ಕೀವ್ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಕ್ರೇನ್ ನಲ್ಲಿ ಶುಕ್ರವಾರ (ಆ 23) ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಅವರು ಸ್ವಾಗತಿಸಿದರು. ಭಾರತ ಮತ್ತು ಉಕ್ರೇನ್ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ.
ಕೃಷಿ, ಆಹಾರೋದ್ಯಮ, ಔಷಧ, ಸಂಸ್ಕೃತಿ ಮತ್ತು ಮಾನವೀಯ ನೆರವು ಕ್ಷೇತ್ರಗಳಲ್ಲಿ ನಾಲ್ಕು ಒಪ್ಪಂದಗಳು ಸಹಕಾರ ಒದಗಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುದ್ಧ ಪೀಡಿತ ದೇಶದಲ್ಲಿ ಪ್ರಧಾನಿ ಮೋದಿ ರಾಜಧಾನಿ ಕೀವ್ ಗೆ ಐತಿಹಾಸಿಕ ಭೇಟಿ ನೀಡಿದ್ದು ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. 1991 ರಲ್ಲಿ ಉಕ್ರೇನ್ ಸ್ವತಂತ್ರವಾದ ನಂತರ ಭಾರತದ ಪ್ರಧಾನಿಯೊಬ್ಬರು ಮೊದಲ ಬಾರಿಗೆ ಭೇಟಿ ನೀಡಿದಂತಾಗಿದೆ.ರಷ್ಯಾದ ಪಶ್ಚಿಮ ಕುರ್ಸ್ಕ್ ಪ್ರದೇಶದಲ್ಲಿ ಕೀವ್ ನಲ್ಲಿ ಮಿಲಿಟರಿ ಆಕ್ರಮಣದ ನಡುವೆ ಪ್ರಧಾನಿ ಮೋದಿ ಅವರು ಪ್ರವಾಸ ಕೈಗೊಂಡಿದ್ದಾರೆ. ಮೋದಿ ಅವರ ಭೇಟಿ ವೇಳೆ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.
”ನಾನು ಇಂದು ಕೀವ್ ನಲ್ಲಿ ಬಹಳ ಉತ್ಪಾದಕ ಚರ್ಚೆಗಳನ್ನು ನಡೆಸಿದ್ದೇನೆ. ಭಾರತವು ಉಕ್ರೇನ್‌ನೊಂದಿಗೆ ಆರ್ಥಿಕ ಸಂಬಂಧವನ್ನು ಗಾಢವಾಗಿಸಲು ಉತ್ಸುಕವಾಗಿದೆ. ಕೃಷಿ, ತಂತ್ರಜ್ಞಾನ, ಫಾರ್ಮಾ ಮತ್ತು ಅಂತಹ ಇತರ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳನ್ನು ನಾವು ಚರ್ಚಿಸಿದ್ದೇವೆ. ನಾವು ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಮಾಡಿಕೊಳ್ಳಲು ಸಹ ಒಪ್ಪಿಕೊಂಡಿದ್ದೇವೆ. ನಡೆಯುತ್ತಿರುವ ಸಂಘರ್ಷದ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಶಾಂತಿ ಕಾಪಾಡುವುದು ಅತ್ಯಂತ ಮಹತ್ವದ್ದಾಗಿದೆ. ಸಂಘರ್ಷಕ್ಕೆ ಶಾಂತಿಯುತ ಪರಿಹಾರವು ಮಾನವೀಯತೆಗೆ ಉತ್ತಮ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಶಾಂತಿಗಾಗಿ ಭಾರತ ಕೆಲಸ ಮಾಡುತ್ತದೆ ಎಂದು ಪ್ರಧಾನಿ ಮೋದಿ ಈಗಾಗಲೇ ಹೇಳಿಕೆ ನೀಡಿದ್ದು, ಈ ಭೇಟಿಗೆ ಉಕ್ರೇನ್ ಮೇಲೆ ಸಮರ ನಡೆಸುತ್ತಿರುವ ರಷ್ಯಾ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎನ್ನುವ ಕುತೂಹಲ ಎಲ್ಲರದ್ದಾಗಿದೆ.
ಕೀವ್ ನಲ್ಲಿ ಹುತಾತ್ಮರ ಸ್ಮಾರಕಕ್ಕೆ ಗೌರವಾರ್ಪಣೆ ಸಲ್ಲಿಸಿದ ಮೋದಿ ”ವ್ಲಾದಿಮಿರ್ ಝೆಲೆನ್ಸ್ಕಿ ಜತೆ ನಾವಿದ್ದೇವೆ ಚಿಕ್ಕ ಮಕ್ಕಳಿಗೆ ಸಂಘರ್ಷವು ವಿಶೇಷವಾಗಿ ವಿನಾಶಕಾರಿಯಾಗಿದೆ. ಪ್ರಾಣ ಕಳೆದುಕೊಂಡ ಮಕ್ಕಳ ಕುಟುಂಬದ ಸದಸ್ಯರೊಂದಿಗೆ ನನ್ನ ಹೃದಯವಿದೆ ಮತ್ತು ಅವರ ದುಃಖವನ್ನು ಹೋಗಲಾಡಿಸುವ ಶಕ್ತಿ ಅವರಿಗೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಭಾವುಕ ಚಿತ್ರಗಳ ಸಹಿತ ಎಕ್ಸ್ ಪೋಸ್ಟ್ ಮಾಡಿದ್ದಾರೆ.