Advertisement

ವೈಟ್‌ವಾಶ್‌ ತಪ್ಪಿಸೀತೇ ಗಾಯಾಳು ಭಾರತ? ಭಾರತಕ್ಕೆ ಇಂದು ಪ್ರತಿಷ್ಠೆಯ ಪಂದ್ಯ

11:23 PM Dec 09, 2022 | Team Udayavani |

ಚತ್ತೋಗ್ರಾಮ್‌: ನೆರೆಯ ಕ್ರಿಕೆಟ್‌ ಎದುರಾಳಿ ಬಾಂಗ್ಲಾದೇಶ ತಾನು ನಿಜಕ್ಕೂ “ಟೈಗರ್‌’ ಎಂಬುದನ್ನು ತೋರಿಸಿ ಕೊಟ್ಟಿದೆ. ಮೊದಲೆರಡು ಏಕದಿನ ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಅದೀಗ ಟೀಮ್‌ ಇಂಡಿಯಾವನ್ನು ವೈಟ್‌ವಾಶ್‌ ಮಾಡುವ ಹವಣಿಕೆಯಲ್ಲಿದೆ. ಶನಿವಾರ ಅಂತಿಮ ಮುಖಾಮುಖಿ ಏರ್ಪಡಲಿದ್ದು, ಇದನ್ನೂ ಗೆದ್ದು ಇತಿಹಾಸ ನಿರ್ಮಿಸುವುದು ಲಿಟನ್‌ ದಾಸ್‌ ಬಳಗದ ಯೋಜನೆ.

Advertisement

ಇತ್ತ ಭಾರತಕ್ಕೆ ಗಾಯದ ಮೇಲೆ ಬರೆ ಬಿದ್ದಿದೆ. ತಂಡದ ಬಹಳಷ್ಟು ಆಟ ಗಾರರು ನಾನಾ ಸಮಸ್ಯೆಗೆ ಸಿಲುಕಿದ್ದಾರೆ. ನಾಯಕ ರೋಹಿತ್‌ ಶರ್ಮ ದ್ವಿತೀಯ ಪಂದ್ಯದ ಫೀಲ್ಡಿಂಗ್‌ ವೇಳೆ ಕೈ ಬೆರಳಿಗೆ ಏಟು ತಿಂದು ತವರಿಗೆ ವಾಪಸಾಗಿದ್ದಾರೆ.

ಕುಲದೀಪ್‌ ಸೇನ್‌ ಒಂದೇ ಪಂದ್ಯ ಆಡುವಷ್ಟರಲ್ಲಿ ಬೆನ್ನುನೋವಿಗೆ ಸಿಲುಕಿದ್ದಾರೆ. ಅಕ್ಷರ್‌ ಪಟೇಲ್‌ ಅವರ ಪಕ್ಕೆಲುಬಿಗೆ ಏಟು ಬಿದ್ದಿದೆ. ದೀಪಕ್‌ ಚಹರ್‌ ಕೂಡ ಗಾಯಾಳಾಗಿ ಹೊರಗುಳಿಯುವ ಸಂಕಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಯನ್ನೆಲ್ಲ ಅರಿತ ಆಡಳಿತ ಮಂಡಳಿ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅವರನ್ನು ಕರೆಸಿಕೊಂಡಿದೆ.

ಕುಲದೀಪ್‌ ಯಾದವ್‌ ಅವರೀಗ ತಂಡದ ಅತ್ಯಂತ ಅನುಭವಿ ಬೌಲರ್‌ ಆಗಿದ್ದಾರೆ. 72 ಏಕದಿನಗಳಿಂದ 118 ವಿಕೆಟ್‌ ಕೆಡವಿದ್ದು ಇವರ ಸಾಧನೆ. ಉಳಿದಂತೆ ಮೊಹಮ್ಮದ್‌ ಸಿರಾಜ್‌, ಶಾದೂìಲ್‌ ಠಾಕೂರ್‌, ಉಮ್ರಾನ್‌ ಮಲಿಕ್‌, ವಾಷಿಂಗ್ಟನ್‌ ಸುಂದರ್‌ ಅವರೆಲ್ಲ ಬೌಲಿಂಗ್‌ ವಿಭಾಗವನ್ನು ನೋಡಿಕೊಳ್ಳಬೇಕಿದೆ. ಆದರೆ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ರವೀಂದ್ರ ಜಡೇಜ ಗೈರಲ್ಲಿ ಭಾರತದ ಈಗಿನ ಬೌಲಿಂಗ್‌ ಪಡೆ ತೀರಾ ದುರ್ಬಲವಾಗಿ ಗೋಚರಿಸುತ್ತಿದೆ.

