Advertisement

ಭಾರತ – ಆಸ್ಟ್ರೇಲಿಯ ದ್ವಿತೀಯ ಟಿ20: ಬೌಲಿಂಗ್‌ ಚಿಂತೆಗೆ ಬುಮ್ರಾ ಪರಿಹಾರ?

11:46 PM Sep 22, 2022 | Team Udayavani |

ನಾಗ್ಪುರ: ಟಿ20 ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ಎದುರಿನ ಮೊಹಾಲಿ ಪಂದ್ಯವನ್ನು ದೊಡ್ಡ ಮೊತ್ತ ಪೇರಿಸಿಯೂ ಕಳೆದುಕೊಂಡ ಭಾರತಕ್ಕೆ ಶುಕ್ರವಾರ ನಾಗ್ಪುರದಲ್ಲಿ ಭಾರೀ ಸವಾಲು ಎದುರಾಗಲಿದೆ. ಇಲ್ಲಿ ದ್ವಿತೀಯ ಮುಖಾಮುಖಿ ಏರ್ಪಡಲಿದ್ದು, ಸರಣಿಯನ್ನು ಜೀವಂತ ಇರಿಸಿಕೊಳ್ಳಬೇಕಾದರೆ ರೋಹಿತ್‌ ಪಡೆ ಇದನ್ನು ಗೆಲ್ಲಲೇಬೇಕಿದೆ.

Advertisement

ಮೊಹಾಲಿಯಲ್ಲಿ ಭಾರತಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡಿದ್ದು ಬೌಲಿಂಗ್‌ ದೌರ್ಬಲ್ಯ. ಅದರಲ್ಲೂ ಡೆತ್‌ ಓವರ್‌ ಬೌಲಿಂಗ್‌ ಸಂಪೂರ್ಣ ನೆಲಕಚ್ಚಿತ್ತು. ಆದರೆ ಮೊಹಾಲಿ ಟ್ರ್ಯಾಕ್‌ ಸಂಪೂರ್ಣವಾಗಿ ಬ್ಯಾಟಿಂಗ್‌ಗೆ  ಸಹಕರಿಸುತ್ತಿದ್ದುದನ್ನೂ ಅಲ್ಲಗಳೆಯುವಂತಿಲ್ಲ. ಇದು ಬ್ಯಾಟಿಂಗ್‌ ಸ್ವರ್ಗವಾಗಿತ್ತು. ಆದರೂ ಕೊನೆಯ 5 ಓವರ್‌ಗಳಲ್ಲಿ ಬೌಲಿಂಗ್‌ ಹಿಡಿತ ಸಾಧಿಸಿದ್ದೇ ಆದರೆ ಭಾರತದ ಗೆಲುವಿನ ಸಾಧ್ಯತೆಯನ್ನು ತಳ್ಳಿಹಾಕು ವಂತಿರಲಿಲ್ಲ. ಸೋಲಿನಲ್ಲಿ ನಮ್ಮವರ ಕಳಪೆ ಫೀಲ್ಡಿಂಗ್‌ ಪಾಲೂ ಇದ್ದಿತ್ತು.

ಬುಮ್ರಾ ಪರಿಹಾರ? :

