ಮ್ಯಾಡ್ರಿಡ್ : ಪ್ರಧಾನಿ ನರೇಂದ್ರ ಮೋದಿ ಅವರ ಐರೋಪ್ಯ ಪ್ರವಾಸದ ಸಂದರ್ಭದಲ್ಲಿ ಭಾರತ ಮತ್ತು ಸ್ಪೇನ್ ಏಳು ಒಪ್ಪಂದಗಳಿಗೆ ಸಹಿ ಹಾಕಿವೆ. ಇವುಗಳಲ್ಲಿ ಸೈಬರ್ ಸೆಕ್ಯುರಿಟಿ ಮತ್ತು ನಾಗರಿಕ ವಾಯುಯಾನದಲ್ಲಿ ತಾಂತ್ರಿಕ ಸಹಕಾರ ಸೇರಿವೆ.
ಸ್ಪೇನ್ ರಾಜಧಾನಿಯ ಮನ್‌ಕ್ಲೋವಾ ಪ್ಯಾಲೇಸ್‌ನಲ್ಲಿ ಸ್ಪೇನ್ ಅಧ್ಯಕ್ಷ ಮ್ಯಾರಿಯಾನೋ ರ್ಯಾಜೋಯ್ ಜತೆಗೆ ವ್ಯಾಪಕ ವಿಷಯಗಳ ಕುರಿತಾಗಿ ಮಾತುಕತೆ ನಡೆಸಿದ ಬಳಿಕ ಪ್ರಧಾನಿ ಮೋದಿ ಅವರು ಏಳು ಮಹತ್ವದ ಒಪ್ಪಂಗಳಿಗೆ ಸಹಿ ಹಾಕಿದರು.
ಜೈಲು ಶಿಕ್ಷೆ ವಿಧಿಸಲ್ಪಟ್ಟಿರುವ ವ್ಯಕ್ತಿಗಳ ವರ್ಗಾವಣೆ ಮತ್ತು ರಾಜತಾಂತ್ರಿಕ ಪಾಸ್ ಪೋರ್ಟ್ ಹೊಂದಿರುವವರಿಗೆ ವೀಸಾ ರಿಯಾಯಿತಿ ಕಲ್ಪಿಸುವ ಎರಡೂ ಕಡೆಯ ಒಪ್ಪಂದಗಳಿಗೆ ಉಭಯ ರಾಷ್ಟ್ರ ನಾಯಕರು ಸಹಿ ಹಾಕಿದರು.
ಅಂಗಾಂಗ ಕಸಿ ಸಹಕಾರ, ಸೈಬರ್ ಭದ್ರತೆ, ನವೀಕರಿಸಬಲ್ಲ ಇಂದನ, ನಾಗರಿಕ ವಾಯುಯಾನ ಮತ್ತು ಭಾರತದ ವಿದೇಶ ಸೇವಾ ವಿದ್ಯಾಲಯ ಮತ್ತು ಸ್ಪೇನ್‌ನ ರಾಜತಾಂತ್ರಿಕ ಅಕಾಡೆಮಿ ನಡುವಿನ ಒಪ್ಪಂದ ಸೇರಿದಂತೆ ಒಟ್ಟು ಐದು ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
1988ರ ಬಳಿಕ ಸ್ಪೇನ್‌ಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಎನಿಸಿರುವ ಮೋದಿ ಅವರು, ಸ್ಪೇನ್ ಅಧ್ಯಕ್ಷರ ನಾಯಕತ್ವವನ್ನು ಪ್ರಶಂಸಿಸಿ, ರ್ಯಾಜೋಯ್ ಅವರ ಮುಂದಾಳುತ್ವದಲ್ಲಿ ಸ್ಪೇನ್ ಅದ್ಭುತ ಆರ್ಥಿಕ ಸುಧಾರಣೆಗಳನ್ನು ಕಂಡಿದೆ ಎಂದರಲ್ಲದೆ, “ನನ್ನ ಸರಕಾರದ ಅತೀ ದೊಡ್ಡ ಆದ್ಯತೆಯು ಆರ್ಥಿಕ ಸುಧಾರಣೆಗಳೇ ಆಗಿವೆ’ ಎಂದು ಹೇಳಿದರು.
ಐರೊಪ್ಯ ಒಕ್ಕೂಟದಲ್ಲಿ ಸ್ಪೇನ್, ಭಾರತದ ಏಳನೇ ಅತೀ ದೊಡ್ಡ ವಾಣಿಜ್ಯ ಪಾಲುದಾರ ದೇಶವಾಗಿದೆ; ಉಭಯತರ ನಡುವೆ 2016ರಲ್ಲಿ 5.27 ಬಿಲಿಯ ಡಾಲರ್‌ಗಳ ವಾಣಿಜ್ಯ ವ್ಯವಹಾರ ನಡೆದಿದೆ.