ಹೊಸದಿಲ್ಲಿ: ಅಸ್ತಿತ್ವದಲ್ಲಿರುವ ಟೋಲ್ ಪ್ಲಾಜಾಗಳನ್ನು ಜಿಪಿಎಸ್ ಆಧಾರಿತ ತೆರಿಗೆ ಸಂಗ್ರಹ ವ್ಯವಸ್ಥೆಯೊಂದಿಗೆ ಬದಲಾಯಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪುನರುಚ್ಚರಿಸಿದ್ದಾರೆ.
ಸಿಐಐ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ದೇಶದಲ್ಲಿ ಅಸ್ತಿತ್ವದಲ್ಲಿರುವ ಹೆದ್ದಾರಿ ಟೋಲ್ ಪ್ಲಾಜಾಗಳನ್ನು ಬದಲಿಸಲು ಸರ್ಕಾರವು ಮುಂದಿನ ಆರು ತಿಂಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲಿದೆ ಎಂದು ಹೇಳಿದರು.
ಈ ಹೊಸ ತಂತ್ರಜ್ಞಾನವು ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಹೆದ್ದಾರಿಗಳಲ್ಲಿ ಪ್ರಯಾಣಿಸಿದ ನಿಖರವಾದ ದೂರಕ್ಕೆ ವಾಹನ ಚಾಲಕರಿಗೆ ಶುಲ್ಕ ವಿಧಿಸುತ್ತದೆ ಎಂದು ಗಡ್ಕರಿ ಹೇಳಿದರು.
“ದೇಶದಲ್ಲಿ ಟೋಲ್ ಪ್ಲಾಜಾಗಳನ್ನು ಬದಲಿಸಲು ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಗಳು ಸೇರಿದಂತೆ ಹೊಸ ತಂತ್ರಜ್ಞಾನಗಳೆಡೆದೆ ಸರ್ಕಾರ ನೋಡುತ್ತಿದೆ. ನಾವು ಆರು ತಿಂಗಳಲ್ಲಿ ಹೊಸ ತಂತ್ರಜ್ಞಾನವನ್ನು ತರುತ್ತೇವೆ” ಎಂದು ನಿತಿನ್ ಗಡ್ಕರಿ ಅವರು ಹೇಳಿದ್ದನ್ನು ಪಿಟಿಐ ವರದಿ ಮಾಡಿದೆ.
Related Articles
ಇದನ್ನೂ ಓದಿ:ಈ ನಿಗೂಢ ಗುಹೆಯಲ್ಲಿದೆ ಚಿನ್ನದ ಖಜಾನೆ: ಇದರ ರಹಸ್ಯ ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲವಂತೆ
ವಾಹನಗಳನ್ನು ನಿಲ್ಲಿಸದೆ ಸ್ವಯಂಚಾಲಿತ ಟೋಲ್ ಸಂಗ್ರಹವನ್ನು ಸಕ್ರಿಯಗೊಳಿಸಲು ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ವ್ಯವಸ್ಥೆಯ (ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾಗಳು) ಪ್ರಾಯೋಗಿಕ ಯೋಜನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ನಡೆಸುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್ ಆದಾಯವು ಪ್ರಸ್ತುತ 40,000 ಕೋಟಿ ರೂಪಾಯಿಗಳಾಗಿದ್ದು, 2-3 ವರ್ಷಗಳಲ್ಲಿ ಇದು 1.40 ಲಕ್ಷ ಕೋಟಿ ರೂಪಾಯಿಗಳಿಗೆ ಏರಲಿದೆ ಎಂದು ಕೇಂದ್ರ ಸಚಿವರು ಹೇಳಿದರು. 2018-19ರಲ್ಲಿ ಟೋಲ್ ಪ್ಲಾಜಾದಲ್ಲಿ ವಾಹನಗಳ ಸರಾಸರಿ ಕಾಯುವ ಸಮಯ 8 ನಿಮಿಷಗಳಾಗಿತ್ತು. 2020-21 ಮತ್ತು 2021-22 ರ ಅವಧಿಯಲ್ಲಿ ಫಾಸ್ಟ್ ಟ್ಯಾಗ್ಗಳನ್ನು ಪರಿಚಯಿಸುವುದರೊಂದಿಗೆ, ವಾಹನಗಳ ಸರಾಸರಿ ಕಾಯುವ ಸಮಯ 47 ಸೆಕೆಂಡುಗಳಿಗೆ ಇಳಿದಿದೆ ಎಂದು ಅವರು ಹೇಳಿದರು.