ಭಾರತದ ಬೌಲಿಂಗ್‌ ಸಮಸ್ಯೆಗೆ ಒಂದೇ ಪರಿಹಾರ ವೆಂದರೆ, ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ ಆಗಮನ ಎಂಬುದು ಬಹುತೇಕ ಮಂದಿಯ ಅಭಿಪ್ರಾಯ. ಇಂಗ್ಲೆಂಡ್‌ ಪ್ರವಾಸದ ಬಳಿಕ ಬೆನ್ನು ನೋವಿಗೆ ಸಿಲುಕಿದ ಬುಮ್ರಾ ಏಷ್ಯಾ ಕಪ್‌ನಿಂದ ಹೊರಗುಳಿದಿದ್ದರು. ಆಸ್ಟ್ರೇಲಿಯ ವಿರುದ್ಧದ ಸರಣಿಗೆ ವಾಪಸಾದರೂ ಮೊಹಾಲಿ ಪಂದ್ಯಕ್ಕೆ ಆಯ್ಕೆಯಾಗದಿದ್ದುದು ಅಚ್ಚರಿಯಾಗಿ ಕಂಡಿತು. ಬುಮ್ರಾ ಸಂಪೂರ್ಣ ಫಿಟ್‌ನೆಸ್‌ಗೆ ಮರಳಿಲ್ಲವೇ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ನಾಗ್ಪುರದಲ್ಲಿ ಆಡಬಹುದೇ ಎಂಬುದು ಅನಂತರದ ಪ್ರಶ್ನೆ!

ಮೊಹಾಲಿಯಲ್ಲಿ ಭಾರತದ ನಾಲ್ಕೂ ಮಂದಿ ಪೇಸ್‌ ಬೌಲರ್ ದುಬಾರಿಯಾಗಿ ಪರಿಣಮಿಸಿದ್ದರು. ಭುವನೇಶ್ವರ್‌ ಕುಮಾರ್‌, ಉಮೇಶ್‌ ಯಾದವ್‌, ಹರ್ಷಲ್‌ ಪಟೇಲ್‌ ಮತ್ತು ಹಾರ್ದಿಕ್‌ ಪಾಂಡ್ಯ ಎಸೆದ 12 ಓವರ್‌ಗಳಲ್ಲಿ ಬರೋಬ್ಬರಿ 150 ರನ್‌ ಸೋರಿ ಹೋಗಿತ್ತು. ಅಂದಮೇಲೆ ಬುಮ್ರಾ ಸೇರ್ಪಡೆಯಿಂದ ಒಮ್ಮೆಲೇ ಈ ತಾಪತ್ರಯ ತಪ್ಪೀತೇ ಎಂಬ ಪ್ರಶ್ನೆಯೂ ಕಾಡದಿರದು. ಆದರೆ ನಾಗ್ಪುರದ ಟ್ರ್ಯಾಕ್‌ ಮೊಹಾಲಿಗಿಂತ ಭಿನ್ನವಾ ಗಿದ್ದು, ನಿಧಾನ ಗತಿಯಿಂದ ವರ್ತಿಸುವ ಸಾಧ್ಯತೆ ಇದೆ.

Advertisement

ಮೊಹಾಲಿಯಲ್ಲಿ ಬೌಲಿಂಗ್‌ ನಿಯಂತ್ರಣ ಸಾಧಿಸಿದ್ದು ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಮಾತ್ರ (4-0-17-3).

ಬ್ಯಾಟಿಂಗ್‌ ವಿಭಾಗದ ಸಮಸ್ಯೆ:

ಭಾರತದ ಬ್ಯಾಟಿಂಗ್‌ ವಿಭಾಗದಲ್ಲೂ ಸಮಸ್ಯೆಗಳಿವೆ. ರೋಹಿತ್‌, ಕೊಹ್ಲಿ ವೈಫ‌ಲ್ಯ ಅನುಭವಿಸಿದ್ದರು. ರೋಹಿತ್‌ ಸಿಡಿದರೂ ಅವರಿಗೆ ಇನ್ನಿಂಗ್ಸ್‌ ವಿಸ್ತರಿಸಲು ಸಾಧ್ಯವಾಗಲಿಲ್ಲ. ಅಫ್ಘಾನ್‌ ವಿರುದ್ಧ ಶತಕ ಹೊಡೆದಿದ್ದ ಕೊಹ್ಲಿ ಈ ಲಯದಲ್ಲಿ ಸಾಗದೇ ಹೋದರೆ ಅಗ್ರ ಕ್ರಮಾಂಕದ ಮೇಲೆ ಒತ್ತಡ ತಪ್ಪಿದ್ದಲ್ಲ. ಹಾಗೆಯೇ ದಿನೇಶ್‌ ಕಾರ್ತಿಕ್‌ ಬ್ಯಾಟ್‌ ಕೂಡ ಮಾತಾಡಿರಲಿಲ್ಲ. ಇವರು ರಿಷಭ್‌ ಪಂತ್‌ಗೆ ಜಾಗ ಬಿಡುವ ಸಾಧ್ಯತೆಯೊಂದಿದೆ. ಕೆ.ಎಲ್‌. ರಾಹುಲ್‌, ಸೂರ್ಯಕುಮಾರ್‌ ಯಾದವ್‌ ಮತ್ತು ಹಾರ್ದಿಕ್‌ ಪಾಂಡ್ಯ ಮಾತ್ರ ಮೊಹಾಲಿ ಬ್ಯಾಟಿಂಗ್‌ ಹೀರೋಗಳೆನಿಸಿದ್ದರು.

