Advertisement

ಬೃಹತ್‌ ಗೆಲುವು; ಭಾರತದ ನಿರೀಕ್ಷೆ: ಭಾರತ- ಶ್ರೀಲಂಕಾ: ಇಂದು ದ್ವಿತೀಯ ಏಕದಿನ

11:34 PM Jan 11, 2023 | Team Udayavani |

ಕೋಲ್ಕತಾ: ಅಗ್ರ ಕ್ರಮಾಂಕದ ಆಟಗಾರರ ಅಮೋಘ ಆಟದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತೀಯ ತಂಡವು ಗುರುವಾರ ಇಲ್ಲಿನ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿರುವ ದ್ವಿತೀಯ ಏಕದಿನ ಪಂದ್ಯದಲ್ಲೂ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಯೋಜನೆ ಹಾಕಿಕೊಂಡಿದೆ.

Advertisement

ಗುವಾಹಾಟಿಯಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡಿ ತನ್ನ ಬಾಳ್ವೆಯ 73ನೇ ಶತಕ ಪೂರೈಸಿದ ವಿರಾಟ್‌ ಕೊಹ್ಲಿ ಅವರು ಭಾರತ ಅಧಿಕಾರಯುತವಾಗಿ ಗೆಲ್ಲಲು ನೆರವಾದರು. ಏಷ್ಯಾ ಕಪ್‌ನಲ್ಲಿ ಅಘಾ^ನಿಸ್ಥಾನ ವಿರುದ್ಧ ಶತಕ ಸಿಡಿಸುವ ಮೂಲಕ ತನ್ನ ಶತಕದ ಬರವನ್ನು ನೀಗಿಸಿಕೊಂಡಿದ್ದ ಕೊಹ್ಲಿ ಆಬಳಿಕ ಅಮೋಘ ಆಟದ ಪ್ರದರ್ಶನ ನೀಡುತ್ತ ಬಂದಿದ್ದಾರೆ.

ಗುವಾಹಾಟಿ ಪಂದ್ಯದಲ್ಲಿ ಎರಡು ಜೀವದಾನ ಪಡೆದರೂ ಅದ್ಭುತ ರೀತಿಯಲ್ಲಿ ಆಟವಾಡಿದ ಕೊಹ್ಲಿ ಸತತ ಶತಕ ಸಿಡಿಸಿದ ಸಂಭ್ರಮ ಆಚರಿಸಿದರಲ್ಲದೇ ತಂಡ ಬೃಹತ್‌ ಮೊತ್ತ ಪೇರಿಸಲು ನೆರವಾದರು. ಅವರ ಈ ಆಟವನ್ನು ಗಮನಿಸಿದರೆ ಗತ ಕಾಲದ ಅವರ ಆಟದ ನೆನಪಾಗುತ್ತಿದೆ. ಶ್ರೀಲಂಕಾ ದಾಳಿಗೆ ಯಾವುದೇ ಹಂತದಲ್ಲೂ ಒತ್ತಡಕ್ಕೆ ಒಳಗಾಗದ ಕೊಹ್ಲಿ ನಿರಾಯಾಸವಾಗಿ ಆಡಿದರು. ಕೊಹ್ಲಿ ಅವರ ಆಟ ಈಡನ್‌ನಲ್ಲೂ ಮುಂದುವರಿಯುವ ನಿರೀಕ್ಷೆಯನ್ನು ತಂಡ ಇಟ್ಟುಕೊಂಡಿದೆ.

ಗಾಯದಿಂದ ಚೇತರಿಸಿಕೊಂಡಿರುವ ನಾಯಕ ರೋಹಿತ್‌ ಶರ್ಮ ಕೂಡ ಗುವಾಹಾಟಿಯಲ್ಲಿ ಭರ್ಜರಿ ಆಟ ಪ್ರದರ್ಶಿಸಿದ್ದಾರೆ. ಅವರ 83 ರನ್‌ ನೆರವಿನಿಂದ ಭಾರತ ಬೃಹತ್‌ ಮೊತ್ತ ಪೇರಿಸಿತು. ಈಡನ್‌ ರೋಹಿತ್‌ ಅವರ ನೆಚ್ಚಿನ ತಾಣವೂ ಆಗಿದೆ. ಇಲ್ಲಿ ಈ ಎರಡು ತಂಡಗಳು ಎಂಟು ವರ್ಷಗಳ ಹಿಂದೆ ಏಕದಿನ ಪಂದ್ಯದಲ್ಲಿ ಮುಖಾಮುಖೀಯಾಗಿದ್ದಾಗ ರೋಹಿತ್‌ ವಿಶ್ವ ದಾಖಲೆಯ 264 ರನ್‌ ಪೇರಿಸಿದ್ದರು. ರೋಹಿತ್‌ ದೀರ್ಘ‌ ಸಮಯದಿಂದ ಶತಕದ ಸಂಭ್ರಮ ಆಚರಿಸಿಲ್ಲ. ಅವು 2020ರ ಜನವರಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಶತಕ ಬಾರಿಸಿದ್ದರು.

