Advertisement

ಚೀನಕ್ಕೆ ಕಡಲ ಸಿಡಿಲು ; ಮಲಬಾರ್‌ ನೌಕಾ ಸಮರಾಭ್ಯಾಸಕ್ಕೆ ಆಸ್ಟ್ರೇಲಿಯಾಕ್ಕೆ ಆಹ್ವಾನ

03:35 AM Jul 11, 2020 | Hari Prasad |

ಹೊಸದಿಲ್ಲಿ: ಚೀನಕ್ಕೆ ಸಮುದ್ರ ವಲಯದಲ್ಲಿ ಇನ್ನೊಂದು ಸಿಡಿಲು ಬಡಿದಿದೆ.

Advertisement

ಇಷ್ಟು ವರ್ಷ ಬಂಗಾಳಕೊಲ್ಲಿಯಲ್ಲಿ ಭಾರತ, ಅಮೆರಿಕ, ಜಪಾನ್‌ ಜಂಟಿಯಾಗಿ ಮಲಬಾರ್‌ ನೌಕಾ ಸಮರಾಭ್ಯಾಸ ನಡೆಸುತ್ತಿದ್ದವು.

ಈ ವರ್ಷ ಭಾರತವು, ಕ್ಸಿ ಜಿನ್‌ಪಿಂಗ್‌ನ ಬದ್ಧವೈರಿ ಆಸ್ಟ್ರೇಲಿಯಾವನ್ನೂ ಆಹ್ವಾನಿಸಲು ನಿರ್ಧರಿಸಿದೆ.

ಈಗಾಗಲೇ ಚೀನಕ್ಕೆ ಆಸ್ಟ್ರೇಲಿಯಾ ಮೇಲೆ ಹಗೆತನ ಹೆಚ್ಚಾಗಿದೆ. ಚೀನೀ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯಾ ಬಾಗಿಲು ಮುಚ್ಚಿದೆ. ತನ್ನಲ್ಲಿರುವ ಹಾಂಕಾಂಗ್‌ ಪ್ರಜೆಗಳಿಗೆ “ನಮ್ಮಲ್ಲೇ ನೆಲೆಸಿರಿ’ ಎಂದು ಆಸ್ಟ್ರೇಲಿಯಾ ಹೇಳಿರುವುದು ಚೀನವನ್ನು ಕೆರಳಿಸಿದೆ.

ಈ ನಡುವೆ ಕೇಂದ್ರ ಸರಕಾರ ನೌಕಾ ವ್ಯಾಯಾಮಕ್ಕೆ ಆಸ್ಟ್ರೇಲಿಯಾವನ್ನು ಆಹ್ವಾನಿಸುವ ಸಂಬಂಧ ಅಮೆರಿಕ, ಜಪಾನ್‌ ಜತೆಗೆ ಚರ್ಚಿಸುತ್ತಿದೆ.

Advertisement

ಎರಡೂ ರಾಷ್ಟ್ರಗಳೂ ಸಮ್ಮತಿಸುವ ಸಾಧ್ಯತೆಯಿದ್ದು, ಮುಂದಿನ ವಾರ ಆಸ್ಟ್ರೇಲಿಯಾಕ್ಕೆ ಅಧಿಕೃತ ಆಹ್ವಾನ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕ್ವಾಡ್‌’ ಒಗ್ಗಟ್ಟು: ಭಾರತ, ಅಮೆರಿಕ, ಜಪಾನ್‌, ಆಸ್ಟ್ರೇಲಿಯಾಗಳು ಬಹಳ ಹಿಂದೆಯೇ “ಕ್ವಾಡ್‌ ಒಕ್ಕೂಟ’ ರಚಿಸಿಕೊಂಡಿವೆ. ಪ್ರಸ್ತುತ ಸನ್ನಿವೇಶದಲ್ಲಿ ಭಾರತದ ಲಡಾಖ್‌ ಗಡಿಯಲ್ಲಿ ಚೀನ ತಂಟೆ ಎಬ್ಬಿಸಿದೆ. ಚೀನದಲ್ಲಿ ಹುಟ್ಟಿದ ವೈರಸ್‌ ಇಡೀ ರಾಷ್ಟ್ರ, ಜಗತ್ತನ್ನೇ ನಲುಗಿಸುತ್ತಿದೆಯೆಂಬ ಸಿಟ್ಟು ಅಮೆರಿಕಕ್ಕಿದೆ. ದಕ್ಷಿಣಾ ಚೀನ ಸಮುದ್ರದಲ್ಲಿನ ಚೀನ ಹಸ್ತಕ್ಷೇಪಕ್ಕೆ ಜಪಾನ್‌ ಧಿಕ್ಕಾರ ಕೂಗುತ್ತಲೇ ಬಂದಿದೆ.

