Advertisement

ಟಿ20 ವಿಶ್ವಕಪ್‍; ಸೆಮಿ ಹೋರಾಟದಲ್ಲಿ ಮಂಕಾದ ಟೀಮ್ ಇಂಡಿಯಾ: ಆಂಗ್ಲರ ಜಯಭೇರಿ

04:43 PM Nov 10, 2022 | Team Udayavani |

ಆಡಿಲೇಡ್‍ : ಟಿ20 ವಿಶ್ವಕಪ್‍ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ಎದುರು ಆಂಗ್ಲರು ಪರಾಕ್ರಮ ಮೆರೆದು 10 ವಿಕೆಟ್ ಗಳ ಅತ್ಯಮೋಘ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಫಲಿತಾಂಶದಿಂದ ಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ಥಾನದ ರೋಚಕ ಕದನ ನಿರೀಕ್ಷಿಸಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ.

Advertisement

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಭಾರತ ತಂಡ ಇಂಗ್ಲೆಂಡ್ ಗೆ ಗೆಲ್ಲಲು 169 ರನ್ ಗಳ ಗುರಿ ನೀಡಿತು. ಗುರಿ ಬೆನ್ನಟ್ಟಿದ ಆಂಗ್ಲರ ಆರಂಭಿಕರು ಮೊದಲಿನಿಂದಲೂ ಆಕ್ರಮಣಕಾರಿಯಾಗಿ ಭಾರತದ ಬೌಲರ್ ಗಳನ್ನು ದಂಡಿಸಿ ಅಳುಕದೆ ಸುಲಭದಲ್ಲಿ ಗುರಿ ಮುಟ್ಟಿದರು. 16 ಓವರ್ ಗಳಲ್ಲಿ 170 ರನ್ ಗಳಿಸುವ ಮೂಲಕ ಜಯದ ಕೇಕೆ ಹಾಕಿದರು.

ನಾಯಕ ಜೋಸ್ ಬಟ್ಲರ್ 80 ರನ್ ಗಳಿಸಿ ಬ್ಯಾಟಿಂಗ್ ಬಲ ತೋರಿದರು. 49 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಗಳು ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿದ್ದವು. ಇವರಿಗೆ ಭರ್ಜರಿ ಸಾಥ್ ನೀಡಿದ ಅಲೆಕ್ಸ್ ಹೇಲ್ಸ್ 86 ರನ್ ಗಳಿಸಿದರು. 47 ಎಸೆತಗಳಲ್ಲಿ ಈ ಮೊತ್ತ ಅವರು ತನ್ನದಾಗಿಸಿಕೊಂಡರು. ಆಕರ್ಷಕ ಇನ್ನಿಂಗ್ಸ್ ನಲ್ಲಿ 4 ಬೌಂಡರಿ ಮತ್ತು 7 ಭರ್ಜರಿ ಸಿಕ್ಸರ್ ಗಳು ಒಳಗೊಂಡಿದ್ದವು.

ಭಾರತದ ಆರಂಭಿಕ ಆಟಗಾರರ ವೈಫಲ್ಯ ಎದ್ದು ಕಂಡಿತು. ಕೆಎಲ್ ರಾಹುಲ್ ಕೇವಲ 5 ರನ್ ಗಳಿಸಿ ಔಟಾದರು. ನಾಯಕ ರೋಹಿತ್ ಶರ್ಮಾ 28 ಎಸೆತಗಳಲ್ಲಿ 27 ರನ್ ಗಳಿಸಿದರು. ಸಂಕಷ್ಟದಲ್ಲಿ ನೆರವಾಗುವ ಭರವಸೆಯ ಆಟಗಾರ ವಿರಾಟ್ ಕೊಹ್ಲಿ 40 ಎಸೆತಗಳಲ್ಲಿ 50 ರನ್ ಗಳಿಸಿ ಔಟಾದರು. ಸೂರ್ಯಕುಮಾರ್ ಯಾದವ್ 14 ರನ್ ಗಳಿಸಿದರು.

ಸ್ಪೋಟಕ ಆಟವಾಡಿದ ಹಾರ್ದಿಕ್ ಪಾಂಡ್ಯ 33 ಎಸೆತಗಳಲ್ಲಿ 63 ರನ್ ಕೊಡುಗೆ ಸಲ್ಲಿಸಿದರು. 4 ಬೌಂಡರಿ ಮತ್ತು 5 ಸಿಕ್ಸರ್ ಗಳನ್ನು ಸಿಡಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣವಾದರು. ಕೊನೆಯ ಎಸೆತದಲ್ಲಿ ಹಿಟ್ ವಿಕೆಟ್ ಆದರು. ರಿಷಭ್ ಪಂತ್ 6 ರನ್ ಗಳಿಸಿದ್ದ ವೇಳೆ ರನ್ ಔಟಾದರು. 6 ವಿಕೆಟ್ ನಷ್ಟಕ್ಕೆ 168 ರನ್ ಕಲೆ ಹಾಕುವಲ್ಲಿ ಕೊಹ್ಲಿ ಮತ್ತು ಪಾಂಡ್ಯ ಪ್ರಮುಖ ಪಾತ್ರ ವಹಿಸಿದರು.

Advertisement

ಇಂಗ್ಲೆಂಡ್ ಪರ ಕ್ರಿಸ್ ಜೋರ್ಡಾನ್ 3 ವಿಕೆಟ್, ಆದಿಲ್ ರಶೀದ್ 4ಓವರ್ ಗಳಲ್ಲಿ ಕೇವಲ 20 ರನ್ ನೀಡಿ 1 ವಿಕೆಟ್ ಪಡೆದರು. ಕ್ರಿಸ್ ವೋಕ್ಸ್ 1 ವಿಕೆಟ್ ಪಡೆದರು.

ಭಾನುವಾರ (ನ 13) ಪಾಕಿಸ್ಥಾನ ಮತ್ತು ಇಂಗ್ಲೆಂಡ್ ನಡುವೆ ಫೈನಲ್ ಹಣಾಹಣಿ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next