ಆಸೀಸ್‌ ಬಲಾಡ್ಯ ತಂಡ :

ಕಳೆದ ಒಂದೆರಡು ವರ್ಷಗಳ ತನಕ ಟಿ20 ಕ್ರಿಕೆಟ್‌ ಪಂದ್ಯಗಳನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದ ಆಸ್ಟ್ರೇಲಿಯ ಈಗ ಚುಟುಕು ಮಾದರಿಯಲ್ಲೂ ಆಧಿ ಪತ್ಯ ಸ್ಥಾಪಿಸಲು ಹೊರಟಿದೆ. ಹಾಲಿ ಚಾಂಪಿಯನ್‌ ಆಗಿರುವ ಆಸೀಸ್‌ಗೆ ತಮ್ಮಲ್ಲೇ ನಡೆಯುವ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಟ್ಟ ಉಳಿಸಿಕೊಳ್ಳುವ ತವಕ. ಇದಕ್ಕಾಗಿ ಟಿ20 ಸ್ಪೆಷಲಿಸ್ಟ್‌ಗಳನ್ನೇ ಕಟ್ಟಿಕೊಂಡು ಬಂದಿದೆ. ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌, ವಾರ್ನರ್‌ ಜಾಗವನ್ನು ಸಮರ್ಥ ರೀತಿಯಲ್ಲಿ ತುಂಬಿದ್ದಾರೆ. ನಾಯಕ ಫಿಂಚ್‌, ಅನುಭವಿ ಸ್ಟೀವನ್‌ ಸ್ಮಿತ್‌, ಕೀಪರ್‌ ಮ್ಯಾಥ್ಯೂ ವೇಡ್‌, ಟಿಮ್‌ ಡೇವಿಡ್‌, ಜೋಶ್‌ ಇಂಗ್ಲಿಸ್‌ ಅವರೆಲ್ಲ ಆಸೀಸ್‌ ಬ್ಯಾಟಿಂಗ್‌ ಸರದಿಗೆ ಬಲ ತುಂಬಲಿದ್ದಾರೆ.

ಆಸೀಸ್‌ ಬೌಲಿಂಗ್‌ ಲೈನ್‌ಅಪ್‌ ಮೇಲ್ನೋಟಕ್ಕೆ ಘಾತಕವೆನಿಸಿದರೂ ಮೊಹಾಲಿಯಲ್ಲಿ ಛಿದ್ರಗೊಂಡಿತ್ತು. ಹೀಗಾಗಿ ಭಾರತದ ಬೌಲಿಂಗ್‌ ಹಳಿ ತಪ್ಪಿದ್ದರಲ್ಲಿ ಅಚ್ಚರಿ ಇಲ್ಲ ಎಂಬ ತೀರ್ಮಾನಕ್ಕೆ ಬರುವಂತಿಲ್ಲ!

Advertisement

Udayavani is now on Telegram. Click here to join our channel and stay updated with the latest news.

Next