ಹೊಸದಿಲ್ಲಿ: ಭಾರತ ಮತ್ತು ಸಂಯುಕ್ತ ಅರಬ್ ಅಮೀರ್‌ಶಾಹಿ (ಯುಎಇ)ಗಳ ನಡುವೆ ಫೆ. 18ರಂದು ಸಹಿ ಹಾಕಲಾಗಿರುವ ಮುಕ್ತ ವ್ಯಾಪಾರ ಒಪ್ಪಂದವು ಎಲ್ಲ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಪೂರಕ ಪ್ರಕ್ರಿಯೆಗಳನ್ನು ಪೂರೈಸಿದ್ದು, ಮೇ 1ರಿಂದ ಜಾರಿಗೆ ಬಂದಿದೆ.
ಒಪ್ಪಂದದಡಿ ಯುಎಇಗೆ ರಫ್ತಾಗ ಲಿರುವ ಆಭರಣ ಉತ್ಪನ್ನಗಳಿಂದ ಕೂಡಿದ ಮೊದಲ ರವಾನೆಗೆ ವಾಣಿಜ್ಯ ಕಾರ್ಯದರ್ಶಿ ಬಿ.ವಿ.ಆರ್. ಸುಬ್ರಹ್ಮಣ್ಯಂ ರವಿವಾರ ಹಸುರು ಸಂಕೇತ ತೋರಿದ್ದಾರೆ.
ಸಮಗ್ರ ಆರ್ಥಿಕ ಭಾಗೀದಾರಿಕೆ ಒಪ್ಪಂದ (ಸಿಇಪಿಎ)ದಡಿ ಯಾವುದೇ ಸುಂಕವಿಲ್ಲದೆ ಈ ಉತ್ಪನ್ನಗಳು ನಿರ್ಯಾತವಾಗಿವೆ. ಭಾರತದಿಂದ ಯುಎಇಗೆ ಆಭರಣ ಮತ್ತು ಹರಳುಗಳು ಅತ್ಯಧಿಕ ಪ್ರಮಾಣದಲ್ಲಿ ರಫ್ತಾಗುತ್ತಿದ್ದು, ಈ ಒಪ್ಪಂದದಿಂದ ಇನ್ನಷ್ಟು ಪ್ರಯೋಜನವಾಗಲಿದೆ.
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈ ಒಪ್ಪಂದದಿಂದಾಗಿ ಉಭಯ ದೇಶಗಳ ನಡುವಣ ಸಾಮಗ್ರಿಗಳ ರಫ್ತಿನಲ್ಲಿ 10 ಸಾವಿರ ಕೋಟಿ ಡಾಲರ್ ಮತ್ತು ಸೇವೆಗಳ ರಫ್ತಿನಲ್ಲಿ 1,500 ಕೋಟಿ ಡಾಲರ್‌ಗಳಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.