ಈ ನಡುವೆ ಆಸ್ಟ್ರೇಲಿಯಾವೂ ಜತೆಗೂಡಿದರೆ ಚೀನ ಭಯಭೀತಗೊಳ್ಳುವುದರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ.
ಮೇನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ನಡೆಸಿದ ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ ಭಾರತ, ಆಸ್ಟ್ರೇಲಿಯಾವನ್ನು ಆಹ್ವಾನಿಸಿದೆ. ಈ ಮ್ಯೂಚುಯಲ್‌ ಲಾಜಿಸ್ಟಿಕ್ಸ್‌ ಬೆಂಬಲ ಒಪ್ಪಂದದಲ್ಲಿ ಪರಸ್ಪರ ನೆಲೆಗಳು, ಬಂದರುಗಳಿಗೆ ಪ್ರವೇಶ ಅನುಮತಿ ನೀಡಲಾಗಿದೆ.

ಚೀನ ಕಳ್ಳಗಣ್ಣು: ಪ್ರತಿವರ್ಷದ ಮಲಬಾರ್‌ ಸಮರಾಭ್ಯಾಸವನ್ನು ಕದ್ದು ವೀಕ್ಷಿಸಲು ಚೀನ ಡ್ರೋನ್‌ಗಳನ್ನು ನಿಯೋಜಿಸುತ್ತಿತ್ತು. ಅತಿದೊಡ್ಡ ಗುಪ್ತಚರ ನೌಕೆಯನ್ನು ಕಳುಹಿಸಿಕೊಡುತ್ತಿತ್ತು. ಈ ಬಾರಿಯೂ ಚೀನ ಕಳ್ಳಗಣ್ಣು ನೆಡುವ ಸಾಧ್ಯತೆ ದಟ್ಟವಾಗಿದೆ.

ಶಾಂತಿ ಜಪಿಸುತ್ತಿರುವ ಚೀನ: ಗಡಿಯಲ್ಲಿ ಸೇನೆ ಹಿಂತೆಗೆದುಕೊಳ್ಳುತ್ತಿರುವ ಚೀನ ನಿಲುವಿನ ಮಧ್ಯೆ, ‘ಭಾರತ- ಚೀನ ಪ್ರತಿಸ್ಪರ್ಧಿಗಳಾಗುವುದಕ್ಕಿಂತ, ಪಾಲುದಾರಾಗುವುದು ಅವಶ್ಯ’ ಎಂದು ಕ್ಸಿ ಜಿನ್‌ಪಿಂಗ್‌ ಸರಕಾರ ಅಭಿಪ್ರಾಯಪಟ್ಟಿದೆ.

‘ಭಾರತ-ಚೀನ ಪರಸ್ಪರ 2 ಸಾವಿರ ವರ್ಷಗಳ ಸ್ನೇಹ ಹೊಂದಿವೆ. ಶಾಂತಿಯುತ ಸಮಾಲೋಚನೆ ಮೂಲಕ ಗಡಿಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಬೇಕು’ ಎಂದು ಚೀನ ರಾಯಭಾರಿ ಸನ್‌ ವೀಡಾಂಗ್‌ ಹೇಳಿದ್ದಾರೆ.

ಸಿಡಿಎಸ್‌ ಜತೆ ರಕ್ಷಣಾ ಸಚಿವರ ಸಭೆ
ಲಡಾಖ್‌ ಗಡಿಯಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸುವ ಸಂಬಂಧ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ಸೇನಾ ಸಿಬ್ಬಂದಿ ಮುಖ್ಯಸ್ಥರ (ಸಿಡಿಎಸ್‌) ಸಭೆ ಕರೆದಿದ್ದರು. ರಕ್ಷಣಾ ಪಡೆಗಳ ಮುಖ್ಯಸ್ಥ ಜ. ಬಿಪಿನ್‌ ರಾವತ್‌, ಭೂಸೇನೆ ಮುಖ್ಯಸ್ಥ ಎಂ.ಎಂ. ನರವಾಣೆ, ನೌಕಾಪಡೆಯ ಅಡ್ಮಿರಲ್‌ ಕರಂಬೀರ್‌ ಸಿಂಗ್‌ ಹಾಗೂ ವಾಯುಪಡೆಯ ಮಾರ್ಷಲ್‌ ಆರ್‌.ಕೆ.ಎಸ್‌. ಭದೌ ರಿಯಾ ಸೇರಿದಂತೆ ಉನ್ನತ ಮಿಲಿಟರಿ ಅಧಿಕಾರಿಗಳು ಪ್ರಸ್ತುತ ಗಡಿ ಸನ್ನಿವೇಶದ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದ್ದಾರೆ.

