹಾಗೂ ವಿಶ್ವದ ನಂ.1-2 ತಂಡಗಳ ನಡುವಿನ ಸೆಣಸಾಟವಾದ್ದರಿಂದ ರ್‍ಯಾಂಕಿಂಗ್‌ ಲೆಕ್ಕಾಚಾರದಲ್ಲೂ ಮಹತ್ವದ ಪಾತ್ರ ವಹಿಸಲಿದೆ. ಸದ್ಯ ದಕ್ಷಿಣ ಆಫ್ರಿಕಾ 121 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತ 119 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಹೀಗಾಗಿ ಪ್ರತಿ ಪಂದ್ಯದ ಬಳಿಕವೂ ರ್‍ಯಾಂಕಿಂಗ್‌ನಲ್ಲಿ ಏರಿಳಿತವಾಗುವುದು ಸಹಜ. ಅಂತಿಮವಾಗಿ ಭಾರತ 4-2ರಿಂದ ಸರಣಿ ಗೆದ್ದರೆ ವಿಶ್ವದ ಅಗ್ರಮಾನ್ಯ ತಂಡವಾಗಿ ಮೂಡಿಬರಲಿದೆ.

2016ರಲ್ಲಿ ಆಸ್ಟ್ರೇಲಿಯ ವಿರುದ್ಧ 4-1 ಅಂತರದಿಂದ ಸರಣಿ ಸೋತ ಬಳಿಕ ಭಾರತ ತಂಡ ಎಲ್ಲಿಯೂ ದ್ವಿಪಕ್ಷೀಯ ಏಕದಿನ ಸರಣಿಯನ್ನು ಸೋತದ್ದಿಲ್ಲ ಎಂಬುದೊಂದು ಹೆಚ್ಚುಗಾರಿಕೆ. ಜಿಂಬಾಬ್ವೆ, ನ್ಯೂಜಿಲ್ಯಾಂಡ್‌ (2 ಸಲ), ಇಂಗ್ಲೆಂಡ್‌, ವೆಸ್ಟ್‌ ಇಂಡೀಸ್‌, ಶ್ರೀಲಂಕಾ (2 ಸಲ), ಆಸ್ಟ್ರೇಲಿಯ ವಿರುದ್ಧ ಸರಣಿ ಗೆಲುವು ದಾಖಲಿಸಿದೆ. 32 ದ್ವಿಪಕ್ಷೀಯ ಪಂದ್ಯಗಳಲ್ಲಿ 24ರಲ್ಲಿ ಗೆದ್ದ ಹಿರಿಮೆ ಟೀಮ್‌ ಇಂಡಿಯಾದ್ದು. ಆದರೆ ದಕ್ಷಿಣ ಆಫ್ರಿಕಾದ ಸವಾಲು ಇವೆಲ್ಲಕ್ಕಿಂತ ಭಿನ್ನ ಎಂಬುದನ್ನು ಮರೆಯಬಾರದು.

ಆಫ್ರಿಕಾಕ್ಕೆ ಎಬಿಡಿ ಚಿಂತೆ
ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ ಗಾಯಾಳಾಗಿ 3 ಪಂದ್ಯಗಳಿಂದ ಹೊರಗುಳಿದಿರುವುದು ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ಚಿಂತೆಗೆ ಕಾರಣವಾಗುವುದು ಖಂಡಿತ. ಹೀಗಾಗಿ ಎಡಗೈ ಆಟಗಾರರಾದ ಮಿಲ್ಲರ್‌ ಮತ್ತು ಡ್ಯುಮಿನಿ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಡಿ ಕಾಕ್‌, ಡು ಪ್ಲೆಸಿಸ್‌ ಫಾರ್ಮ್ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬುದೂ ಸತ್ಯ. ಮಾರಿಸ್‌ ಅಪಾಯಕಾರಿ ಆಗಬಲ್ಲರು. ಟೆಸ್ಟ್‌ ಸರಣಿಯಲ್ಲಿ ಭಾರತದಂತೆ ಆಫ್ರಿಕಾದ ಬ್ಯಾಟಿಂಗ್‌ ಸರದಿ ಕೂಡ ಬಿಗಡಾಯಿಸಿತ್ತು ಎಂಬುದನ್ನು ಮರೆಯಬಾರದು.

ಡರ್ಬನ್‌ನಲ್ಲಿ ಸತತ ಮಳೆ
ಡರ್ಬನ್‌ನಲ್ಲೀಗ ಸತತವಾಗಿ ಮಳೆಯಾಗುತ್ತಿದ್ದು, ವಾರಾಂತ್ಯದ ತನಕ ಇದು ಮುಂದುವರಿಯಲಿದೆ ಎನ್ನುತ್ತದೆ ಹವಾಮಾನ ವರದಿ. ಹೀಗಾಗಿ ಗುರುವಾರದ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯದೆ ಇದೆ. ಬುಧವಾರದ ಮಳೆಗೂ ಮುನ್ನ ಪಿಚ್‌ ವೀಕ್ಷಿಸಿದಾಗ ಅದು ಕಂದು ಬಣ್ಣಕ್ಕೆ ತಿರುಗಿದ್ದು ಕಂಡುಬಂತು.

ಏಕದಿನ ಸರಣಿ ವೇಳಾಪಟ್ಟಿ
ಪಂದ್ಯ    ದಿನಾಂಕ    ಸ್ಥಳ    ಆರಂಭ
1    ಫೆ. 1    ಡರ್ಬನ್‌    ಸಂ. 4.30
2    ಫೆ. 4    ಸೆಂಚುರಿಯನ್‌    ಮ. 1.30
3    ಫೆ. 7    ಕೇಪ್‌ಟೌನ್‌    ಸಂ. 4.30
4    ಫೆ. 10    ಜೊಹಾನ್ಸ್‌ಬರ್ಗ್‌    ಸಂ. 4.30
5    ಫೆ. 13    ಪೋರ್ಟ್‌ ಎಲಿಜಬೆತ್‌    ಸಂ. 4.30
6    ಫೆ. 16    ಸೆಂಚುರಿಯನ್‌    ಸಂ. 4.30
ಸಮಯ: ಭಾರತೀಯ ಕಾಲಮಾನ
ಪ್ರಸಾರ: ಸೋನಿ ಟೆನ್‌ ನೆಟ್‌ವರ್ಕ್‌

Advertisement

Udayavani is now on Telegram. Click here to join our channel and stay updated with the latest news.

Next