ಆರಂಭದಲ್ಲಿ ಭಾರತದ ಬೌಲಿಂಗ್‌ ದಾಳಿ ಹರಿತವಾಗಿಯೇ ಕಾಣುತ್ತದೆ. ಆದರೆ ಒಂದು ಹಂತದಲ್ಲಿ ಎಲ್ಲರೂ ಕೈಚೆಲ್ಲುವುದು ದೊಡ್ಡ ದುರಂತ. ಮೊದಲ ಪಂದ್ಯದಲ್ಲಿ ಅಂತಿಮ ವಿಕೆಟ್‌ ಕೆಡವಲಾಗದೆ ಸೋಲು ಕಾಣಬೇಕಾ ಯಿತು. ದ್ವಿತೀಯ ಪಂದ್ಯದಲ್ಲಿ 69ಕ್ಕೆ 6 ವಿಕೆಟ್‌ ಉರುಳಿಸಿದ ಬಳಿಕ ನಮ್ಮ ಬೌಲರ್ ಥಂಡಾ ಹೊಡೆದರು. ಆತಿಥೇ ಯರ ಸ್ಕೋರ್‌ 270ರ ಗಡಿ ದಾಟಿತು.

Advertisement

ಸವಾಲಾಗಿರುವ ಮಿರಾಜ್‌
ಎರಡೂ ಪಂದ್ಯಗಳಲ್ಲಿ ಮೆಹಿದಿ ಹಸನ್‌ ಮಿರಾಜ್‌ ವಿಕೆಟ್‌ ಉರುಳಿಸಲು ನಮ್ಮವರಿಂದ ಸಾಧ್ಯವಾಗಿಲ್ಲ. ಮೊದಲ ಪಂದ್ಯದಲ್ಲೇನೋ ಅವರ ಕ್ಯಾಚ್‌ ಕೈಚೆಲ್ಲಿ ಸೋತೆವು ಎಂದಾಯಿತು. ಆದರೆ ದ್ವಿತೀಯ ಪಂದ್ಯದಲ್ಲಿ ಇನ್ನಷ್ಟು ಬೆಳೆದ ಮಿರಾಜ್‌, ಚೊಚ್ಚಲ ಶತಕ ಬಾರಿಸಿ ತಂಡವನ್ನು ಮೇಲೆತ್ತಿದರು. ಮಿರಾಜ್‌ ಅವರನ್ನು ಔಟ್‌ ಮಾಡಲಾಗದೆ ಭಾರತ ಮುಗ್ಗರಿಸಿದ್ದು ಸ್ಪಷ್ಟವಾಗಿದೆ.

ಹೀಗಾಗಿ ಕೇವಲ ಬ್ಯಾಟರ್‌ಗಳ ಮೇಲೆ ಸೋಲಿನ ಹೊಣೆ ಹೊರಿಸುವುದು ತಪ್ಪಾಗುತ್ತದೆ. ಒಂದು ತಂಡವಾಗಿ ಭಾರತ ಸೋತಿದೆ. ನಮ್ಮವರ ಅವಸ್ಥೆಯನ್ನು ಕಂಡಾಗ ಶನಿವಾರದ ಪಂದ್ಯದಲ್ಲೂ ಬಾಂಗ್ಲಾ ದೇಶವೇ ಫೇವರಿಟ್‌ ಎಂಬುದರಲ್ಲಿ ಅನುಮಾನವಿಲ್ಲ.