ಹೆಲಿಕಾಪ್ಟರ್‌ ಹಸ್ತಾಂತರ ಪೂರ್ಣ: ಅಮೆರಿಕದ ಬೋಯಿಂಗ್‌ ಕಂಪನಿ ಭಾರತಕ್ಕೆ 37 ಸೇನಾ ಹೆಲಿಕಾಪ್ಟರ್‌ಗಳ ಹಸ್ತಾಂತರ ಪೂರ್ಣಗೊಳಿಸಿದೆ. 22 ಅಪಾಚೆ, 15 ಚಿನೂಕ್‌ ಹೆಲಿಕಾಪ್ಟರ್‌ಗಳು ಇದರಲ್ಲಿ ಸೇರಿವೆ. ಅಂತಿಮ 5 ಅಪಾಚೆ ಫೈಟರ್‌ ಜೆಟ್‌ಗಳನ್ನು ಉತ್ತರ ಪ್ರದೇಶದ ಹಿಂದಾನ್‌ ವಾಯುನೆಲೆಗೆ ಹಸ್ತಾಂತರಿಸಲಾಗಿದೆ.

ನೇಪಾಲ ಪ್ರಧಾನಿ ಇನ್ನೊಂದು ವಾರ ನಿರಾಳ
ಕಠ್ಮಂಡು: ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ರಾಜಕೀಯ ಭವಿಷ್ಯ ನಿರ್ಧರಿಸುವ ನೇಪಾಲ ಕಮ್ಯುನಿಸ್ಟ್‌ ಪಕ್ಷದ (ಎನ್‌ಸಿಪಿ) ಬಹುನಿರೀಕ್ಷಿತ ಸ್ಥಾಯಿಸಮಿತಿ ಸಭೆ ಮತ್ತೆ 1 ವಾರ ಮುಂದೂಡಲ್ಪಟ್ಟಿದೆ. ನೇಪಾಲದ ವಿವಿಧೆಡೆ ಭಾರೀ ಮಳೆ, ಭೂಕುಸಿತ ಮತ್ತು ಪ್ರವಾಹ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಎನ್‌ಸಿಪಿ ಸಭೆ 4ನೇ ಸಲವೂ ಮುಂದಕ್ಕೆ ಹೋಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಆದರೆ, ವಾಸ್ತವದಲ್ಲಿ ಚೀನದ ಕೈವಾಡದಿಂದಾಗಿ ಸಭೆ ಮುಂದೂಲ್ಪಡುತ್ತಿದೆ ಎನ್ನಲಾಗಿದೆ.

ಚೀನ ಕೈವಾಡ: ಎನ್‌ಸಿಪಿ ಸಭೆ ನಡೆದರೆ ಓಲಿ ವಿರುದ್ಧ ಹಲವು ನಾಯಕರಿಂದ ಅಸಮಾಧಾನ ಸ್ಫೋಟಗೊಳ್ಳುವ ಸಂಭವವಿದ್ದು, ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವ ಪ್ರಸಂಗವೂ ಎದುರಾಗಬಹುದು. ಈ ಕಾರಣಕ್ಕಾಗಿ ಚೀನ ರಾಯಭಾರಿ ಹೌ ಯಾಂಕಿ, ಎನ್‌ಸಿಪಿಯ ಬಂಡಾಯ ನಾಯಕರನ್ನು ಓಲೈಸುತ್ತಿದ್ದಾರೆ. ಪಕ್ಷ ವಿಭಜನೆಯಿಂದ ಸರಕಾರ ಬೀಳುವುದನ್ನು ತಪ್ಪಿಸಲು ಚೀನ ಪರವಾಗಿ ಹೌ ಶತಪ್ರಯತ್ನ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next