ಕೊಹ್ಲಿ, ರೋಹಿತ್‌ ಅವರಲ್ಲದೇ ಆರಂಭಿಕ ಶುಭ್‌ಮನ್‌ ಗಿಲ್‌ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. ಈ ಮೂವರು ಈಡನ್‌ನಲ್ಲಿ ಮೆರೆದಾಡಿದರೆ ಭಾರತ ಬೃಹತ್‌ ಮೊತ್ತ ಪೇರಿಸುವಲ್ಲಿ ಸಂಶಯವಿಲ್ಲ. ನಾಯಕನ ಬೆಂಬಲದಿಂದ ಇಶಾನ್‌ ಕಿಶನ್‌ ಬದಲಿಗೆ ಆರಂಭಿಕರಾಗಿ ಭಡ್ತಿ ಪಡೆದ ಗಿಲ್‌ ಗುವಾಹಾಟಿಯಲ್ಲಿ ಉತ್ತಮವಾಗಿ ಆಡುವ ಮೂಲಕ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Advertisement

ಈ ಮೂವರಲ್ಲದೇ ಶ್ರೇಯಸ್‌ ಅಯ್ಯರ್‌, ಕೆಎಲ್‌ ರಾಹುಲ್‌ ತಂಡದ ಬ್ಯಾಟಿಂಗ್‌ ಶಕ್ತಿಯನ್ನು ಹೆಚ್ಚಿಸಲು ನೆರವಾಗಲಿದ್ದಾರೆ. ಬೌಲಿಂಗ್‌ನನಲ್ಲಿ ಮೊಹಮ್ಮದ್‌ ಸಿರಾಜ್‌ ಅವರನ್ನು ತಂಡ ಅವಲಂಭಿಸಿದೆ. ಸಿರಾಜ್‌ ಗುವಾಹಾಟಿಯಲ್ಲಿ ಅಮೋಘ ದಾಳಿ ಸಂಘಟಿಸಿ ಲಂಕಾದ ಕುಸಿತಕ್ಕೆ ಕಾರಣರಾಗಿದ್ದರು. ಅವರು ಈಡನ್‌ನ ವೇಗದ ಟ್ರ್ಯಾಕ್‌ನಲ್ಲೂ ಮಿಂಚುವ ಸಾಧ್ಯತೆಯಿದೆ. ಮೊಹಮ್ಮದ್‌ ಶಮಿ, ಚಹಲ್‌, ಕುಲದೀಪ್‌ ಅವರಿಗೆ ನೆರವಾಗಲಿದ್ದಾರೆ.

ದಸುನ್‌ ಶಣಕ ಆಸರೆ
ನಾಯಕ ದಸುನ್‌ ಶಣಕ ಗುವಾಹಾಟಿಯಲ್ಲಿ ಏಕಾಂಗಿಯಾಗಿ ಹೋರಾಡಿ ತಂಡ ಪ್ರತಿಹೋರಾಟ ನೀಡಲು ನೆರವಾಗಿದ್ದರು. ಒಂದು ಹಂತದಲ್ಲಿ 179 ರನ್ನಿಗೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ತನ್ನ ಅಜೇಯ ಶತಕದ ನೆರವಿನಿಂದ ಮೇಲಕ್ಕೆ ಎತ್ತಿದ್ದರು. ಆಲ್‌ರೌಂಡರ್‌ ಆಗಿರುವ ಶಣಕ ಅವರಲ್ಲಿ ತಂಡ ಇನ್ನೂ ಭರವಸೆ ಇಟ್ಟುಕೊಂಡಿದೆ. ಅವರಿಗೆ ತಂಡದ ಇತರ ಆಟಗಾರರು ಸಂಘಟಿತ ನೆರವು ನೀಡಿದರೆ ಶ್ರೀಲಂಕಾ ತಿರುಗೇಟು ನೀಡುವ ಸಾಧ್ಯತೆಯಿದೆ. ಉತ್ತಮ ಫಾರ್ಮ್ನಲ್ಲಿರುವ ಆರಂಭಿಕ ಪಥುಮ್‌ ನಿಸ್ಸಂಕ ಈಡನ್‌ನಲ್ಲಿ ಮಿಂಚಿದರೆ ಶ್ರೀಲಂಕಾ ಕೂಡ ಬ್ಯಾಟಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆಯಿದೆ.

ಉಭಯ ತಂಡಗಳು
ಭಾರತ:
ರೋಹಿತ್‌ ಶರ್ಮ (ನಾಯಕ), ಹಾರ್ದಿಕ್‌ ಪಾಂಡ್ಯ, ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ಕೆಎಲ್‌ ರಾಹುಲ್‌, ಇಶಾನ್‌ ಕಿಶನ್‌, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಹಲ್‌, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಉಮ್ರಾನ್‌ ಮಲಿಕ್‌, ಅರ್ಷದೀಪ್‌ ಸಿಂಗ್‌.

ಶ್ರೀಲಂಕಾ:
ದಸುನ್‌ ಶಣಕ (ನಾಯಕ), ಕುಸಲ್‌ ಮೆಂಡಿಸ್‌, ಪಥುಮ್‌ ನಿಸ್ಸಂಕ, ಅವಿಷ್ಕಾ ಫೆರ್ನಾಂಡೊ, ಸದೀರ ಸಮರವಿಕ್ರಮ, ಚರಿತ ಅಸಲಂಕ, ಧನಂಜಯ ಡಿ’ಸಿಲ್ವ, ವನಿಂದು ಹಸರಂಗ, ಅಶೆನ್‌ ಬಂಡಾರ, ಮಹೀಶ ತೀಕ್ಷಣ, ಕಸುನ್‌ ರಜಿತ, ನುವಾನಿದು ಫೆರ್ನಾಂಡೊ, ದುನಿತ್‌ ವೆಲ್ಲಲಗೆ, ಪ್ರಮೋದ್‌ ಮದುಶನ್‌, ಲಹಿರು ಕುಮಾರ.

ಪಂದ್ಯ ಆರಂಭ ಅಪರಾಹ್ನ 1.30

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next