ರೋಹಿತ್‌ ಗೈರಲ್ಲಿ ಕೆ.ಎಲ್‌. ರಾಹುಲ್‌ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಇವರು ಶಿಖರ್‌ ಧವನ್‌ ಜತೆ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇಲ್ಲ. ಈ ಸ್ಥಾನಕ್ಕೆ ಇಶಾನ್‌ ಕಿಶನ್‌ ಬರಬ ಹುದು. ವಿರಾಟ್‌ ಕೊಹ್ಲಿ ಓಪನಿಂಗ್‌ ಬರುವುದು ಅಷ್ಟೇನೂ ಸಮಂಜಸವಾಗಿ ಕಾಣದು. ಅವರು ವನ್‌ಡೌನ್‌ನಲ್ಲಿ ಮುಂದುವರಿಯುವುದೇ ಉತ್ತಮ. ಆದರೆ ಧವನ್‌ ಮತ್ತು ಕೊಹ್ಲಿ, ಇಬ್ಬರ ಫಾರ್ಮ್ ಕೂಡ ಚಿಂತೆಯ ಸಂಗತಿಯಾಗಿದೆ. ಮಧ್ಯಮ ಸರದಿ ಯಲ್ಲಿ ರಾಹುಲ್‌ ತ್ರಿಪಾಠಿ ಅಥವಾ ರಜತ್‌ ಪಾಟೀದಾರ್‌ ಅವರನ್ನು ಆಡಿಸುವ ಅಗತ್ಯವಿದೆ.

ನಮ್ಮವರಿಗೆ ಪಾಠ
ನಾಯಕ ತಮಿಮ್‌ ಇಕ್ಬಾಲ್‌ ಗೈರಲ್ಲೂ ಬಾಂಗ್ಲಾದೇಶ ತೋರ್ಪಡಿಸಿದ ಸಾಹಸ ಪ್ರಶಂಸನೀಯ. ಮಿರಾಜ್‌ ಅವರದು ಏಕಾಂಗಿ ಸಾಹಸವಾದರೂ ಅವರು ಜತೆಗಾರನನ್ನು ಆಡಿಸುವ ರೀತಿಯಿಂದ ಹೆಚ್ಚು ಆಪ್ತರಾಗುತ್ತಾರೆ. ಅಗ್ರ ಕ್ರಮಾಂಕದವರೆಲ್ಲ ಅಗ್ಗಕ್ಕೆ ಔಟಾದ ಬಳಿಕ ಮಿರಾಜ್‌ ಇನ್ನಿಂಗ್ಸ್‌ ಬೆಳೆಸುವ ರೀತಿ ನಮ್ಮವರಿಗೊಂದು ಪಾಠ.

ಭಾರತದ ಆತಿಥ್ಯದಲ್ಲೇ ಮುಂದಿನ ವರ್ಷದ ಏಕದಿನ ವಿಶ್ವಕಪ್‌ ಪಂದ್ಯಾ ವಳಿ ನಡೆಯಲಿದ್ದು, ಸಾಧ್ಯವಾದಷ್ಟು ಬೇಗ ಸಶಕ್ತ ತಂಡವನ್ನು ರೂಪಿಸುವ ಹೊಣೆಗಾರಿಕೆ ಆಡಳಿತ ಮಂಡಳಿಯ ಮೇಲಿದೆ. ಈಗೇನಾಗುತ್ತಿದೆಯೆಂದರೆ… ಪ್ರಯೋಗಗಳೇ ಅತಿಯಾಗುತ್ತಿವೆ. ಸೀನಿಯರ್‌ಗಳೆಲ್ಲ ಕೈಕೊಡುತ್ತಿದ್ದಾರೆ. ಯುವಕರು ಅವಕಾಶವನ್ನು ಬಳಸಿ ಕೊಳ್ಳುತ್ತಿಲ್ಲ. ಬಾಂಗ್ಲಾ ಪ್ರವಾಸ ದಲ್ಲಿ ಇದು ನಿಚ್ಚಳವಾಗಿದೆ. ಇನ್ನು ಆಸ್ಟ್ರೇಲಿಯ, ಇಂಗ್ಲೆಂಡ್‌ನ‌ಂಥ ಬಲಿಷ್ಠ ತಂಡಗಳನ್ನು ಎದುರಿಸುವುದು ಹೇಗೆ? ಯೋಚಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next